ಗುರುವಾರ , ಮಾರ್ಚ್ 4, 2021
22 °C

ಕ್ಯುಎಸ್‌ಕ್ಯುಟಿಗೆ ಮೂವತ್ತು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಕ್ಯುಎಸ್‌ಕ್ಯುಟಿಗೆ ಮೂವತ್ತು

‘ಕ್ಯುಎಸ್‌ಕ್ಯುಟಿ' ಎಂದು ನಲವತ್ತು ಐವತ್ತರ ವಯಸ್ಸಿನ ಹಿಂದಿ ಸಿನಿಮಾ ಅಭಿಮಾನಿಗಳನ್ನು ಕೇಳಿ ನೋಡಿ, ಅದರ ವಿಸ್ತೃತ ರೂಪವೇನು ಎಂದು ಥಟ್ಟನೆ ಹೇಳುತ್ತಾರೆ. ಜೊತೆಗೇ ‘ಗಜಬ್ ಕಾ ಹೈ ದಿನ್ ದೇಖೋ ಝರಾ…’ ಎಂಬ ಹಾಡಿನ ಸಾಲು ತುಟಿಮೇಲೆ ಮೂಡುತ್ತದೆ.

‘ಪಾಪಾ ಕೆಹ್ತೇ ಹೈ ಬಡಾ ನಾಮ್ ಕರೇಗಾ…’ ಉದಿತ್ ನಾರಾಯಣ್ ಸ್ವಚ್ಛ ಶಾರೀರದ ತುಂಟತನ ನೆನಪಿಸುತ್ತದೆ. ‘ಖಯಾಮತ್ ಸೆ ಖಯಾಮತ್ ತಕ್’ ಸಿನಿಮಾ ಬಾಲಿವುಡ್‌ನ ಹೊಸ ಟೆಂಪ್ಲೇಟ್ ಆಗಿ ಒದಗಿ ಬಂದದ್ದು ಇತಿಹಾಸ.

1980ರ ದಶಕದ ತರುಣ-ತರುಣಿಯರ ಹೃದಯ ಸಿಂಹಾಸನದ ಮೇಲೆ ಅಮೀರ್ ಖಾನ್-ಜೂಹಿ ಚಾವ್ಲಾ ಕೂತದ್ದೇ ಆ ಸಿನಿಮಾದಿಂದ. ಹಾಲು ಆರದ ಗಲ್ಲದ ಹುಡುಗನಂತೆ ಇದ್ದ ಅಗಲ ಕಿವಿಗಳ ಅಮೀರ್ ಖಾನ್ ಮುದ್ದು ಮುಖ. ಚೂಪು ಮೂಗಿನ ತುದಿಯಲ್ಲಿ ಚುರುಕುತನ ಕುಣಿಸಿದ ಜೂಹಿ. ನಿರ್ದೇಶಕ ಮನ್ಸೂರ್ ಖಾನ್ ಅವರಿಗೂ ಆ ಸಿನಿಮಾ ಅಷ್ಟು ಯಶಸ್ವಿಯಾಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಅಪ್ರಜ್ಞಾಪೂರ್ವಕವಾಗಿ ತಯಾರಾದ ಪ್ರೇಮಕಥೆಯೊಂದು ತಾಜಾ ಕಹಾನಿಗಳ ಸರಣಿಯೇ ಮೂಡಲು ಪ್ರೇರಣೆಯಾದೀತೆಂದು ಭಾವಿಸಿರಲಿಲ್ಲ.

ರಾಜೇಶ್ ಖನ್ನಾ ಸ್ಟಾರ್‌ಗಿರಿ ತಗ್ಗುತ್ತಾ ಬಂದ ಕಾಲಘಟ್ಟದಲ್ಲಿ ಅಮಿತಾಭ್ ಬಚ್ಚನ್ ಕೋಪದ ತರುಣನಾಗಿ ಛಾಪು ಮೂಡಿಸಿದರು. ‘ಜಂಜೀರ್’ ಹಿಂದಿ ಸಿನಿಮಾ ರೂಪಿಸಿದ ಇಮೇಜಿನ ಮೇಲೆ ‘ಕೋಪದ ನಾಯಕ’ ಎಂಬ ವಿಶೇಷಣ ಅವರ ಹೆಸರಿಗೆ ಅಂಟಿಕೊಂಡಿತೆನ್ನಬೇಕು. ಸನ್ನಿ ದೇವಲ್, ಸಂಜಯ್ ದತ್, ಜಾಕಿ ಶ್ರಾಫ್, ಅನಿಲ್ ಕಪೂರ್ ಇವರೆಲ್ಲ ಅದೇ ಇಮೇಜಿನ ಚೌಕಟ್ಟಿನೊಳಗೆ ಬರಲು ಯತ್ನಿಸಿದ್ದವರೇ. ಸಲ್ಮಾನ್ ಖಾನ್ ‘ಮೈನೆ ಪ್ಯಾರ್ ಕಿಯಾ’ದಲ್ಲೂ ದೇಹಾಕಾರವೇ ಕೆಲಸ ಮಾಡಿತ್ತು. ಆದರೆ, ಕ್ಯುಎಸ್‌ಕ್ಯುಟಿ ಹಾಗಲ್ಲ. ಅಮೀರ್ ದೇಹವನ್ನೇನೂ ಆಗ ಹುರಿಗೊಳಿಸಿಕೊಂಡಿರಲಿಲ್ಲ.

ಈಗ ಮಲಯಾಳದಲ್ಲಿ ಮುಮ್ಮಟ್ಟಿ ಮಗ ದುಲ್ಕರ್ ಸಲ್ಮಾನ್ ಮಾಡುತ್ತಿರುವ ಮೋಡಿಯಂಥದ್ದೇ ಮುಗ್ಧತೆ ಆಗ ಅಮೀರ್ ಕಣ್ಣಲ್ಲಿ ಕಂಡಿತ್ತು. ರಕ್ತದಲ್ಲಿ ಪ್ರೇಮಪತ್ರ ಬರೆಯುವ, ಗೋಡೆ ಮೇಲೆ ಪೋಸ್ಟರ್ ಹಾಕಿಕೊಳ್ಳುವ ಅಭಿಮಾನಿಗಳ ಆ ಜಮಾನದಲ್ಲಿ ಅಮೀರ್ ತಮ್ಮ ಸೌಂದರ್ಯದ ಮೂಲಕ ನಾಯಕನಾಗಿ ನೆಲೆ ಕಂಡುಕೊಂಡದ್ದು ವಿಶೇಷ. ಸಾಮಾನ್ಯವಾಗಿ ನಾಯಕಿಯರು ಸೌಂದರ್ಯದ ಮೂಲಕ ಬಲೆ ಬೀಸುತ್ತಾರೆ. ರಾಜ್‌ಕಪೂರ್ ಹಾಗೂ ಅವರ ಸಹೋದರರಿಗೆ ಮುಗ್ಧ ಚಹರೆಗಳಿದ್ದರೂ, ಅಮೀರ್ ಅವರಿಗಿರುವಷ್ಟು ಸುಂದರ ವದನ ಇರಲಿಲ್ಲ.

ಕಮಲ ಹಾಸನ್ ‘ಏಕ್ ದೂಜೆ ಕೇ ಲಿಯೆ’ ಗೆದ್ದಿತ್ತಲ್ಲ; ಅಲ್ಲಿಯೂ ಅವರ ಸುಂದರ ವದನದ ಕಾಣ್ಕೆ ಇತ್ತು.ಕ್ಯುಎಸ್‌ಕ್ಯುಟಿ ಸಿನಿಮಾದ ಅಂತ್ಯ ಆಗ ದೊಡ್ಡ ಸುದ್ದಿ. ಮನ್ಸೂರ್ ಖಾನ್ ತಂದೆ ನಾಸಿರ್ ಹುಸೇನ್ ಅವರ ಮೇಲೆ ವಿತರಕರ ಒತ್ತಡವಿತ್ತಂತೆ; ಸಿನಿಮಾದ ಅಂತ್ಯ ಶುಭವೇ ಆಗಿರಬೇಕು ಎಂದು. ಆದರೆ, ತಮ್ಮ ಕವಿಸ್ನೇಹಿತ ರಾಹಿ ಮಾಸೂಮ್ ರಾಜಾ ಅವರ ಸಲಹೆಯನ್ನು ಮನ್ಸೂರ್ ಕೇಳಿದರು.

‘ದೊಡ್ಡ ದೊಡ್ಡ ಪ್ರೇಮಕಥೆಗಳೆಲ್ಲ ದುರಂತದಲ್ಲೇ ಅಂತ್ಯವಾಗಿವೆ. ಅದನ್ನೇ ಜನ ಇಷ್ಟಪಡುವುದು’ ಎಂದು ರಾಹಿ ಮಾಸೂಮ್ ಹೇಳಿದರಂತೆ. ಒಂದು ವೇಳೆ ಸಿನಿಮಾದ ಅಂತ್ಯ ಬದಲಿಸಿದರೆ ನಿರ್ದೇಶಕ ತಾನು ಎಂಬ ಹೆಸರನ್ನೇ ಕಿತ್ತುಹಾಕಬೇಕು ಎಂದು ಮನ್ಸೂರ್ ಅಪ್ಪನ ಹತ್ತಿರವೇ ಹಟ ಹಿಡಿದಿದ್ದರೆಂಬ ಸುದ್ದಿಗಳು ಆಗ ಪ್ರಕಟಗೊಂಡಿದ್ದವು.

ಕೊನೆಗೂ ಸಿನಿಮಾ ಅಂತ್ಯ ಬದಲಿಸಿಕೊಳ್ಳದೆ ತೆರೆಕಂಡಿತು. ನೋಡಿದವರ ಬಾಯಿಯಿಂದ ಬಾಯಿಗೆ ಸಂಭಾಷಣೆಗಳು ಹರಿದಾಡಿದವು. ‘ರಕ್ತ ಹರಿಸುವುದು ರಜಪೂತರ ಶೌರ್ಯದ ಸಂಕೇತ’ ಎಂಬಂಥ ಸಂಭಾಷಣೆ ಮಧ್ಯಮವರ್ಗದ ಪ್ರೇಮಿಗಳ ರಕ್ತ ಕುದಿಯುವಂತೆ ಮಾಡಿತೇನೋ ಎಂದು ಚಿತ್ರವಿಮರ್ಶಕರು ಆಮೇಲೆ ಬರೆದಿದ್ದರು.

ಕೊನೆಗೂ ಮನ್ಸೂರ್ ಹಟ ಗೆದ್ದಿತು. ಅಮೀರ್ ಗೆದ್ದರು. ಜೂಹಿ ನಗು ಜನಪ್ರಿಯವಾಯಿತು. ಉದಿತ್ ನಾರಾಯಣ್ ಕಂಠದಲ್ಲಿ ಪುಂಖಾನುಪುಂಖ ಹಾಡುಗಳು ಬಂದವು. ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’, ‘ಹಮ್ ಆಪ್ಕೆ ಹೈ ಕೌನ್’, ‘ಮೈ ಖಿಲಾಡಿ ತೂ ಅನಾಡಿ’, ‘ಖಿಯಾಡಿಯೋಂ ಕಾ ಖಿಲಾಡಿ’… ಹೀಗೆ ಉದ್ದುದ್ದ ಹೆಸರುಗಳನ್ನು ಸಿನಿಮಾಗಳಿಗೆ ಇಡುವ ಪರಿಪಾಠ ಶುರುವಾಯಿತು. ಶಾರುಖ್ ಖಾನ್ ದ್ವೇಷದ ಪಾತ್ರದಲ್ಲೂ ಗೆದ್ದಿದ್ದು ದುರಂತ ಅಂತ್ಯವೇ (ಬಾಜಿಗರ್).

ಸಂಗೀತದ ವಿಷಯದಲ್ಲೂ ಮನ್ಸೂರ್ ಖಾನ್ ಯುವಮುಖಿಯಾದರು. ಆರ್.ಡಿ. ಬರ್ಮನ್ ಟ್ಯೂನ್‌ಗಳನ್ನು ಧಿಕ್ಕರಿಸಿ, ಅವರು ಆನಂದ್-ಮಿಲನ್ ತರುಣ ಜೋಡಿಯ ಕಡೆ ಮುಖಮಾಡಿದರು.

ಅಮೀರ್, ಜೂಹಿ ಅಷ್ಟೇ ಅಲ್ಲದೆ ರಾಜ್ ಜುಟ್ಷಿ ಕೂಡ ಸಿನಿಮಾದಲ್ಲಿ ಹೊಸಮುಖವಾಗಿದ್ದರು. ಇಷ್ಟಕ್ಕೂ ಕ್ಯುಎಸ್‌ಕ್ಯುಟಿ ಚಿತ್ರಕಥೆ ರಚಿಸಿದ್ದು ನಾಸಿರ್. ಮಗನ ಜೊತೆಗಿನ ಸಂಘರ್ಷದಲ್ಲೂ ಅವರು ಇಡೀ ಚಿತ್ರಕಥೆಯನ್ನು ಯುವಮಯವಾಗಿಸಿದ್ದು ತಮಾಷೆಯಲ್ಲ.

ಈ ಸಿನಿಮಾದಿಂದ ಉದಿತ್ ದೀರ್ಘಕಾಲ ಅಮೀರ್ ಹಾಡುಗಳಿಗೆ ಕಂಠವಾದರು; ರಾಜೇಶ್ ಖನ್ನಾ ಅವರು ಕಿಶೋರ್ ಕಂಠ ನೆಚ್ಚಿಕೊಂಡಂತೆ, ರಾಜ್‌ಕುಮಾರ್‌ ಅವರು ಪಿ.ಬಿ. ಶ್ರೀನಿವಾಸ್ ಶಾರೀರ ಇಷ್ಟಪಟ್ಟಂತೆ.

ಮೂವತ್ತು ವಸಂತಗಳು ದಾಟಿದ ಮೇಲೂ ಅಮೀರ್ ನಟನಾಗಿ ಉಳಿದಿದ್ದಾರೆ; ಹಲವು ಪ್ರಯೋಗಗಳ ಮಾಡುತ್ತಾ. ಜೂಹಿ ಕೂಡ ದೀರ್ಘಾವಧಿ ನಾಯಕಿಯಾಗಿ ಮೆರೆದವರೇ. ಆದರೆ, ಕ್ಯುಎಸ್‌ಕ್ಯುಟಿ ಈಗಲೂ ಅನೇಕರ ಪಾಲಿಗೆ ‘ಕ್ಯೂಟಿ’ಯೇ ಹೌದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.