ಕೋಟಿ ದಾಟಿದ ಬಾಜಿ ವ್ಯವಹಾರ

7
ಹಾಸನ, ಸಕಲೇಶಪುರ, ಹೊಳೆನರಸೀಪುರದಲ್ಲಿ ಗೆಲ್ಲುವ ಅಭ್ಯರ್ಥಿಯ ಬೆಟ್ಟಿಂಗ್‌

ಕೋಟಿ ದಾಟಿದ ಬಾಜಿ ವ್ಯವಹಾರ

Published:
Updated:

ಹಾಸನ: ರಾಜಕೀಯ ಮಹತ್ವ ಪಡೆದಿರುವ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಪರವಾಗಿ ಬೆಟ್ಟಿಂಗ್‌ ನಡೆದಿದೆ.

ಮತದಾನ ಮುಗಿದು ಫಲಿತಾಂಶ ಹೊರಬೀಳಲು ಒಂದು ದಿನ ಸಮಯ ಇದೆ. ಯಾರು ಗೆಲ್ಲುತ್ತಾರೆ, ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲುತ್ತದೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬತಹ ಬೆಟ್ಟಿಂಗ್‌ ಭರಾಟೆ ಆರಂಭವಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಬೆಟ್ಟಿಂಗ್‌ ಭಾರಿ ಪ್ರಮಾಣದಲ್ಲಿ ನಡೆದಿದ್ದು, ಕೋಟ್ಯಂತರ ರೂಪಾಯಿ ಲೆಕ್ಕವನ್ನೂ ಮೀರಿದೆ. ಕಾರು, ಮನೆ, ಜಮೀನು ಸಹ ಪಂಥದಲ್ಲಿ ಸೇರಿದೆ. ಇಲ್ಲಿ ಹಣಕ್ಕಿಂತ ಸೋಲು, ಗೆಲುವು ಮುಖ್ಯವಾಗಿದೆ. ಅದಕ್ಕಾಗಿ ಜಪ, ತಪ, ಮಾಟ, ಮಂತ್ರಗಳಿಗೂ ಜನ ಮೊರೆ ಹೋಗಿರುವುದು ವಿಶೇಷ.

ರಾಜ್ಯದಲ್ಲಿ ಯಾವ ಪಕ್ಷ ಶತಕ ದಾಟಬಹುದು. ಕಾಂಗ್ರೆಸ್‌, ಬಿಜೆಪಿ ಪೈಕಿ ಯಾರು ಹೆಚ್ಚು ಸ್ಥಾನ ಗಳಿಸುತ್ತಾರೆ. ಕಡಿಮೆ ಸ್ಥಾನ ಗಳಿಸಿದರೆ ಜೆಡಿಎಸ್‌ ಪಾತ್ರ ಏನು ಎಂಬ ಕುರಿತು ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್‌ ನಡೆದಿದೆ. ಹೈವೋಲ್ಟೇಜ್‌ ಕ್ಷೇತ್ರಗಳ ಬಗ್ಗೆಯೇ ಹೆಚ್ಚು ಬಾಜಿ ನಡೆಯುತ್ತಿದೆ.

ಹಾಸನದಲ್ಲಿ ಎಚ್‌.ಎಸ್‌.ಪ್ರಕಾಶ್‌ ಗೆಲ್ತಾರಾ? ಹೊಳೆನರಸೀಪುರದಲ್ಲಿ ಎಚ್.ಡಿ.ರೇವಣ್ಣ ಗೆಲ್ತಾರಾ? ಸಕಲೇಶಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಾರಾ? ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಒಂದಕ್ಕೆ ಮೂರು, ನಾಲ್ಕು ಪಟ್ಟು ಹಣ ಕಟ್ಟುವ ವ್ಯವಸ್ಥೆ ಇದೆ. ಫಲಿತಾಂಶದ ದಿನ ಸಮೀಪಿಸುತ್ತಿದ್ದಂತೆ ಇದರ ಪ್ರತಾಪ ಹೆಚ್ಚು. ಸೋಮವಾರ ಬೆಟ್ಟಿಂಗ್‌ ವ್ಯವಹಾರ ಮತ್ತಷ್ಟು ಚುರುಕುಗೊಳ್ಳಲಿದ್ದು, ಒಂದಕ್ಕೆ ನಾಲ್ಕರಿಂದ ಹತ್ತು ಪಟ್ಟು ಹಣ ಕಟ್ಟುವ ಪ್ರಕ್ರಿಯೆ ನಡೆಯಲಿದೆ.

ಬೆಟ್ಟಿಂಗ್‌ನಲ್ಲಿ ಕೆಲವು ಅಭ್ಯರ್ಥಿಗಳ ಪರವಾಗಿ ಪೈಪೋಟಿ ಬಿರುಸಾಗಿದೆ. ಇನ್ನು ಕೆಲವರ ಪರ ಹಣ ಕಟ್ಟುವವರೇ ಇಲ್ಲ. ಸದ್ಯದ ಮಾಹಿತಿ ಪ್ರಕಾರ ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಕ್ಷೇತ್ರದ ಫಲಿತಾಂಶದ ಬಗ್ಗೆಯೇ ಹೆಚ್ಚು ಬೆಟ್ಟಿಂಗ್‌ ಕಟ್ಟಿರುವುದು ವಿಶೇಷ.

ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ.ಗೌಡ ತಮ್ಮ ಎದುರಾಳಿ ಜೆಡಿಎಸ್‌ನ ಎಚ್‌.ಎಸ್‌.ಪ್ರಕಾಶ್‌ ವಿರುದ್ಧ ಗೆಲ್ಲುವುದಾಗಿ ಬೆಟ್ಟಿಂಗ್ ಕಟ್ಟಿದವರ ಸಂಖ್ಯೆ ಹೆಚ್ಚು. ಅದಕ್ಕಾಗಿ ಕೆಲವರು ಪಂಥಾಹ್ವಾನವನ್ನು ನೀಡುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಜೋರಾಗಿದೆ.

ಬೆಟ್ಟಿಂಗ್‌ನಲ್ಲಿ ನಂತರದ ಸ್ಥಾನ ಜಿಲ್ಲೆಯ ಪ್ರತಷ್ಠಿತ ಹೊಳೆನರಸೀಪುರ ಕ್ಷೇತ್ರಕ್ಕೆ ಸೇರಿದೆ. ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಗೆಲುವಿನ ಪರ ಬೆಟ್ಟಿಂಗ್ ಕಟ್ಟಿದ್ದಾರೆ.

ಸಕಲೇಶಪುರದಲ್ಲಿ ಬಿಜೆಪಿಯ ಜಿ.ಸೋಮಶೇಖರ್‌ ಗೆಲುವಿನ ಹೆಸರಿನಲ್ಲಿ ಬೆಟ್ಟಿಂಗ್‌ ನಡೆದಿದ್ದರೆ, ಅರಕಲಗೂಡಿನಲ್ಲಿ ಎ.ಟಿ.ರಾಮಸ್ವಾಮಿ ಗೆಲುತ್ತಾರೆ ಎಂದು ಲಕ್ಷಾಂತರ ರೂಪಾಯಿ ಬಾಜಿ ಕಟ್ಟಿದ್ದಾರೆ.

ಅರಸೀಕೆರೆಯಲ್ಲಿ ಕೆ.ಎಂ.ಶಿವಲಿಂಗೇಗೌಡ ಗೆಲುವಿಗಾಗಿಯೂ ಹಣ ಕಟ್ಟಲಾಗಿದೆ. ಎಲ್ಲರ ನಿರೀಕ್ಷೆ ಮೇ 15ರ ಫಲಿತಾಂಶದ ಮೇಲೆ ಕೇಂದ್ರೀಕೃತವಾಗಿದೆ.

‘ಹಾಸನದಲ್ಲಿ ಪ್ರಕಾಶ್‌ ಗೆಲ್ಲುತ್ತಾರೆ ಎಂದು ಸ್ನೇಹಿತರೊಬ್ಬರು ಮನೆ ಬಾಜಿ ಕಟ್ಟಿದ್ದಾರೆ. ಕೆಲ ಗ್ರಾಮಗಳಲ್ಲಿ ಹೊಲ ಪಣಕ್ಕಿಟ್ಟಿದ್ದಾರೆ. ಕೆಲವರು ಲಕ್ಷಾಂತರ ರೂಪಾಯಿ ಹಣ ಕಟ್ಟಿದ್ದಾರೆ. ಇಲ್ಲಿ ಹಣಕ್ಕಿಂತ ಸೋಲು, ಗೆಲುವು ಮುಖ್ಯ. ಹಿಂದಿನ ಎರಡು ಚುನಾವಣೆಯಲ್ಲೂ ಜೆಡಿಎಸ್‌ ಅಭ್ಯರ್ಥಿ ಪರ ಹಣ ಕಟ್ಟಲಾಗಿತ್ತು’ ಎಂದು ಹೆಸರು ಹೇಳಲು ಇಚ್ಚಿಸದ ರಾಜಕೀಯ ಪಕ್ಷದ ಅಭ್ಯರ್ಥಿಯೊಬ್ಬರ ಕಟ್ಟಾ ಅಭಿಮಾನಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry