ಮತದಾನದ ಅವಕಾಶಕ್ಕೆ ಆಗ್ರಹಿಸಿ ಪ್ರತಿಭಟನೆ

7
ಅಂಚೆ ಮತಪತ್ರಗಳು ತಲುಪಿಲ್ಲ; ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ಆರೋಪ

ಮತದಾನದ ಅವಕಾಶಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:
ಮತದಾನದ ಅವಕಾಶಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ಪೈಕಿ ಸುಮಾರು 200 ಮಂದಿ ಈವರೆಗೆ ತಮಗೆ ಅಂಚೆ ಮತಪತ್ರ ತಲುಪಿಲ್ಲ, ಕೂಡಲೇ ಮತಪತ್ರ ನೀಡಿ ಮತದಾನಕ್ಕೆ ಅವಕಾಶ ನೀಡಿ ಎಂದು ಆಗ್ರಹಿಸಿ ಸೋಮವಾರ ಉಪ ಚುನಾವಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆದರೆ ಪ್ರತಿಭಟನಾಕಾರರ ಆರೋಪ ಅಲ್ಲಗಳೆದ ಉಪ ಚುನಾವಣಾಧಿಕಾರಿ ನರಸಿಂಹಮೂರ್ತಿ ಅವರು, ‘ಸುಮಾರು 300 ಸಿಬ್ಬಂದಿ ಅರ್ಜಿಗಳು ಮತದಾರರ ಪಟ್ಟಿಯ ಭಾಗದ ಸಂಖ್ಯೆ ಮತ್ತು ಮತದಾರರ ಕ್ರಮಸಂಖ್ಯೆ ತಾಳೆಯಾಗದೆ ತಿರಸ್ಕೃತಗೊಂಡಿವೆ. ಕೆಲವರು ಅಂಚೆ ಮತಪತ್ರಕ್ಕಾಗಿ ನಮೂನೆ 12ರ ಅರ್ಜಿ ಭರ್ತಿ ಮಾಡಿ ಸಲ್ಲಿಸಿಲ್ಲ’ ಎಂದು ಹೇಳಿದರು.

ನರಸಿಂಹಮೂರ್ತಿ ಅವರ ಮಾತಿಗೆ ಸಿಬ್ಬಂದಿ ಮತ್ತು ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಉಪ ಚುನಾವಣಾಧಿಕಾರಿ ಅವರ ಕಚೇರಿಗೆ ಬಂದ ಚುನಾವಣಾಧಿಕಾರಿ ಶಿವಸ್ವಾಮಿ ಅವರು ಪ್ರತಿಭಟನಾಕಾರರ ಅಹವಾಲು ಆಲಿಸಿದರು.

ಈ ವೇಳೆ ಮಾತನಾಡಿದ ಅವರು, ‘ನಮ್ಮಿಂದ ಲೋಪಗಳಾಗಿಲ್ಲ. ಒಂದೊಮ್ಮೆ ಅಂಚೆ ತಲುಪುವುದು ವಿಳಂಬವಾದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿ ಶೀಘ್ರವಾಗಿ ವಿತರಿಸುವಂತೆ ಸೂಚಿಸುವೆ. ಇಲ್ಲಿ ರಾತ್ರಿ 10ರ ವರೆಗೆ ಅಂಚೆ ಮತ ಚಲಾಯಿಸಲು ಅವಕಾಶ ಮಾಡಿಕೊಡುತ್ತೇವೆ. ಬೆಳಿಗ್ಗೆ 8ರ ವರೆಗೆ ಕೂಡ ಅಂಚೆ ಮತಪತ್ರ ಸ್ವೀಕರಿಸುತ್ತೇವೆ’ ಎಂದು ಸಮಾಧಾನಪಡಿಸಿದರು.

ಮತ ಹಾಕುವ ಅವಕಾಶದಿಂದ ವಂಚಿತರಾಗಿದ್ದೇವೆ...

(ದಾವಣಗೆರೆಯ ಪಾಲಿಕೆ ಕಚೇರಿಯಲ್ಲಿ ಸೋಮವಾರ ಅಂಚೆಮತದಾನಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಅಧಿಕಾರಿ ಪರುಶುರಾಂ ಅವರ ಜತೆ ವಾಗ್ವಾದ ನಡೆಸಿದರು)

ದಾವಣಗೆರೆ: ಸಕಾಲಕ್ಕೆ ಅಂಚೆ ಮತ ತಲುಪದ ಕಾರಣ ಮತ ಹಾಕುವ ಅವಕಾಶದಿಂದ ವಂಚಿತವಾಗಬೇಕಾಗಿದೆ ಎಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ಸೋಮವಾರ ಪಾಲಿಕೆ ಎದುರು ಆಕ್ರೋಶ ವ್ಯಕ್ತಪಡಿಸಿದರು.

ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ್ದರೂ ಅಂಚೆಮತ ತಲುಪಿಲ್ಲ. ಪಾಲಿಕೆಯ ಚುನಾವಣಾ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಸಂಜೆಯೊಳಗೆ ಅಂಚೆಮತ ಹಾಕಲು ವ್ಯವಸ್ಥೆ ಮಾಡುವಂತೆ ಚುನಾವಣಾ ಅಧಿಕಾರಿ ಪರಶುರಾಂ ಅವರ ಜತೆ ವಾಗ್ವಾದ ನಡೆಸಿದರು.

‘ಮತದಾನ ಮಾಡುವಂತೆ ಪ್ರೇರೇಪಿಸುವ ಸಿಬ್ಬಂದಿಗೇ ಮತದಾನ ಮಾಡಲು ಸಾಧ್ಯವಾಗದಿರುವುದು ಬೇಸರ ತಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ‘ಸಂಬಂಧಪಟ್ಟ ಎಲ್ಲ ನೌಕರರಿಗೆ ಈಗಾಗಲೇ ಅಂಚೆಮತಗಳನ್ನು ತಲುಪಿಸಲಾಗಿದೆ. ಫಾರಂ ನಂಬರ್ 12ರಲ್ಲಿ ತಪ್ಪಾಗಿ ವಿವರ ತುಂಬಿದ್ದರೆ ಅಂಥವರಿಗೆ ಅಂಚೆ ಮತ ಸಿಕ್ಕಿರುವುದಿಲ್ಲ ಎಂದರು. ಜತೆಗೆ ತರಬೇತಿ ವೇಳೆ ಫೆಸಿಲಿಟೇಷನ್‌ ಕೇಂದ್ರಗಳಲ್ಲಿ ಅಂಚೆ ಮತ ಹಾಕಲು ಅವಕಾಶ ನೀಡಲಾಗಿತ್ತು. ಆಗ ಮತ ಹಾಕದೆ, ಈಗ ಮತ ಹಾಕಲು ಅವಕಾಶ ಕೊಡಿ ಎಂದರೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry