ಸೋಮವಾರ, ಮಾರ್ಚ್ 8, 2021
31 °C

ಭಾರತ–ನೇಪಾಳ ಸಂಬಂಧ ಸುಧಾರಣೆಗೆ ಪ್ರಮುಖ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ–ನೇಪಾಳ ಸಂಬಂಧ ಸುಧಾರಣೆಗೆ ಪ್ರಮುಖ ಹೆಜ್ಜೆ

ಪ್ರಧಾನಿ ನರೇಂದ್ರ ಮೋದಿ ಅವರ ಈಚಿನ ನೇಪಾಳ ಭೇಟಿ, ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಹೆಜ್ಜೆ. ನಾಲ್ಕು ವರ್ಷಗಳಲ್ಲಿ ಈ ನೆರೆಯ ರಾಷ್ಟ್ರಕ್ಕೆ ಅವರು ನೀಡಿರುವ ಮೂರನೇ ಭೇಟಿ ಇದಾಗಿದ್ದರೂ ಇದಕ್ಕೆ ವಿಶೇಷ ಮಹತ್ವ ಇದೆ. ಮೂರು ವರ್ಷಗಳಿಂದ ಹಳಸಿರುವ ಸಂಬಂಧವನ್ನು ಸುಧಾರಿಸುವ ಕೆಲಸವನ್ನು ಮೋದಿ ಈ ಸಲ ಯಶಸ್ವಿಯಾಗಿ ಮಾಡಿದ್ದಾರೆ. ನೇಪಾಳ 2015ರ ಸೆಪ್ಟೆಂಬರ್‌ನಲ್ಲಿ ಹೊಸ ಸಂವಿಧಾನವನ್ನು ಅಂಗೀಕರಿಸಿ, ಜಾರಿಗೊಳಿಸಿದ ಬಳಿಕ ಎರಡೂ ದೇಶಗಳ ನಾಯಕರು ಪರಸ್ಪರ ಬೆನ್ನು ತಿರುಗಿಸಿದ್ದರು. ನೇಪಾಳದಲ್ಲಿರುವ ಭಾರತೀಯ ಮೂಲದ ಮಧೇಶಿಗಳಿಗೆ ಸಂವಿಧಾನ ಒಪ್ಪಿಗೆಯಾಗದ್ದರಿಂದ ಅದರ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿದ್ದರು. ‘ಸ್ಥಳೀಯ ಮತ್ತು ರಾಷ್ಟ್ರೀಯ ಸರ್ಕಾರದಲ್ಲಿ ತಮಗೆ ಸೂಕ್ತ ಪ್ರಾತಿನಿಧ್ಯ ಕೊಡದೆ ಕಡೆಗಣಿಸಲಾಗಿದೆ’ ಎಂಬುದು ಅವರ ವಿರೋಧಕ್ಕೆ ಕಾರಣವಾಗಿತ್ತು. ಬಳಿಕ ಎರಡೂ ದೇಶಗಳ ಮಧ್ಯೆ ಆರ್ಥಿಕ ಚಟುವಟಿಕೆಗಳೂ ಸ್ಥಗಿತಗೊಂಡಿದ್ದವು. ‘ಮಧೇಶಿಗಳ ಬೇಡಿಕೆಗೆ ಮಣಿಯುವಂತೆ ಮಾಡುವ ಒತ್ತಡ ತಂತ್ರವಾಗಿ ಭಾರತ ತನ್ನೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಗಿತಗೊಳಿಸಿದೆ’ ಎನ್ನುವ ಭಾವನೆಯನ್ನು ಅಲ್ಲಿನ ಸರ್ಕಾರ ಹೊಂದಿತ್ತು. ನೇಪಾಳದಲ್ಲಿ ಭಾರತ ವಿರೋಧಿ ಭಾವನೆ ಎಷ್ಟಿತ್ತೆಂದರೆ, ಭೂಕಂಪ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾಗ ‘ಗೋ ಬ್ಯಾಕ್‌ ಇಂಡಿಯಾ’ ಎಂಬ ಘೋಷಣೆಗಳು ಕೇಳಿಬಂದಿದ್ದವು. ಈ ದೃಷ್ಟಿಯಿಂದ, ನೇಪಾಳ ಪ್ರಧಾನಿ ಕೆ.ಪಿ. ಒಲಿ ಅವರ ಭಾರತ ಭೇಟಿ, ಆನಂತರದ ಮೋದಿ ಅವರ ನೇಪಾಳ ಭೇಟಿ ಉಭಯ ರಾಷ್ಟ್ರಗಳ ನಡುವಿನ ಅಪನಂಬಿಕೆಯನ್ನು ದೂರ ಮಾಡಲು ನೆರವಾಗಿವೆ ಎಂಬುದು ಸ್ಪಷ್ಟ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿದೇಶಾಂಗ ನೀತಿಯನ್ನು ಪುನರ್‌ರೂಪಿಸಲಾಗಿದೆ. ನೆರೆಹೊರೆ ರಾಷ್ಟ್ರಗಳಲ್ಲಿ ಚೀನಾ ಪ್ರಭಾವ ತಡೆಯುವುದು ವಿದೇಶಾಂಗ ನೀತಿಯ ಮುಖ್ಯ ಉದ್ದೇಶ. ಇದು ಸದ್ಯದ ಸಂದರ್ಭದಲ್ಲಿ ಅನಿವಾರ್ಯ ಕೂಡ. ನೇಪಾಳದಲ್ಲೂ ಚೀನಾ ಅಧಿಕ ಬಂಡವಾಳ ಹೂಡುವ ಮೂಲಕ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ.

ಪಾಕಿಸ್ತಾನದ ಜೊತೆಗೆ ಉತ್ತಮ ಸಂಬಂಧ ಕುದುರಿಸಿರುವ ಚೀನಾಕ್ಕೆ ನೇಪಾಳ ಸಖ್ಯವೂ ಅಗತ್ಯವಾಗಿದೆ. ಈ ಕಾರಣಕ್ಕೆ ಅದು ಮೂಲ ಸೌಕರ್ಯ, ಇಂಧನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ. ಉ‍ಪಖಂಡದಲ್ಲಿ ಭಾರತದ ಪ್ರಭಾವ ಕುಗ್ಗದಂತೆ ಎಚ್ಚರ ವಹಿಸಲು ಮೋದಿ, ನೇಪಾಳ ಜೊತೆಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಪ್ರಧಾನಿ ತಮ್ಮ ಪ್ರವಾಸ ಸಮಯದಲ್ಲಿ ಎರಡೂ ದೇಶಗಳ ನಡುವಿನ ಪೌರಾಣಿಕ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ಮನವರಿಕೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ, ಉತ್ತರಪ್ರದೇಶದ ಅಯೋಧ್ಯೆಯಿಂದ ನೇಪಾಳದ ಸೀತಾ ದೇವಾಲಯವಿರುವ ಜನಕಪುರಕ್ಕೆ ಬಸ್‌ ಸಂಚಾರವನ್ನೂ ಉದ್ಘಾಟಿಸಿದ್ದಾರೆ. ಭಾರತದ ಪ್ರಯತ್ನಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ನೇಪಾಳ ಪ್ರಧಾನಿ, ‘ಭಾರತದ ವಿರುದ್ಧದ ಕಾರ್ಯಾಚರಣೆಗೆ ನಮ್ಮ ನೆಲವನ್ನು ಬಳಸಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂಬಂಥ ಖಡಕ್‌ ಸಂದೇಶ ರವಾನಿಸಿದ್ದಾರೆ. ಇಬ್ಬರೂ ನಾಯಕರ ಧೋರಣೆಯು ಭಾರತ– ನೇಪಾಳ ಬಾಂಧವ್ಯ ವೃದ್ಧಿಗೆ ಬಲ ತಂದಿರುವುದು ಸಕಾರಾತ್ಮಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.