ಬಿಎಫ್‌ಸಿಗೆ ಜಯದ ನಿರೀಕ್ಷೆ

7
ಎಎಫ್‌ಸಿ ಕಪ್‌ ಫುಟ್‌ಬಾಲ್‌ ಟೂರ್ನಿ: ಅಬಹಾನಿ ತಂಡ ಎದುರಾಳಿ

ಬಿಎಫ್‌ಸಿಗೆ ಜಯದ ನಿರೀಕ್ಷೆ

Published:
Updated:
ಬಿಎಫ್‌ಸಿಗೆ ಜಯದ ನಿರೀಕ್ಷೆ

ಢಾಕಾ: ಎಎಫ್‌ಸಿ ಕಪ್‌ ಗುಂಪು ಹಂತದ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಅಬಹಾನಿ ಲಿಮಿಟೆಡ್‌ ಢಾಕಾ ತಂಡವನ್ನು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಬುಧವಾರ ಎದುರಿಸಲಿದೆ.

ನಾಕೌಟ್ ಹಂತಕ್ಕೆ ಪ್ರವೇಶಿಸಬೇಕಾದರೆ ಬಿಎಫ್‌ಸಿಗೆ ಈ ಪಂದ್ಯದಲ್ಲಿ ಜಯ ಅನಿವಾರ್ಯ ಆಗಿದೆ. ಅಷ್ಟು ಮಾತ್ರವಲ್ಲ, ಗುವಾಹಟಿಯಲ್ಲಿ ನಡೆಯಲಿರುವ ‘ಇ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ನ್ಯೂ ರೇಡಿಯಂಟ್ ತಂಡವನ್ನು ಐಜ್ವಾಲ್‌ ಮಣಿಸಬೇಕು.

ಗಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ ಗೆದ್ದು, ಐಜ್ವಾಲ್ ಎದುರು ರೇಡಿಯಂಟ್ ಕೂಡ ಗೆದ್ದರೆ ‘ಇ’ ಗುಂಪಿನಲ್ಲಿ ಬಿಎಫ್‌ಸಿ ಮತ್ತು ರೇಡಿಯಂಟ್‌ ತಂಡಗಳು ತಲಾ 15 ಪಾಯಿಂಟ್ ಹೊಂದಲಿವೆ. ಆದರೆ ಈ ತಂಡಗಳು ಮುಖಾಮುಖಿಯಾಗಿದ್ದಾಗ ಗಳಿಸಿದ ಗೋಲುಗಳ ಸಂಖ್ಯೆಯಲ್ಲಿ ರೇಡಿಯಂಟ್‌ ಮುಂದೆ ಇದೆ. ಹೀಗಾಗಿ ಬುಧವಾರವೂ ಆ ತಂಡ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಲಿದ್ದು ನಾಕೌಟ್ ತಲುಪಲಿದೆ.

ಬೆಂಗಳೂರಿನಲ್ಲಿ ನಡೆದಿದ್ದ ರೇಡಿಯಂಟ್ ಎದುರಿನ ಪಂದ್ಯದಲ್ಲಿ ಬಿಎಫ್‌ಸಿ 1–0 ಅಂತರದಿಂದ ಗೆದ್ದಿತ್ತು. ಆದರೆ ತವರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ರೇಡಿಯಂಟ್‌ ಬಿಎಫ್‌ಸಿಯನ್ನು 2–0 ಗೋಲುಗಳಿಂದ ಮಣಿಸಿತ್ತು. ಆ ಸೋಲು ಈಗ ಬಿಎಫ್‌ಸಿಗೆ ಮಾರಕವಾಗಿ ಪರಿಣಮಿಸಿದೆ.

‘ನಾಳಿನ ಪಂದ್ಯದಲ್ಲಿ ಬಿಎಫ್‌ಸಿ ಗೆದ್ದರೆ ಮಾತ್ರ ಸಾಲದು. ರೇಡಿಯಂಟ್‌ ತಂಡವನ್ನು ಐಜ್ವಾಲ್ ಸೋಲಿಸಬೇಕು. ಆದರೆ ನಾವು ನಮ್ಮ ಪಂದ್ಯಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಜಯ ಸಾಧಿಸಲು ಪ್ರಯತ್ನಿಸಲಿದ್ದೇವೆ’ ಎಂದು ತಂಡದ ಕೋಚ್‌ ಆಲ್ಬರ್ಟ್‌ ರೋಕಾ ಹೇಳಿದರು.

ಸೋಲಿನ ಕಹಿ ಮರೆಯಲು ಯತ್ನ: ಹೋದ ವರ್ಷ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಬಿಎಫ್‌ಸಿ 0–2 ಗೋಲುಗಳಿಂದ ಸೋತಿತ್ತು. ಆ ನೋವನ್ನು ಮರೆತು ಜಯಿಸಲು ಸುನಿಲ್ ಚೆಟ್ರಿ ಬಳಗ ಬುಧವಾರ ಶ್ರಮಿಸಲಿದೆ. ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಬಹಾನಿ ತಂಡವನ್ನು ಬಿಎಫ್‌ಸಿ ಮಣಿಸಿತ್ತು. ಅದೇ ಲಯದಲ್ಲಿ ಬುಧವಾರ ಆಡಲು ತಂಡ ಶ್ರಮಿಸಲಿದೆ.

ಸೈಫುಲ್ ಬಾರಿ ಟಿಟು ಅವರ ಮಾರ್ಗದರ್ಶನದಲ್ಲಿ ಬೆಳೆದಿರುವ ಅಬಹಾನಿ ತಂಡ ಎಎಫ್‌ಸಿ ಕಪ್‌ ಅರ್ಹತಾ ಹಂತದಿಂದ ಈಗಾಗಲೇ ಹೊರಬಿದ್ದಿದೆ. ಹಿಂದಿನ ಐದು ಪಂದ್ಯಗಳಲ್ಲಿ ಒಂದನ್ನು ಮಾತ್ರ ಈ ತಂಡ ಗೆದ್ದಿದೆ. ಆದ್ದರಿಂದ ಅಂತಿಮ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ಈ ತಂಡ ಆಡಲಿದೆ.

ಪಂದ್ಯ ಆರಂಭ: ಸಂಜೆ 7.15

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry