ಸೋಮವಾರ, ಮಾರ್ಚ್ 1, 2021
20 °C
ಪಕ್ಷದ ಬಾವುಟ ಹಾರಿಸಿ, ಕುಣಿದು ಕುಪ್ಪಳಿಸಿದ ಕಾರ್ಯಕರ್ತರು

ಗೆಲುವಿನ ನಗೆ ಬೀರಿದ ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೆಲುವಿನ ನಗೆ ಬೀರಿದ ಅಭ್ಯರ್ಥಿಗಳು

ಬೆಂಗಳೂರು: ವಿಧಾನಸಭೆ ಚುನಾವಣಾ ಕಣದಲ್ಲಿ ಇಳಿದು ಗೆಲುವಿನ ನಗು ಬೀರಿದ ಅಭ್ಯರ್ಥಿಗಳ ಸಂಭ್ರಮ ಮಂಗಳವಾರ ಮುಗಿಲು ಮುಟ್ಟಿತ್ತು. ಹೂವಿನ ಹಾರ, ಹಾರುವ ಬಾವುಟ, ಜೈಕಾರಗಳ ಅಬ್ಬರದಲ್ಲಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರೆ, ಸುರಿದ ಪುಷ್ಪವೃಷ್ಟಿಯಲ್ಲಿ ನಾಯಕರು ಮಿಂದೆದ್ದರು.

ಬೆಳ್ಳಂಬೆಳಿಗ್ಗೆಯೇ ಮತ ಎಣಿಕೆ ಕೇಂದ್ರಗಳ ಸಮೀಪ ಬೆಂಬಲಿಗರು ಜಮಾಯಿಸಿದ್ದರು. ಮತ ಎಣಿಕೆ ಪ್ರಾರಂಭವಾಗಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ತಮ್ಮ ಪಕ್ಷ, ನಾಯಕನ ಕುರಿತು ಜಯಘೋಷ ಮಾಡುವುದು ನೆರೆದವರ ನೆಚ್ಚಿನ ಕೆಲಸವಾಗಿತ್ತು.

ಬೆಂಗಳೂರು ದಕ್ಷಿಣ ವಲಯದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಸ್ಥಾನವನ್ನು ಬಿಜೆಪಿ ಪಡೆದುಕೊಂಡಿದೆ. ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿಯುತ್ತಲೇ ಬಿಜೆಪಿ ಕಾರ್ಯಕರ್ತರು ‘ಒಂದು ರೂಪಾಯಿ ಟೀ ಪುಡಿ, ಕಾಂಗ್ರೆಸ್‌ ಪುಡಿ ಪುಡಿ, ಜೋರ್‌ ಸೆ ಬೋಲೊ, ಪ್ಯಾರ್‌ ಸೆ ಬೋಲೊ ಬಿಜೆಪಿ, ಬಿಜೆಪಿ, ಗಾಳಿಪಟ ಗಾಳಿಪಟ ಕಾಂಗ್ರೆಸ್‌ ದೂಳಿಪಟ’ ಎಂದು ನಿರಂತರವಾಗಿ ಕೂಗುತ್ತಲೇ ಇದ್ದರು.

ಆಯಾ ಪಕ್ಷದವರು ತಮ್ಮ ಪಕ್ಷದ ಬಾವುಟ ಹಿಡಿದು ಗೆಲುವಿನ ಸುದ್ದಿ ಕೇಳಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ, ನಿರಂತರವಾಗಿ ಮುನ್ನಡೆ ಕಾಯ್ದುಕೊಂಡಿದ್ದ ರವಿಸುಬ್ರಹ್ಮಣ್ಯ, ಆರ್‌.ಅಶೋಕ್‌, ಸತೀಶ್‌ ರೆಡ್ಡಿ ಗೆಲುವು ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿತು. ನೆರೆದವರಿಗೆಲ್ಲಾ ಕ್ಷಣಾರ್ಧದಲ್ಲಿ ಸಿಹಿ ವಿತರಣೆಯೂ ಆಯಿತು.

ಒಬ್ಬರಾದ ಮೇಲೊಬ್ಬರಂತೆ ಎಣಿಕೆ ಕೇಂದ್ರದ ಹೊರಗೆ ಬರುತ್ತಿದ್ದಂತೆ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಕಾರ್ಯಕರ್ತರು ಜಯಘೋಷ ಕೂಗಿದರು. ಹೂವಿನ ಹಾರ ಹಾಕಿ, ಹೂವಿನ ಮಳೆ ಗರೆದರು. ಕೆಳಗೆ ಇಳಿಸಿ ಎಂದು ಎಷ್ಟೇ ಕೇಳಿಕೊಂಡರೂ ಕಾರ್ಯಕರ್ತರು ಕೇಳಲು ಸಿದ್ಧರಿರಲಿಲ್ಲ.

ಬಿಜೆಪಿ ರಾಜ್ಯ ಕಚೇರಿ ಎದುರೂ ಕಾರ್ಯಕರ್ತರು ನೃತ್ಯ ಮಾಡಿ ಸಂಭ್ರಮಿಸಿದರು. ಯಡಿಯೂರಪ್ಪ, ನರೇಂದ್ರ ಮೋದಿ, ಅಮಿತ್‌ ಶಾ ಬೃಹತ್‌ ಕಟೌಟ್‌ಗಳನ್ನಿರಿಸಿ ಸಂಭ್ರಮಿಸಿದರು. ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದ ಖುಷಿಗೆ ಅಮಿತ್‌ ಶಾ ಕಟೌಟ್‌ಗೆ ಹಾಲಿನ ಅಭಿಷೇಕವನ್ನೂ ಮಾಡಲಾಯಿತು.

ಬಿಟಿಎಂ ಕ್ಷೇತ್ರದಲ್ಲಿ ಗೆದ್ದು ಬೀಗಿದ ರಾಮಲಿಂಗಾರೆಡ್ಡಿ ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಬಾವುಟ ಹಾರಿಸಿ ಕಾಂಗ್ರೆಸ್‌ ಪರ ಘೋಷಣೆ ಕೂಗಿದರು. ಅವರು ಯಾರ ಮಾತಿಗೂ ಸಿಗದೆ ಹೊರನಡೆದರು. ಕೆಲವೇ ಮತಗಳ ಅಂತರದಲ್ಲಿ ಸೋಲುಕಂಡ ಎಚ್‌.ರವೀಂದ್ರ ಸೋಲಿನ ಕಹಿಗೆ ಬಸವಳಿದವರಂತೆ ಕಂಡರು. ಶಾಂತಿನಗರದ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಎ. ಹ್ಯಾರಿಸ್‌ ಅವರಿಗೆ ಗೆದ್ದ ಖುಷಿಯಲ್ಲಿ ಕಾರ್ಯಕರ್ತರು ಸೇಬು ಹಣ್ಣಿನಿಂದ ಮಾಡಿದ ಬೃಹತ್‌ ಹಾರವನ್ನು ಹಾಕಿದರು.

ಹೊಸಕೋಟೆ ಕಾಂಗ್ರೆಸ್‌ ಅಭ್ಯರ್ಥಿ ಎನ್‌. ನಾಗರಾಜ್‌ (ಎಂಟಿಬಿ), ನೆಲಮಂಗಲದ ಜೆಡಿಎಸ್‌ ಅಭ್ಯರ್ಥಿ ಶ್ರೀನಿವಾಸಮೂರ್ತಿ, ದೇವನಹಳ್ಳಿ ಜೆಡಿಎಸ್‌ ಅಭ್ಯರ್ಥಿ ನಿಸರ್ಗ ನಾರಾಯಣ ಸ್ವಾಮಿ ಗೆಲುವಿನ ಖುಷಿಗೆ ಬೆಂಬಲಿಗರು ಹಾರ ಹಾಕಿ ಘೋಷಣೆ ಕೂಗುವ ಮೂಲಕ ರಂಗು ತುಂಬಿದರು.

ಚಾಮರಾಜಪೇಟೆ ಕಾಂಗ್ರೆಸ್‌ ಅಭ್ಯರ್ಥಿ ಜಮೀರ್‌ ಅಹ್ಮದ್‌ ಖಾನ್‌ ಗೆದ್ದಾಗ ಬೆಂಬಲಿಗರು ಪರಸ್ಪರ ಬಣ್ಣದ ಓಕುಳಿ ಆಡಿದರು. ಜಮೀರ್‌ ಅವರಿಗೆ ಪೇಟಾ ತೊಡಿಸಿ ಜೈಕಾರ ಹಾಕಿದರು.

ರಾಜಾಜಿನಗರ ಬಿಜೆಪಿ ಅಭ್ಯರ್ಥಿ ಸುರೇಶ್‌ಕುಮಾರ್‌, ಗಾಂಧಿನಗರ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಗುಂಡೂರಾವ್‌, ಶಿವಾಜಿನಗರದ ಕಾಂಗ್ರೆಸ್‌ ಅಭ್ಯರ್ಥಿ ರೋಷನ್‌ ಬೇಗ್‌, ಚಿಕ್ಕಪೇಟೆ ಬಿಜೆಪಿ ಅಭ್ಯರ್ಥಿ ಉದಯ್‌ ಗರುಡಾಚಾರ್‌ ಗೆಲುವನ್ನೂ ಕಾರ್ಯಕರ್ತರು ಸಂಭ್ರಮಿಸಿದ ಪರಿ ಸೊಗಸಾಗಿತ್ತು.

ಕೆಲವರ ಮನದಲ್ಲಿ ಸೋಲಿನ ಕಹಿ ಛಾಯೆಯಿದ್ದರೂ ಗೆದ್ದವರ ಹರ್ಷೋತ್ಸಾಹದಲ್ಲಿ ಬೆಂಗಳೂರು ತುಂಬೆಲ್ಲಾ ಜಾತ್ರೆಯ ಸಂಭ್ರಮ ಸಂಜೆಯವರೆಗೂ ಮಡುಗಟ್ಟಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.