ಗುರುವಾರ , ಫೆಬ್ರವರಿ 25, 2021
23 °C

ಸೋಲು– ಗೆಲುವಿನ ಲೆಕ್ಕ : 78ಕ್ಕೆ ಇಳಿದ ‘ಕೈ’; ಜೆಡಿಎಸ್‌ ‘ಯಥಾಸ್ಥಿತಿ’

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಸೋಲು– ಗೆಲುವಿನ ಲೆಕ್ಕ : 78ಕ್ಕೆ ಇಳಿದ ‘ಕೈ’; ಜೆಡಿಎಸ್‌ ‘ಯಥಾಸ್ಥಿತಿ’

ಬೆಂಗಳೂರು: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆಡಳಿತಾರೂಢ ಕಾಂಗ್ರೆಸ್ 122ರಿಂದ ಏಕಾಏಕಿ 78ಕ್ಕೆ ಇಳಿದು ಬಿಟ್ಟಿದೆ. 11 ಶಾಸಕರು ಪಕ್ಷ ತ್ಯಜಿಸಿದ್ದರೂ ಯಥಾಸ್ಥಿತಿ ಕಾಯ್ದುಕೊಳ್ಳುವಲ್ಲಿ ಜೆಡಿಎಸ್ ಸಫಲವಾಗಿದೆ.

‘ಐದು ವರ್ಷ ನುಡಿದಂತೆ ನಡೆದಿದ್ದೇವೆ, ಜನಪರ ಸರ್ಕಾರ ನೀಡಿದ್ದೇವೆ. ಅನ್ನಭಾಗ್ಯದಂತಹ ಹತ್ತಾರು ಭಾಗ್ಯಗಳನ್ನು ಕೊಟ್ಟಿದ್ದೇವೆ’ ಎಂದು ಸಿದ್ದರಾಮಯ್ಯ ಅವರು ಹೇಳಿ ಕೊಂಡರೂ ಜನ ‘ಕೈ’ ಹಿಡಿಯಲಿಲ್ಲ.

ಮತದಾನಕ್ಕೆ ಇನ್ನೇನು ಹತ್ತು ದಿನಗಳಿದ್ದಾಗ ರಾಜ್ಯದಲ್ಲಿ ಬಿರುಗಾಳಿಯಂತೆ ಸುತ್ತಾಡಿದ ಪ್ರಧಾನಿ ನರೇಂದ್ರ ಮೋದಿ, ಅಬ್ಬರದ ಪ್ರಚಾರ ನಡೆಸಿ, 80–90 ಸ್ಥಾನದ ಆಸುಪಾಸಿನ ನಿರೀಕ್ಷೆ ಇದ್ದ ಬಿಜೆಪಿಯನ್ನು 104ರ ಗಡಿಗೆ ತಂದು ನಿಲ್ಲಿಸಿದರು. ಆದರೆ, ಅಧಿಕಾರಕ್ಕೇರುವಷ್ಟು ಸಂಖ್ಯಾ ಬಲ ದೊರೆಯಲಿಲ್ಲ.

ಹಾಗಿದ್ದರೂ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನವನ್ನು ಬಿಜೆಪಿ ಪಡೆಯಲು ಕಾರಣವಾದ ಅಂಶಗಳೇನು ಎಂದು ಹುಡುಕ ಹೊರಟರೆ ಮೋದಿ ಎಬ್ಬಿಸಿದ ಅಲೆ, ಅನೇಕ ಕಡೆಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದ್ದು ಪ್ರಮುಖ ಅಂಶ.

ಲಿಂಗಾಯತ ಸಮುದಾಯಕ್ಕೆ ಸೇರಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರಿಂದಾಗಿ, ಈ ಸಮು

ದಾಯವರ ಬಾಹುಳ್ಯ ಇರುವ ಬಹುತೇಕ ಕ್ಷೇತ್ರಗಳ ಮತ, ಕಮಲ ಪಕ್ಷದ ಅಭ್ಯರ್ಥಿಗಳ ಪಾಲಾಯಿತು. ಇದು ಬಿಜೆಪಿ ಬಲ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿತು.

ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದ ಬೆಳಗಾವಿ, ಹಾವೇರಿ, ಗದಗ, ಧಾರವಾಡ, ದಾವಣಗೆರೆ, ಬಾಗಲಕೋಟೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಲಿಂಗಾಯತರ ಮತಗಳನ್ನು ಸೆಳೆಯಲು ಯಡಿಯೂರಪ್ಪ ಕಾರಣರಾದರು. ಕೊನೇ ಗಳಿಗೆಯಲ್ಲಿ ಮೋದಿ ನಡೆಸಿದ ಪ್ರಚಾರ ಯುವಕರ ಮತ ಸೆಳೆಯಲು ಕಾರಣೀಭೂತವಾಯಿತು. ಮಧ್ಯ, ಉತ್ತರ ಹಾಗೂ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಲ್ಲಿ ಕಮಲ ಅರಳಿಸಲು ಇದು ಸಹಾಯಹಸ್ತ ಚಾಚಿತು.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ‘ಹಿಂದುತ್ವ’ದ ಕಾರ್ಯಸೂಚಿ ಹಾಗೂ ಸಂಘ ಪರಿವಾರದ 24ಕ್ಕೂ ಹೆಚ್ಚು ಕಾರ್ಯಕರ್ತರಕಗ್ಗೊಲೆಗಳಾಗಿವೆ, ಇದನ್ನು ತಡೆಯಲು ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಪದೇ ಪದೇ ಆರೋ

ಪಿಸಿ, ಆಂದೋಲನ ನಡೆಸಿತು. ಈ ಭಾಗಗಳಲ್ಲಿ ಒಂದರ್ಥದಲ್ಲಿ ಕಾಂಗ್ರೆಸ್ ದೂಳೀಪಟವಾಗಿ ಬಿಜೆಪಿ ಜಯಭೇರಿ ಬಾರಿಸಲು ಇದು ಪರೋಕ್ಷವಾಗಿ ನೆರವಾಗಿದೆ.

2013ರ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮೂರು ಸ್ಥಾನಗಳಲ್ಲಿ ಮಾತ್ರ ಗೆದ್ದಿದ್ದ ಬಿಜೆಪಿ ಉಳಿದ ಕ್ಷೇತ್ರಗಳಲ್ಲಿ ಕಣ್ಮರೆಯಾಗಿತ್ತು. ಈ ಬಾರಿ ಬಹುತೇಕ ಅದೇ ಸ್ಥಿತಿ ಕಾಂಗ್ರೆಸ್‌ನದ್ದಾಗಿದೆ. ‘ಹಿಂದುತ್ವ’ದ ಅಲೆಯ ಮೇಲೆ ತೇಲಿದ ಕಮಲ ಪಕ್ಷ ವಿಜಯಯಾತ್ರೆ ನಡೆಸಿದೆ.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಒಂದು ನಿರ್ದಿಷ್ಟ ಜಾತಿಯನ್ನು ಓಲೈಸಿದರು ಹಾಗೂ ಹಿಂದುಳಿದ ಇತರೆ ಜಾತಿಗಳನ್ನು ‘ಅಹಿಂದ’ ತೆಕ್ಕೆಯೊಳಗೆ ತರುವಲ್ಲಿ ನಿರ್ಲಕ್ಷ್ಯ ತೋರಿದರು. ಇದರ ಜತೆಗೆ ಒಕ್ಕಲಿಗರು, ಲಿಂಗಾಯತರು ಮತ್ತು ಬ್ರಾಹ್ಮಣ ಸಮುದಾಯದವರು ಸಿದ್ದರಾಮಯ್ಯನವರ ಧೋರಣೆಯ ಬಗ್ಗೆ ಇಟ್ಟುಕೊಂಡಿರುವ ಸಿಟ್ಟುಕ್ರೋಡೀಕರಣಗೊಂಡು ಕಾಂಗ್ರೆಸ್‌ ವಿರುದ್ಧ ಬಲವಾಗಿ ಕೆಲಸ ಮಾಡಿತು.

ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿದ ಬಳಿಕ ನಡೆದ ಚಾಮುಂಡೇಶ್ವರಿ ಉಪ ಚುನಾವಣೆ ಅವರಿಗೆ ಮರುಹುಟ್ಟು ನೀಡಿತ್ತು. ಈ ಬಾರಿ ಅದೇ ‘ಅಹವಾಲು’ ಮುಂದಿಟ್ಟುಕೊಂಡು ‘ಮತ್ತೊಮ್ಮೆ ಗೆಲ್ಲಿಸಿ’ ಎಂದು ಅವರು ಕೋರಿದ್ದರು. ಆದರೆ, 34,000ದಷ್ಟು ಹೆಚ್ಚು ಮತಗಳಿಂದ ಅವರನ್ನು ಸೋಲಿಸಿದ ಮತದಾರರು, ‘ಒಕ್ಕಲಿಗ ಪ್ರಾಬಲ್ಯ–ಸಿಟ್ಟಿನ’ ರುಚಿ ತೋರಿಸಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರದ ಸಾಧನೆ ಹೇಳಿಕೊಳ್ಳಲು ಹಾಗೂ ಅದನ್ನು ಜನರ ಮುಂದೆ ಮಂಡಿಸಿ ಮತವಾಗಿ ಪರಿವರ್ತಿಸಲು, ಸಂಪುಟದ ಸಚಿವರಾಗಿದ್ದವರು ನಿರೀಕ್ಷಿತ ಮಟ್ಟದಲ್ಲಿ ಒಲವು ತೋರದೇ ಇದ್ದುದು ಕಾಂಗ್ರೆಸ್‌ನ ಹೀನಾಯ ಸೋಲಿಗೆ ಕಾರಣವಾಯಿತು. ಏನೇ ಮಾಡಿದರೂ ಅದು ‘ಸಿದ್ದರಾಮಯ್ಯ’ನವರ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದಂತಾಗುತ್ತದೆ ಎಂದು ಲೆಕ್ಕ ಹಾಕಿದ ಸಚಿವರ ಗಣ, ತನ್ನ ಪಾಡಿಗೆ ತಾನು ಇದ್ದು ಬಿಟ್ಟಿತು. ಇದು ಪಕ್ಷದ ಹಿನ್ನಡೆಯಲ್ಲಿ ಪರಿಸಮಾಪ್ತಿಯಾಯಿತು.

ಇನ್ನು ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಸಿದ ಯತ್ನ, ಮತ ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ. ಧರ್ಮ ಒಡೆಯಲು ಕಾಂಗ್ರೆಸ್ ಮುಂದಾಯಿತು ಎಂದು ಬಿಜೆಪಿ ಬಿಂಬಿಸಿತು. ಇದು ಸ್ವಲ್ಪಮಟ್ಟಿಗೆ ಕಾಂಗ್ರೆಸ್‌ಗೆ ಪ್ರತಿಕೂಲ ವಾತಾವರಣ ಸೃಷ್ಟಿಸಿತು.

ಪ್ರತ್ಯೇಕ ಧರ್ಮ ಸ್ಥಾಪನೆಯ ಮುಂಚೂಣಿಯಲ್ಲಿದ್ದ ಎಂ.ಬಿ. ಪಾಟೀಲ ಬಿಟ್ಟರೆ ಇದರ ‍ಪರ ಧ್ವನಿ ಎತ್ತಿದವರು ಯಾರೂ ಗೆಲ್ಲಲಿಲ್ಲ. ಲಿಂಗಾಯತ ಯುವ ನಾಯಕ ಎಂದು ಬಿಂಬಿಸಿಕೊಂಡಿರುವ ಸಚಿವರಾದ ವಿನಯ ಕುಲಕರ್ಣಿ, ಶರಣ ಪ್ರಕಾಶ ಪಾಟೀಲ ಸೋಲುಂಡರು. ಧರ್ಮ ಬೇಡಿಕೆಗೆ ಧ್ವನಿಯಾಗಿದ್ದ ಸಚಿವರಾದ ಬಸವರಾಜ ರಾಯರಡ್ಡಿ ಹಾಗೂ ಶಾಸಕ ಬಿ.ಆರ್. ಪಾಟೀಲ ಕೂಡ ಸೋಲನುಭವಿಸಿದರು.

ಜೆಡಿಎಸ್‌ಗೆ ಮರು ಹುಟ್ಟು

2013ರ ಚುನಾವಣೆಯಲ್ಲಿ 40 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ ವಿರೋಧ ಪಕ್ಷದ ಸ್ಥಾನದಲ್ಲಿತ್ತು. ಏಳು ಶಾಸಕರು ಬಂಡಾಯ ಎದ್ದು ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸೇರಿದರು. ಮೂವರು ಬಿಜೆಪಿ ಸೇರಿದರು. ಒಬ್ಬರು ನಿಧನರಾದರು. ಹೀಗೆ 11 ಶಾಸಕರನ್ನು ಪಕ್ಷ ಕಳೆದುಕೊಂಡಿತ್ತು. ಅಲ್ಲಿಗೆ 29 ಸ್ಥಾನಗಳಲ್ಲಿ ಮಾತ್ರ ಹಾಲಿ ಶಾಸಕರು ಇದ್ದರು. ಈ ಪೈಕಿ ಕೆಲವರು ಸೋತರು. ಹಾಗಿದ್ದರೂ 38 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ. ಮೋದಿ ಮತ್ತು ಸಿದ್ದರಾಮಯ್ಯ ಅವರ ಅಬ್ಬರದ ಪ್ರಚಾರದ ಮಧ್ಯೆಯೇ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಪಕ್ಷದ ಸಾಮರ್ಥ್ಯವನ್ನು ಮತ್ತೆ ಉಳಿಸಿಕೊಂಡಿದ್ದಾರೆ. ಹೊಸ ಕ್ಷೇತ್ರಗಳಲ್ಲಿ ಆ ಪಕ್ಷದ ಶಾಸಕರು ಚುನಾಯಿತರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.