ಭಾನುವಾರ, ಮಾರ್ಚ್ 7, 2021
22 °C
ರಾಜಕೀಯ ವಿಡಂಬನೆ, ಹರಿದಾಡಿದ ವಿಡಿಯೋ, ಆಡಿಯೋ ಮೆಸೇಜ್‌ಗಳು

ಜಾಲತಾಣದಲ್ಲಿ ಜನರಾಜಕೀಯ ಸೃಜನಶೀಲತೆ

ಕೋಡಿಬೆಟ್ಟು ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

ಜಾಲತಾಣದಲ್ಲಿ ಜನರಾಜಕೀಯ ಸೃಜನಶೀಲತೆ

ಮಂಗಳೂರು: ರಾಜ್ಯದಲ್ಲಿ ಮಂಗಳವಾರ ಮತ ಎಣಿಕೆ ಕಾರ್ಯ ಆರಂಭವಾಗಿ, ಬಿಜೆಪಿ ಮುನ್ನಡೆಯ ವಿಷಯ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸೃಜನಶೀಲ ತಮಾಷೆಯ ಸಾಲುಗಳು ಹರಿದಾಡಲು ಆರಂಭವಾದವು. ಸಂಜೆ ವೇಳೆಗೆ ಸಮ್ಮಿಶ್ರ ಸರ್ಕಾರದ ಸುದ್ದಿ ಕೇಳುತ್ತಿದ್ದಂತೆಯೇ ‘ಇಬ್ಬರ ಜಗಳ –  ಮೂರನೆಯವನಿಗೆ ಲಾಭ’ ಎಂಬರ್ಥದ ಹಲವಾರು ಮೆಸೇಜುಗಳನ್ನು ಜನರು ಫಾರ್ವರ್ಡ್‌ ಮಾಡಿಕೊಂಡು ಚಪ್ಪರಿಸಿದರು.

‘‘ಈಗ ನಾಡಿನ ರಾಗ  ಕದನ ಕುತೂಹಲ/ ತ್ರಿಶ್ರ ನಡೆ ಮಿಶ್ರಗತಿ/ ‘jump’ಎ ತಾಳ’’  –ಎಂಬ ಸಾಲುಗಳು ಫೇಸ್‌ಬುಕ್ಕಿನಲ್ಲಿ ರಾಜ್ಯದ ರಾಜಕೀಯವನ್ನು ವಿವರಿಸಿದರೆ, ‘ರಾಜಕೀಯ ಗೀತಲಕ್ಷಣ’  ಎನ್ನುತ್ತಾ ಈ ಹಾಡಿಗೊಂದು ಅಡಿಟಿಪ್ಪಣಿಯ ಪ್ರತಿಕ್ರಿಯೆ ಕಾಣಿಸಿತು. ಏನೇ ಆಗಲಿ, ಶೇ 90 ಅಂಕ ಗಳಿಸಿದ ವಿದ್ಯಾರ್ಥಿ ಸಿಇಟಿ, ನೀಟ್‌ ಅನ್ನುತ್ತ ಪ್ರಯಾಸ ಪಡುತ್ತಿದ್ದರೆ, ಶೇ 35 ಪಡೆದ ವಿದ್ಯಾರ್ಥಿ ಎಷ್ಟು ನಿರಾಳವಾಗಿರುತ್ತಾನೆ ಎಂದು ಈಗಾದರೂ ಗೊತ್ತಾಯ್ತಾ ಎಂಬ ಪ್ರಶ್ನೆಯೊಂದಿಗೆ ಮೂರುಪಕ್ಷಗಳು ಸೀಟ್‌ಗಳ ಸಂಖ್ಯೆಯನ್ನು ಮತ್ತೊಬ್ಬರು  ಛೂ ಬಿಟ್ಟಿದ್ದಾರೆ.  ‘ನಂದೊಂದು ಹಳೇ ಲವ್‌ ಸ್ಟೋರಿನೂ ಹಿಂಗೇ ಆಗಿತ್ತು, ಮೆಜಾರಿಟಿನೇ ಇಲ್ದೋನು ಗೆಲುವಿನ ನಗೆ ಬೀರಿದ್ದ’ ಎಂದು ಒಬ್ಬರು ರಸಿಕರು ದೊಡ್ಡ ಅಕ್ಷರಗಳಲ್ಲಿ ಬರೆದುಕೊಂಡು ತಣ್ಣಗೆ ಅಳುವ ಇಮೋಜಿ ಅಂಟಿಸಿದ್ದಾರೆ.

‘ಗೆದ್ದವ ಸೋತ, ಸೋತವ ಗೆದ್ದ, ಗೆದ್ದೆತ್ತಿನ ಬಾಲ ಹಿಡಿದವ ಎದ್ದ’ ಎಂದು ಮಾರ್ಡರ್ನ್‌ ಗಾದೆಯೊಂದು ಸೃಷ್ಟಿಯಾಯಿತು. ಸಂಜೆ ‘ನೂರೈವತ್ತು ಹಾಕುವ ಅಂತ ಕೂತಿದ್ದೆ, ನೈಂಟಿ ಹಾಕುವಾಗ ಸುಸ್ತಾಗಿ ಹೋದೆ’ ಎಂದು ಬಾಟಲಿಯನ್ನು ಚಿಹ್ನೆ ತೋರಿಸಿ ಕಣ್ಣುಮಿಟುಕಿಸಿದರೆ,  ‘ಬಿಜೆಪಿಗೆ ಬಹುಮತ , ಕಾಂಗ್ರೆಸ್ಸಿಗೆ ಅಧಿಕಾರ , ಕುಮಾರಣ್ಣ ಸಿಎಮ್ಮು,ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು. ಯಾರಿಗೂ ಬೇಜಾರ್ ಮಾಡಲ್ಲ’ ಎಂದು ಉದಾರ ಹೃದಯ ಮೆರೆದು ನಕ್ಕವರೂ ಕಂಡರು.

ಕರಾವಳಿಯಲ್ಲಿ ಸಾಮಾನ್ಯವಾಗಿ ಭರಣಿ ಮತ್ತು ಕೃತಿಕಾ ನಕ್ಷತ್ರದಂದು ಕೃಷಿ ಕಾರ್ಯ, ಒಳ್ಳೆಯ ಕಾರ್ಯ ನಿಷಿದ್ಧ. ಅದನ್ನೇ ಹಿನ್ನೆಲೆ ಇರಿಸಿದಂತೆ, ಪಕ್ಕಾ ಲೋಕಲ್‌ ಸ್ಟೈಲ್‌ನಲ್ಲಿ ‘ಇಂದು ನಾಳೆ ಭರಣಿ ಕೃತ್ತಿಕೆ ಮಾರಾಯ್ರೆ, ಯಾವ ನಿರ್ಧಾರಕ್ಕೂ ಎರಡು ದಿನ ಕಾದು ನೋಡಿ’ ಎಂದು ಬರೆದು ಕೊಂಡಿದ್ದಾರೆ. ಆದರೂ ‘ಹುಲಿ’ ರೂಪಕವೇ ಭಾರೀ ಸದ್ದು ಮಾಡಿತು.

ಬಂಟ್ವಾಳ ಮತ್ತು ಬೆಳ್ತಂಗಡಿ ಕ್ಷೇತ್ರದಲ್ಲಿ ಬಹುಕಾಲದಿಂದ ಗೆಲುವು ಸಾಧಿಸಿಕೊಂಡು ಬಂದಿದ್ದ ಕಾಂಗ್ರೆಸ್‌ ನಾಯಕರಿಬ್ಬರ ಸೋಲನ್ನು ಅಣಕಿಸಿ ಹುಲಿಯು ಬೋನಿಗೆ ಬಿದ್ದಿದೆ ಎಂಬ ಅರ್ಥದ ಸಾಲುಗಳು ಕಾಣಿಸಿಕೊಂಡವು. ‘ಬಿಜೆಪಿ ಜಿಲ್ಲೆಗ್‌– ಕಾಂಗ್ರೆಸ್‌ ಬಲ್ಲೆಗ್‌’ , ಪ್ರಕಾಶ್‌ ರೈ ಅವರು ಕಾಣೆಯಾಗಿದ್ದಾರೆ ಎಂಬ ಅಣಕು ಜಾಹೀರಾತು, ‘ಹಂಗಿನ ಅರಮನೆ ಎಂಬ ಬೇಸರದ ಸಾಲುಗಳು ವಾಟ್ಸ್‌ಆ್ಯಪ್‌ ಇನ್‌ ಬಾಕ್ಸಿನಲ್ಲಿ ಇಣುಕಿದವು.

ಪ್ರಕಾಶ್‌ ರೈ ಅವರು ಜಾಹೀರಾತು ನೀಡುವ ಟಿಎಂಟಿ ಕಂಬಿಗಳಲ್ಲಿ ಬೋನು ನಿರ್ಮಿಸಲಾಗುವುದು ಎಂಬ ಕುಹಕದ ಸಾಲು, ಬಿಜೆಪಿ ಮೆಜಾರಿಟಿ ಬಂದರೆ ಬಿಜೆಪಿ ಸರ್ಕಾರ ಮಾಡುತ್ತೆ, ಬಿಜೆಪಿ ಮೆಜಾರಿಟಿ ಮಿಸ್‌ ಆದರೆ ಅಮಿತ್‌ ಶಾ ಸರ್ಕಾರ ಮಾಡ್ತಾರೆ ಎಂಬ ಭಕ್ತಿಯ ಮೆಸೇಜುಗಳು ಕಾಣಿಸಿಕೊಂಡವು. ಓಡೋಡಿ ಇನ್ನೇನು ಗುರಿ ಮುಟ್ಟಲಿರುವ ಅಥ್ಲೀಟ್‌ ಒಬ್ಬರು ಇದ್ದಕ್ಕಿದ್ದಂತೆ ಮುಗ್ಗರಿಸಿ ಸೋತ ವಿಡಿಯೊ, ಸ್ವಿಚ್‌ ಬೋರ್ಡ್‌ಮೇಲೆ ಕುಳಿತ ಎರಡು ಬೆಕ್ಕುಗಳ ಜೊತೆ ಸೇರಲು ಪ್ರಯಾಸ ಪಡುವ ಮೂರನೇ ಬೆಕ್ಕು ಹೇಗೋ ಏರಿ, ಅಲ್ಲಿದ್ದ ಎರಡೂ ಬೆಕ್ಕುಗಳನ್ನು ಕೆಳಕ್ಕುರುಳಿಸುವ ವಿಡಿಯೊ, ‘ಸಾರ್‌ ಬೆದ್ರ ಪೋಂಡು..’ ( ಸಾರ್‌ ಮೂಡುಬಿದ್ರೆ ಹೋಯಿತು... ) ಎನ್ನುವ ಸಾಲುಗಳನ್ನು ಓದಿ ಜನರು ಪಕ್ಷಭೇದವಿಲ್ಲದೇ ಹಂಚಿಕೊಂಡು ನಕ್ಕರು.

ಕರಾವಳಿಯಲ್ಲಿ ತುಳು, ಕನ್ನಡ ಮತ್ತು ಬ್ಯಾರಿ ಭಾಷೆಯಲ್ಲಿ ಧ್ವನಿ ಸಂದೇಶಗಳು ಹರಿದಾಡಿದವು. ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ಬಗ್ಗೆ ಬೇಸರ ಹೇಳಿಕೊಳ್ಳುವ ಸಂದೇಶಗಳೂ ಅಲ್ಲಲ್ಲಿ ಕಾಣಿಸಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.