ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಜಯಭೇರಿ

lಐದರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ l ಇಬ್ಬರು ಶಾಸಕರ ಪುನರಾಯ್ಕೆ l ವಿಜಯೋತ್ಸವ ತಡೆಯದ ನಿಷೇಧಾಜ್ಞೆ
Last Updated 16 ಮೇ 2018, 11:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಚಿತ್ರದುರ್ಗದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು, ಆರು ಕ್ಷೇತ್ರಗಳ ಪೈಕಿ ಇದೇ ಮೊದಲ ಬಾರಿಗೆ ಐದರಲ್ಲಿ ಗೆಲುವು ಸಾಧಿಸಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ವಿಜೇತರಾಗಿದ್ದಾರೆ.

ಚಿತ್ರದುರ್ಗದಲ್ಲಿ ಜಿ.ಎಚ್‌.ತಿಪ್ಪಾರೆಡ್ಡಿ, ಮೊಳಕಾಲ್ಮುರಿನಲ್ಲಿ ಬಿ.ಶ್ರೀರಾಮುಲು, ಹಿರಿಯೂರಿನಲ್ಲಿ ಕೆ.ಪೂರ್ಣಿಮಾ, ಹೊಳಲ್ಕೆರೆಯಲ್ಲಿ ಎಂ.ಚಂದ್ರಪ್ಪ ಹಾಗೂ ಹೊಸದುರ್ಗದಲ್ಲಿ ಗೂಳಿಹಟ್ಟಿ ಡಿ.ಶೇಖರ್‌ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಬಲ ತುಂಬಿದ್ದಾರೆ. ಚಳ್ಳಕೆರೆಯ ಶಾಸಕ ಟಿ.ರಘುಮೂರ್ತಿ ಮರು ಆಯ್ಕೆಯಾಗಿ ಕಾಂಗ್ರೆಸ್‌ ಅಸ್ತಿತ್ವ ಉಳಿಸಿದ್ದಾರೆ.

1999ರ ಬಳಿಕ ಜಿಲ್ಲೆಯಲ್ಲಿ ಹೆಜ್ಜೆಗುರುತು ಮೂಡಿಸಲು ಆರಂಭಿಸಿದ ಬಿಜೆಪಿ, ಬಹುಬೇಗ ಚಿತ್ರದುರ್ಗದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. 1999ರಲ್ಲಿ ಹೊಳಲ್ಕೆರೆಯಿಂದ ರಮೇಶ್‌, 2008ರಲ್ಲಿ ಇದೇ ಕ್ಷೇತ್ರದಿಂದ ಎಂ.ಚಂದ್ರಪ್ಪ ಹಾಗೂ ಚಳ್ಳಕೆರೆಯಿಂದ ತಿಪ್ಪೇಸ್ವಾಮಿ ಗೆಲುವು ಸಾಧಿಸಿದ್ದರು. 2013ರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಳ್ಳಲು ಶಕ್ತವಾಗಿದೆ.

ಘೋಷಣೆ, ಸಂಭ್ರಮಾಚರಣೆ: ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯ ಫಲಿತಾಂಶಕ್ಕೆ ಜಿಲ್ಲೆಯ ಜನರು ಮಂಗಳವಾರ ಕಾತುರರಾಗಿದ್ದರು. ಮತ ಎಣಿಕೆ ಕೇಂದ್ರವಾದ ಸರ್ಕಾರಿ ಕಲಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಸಮೀಪ ಬೆಳಿಗ್ಗೆ 7.30ರ ಸುಮಾರಿಗೆ ಜಮಾಯಿಸಿದ್ದರು. ಸಮಯ ಕಳೆದಂತೆ ಮೈದಾನದಲ್ಲಿ ಜಮಾಯಿಸುವ ಜನ ಸಂಖ್ಯೆಯೂ ಏರುತ್ತ ಹೋಯಿತು. ಪಕ್ಷದ ಬಾವುಟ ಹಿಡಿದು, ನೆಚ್ಚಿನ ಅಭ್ಯರ್ಥಿಯ ಪರ ಘೋಷಣೆ ಕೂಗಿದರು.

ಮತ ಎಣಿಕೆ ಆರಂಭವಾಗುತ್ತಿದ್ದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸುತ್ತಿರುವುದನ್ನು ಕಂಡ ಪಕ್ಷದ ಕಾರ್ಯಕರ್ತರ ಉತ್ಸಾಹ ಮೇರೆ ಮೀರಿತು. ರಾಜ್ಯದ ವಿವಿಧೆಡೆ ಬಿಜೆಪಿ ಮುನ್ನಡೆ ಸಾಧಿಸುತ್ತಿರುವುದನ್ನು ಕಂಡು ಕುಣಿದು ಕುಪ್ಪಳಿಸಿದರು. ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಬಿಜೆಪಿ ಪಾಳಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನು ಅರಿತ ಬಹುತೇಕ ಬಿಜೆಪಿ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರಕ್ಕೆ ಧಾವಿಸಿದರು. ಹೊಳಲ್ಕೆರೆಯ ಎಂ.ಚಂದ್ರಪ್ಪ ಬೆಳಿಗ್ಗೆ 8.30ರಿಂದಲೇ ಮತ ಎಣಿಕೆ ಕೇಂದ್ರದಲ್ಲಿ ಉಳಿದು ಫಲಿತಾಂಶ ಗಮನಿಸಿದರು. 9 ಸುತ್ತಿನ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಳ್ಳುವ ಮುನ್ನವೇ ಗೆಲುವಿನ ನಗೆ ಬೀರಿದರು. ಈ ಹಂತದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಆಂಜನೇಯ ಅವರಿಗಿಂತ 17 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. 11ನೇ ಸುತ್ತಿನಲ್ಲಿ ಸುಮಾರು 20 ಸಾವಿರ ಮತಗಳ ಅಂತರದಿಂದ ಮುಂದಿದ್ದನ್ನು ಕೇಳಿಕೊಂಡ ಚಂದ್ರಪ್ಪ, ಮಾಧ್ಯಮದವರ ಬಳಿ ಮಾತನಾಡುತ್ತಾ, ‘40 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ’ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯೂರು ಕ್ಷೇತ್ರದ ಫಲಿತಾಂಶ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. 12ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗುವವರೆಗೂ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದನ್ನು ನಿರ್ಧರಿಸಲು ಸಾಧ್ಯವಿರಲಿಲ್ಲ. ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಡಿ.ಸುಧಾಕರ್‌ ಆಗಾಗ ಮುನ್ನಡೆ ಸಾಧಿಸುತ್ತಲೇ ಇದ್ದರು. ಆದರೆ ಕೊನೆಯ ಕೆಲ ಸುತ್ತಿನಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಹರಿದು ಬಂದವು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಿಧಾನಗತಿಯಲ್ಲಿ ನಡೆದ ಪರಿಣಾಮ ಫಲಿತಾಂಶ ಲಭ್ಯವಾಗುವುದು ವಿಳಂಬವಾಯಿತು. ಬಿಜೆಪಿ ಅಭ್ಯರ್ಥಿ ಜಿ.ಎಚ್‌.ತಿಪ್ಪಾರೆಡ್ಡಿ ಮಧ್ಯಾಹ್ನ 1.45ಕ್ಕೆ ಮತ ಎಣಿಕೆ ಕೇಂದ್ರಕ್ಕೆ ಬಂದರು. ಗೆಲುವು ಬಹುತೇಕ ಖಚಿತವಾಗಿರುವುದನ್ನು ದೃಢಪಡಿಸಿಕೊಂಡು ಮತ ಎಣಿಕೆ ಪ್ರಕ್ರಿಯೆ ವೀಕ್ಷಿಸಿದರು.

ಮತ ಹಂಚಿಕೆ

ಬಿಜೆಪಿ – ಶೇ 35
ಕಾಂಗ್ರೆಸ್ – ಶೇ 27
ಜೆಡಿಎಸ್ ಶೇ 12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT