ಸೋಮವಾರ, ಮಾರ್ಚ್ 8, 2021
26 °C

ಮಹಾಮೈತ್ರಿಯ ಕನಸಿಗೆ ರೆಕ್ಕೆ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಮಹಾಮೈತ್ರಿಯ ಕನಸಿಗೆ ರೆಕ್ಕೆ

ನವದೆಹಲಿ: ನರೇಂದ್ರ ಮೋದಿ ಅವರ ಪ್ರಚಂಡ ಜನಪ್ರಿಯತೆಗೆ ತಡೆಯೊಡ್ಡಿ, ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಅಡ್ಡಗಾಲು ಹಾಕಲು ಪ್ರಾದೇಶಿಕ ಪಕ್ಷಗಳೊಂದಿಗಿನ ‘ಮಹಾಮೈತ್ರಿ’ ಅತ್ಯಗತ್ಯ ಎಂಬುದಕ್ಕೆ, ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪುಷ್ಟಿ ನೀಡಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಹೊರಹೊಮ್ಮಿದ್ದ ‘ಮೋದಿ ಮೋಡಿ’ಯ ಅಲೆ ಬರಬರುತ್ತ ಬಲಿಷ್ಠವಾಗುತ್ತಲೇ ಹೋಗಿ, ಇತ್ತೀಚೆಗೆ ಆರು ತಿಂಗಳಿನಿಂದ ಕಳೆಗುಂದುತ್ತಾ ಸಾಗಿರುವುದಕ್ಕೆ ಗುಜರಾತಿನ ವಿಧಾನಸಭೆ ಚುನಾವಣೆಯ ಫಲಿತಾಂಶವೇ ಕೈಗನ್ನಡಿ.

ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಫೂಲ್‌ಪುರ ಲೋಕಸಭೆ ಕ್ಷೇತ್ರಗಳಿಗೆ ನಂತರ ನಡೆದಿದ್ದ ಉಪ ಚುನಾವಣೆಯ ಅಚ್ಚರಿಯ ಫಲಿತಾಂಶವು, ಮೈತ್ರಿಯೇ ಮೋದಿ ವಿರುದ್ಧ ಯಶಸ್ಸು ಗಳಿಸಲು ಇರುವ ಏಕೈಕ ಮಾರ್ಗ ಎಂಬುದನ್ನು ದೃಢಪಡಿಸಿದೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನಗಳಿಗಾಗಿ ಯೋಗಿ ಆದಿತ್ಯನಾಥ ಹಾಗೂ ಕೇಶವ ಪ್ರಸಾದ ಮೌರ್ಯ ಅವರು ಬಿಟ್ಟುಕೊಟ್ಟಿದ್ದ ಈ ಎರಡೂ ಕ್ಷೇತ್ರಗಳನ್ನು ಗೆಲ್ಲುವಲ್ಲಿ, ‘ಎಂದೂ ಒಂದಾಗುವುದಿಲ್ಲ’ ಎಂದೇ ಭಾವಿಸಿದ್ದ ಬಿಎಸ್‌ಪಿಯ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ಅಖಿಲೇಶ್‌ ಯಾದವರ ವಿಶಿಷ್ಟ ಮೈತ್ರಿ ಪ್ರಮುಖ ಕಾರಣ ಆಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸುವ ಮಂತ್ರ ಜಪಿಸುತ್ತಿರುವ ಕೆಲವು ದಿಗ್ಗಜ ರಾಜಕಾರಣಿಗಳಿಗೆ, ಕರ್ನಾಟಕದ ಚುನಾವಣೆ ಫಲಿತಾಂಶದಿಂದ ಮತ್ತಷ್ಟು ಕಸುವು ದೊರೆತಿದೆ. ಅವರು ಕಾಣುತ್ತಿರುವ ಕನಸುಗಳಿಗೆ ರೆಕ್ಕೆಗಳು ಮೂಡುವಂತೆ ಮಾಡಿದೆ.

ಕರ್ನಾಟಕದಲ್ಲಿ ಬಿಜೆಪಿಗೆ ದೊರೆತಿರುವ 104 ಸ್ಥಾನಗಳ ಗೆಲುವನ್ನು ಮೇಲ್ನೋಟಕ್ಕೆ ಪ್ರಧಾನಿ ಮೋದಿಯವರ ಗೆಲುವು ಎಂದೇ ಭಾವಿಸಲಾಗುತ್ತಿದೆ. ಆದರೆ, ಜೆಡಿಎಸ್‌ ಮತ್ತು ಕಾಂಗ್ರೆಸ್‌ಗಳೆರಡೂ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿದ್ದರೆ, ಬಿಜೆಪಿಗೆ ಇಷ್ಟೊಂದು ಸ್ಥಾನಗಳು ಲಭಿಸುವುದು ದುಸ್ತರವಾಗುತ್ತಿತ್ತು ಎಂಬುದು ಸ್ಪಷ್ಟ.

‘ಕಾಂಗ್ರೆಸ್‌ ಮುಕ್ತ ಭಾರತ’ದ ಕನಸಿನೊಂದಿಗೆ ಕರ್ನಾಟಕಕ್ಕೆ ದಾಪುಗಾಲಿರಿಸಿದ್ದ ಪ್ರಧಾನಿಯ ಕನಸು ಭಾಗಶಃ ನನಸಾಗಿದೆ. ಆದರೆ, ತನ್ನ ಗೆಲುವಿಗೆ ಅಡ್ಡಿಯಾದವರನ್ನು ಅಧಿಕಾರದಿಂದ ದೂರ ಇರಿಸಬೇಕೆಂಬ ಕಾಂಗ್ರೆಸ್‌ ವರಿಷ್ಠರ ದಿಢೀರ್‌ ನಿರ್ಧಾರ, 2019ರ ಮಹಾ ಚುನಾವಣೆಯ ಗೆಲುವಿನ ಕನವರಿಕೆಯಲ್ಲಿರುವ ಬಿಜೆಪಿಯ ಆಸೆಗೆ ತಣ್ಣೀರೆರಚಬಲ್ಲ ಶಕ್ತಿಗೆ ಜನ್ಮ ನೀಡಲು ಸೂಕ್ತ ವೇದಿಕೆ ಕಲ್ಪಿಸಿದೆ.

ಬಿಜೆಪಿ ಪಡೆದ ಮತಗಳಿಗಿಂತ ಶೇ 2ಕ್ಕೂ ಅಧಿಕ ಪ್ರಮಾಣದ ಮತ ಗಳಿಸಿಯೂ ಹೆಚ್ಚಿನ ಸೀಟು ಗಳಿಸುವಲ್ಲಿ ವಿಫಲವಾದ ಕಾಂಗ್ರೆಸ್‌ಗೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಮಣೆ ಹಾಕದೆ ವಿಧಿ ಇರಲಿಲ್ಲ. ಅಂಥದ್ದೇ ಅನಿವಾರ್ಯ ಇದೀಗ ದೇಶದಲ್ಲಿ ನಿರ್ಮಾಣ ಆಗಿರುವುದು ಒಪ್ಪಿಕೊಳ್ಳಲೇಬೇಕಾದ ಸತ್ಯ.

ಕಾಂಗ್ರೆಸ್‌ ಅಥವಾ ಬೇರೆ ಯಾವುದೇ ಪಕ್ಷವಾಗಿರಲಿ, ‘ಏಕಾಂಗಿಯಾಗಿ ಬಿಜೆಪಿ ಮತ್ತು ಮೋದಿಯವರನ್ನು ಮಣಿಸುವುದು ಅಸಾಧ್ಯ’ ಎಂಬುದಂತೂ ದಿಟ. ಹಾಗಾಗಿ ಮೈತ್ರಿ ಬೇಕೇಬೇಕು. ಪ್ರಾದೇಶಿಕ ಪಕ್ಷಗಳಲ್ಲಿ ಅಡಗಿರುವ ಶಕ್ತಿ ಬೇಕೇಬೇಕು. 2015ರಲ್ಲಿ ಬಿಹಾರದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಇಂಥದ್ದೊಂದು ಶಕ್ತಿ ಇದೇ ಬಿಜೆಪಿಯನ್ನು ಅಧಿಕಾರದಿಂದ ದೂರ ಉಳಿಸಿತ್ತು.

ಪ್ರಾದೇಶಿಕ ಪಕ್ಷಗಳೊಂದಿಗಿನ ಮೈತ್ರಿಗೆ ಇದು ಸಕಾಲ ಎಂದು, ಪಾತಾಳಕ್ಕೆ ಕುಸಿದಿರುವ ಕಾಂಗ್ರೆಸ್‌ಗೆ ಈಗ ಇನ್ನಷ್ಟು ಅನ್ನಿಸಬೇಕಿದೆ. ‘ನಮ್ಮಿಬ್ಬರ ನಡುವಿನ ಜಗಳ ಮೂರನೆಯವನಾದ ಬಿಜೆಪಿಗೆ ಲಾಭ ತಂದುಕೊಡುತ್ತಿದೆ’ ಎಂಬ ಸತ್ಯ ತಡವಾಗಿಯಾದರೂ, ಆಯಾ ರಾಜ್ಯಗಳಲ್ಲಿ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷಗಳಿಗೆ ಅರ್ಥವಾಗಬೇಕಿದೆ.

ಬಿಹಾರದಲ್ಲಿ ರಾಮ್‌ವಿಲಾಸ್‌ ಪಾಸ್ವಾನ್‌, ನಿತೀಶ್‌ ಕುಮಾರ್‌, ಲಾಲು ಪ್ರಸಾದ್‌ ಒಂದಾಗುವ ಮಾತುಕತೆ ನಡೆದಿದೆ ಎಂಬ ಸುದ್ದಿಗಳಿವೆ. ಉತ್ತರ ಪ್ರದೇಶದಲ್ಲಿನ ಎಸ್‌ಪಿ– ಬಿಎಸ್‌ಪಿಯ ಅಚ್ಚರಿಯ ಮೈತ್ರಿ ಹೀಗೆಯೇ ಮಂದುವರಿಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಬಿಜೆಪಿಗೆ ಅಧಿಕಾರ ಕೊಡಬೇಡಿ’ ಎಂದು ಆಂಧ್ರದ ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಕಾಂಗ್ರೆಸ್‌– ಜೆಡಿಎಸ್‌ಗೆ ಕಿವಿಮಾತನ್ನೂ ಹೇಳಿಯಾಗಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಸಹ ಮೈತ್ರಿಯತ್ತ ಆಸಕ್ತಿ ತಾಳಿದ್ದಾರೆ. ಮಮತಾ ಬ್ಯಾನರ್ಜಿ, ಶರದ್‌ ಪವಾರ್‌, ಎಚ್‌.ಡಿ. ದೇವೇಗೌಡ, ಶರದ್‌ ಯಾದವ್‌, ನವೀನ್‌ ಪಟ್ನಾಯಕ್‌ ಆದಿಯಾಗಿ ಪ್ರತಿಯೊಬ್ಬರಲ್ಲೂ ಮೈತ್ರಿ ಆಸೆ ಚಿಗುರೊಡೆದಿದೆ. ರಾಹುಲ್‌ ಗಾಂಧಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವು ತೋರಿದ್ದಾರೆ. ಅದಕ್ಕೆ ಕರ್ನಾಟಕ ನೀರೆರೆದಿದೆ.

ದಕ್ಷಿಣ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಆಸೆ ಸುಲಭವಾಗಿ ಈಡೇರದಿದ್ದರೂ, ಹಿಂದಿ ಭಾಷಿಕ ನೆಲದಲ್ಲಿ ಮೋದಿ ಅಲೆ ಇನ್ನೂ ಕೆಲಸ ಮಾಡುತ್ತಿದೆ. ಅವರ ಜನಪ್ರಿಯತೆ ಕಡಿಮೆ ಮಾಡುವ ನಿಟ್ಟಿನಲ್ಲಿ ವಿರೋಧಿಗಳು ಒಂದಾಗಿ ಬೆವರು ಹರಿಸುವ ಅಗತ್ಯ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.