ಒಗ್ಗೂಡಿ ನೀರೆರದ ಫಲ; ಅರಳಿತು ಕಮಲ

7
ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಜ್ಯೋತಿ ಗಣೇಶ್ ಗೆಲುವಿಗೆ ಸರಳತೆಯೂ ಕಾರಣ

ಒಗ್ಗೂಡಿ ನೀರೆರದ ಫಲ; ಅರಳಿತು ಕಮಲ

Published:
Updated:
ಒಗ್ಗೂಡಿ ನೀರೆರದ ಫಲ; ಅರಳಿತು ಕಮಲ

ತುಮಕೂರು: ಅನುಕಂಪ, ಸರಳತೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಫಲ ತುಮಕೂರು ನಗರದ ಕ್ಷೇತ್ರದಲ್ಲಿ ಜ್ಯೋತಿ ಗಣೇಶ್ ಅವರ ಗೆಲುವಿಗೆ ಕಾರಣವಾಗಿದೆ. ಎಲ್ಲ ವರ್ಗದ ಜನರು ಜ್ಯೋತಿ ಗಣೇಶ್ ಅವರನ್ನು ಬೆಂಬಲಿಸಿದ ಪರಿಣಾಮ ಅವರು ಐದು ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಆರಂಭದಿಂದಲೂ ಬಿಜೆಪಿಗೆ ಇಲ್ಲಿ ಬಂಡಾಯದ ಬೇಗುದಿ ಇತ್ತು. ಆದರೆ ಆ ಬಂಡಾಯ ಪಕ್ಷಕ್ಕೆ ಅನುಕೂಲವನ್ನೇ ತಂದುಕೊಟ್ಟಿದೆ. ಸಿದ್ಧಾಂತ ನಿಷ್ಠ ಎಂದು ಹೇಳುತ್ತಿದ್ದ ಕೆಲವು ಮುಖಂಡರು ಇನ್ನೇನು ಮತದಾನಕ್ಕೆ ಕೆಲವು ದಿನ ಇದೆ ಎನ್ನುವಾಗ ಕಾಂಗ್ರೆಸ್ ಸೇರಿದರು. ಆದರೆ ಇದು ಬಹುತೇಕ ಕಾರ್ಯಕರ್ತರಿಗೆ ಸ್ವಾರ್ಥ ರಾಜಕಾರಣವಾಗಿಯೂ ಕಂಡಿತು. ಸೊಗಡು ಶಿವಣ್ಣ ಅವರ ಬೆಂಬಲಿಗರು ಎನ್ನಲಾದ ಕೆಲವು ಮುಖಂಡರು ಬಿಜೆಪಿ ತೊರೆದರೂ, ಕಾರ್ಯಕರ್ತರು ಮಾತ್ರ ಕಮಲದಿಂದ ದೂರ ಸರಿಯಲಿಲ್ಲ. ಮತ್ತೊಂದು ಕಡೆ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡಿದರು.

ಶಾಸಕ ರಫೀಕ್ ಅಹಮ್ಮದ್ ಸಹ ಸಭ್ಯ ವ್ಯಕ್ತಿ ಎನಿಸಿದವರು. ಒಂದಿಷ್ಟು ಅಭಿವೃದ್ಧಿಯ ಕೆಲಸಗಳನ್ನೂ ಮಾಡಿದವರು. ಆದರೆ ಅವರ ಹೆಸರಿನಲ್ಲಿ ಹಿಂಬಾಲಕರು ತೋರಿದ ದರ್ಪ ಮತ್ತು ಗೂಂಡಾ ವರ್ತನೆ ನಾಗರಿಕರಿಗೆ ಸಹಿಸದಾಯಿತು. ಮತ್ತೊಂದು ಕಡೆ ಸರಳತೆ ಮತ್ತು ಎಲ್ಲರಿಗೂ ಸಿಗುವ ಮೂಲಕ ಜ್ಯೋತಿ ಗಣೇಶ್ ಜನರಿಗೆ ಹತ್ತಿರವಾದರು. ಕಳೆದ ಬಾರಿ ಕಡಿಮೆ ಅಂತರದಿಂದ ಸೋತ ಅನುಕಂಪವೂ ಅವರ ಪರ ಇತ್ತು.

ಜ್ಯೋತಿ ಗಣೇಶ್ ಕೆಲವರಿಗೆ ‘ಲಿಂಗಾಯತ’, ಹಿಂದೂ ಅಭ್ಯರ್ಥಿ ಎನಿಸಿದರು. ಜೆಡಿಎಸ್‌ನ ಒಕ್ಕಲಿಗ ಮುಖಂಡರು ಗೋವಿಂದರಾಜು ಅವರ ಮೇಲಿನ ಬೇಸರದಿಂದ ಜ್ಯೋತಿ ಗಣೇಶ್ ಅವರ ಪರ ಕೆಲಸ ಮಾಡಿದರು. ಅಲ್ಲದೆ ಸಣ್ಣ ಪುಟ್ಟ ಸಮುದಾಯಗಳನ್ನೂ ಜ್ಯೋತಿ ಗಣೇಶ್ ವಿಶ್ವಾಸಕ್ಕೆ ತೆಗೆದುಕೊಂಡರು.

ಪ್ರಮುಖವಾಗಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಸೇರಿದಂತೆ ಕೇಂದ್ರದ ಅಭಿವೃದ್ಧಿ ಕಾರ್ಯಕ್ರಮಗಳು ನಗರದ ಜನರಿಗೆ ತಲುಪಲು ಜ್ಯೋತಿ ಗಣೇಶ್ ಪ್ರಮುಖ ಪಾತ್ರ ವಹಿಸಿದ್ದರು. 2500 ಮಂದಿ ಬಡ ಮುಸ್ಲಿಮರಿಗೂ ಉಜ್ವಲ ಯೋಜನೆ ಸೌಲಭ್ಯ ಕೊಡಿಸಿದ್ದರು. ಇವೆಲ್ಲ ಅವರ ಗೆಲುವಿನ ದಾರಿಗೆ ಪ್ರಮುಖವಾದವು. ಒಂದು ಕಡೆ ಶಿವಣ್ಣ ಅಬ್ಬರಿಸುತ್ತಿದ್ದರೆ ಸೌಮ್ಯವಾಗಿಯೇ ತಮ್ಮ ಗೆಲುವಿನ ಹಾದಿಗಳನ್ನು ಜ್ಯೋತಿ ಗಣೇಶ್ ಹುಡುಕಿಕೊಂಡರು.

ಜೆಡಿಎಸ್‌ನ ಗೋವಿಂದರಾಜು 2013ರ ಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದರು. ಅವರು ಬಿಜೆಪಿ ಮತಬುಟ್ಟಿಗಿಂತ ಕಾಂಗ್ರೆಸ್‌ ಮತಗಳಿಗೆ ಈ ಬಾರಿ ಕೈ ಇಟ್ಟರು. ಇದರ ಪರಿಣಾಮ ಗೋವಿಂದರಾಜು ಎರಡನೇ ಸ್ಥಾನ ತಲುಪಿದರು. ಶಾಸಕ ರಫೀಕ್ ಮೂರನೇ ಸ್ಥಾನಕ್ಕೆ ಇಳಿದರು. ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ವಾಸಿಸುವ ಬಡಾವಣೆಗಳಲ್ಲಿ ಗೋವಿಂದರಾಜು ಉಡುಗೊರೆಗಳನ್ನು ಹಂಚಿದ್ದು ಆ ಜನರಲ್ಲಿ ಕಸಿವಿಸಿ ಉಂಟು ಮಾಡಿತು. ಕೊಂಚ ಮಟ್ಟಿಗೆ ಗೋವಿಂದರಾಜು ಅವರ ಮತ ಲೆಕ್ಕಚಾರ ಇಲ್ಲಿ ಉಲ್ಟಾ ಹೊಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry