ಸೋಲು:ಮನೆಯಲ್ಲೇ ವಿಶ್ರಾಂತಿ, ಮೊಬೈಲ್‌ನಿಂದ ದೂರ

7

ಸೋಲು:ಮನೆಯಲ್ಲೇ ವಿಶ್ರಾಂತಿ, ಮೊಬೈಲ್‌ನಿಂದ ದೂರ

Published:
Updated:

ಗದಗ: ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಜಿಲ್ಲೆಯ ರೋಣ, ನರಗುಂದ ಮತ್ತು ಶಿರಹಟ್ಟಿ ಕ್ಷೇತ್ರಗಳ ಕಾಂಗ್ರೆಸ್‌ನ ಮಾಜಿ ಶಾಸಕರು ಸದ್ಯ ಮನೆಯಲ್ಲಿಯೇ ವಿಶ್ರಾಂತಿ ಮೊರೆ ಹೋಗಿದ್ದು, ದೂರವಾಣಿ ಕರೆ, ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ.

ನರಗುಂದ ಕ್ಷೇತ್ರದಲ್ಲಿ ಬಿಜೆಪಿಯ ಸಿ.ಸಿ ಪಾಟೀಲ ವಿರುದ್ಧ ಸೋಲು ಅನುಭವಿಸಿರುವ ಬಿ.ಆರ್‌.ಯಾವಗಲ್‌, ನರಗುಂದದಿಂದ ತಮ್ಮ ಸ್ವಗ್ರಾಮ ನವಲಗುಂದ ತಾಲ್ಲೂಕಿನ ಜಾವೂರಿಗೆ ತೆರಳಿದ್ದು ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊಬೈಲ್ ಸಂಪರ್ಕಕ್ಕೂ ಅವರು ಲಭಿಸಲಿಲ್ಲ. ಯಾವಗಲ್‌ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಲ್ಲಿಯೇ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾಂಗ್ರೆಸ್‌ನ ತಾಲ್ಲೂಕು ಘಟಕದ ಕಾರ್ಯದರ್ಶಿ ರಾಜು ಕಲಾಲ ಹೇಳಿದರು.

ರೋಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಿ.ಎಸ್‌. ಪಾಟೀಲ ನಿವಾಸದಲ್ಲಿ ವಿಶ್ರಾಂತಿ ಪಡೆದರು. ಮೊಬೈಲ್ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.

ಪಕ್ಷದ ಕಾರ್ಯಕರ್ತರು, ಬೆಂಬಲಿಗರನ್ನು ವಿಚಾರಿಸಿದಾಗ, ಅವರು ಹೊರಗೆ ಹೋಗಿದ್ದಾರೆ, ಎಲ್ಲಿಗೆ ಹೋಗಿದ್ದಾರೆ ಎನ್ನುವುದರ ಮಾಹಿತಿ ಇಲ್ಲ ಎಂದರು.

ಶಿರಹಟ್ಟಿ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಮನೆಯಲ್ಲೇ ವಿಶ್ರಾಂತಿ ಪಡೆದರು. ‘ಫಲಿತಾಂಶ ಈಗಾಗಲೇ ಪ್ರಕಟಗೊಂಡಿದೆ. ಮತ್ತೆ ಅದರ ಬಗ್ಗೆ ಚರ್ಚೆ ಅನಗತ್ಯ’ ಎಂದಷ್ಟೇ ಚುಟುಕಾಗಿ ಪ್ರತಿಕ್ರಿಯಿಸಿದರು.

‘ನಮ್ಮ ಕುಟುಂಬದಿಂದ ಯಾರೇ ಸ್ಪರ್ಧಿಸಿದ್ದರೂ ಇಷ್ಟು ಕಡಿಮೆ ಮತಗಳು ಬರುತ್ತಿರಲಿಲ್ಲ. 11ರಿಂದ 15 ಸಾವಿರ ಮತಗಳನ್ನು ಪಡೆಯುವ ಭರವಸೆ ಇತ್ತು. ಎಲ್ಲಿ ಕೋರ್ಟ್‌ ಅಫಿಡವಿಟ್‌ ಮಾಡಿಸಿ ಮತ ಯಾಚನೆ ಮಾಡಿದ್ದೇ ತಪ್ಪಾಯಿತಾ ಎಂದು ಅವಲೋಕನ ಮಾಡುತ್ತೇನೆ’ ಎಂದು ರೋಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.

‘ಸದ್ಯ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಸಾಹಿತ್ಯ, ಕುಟುಂಬ ಮತ್ತು ಕ್ಷೇತ್ರದ ಜನರೊಂದಿಗೆ ಬೆರೆಯಲು ಆದ್ಯತೆ ನೀಡುತ್ತೇನೆ’ ಎಂದು ದೊಡ್ಡಮೇಟಿ ದೂರವಾಣಿ ಕರೆಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry