ಹಾವೇರಿ ಜಿಲ್ಲೆಯ ಶಾಸಕರು ಇವರು

7
ಜಿಲ್ಲೆಯ ಆರು ಶಾಸಕರ ಕುರಿತ ವಿವಿಧ ಮಾಹಿತಿ; ಬೊಮ್ಮಾಯಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಏಕೈಕ ಶಾಸಕ

ಹಾವೇರಿ ಜಿಲ್ಲೆಯ ಶಾಸಕರು ಇವರು

Published:
Updated:

ಹಾವೇರಿ: ಜಿಲ್ಲೆಯ ಆರು ಕ್ಷೇತ್ರಗಳ ಬಳಿಕ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಮಾತ್ರ ಶಾಸಕ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

2013ರಲ್ಲಿ ಆಯ್ಕೆಯಾಗಿದ್ದ ಶಾಸಕರಾದ ಬ್ಯಾಡಗಿಯ ಬಸವರಾಜ ಶಿವಣ್ಣನವರ (ಕಾಂಗ್ರೆಸ್) ಮತ್ತು ಹಾನ

ಗಲ್‌ನ ಮನೋಹರ್ ತಹಸೀಲ್ದಾರ್ (ಕಾಂಗ್ರೆಸ್) ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ರಾಣೆಬೆನ್ನೂರಿನಲ್ಲಿ ಕೆ.ಬಿ.‌ಕೋಳಿವಾಡ (ಕಾಂಗ್ರೆಸ್), ಹಾವೇರಿಯಲ್ಲಿ ರುದ್ರಪ್ಪ ಲಮಾಣಿ (ಕಾಂಗ್ರೆಸ್), ಹಿರೇಕೆರೂರಿನಲ್ಲಿ ಯು.ಬಿ. ಬಣಕಾರ (ಬಿಜೆಪಿ) ಸೋಲು ಕಂಡರು. ಬೊಮ್ಮಾಯಿ ಮಾತ್ರ ಸತತ ಆಯ್ಕೆಯಾಗಿದ್ದಾರೆ.

ಹಿರಿಯ ಕಿರಿಯ: 81 ವರ್ಷದ ಸಿ.ಎಂ. ಉದಾಸಿ ಜಿಲ್ಲೆಯ ಶಾಸಕರ ಪೈಕಿ ಹಿರಿಯರು. 52 ವರ್ಷದ ಆರ್. ಶಂಕರ್ ಅತ್ಯಂತ ಕಿರಿಯರು. ಉಳಿದಂತೆ ಬಿ.ಸಿ.ಪಾಟೀಲ –62, ನೆಹರು ಓಲೇಕಾರ –61, ಬಸವರಾಜ ಬೊಮ್ಮಾಯಿ–58 ವಿರೂಪಾಕ್ಷಪ್ಪ ಬಳ್ಳಾರಿ–56 ವರ್ಷದವರಾಗಿದ್ದಾರೆ. ಆರು ಶಾಸಕರ ಸರಾಸರಿ ವಯಸ್ಸು 61.66 ವರ್ಷಗಳು.

ಸಿ.ಎಂ. ಉದಾಸಿ ಆರನೇ ಬಾರಿಗೆ ಶಾಸಕರಾಗುತ್ತಿದ್ದಾರೆ. ಆರ್. ಶಂಕರ್ ಮತ್ತು ವಿರೂಪಾಕ್ಷಪ್ಪ ಬಳ್ಳಾರಿ ಮೊದಲ ಬಾರಿಗೆ ಶಾಸಕರಾದರೆ, ನೆಹರು ಓಲೇಕಾರ, ಬಿ.ಸಿ. ಪಾಟೀಲ ಹಾಗೂ ಬಸವರಾಜ ಬೊಮ್ಮಾಯಿ ಮೂರನೇ ಬಾರಿ ಶಾಸಕರಾಗುತ್ತಿದ್ದಾರೆ. ಈ ಪೈಕಿ ಬೊಮ್ಮಾಯಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಏಕೈಕ ಶಾಸಕರಾಗಿದ್ದಾರೆ.

ಸಿ.ಎಂ. ಉದಾಸಿ (1983), ನೆಹರು ಓಲೇಕಾರ (2004), ಬಿ.ಸಿ.ಪಾಟೀಲ (2004), ಬಸವರಾಜ ಬೊಮ್ಮಾಯಿ (2008), ಆರ್. ಶಂಕರ್ (2018), ವಿರೂಪಾಕ್ಷಪ್ಪ ಬಳ್ಳಾರಿ (2018) ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು. ಸಿ.ಎಂ. ಉದಾಸಿ ಮತ್ತು ಬಸವರಾಜ ಬೊಮ್ಮಾಯಿ ಸಚಿವರೂ ಆಗಿದ್ದರು.

ಸಿ.ಎಂ. ಉದಾಸಿ ಪುತ್ರ ಶಿವಕುಮಾರ್ ಉದಾಸಿ ಲೋಕಸಭಾ ಸದಸ್ಯರಾದರೆ, ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಪುತ್ರ. ಉಳಿದಂತೆ, ನಾಲ್ವರು ಶಾಸಕರಿಗೆ ಕೌಟುಂಬಿಕವಾಗಿ ಹೇಳಿಕೊಳ್ಳುವಂತಹ ರಾಜಕೀಯ ನಂಟಿಲ್ಲ.

ತಮ್ಮ ಬದುಕಿನ ರಾಜಕಾರಣದಲ್ಲಿ ಬಿ.ಸಿ. ಪಾಟೀಲ (2004) ಮತ್ತು ಆರ್. ಶಂಕರ್ (2018) ಅವರು ನೇರವಾಗಿ ವಿಧಾನ ಸಭೆಗೆ ಪ್ರವೇಶಿಸಿದ್ದಾರೆ. ವಿರೂಪಾಕ್ಷಪ್ಪ ಬಳ್ಳಾರಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ, ಸಿ.ಎಂ. ಉದಾಸಿ ಅವರು ಪುರಸಭೆ ಸದಸ್ಯರಾಗಿ, ನೆಹರು ಓಲೇಕಾರ ಮಂಡಲ ಪಂಚಾಯ್ತಿ ಪ್ರಧಾನರಾಗಿ ಹಾಗೂ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ ಸದಸ್ಯರಾಗಿ ತಮ್ಮ ರಾಜಕೀಯ ಬದುಕು ಆರಂಭಿಸಿದ್ದರು.

ಆರು ಶಾಸಕರ ಪೈಕಿ ನಾಲ್ವರ ಲಿಂಗಾಯತರು (ಉದಾಸಿ–ಬಣಜಿಗ, ಬೊಮ್ಮಯಿ ಮತ್ತು ಬಿ.ಸಿ. ಪಾಟೀಲ– ಸಾದರ, ಬಳ್ಳಾರಿ– ಪಂಮಸಾಲಿ), ತಲಾ ಒಬ್ಬರು ಕುರುಬರು (ಆರ್. ಶಂಕರ್) ಮತ್ತು ಪರಿಶಿಷ್ಟ ಜಾತಿ (ನೆಹರೂ ಓಲೇಕಾರ)ಗೆ ಸೇರಿದವರು (ಮೀಸಲು ಕ್ಷೇತ್ರದಿಂದ ಆಯ್ಕೆ).

ನಂಬಿಕೆಗಳು: ಹಾನಗಲ್ ಮತ್ತು ಹಾವೇರಿ ಕ್ಷೇತ್ರದಿಂದ ಯಾವ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುತ್ತಾರೆಯೋ, ಅದೇ ಪಕ್ಷ ಆಡಳಿತಕ್ಕೆ ಬರುತ್ತದೆ ಎಂಬುದು ಜಿಲ್ಲೆಯಲ್ಲಿ ಕೇಳಿಬರುವ ಪ್ರತೀತಿ. ಕಾಕತಾಳೀಯ ಎಂಬಂತೆ ಹಾನಗಲ್ ಮತ್ತು ಹಾವೇರಿಯಲ್ಲಿ ಹಲವು ವರ್ಷಗಳಿಂದ ಒಂದೇ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುತ್ತಾ ಬಂದಿದ್ದಾರೆ. ಇಲ್ಲವೇ, ಗೆದ್ದ ಬಳಿಕ ಒಂದೇ ಪಕ್ಷಕ್ಕೆ ಸೇರಿದ್ದಾರೆ. ಅಂತೆಯೇ, ರಾಜ್ಯದಲ್ಲೂ ಅದೇ ಪಕ್ಷವು ಅಧಿಕಾರಕ್ಕೆ ಬಂದಿದೆ.

ಆದರೆ, ಹಿರೇಕೆರೂರಿನಲ್ಲಿ ಆಯ್ಕೆಯಾದ ಅಭ್ಯರ್ಥಿಯ ಪಕ್ಷವು ವಿರೋಧ ಪಕ್ಷದ ಸ್ಥಾನದಲ್ಲಿರುತ್ತದೆ ಎಂಬ ಮಾತಿದೆ. ಇಲ್ಲಿನ ಈಚಿನ ಬೆಳವಣಿಗೆಯನ್ನು ಅವಲೋಕಿಸಿದರೆ, ಬಿ.ಸಿ. ಪಾಟೀಲ ಮತ್ತು ಬಣಕಾರ ಅವರು ಗೆದ್ದಾಗಲೆಲ್ಲ ವಿರೋಧ ಪಕ್ಷದ ಸಾಲಿನಲ್ಲೇ ಕುಳಿತಿದ್ದಾರೆ. ಇದು ಈ ಬಾರಿಯೂ ಪುನರಾವರ್ತನೆ ಆಗಿದೆ.

ಶಾಸಕರ ಪೈಕಿ ಅತಿ ಹೆಚ್ಚು ಶಿಕ್ಷಣ ಪಡೆದ ಓಲೇಕಾರ

ಹಾವೇರಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ನೆಹರು ಓಲೇಕಾರ ಅವರು, ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಣ ಪಡೆದ ಶಾಸಕರಾಗಿದ್ದಾರೆ. ರಾಜ್ಯ ಶಾಸ್ತ್ರದಲ್ಲಿ ಎಂ.ಎ. ಮಾಡಿದ ಅವರು, ವೃತ್ತಿಯಲ್ಲಿ ಕೃಷಿಕರಾಗಿದ್ದರೆ. ಬ್ಯಾಡಗಿಯಿಂದ ಆಯ್ಕೆಯಾದ ವಿರೂಪಾಕ್ಷಾಪ್ಪ ಬಳ್ಳಾರಿ ಅತಿ ಕಡಿಮೆ ಶಿಕ್ಷಣ ಹೊಂದಿದ್ದು, 7ನೇ ತರಗತಿ ಬಳಿಕ ಕೃಷಿಕ ಹಾಗೂ ಉದ್ಯಮಿಯಾಗಿದ್ದಾರೆ. 8ನೇ ತರಗತಿ ಓದಿದ ಸಿ.ಎಂ. ಉದಾಸಿ ಅವರು ಕೃಷಿಕರಾದರೆ, ಎಸ್ಸೆಸ್ಸೆಲ್ಸಿ ಓದಿದ ಆರ್. ಶಂಕರ್ ಉದ್ಯಮಿಯಾಗಿದ್ದಾರೆ. ಬಿ.ಎ. ಪದವೀಧರರಾದ ಬಿ.ಸಿ.ಪಾಟೀಲ ಕೃಷಿ, ಉದ್ಯಮ ಹಾಗೂ ಸಿನಿಮಾ ನಟರು ಹಾಊ ಬಿ.ಇ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ ಬಸವರಾಜ ಬೊಮ್ಮಾಯಿ ಕೈಗಾರಿಕೋದ್ಯಮಿ ಆಗಿದ್ದಾರೆ. ಇವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಶಿಕ್ಷಣ ಹಾಗೂ ವೃತ್ತಿಯನ್ನು ನಮೂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry