ಶನಿವಾರ, ಮಾರ್ಚ್ 6, 2021
32 °C

ಚಿಕ್ಕಣ್ಣನ ‘ಡಬಲ್‌ ಇಂಜನ್’ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಣ್ಣನ ‘ಡಬಲ್‌ ಇಂಜನ್’ ಸಿನಿಮಾ

‘ಡಬಲ್ ಇಂಜನ್‌’ ಎನ್ನುವ ಶೀರ್ಷಿಕೆಯಲ್ಲಿ ‘ಡಬಲ್ ಮೀನಿಂಗ್‌’ ಏನಾದರೂ ಉಂಟಾ?!

ಚಿಕ್ಕಣ್ಣ ಅಭಿನಯದ ‘ಡಬಲ್ ಇಂಜನ್’ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡಕ್ಕೆ ಎದುರಾದ ಪ್ರಶ್ನೆ ಇದು. ಆದರೆ ಈ ‍ಪ್ರಶ್ನೆಗೆ ಸಣ್ಣ ನಗುವಿನ ಮೂಲಕ ಉತ್ತರ ನೀಡಿದ ಚಿತ್ರದ ಕಫ್ತಾನ (ನಿರ್ದೇಶಕ) ಚಂದ್ರಮೋಹನ್, ‘ಡಬಲ್‌ ಇಂಜನ್ ಎನ್ನುವ ಶೀರ್ಷಿಕೆ ಯುವಕರನ್ನು ಆಕರ್ಷಿಸುತ್ತದೆ. ಸಿನಿಮಾ ಕಥೆಗೆ ಈ ಹೆಸರು ಪೂರಕವಾಗಿದೆ. ಮೂರು ಜನ ಅಮಾಯಕ ಹುಡುಗರು ಅಲ್ಪಾವಧಿಯಲ್ಲಿ ಹಣ ಮಾಡಲು ಮುಂದಾಗಿ ಸಮಸ್ಯೆಗೆ ಸಿಲುಕಿಕೊಳ್ಳುವುದು ಈ ಸಿನಿಮಾದ ಕಥಾಹಂದರ’ ಎಂದರು.

ಚಂದ್ರಮೋಹನ್ ಅವರು ಈ ಹಿಂದೆ ‘ಬಾಂಬೆ ಮಿಠಾಯಿ’ ಚಿತ್ರ‌ ನಿರ್ದೇಶಿಸಿದ್ದರು. ‘ಡಬಲ್ ಇಂಜನ್’ ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರಬೇಕು ಎಂಬುದು ಅವರ ಆಲೋಚನೆ.

‘ಬಾಂಬೆ ಮಿಠಾಯಿ ಚಿತ್ರದ ನಂತರ ಆರು ತಿಂಗಳ ಅವಧಿಯಲ್ಲಿ ಈ ಚಿತ್ರದ ಸ್ಕ್ರಿಪ್ಟ್ ಸಿದ್ಧಪಡಿಸಿದೆ. ಈ ಚಿತ್ರ ರೂಪುಗೊಳ್ಳುವುದಕ್ಕೆ ಕಾರಣ ಚಿಕ್ಕಣ್ಣ. ಬಾಂಬೆ ಮಿಠಾಯಿ ಚಿತ್ರ ಯಶಸ್ಸು ಕಂಡ ನಂತರ, ಮತ್ತೊಂದು ಸಿನಿಮಾ ಮಾಡೋಣ ಎಂದು ಅವರೇ ಹೇಳಿದ್ದರು. ಇದು ಕೂಡ ಹಾಸ್ಯಮಯ ಸಿನಿಮಾ’ ಎಂದರು ಚಂದ್ರಮೋಹನ್.

ವೀರ್ ಸಮರ್ಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‘ಸಿನಿಮಾ ಕಥೆಗೂ ಶೀರ್ಷಿಕೆಗೂ ಸಂಬಂಧವೇ ಇಲ್ಲದ್ದನ್ನು ನಾವು ಕಂಡಿದ್ದೇವೆ. ಆದರೆ, ಈ ಸಿನಿಮಾದ ಶೀರ್ಷಿಕೆ ಕಥೆಗೆ ಸೂಕ್ತವಾಗಿ ಇದೆ ಎಂಬುದು ಸಿನಿಮಾ ವೀಕ್ಷಿಸಿದ ನಂತರ ಗೊತ್ತಾಗುತ್ತದೆ. ಹಣ ಸಂಪಾದಿಸಲು ಅಡ್ಡ ಮಾರ್ಗ ಹಿಡಿಯುವುದು ತಪ್ಪು ಎಂಬ ಸಂದೇಶವನ್ನು ಈ ಸಿನಿಮಾ ನೀಡುತ್ತದೆ’ ಎಂದರು ವೀರ್.

ಹಿರಿಯ ನಟಿ ಸುಮನ್ ರಂಗನಾಥ್ ಅವರಿಗೆ ‘ಡವ್ ಹೊಡೆಯುವ’ ಅವಕಾಶ ಸಿಕ್ಕ ಕಾರಣದಿಂದಾಗಿ ಚಿಕ್ಕಣ್ಣ ಅವರು ಈ ಸಿನಿಮಾ ಮಾಡುವಾಗ ಖುಷಿಯಲ್ಲಿ ಇದ್ದರಂತೆ! ‘ಡಬಲ್ ಇಂಜನ್ ಅಂದರೆ ಏನು ಎಂಬುದನ್ನು ಹೇಳಿಬಿಟ್ಟರೆ ಸಿನಿಮಾ ಕಥೆಯನ್ನೇ ಹೇಳಿದಂತೆ ಆಗುತ್ತದೆ. ಚೂರುಪಾರು ಮಸಾಲೆ ಕೂಡ ಇರುವ ಸಿನಿಮಾ ಇದು’ ಎಂದರು ಚಿಕ್ಕಣ್ಣ.

‘ವ್ಯವಸಾಯ ಮಾಡಿ ಅಲ್ಪಾವಧಿಯಲ್ಲಿ ಹಣ ಗುಡ್ಡೆ ಹಾಕಲು ಆಗುವುದಿಲ್ಲ. ಆದರೆ ಒಂದು ಹಳ್ಳಿಯ ಮೂವರು ಹುಡುಗರಿಗೆ ಬಹಳ ಬೇಗನೆ ಹಣ ಸಂಪಾದಿಸುವ ಬಯಕೆ ಇರುತ್ತದೆ. ಅದಕ್ಕೆ ಅವರು ಏನು ಮಾಡುತ್ತಾರೆ ಎಂಬುದೇ ಸಿನಿಮಾದ ಕಥೆ’ ಎಂದು ಅವರು ಹೇಳಿಕೊಂಡರು. ಚಿಕ್ಕಣ್ಣ ಮಾತ್ರವಲ್ಲದೆ ಪ್ರಭು, ಅಶೋಕ್, ಅಚ್ಯುತ್ ಕುಮಾರ್, ದತ್ತಣ್ಣ, ಶೋಭರಾಜ್ ಅವರೂ ಇದರಲ್ಲಿ ನಟಿಸಿದ್ದಾರೆ. ಪ್ರಿಯಾಂಕಾ ಮಲ್ನಾಡ್ ಅವರು ಹಳ್ಳಿಯ ಬಜಾರಿಯ ಪಾತ್ರ ನಿಭಾಯಿಸಿದ್ದಾರೆ. ⇒v

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.