ಶನಿವಾರ, ಫೆಬ್ರವರಿ 27, 2021
31 °C

ಬಿಜೆಪಿ ‘ಕುದುರೆ ವ್ಯಾಪಾರ’ಕ್ಕೆ ಯತ್ನಿಸಿದ್ದಕ್ಕೆ ದಾಖಲೆ ಇದೆ: ಸಿದ್ದರಾಮಯ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ‘ಕುದುರೆ ವ್ಯಾಪಾರ’ಕ್ಕೆ ಯತ್ನಿಸಿದ್ದಕ್ಕೆ ದಾಖಲೆ ಇದೆ: ಸಿದ್ದರಾಮಯ್ಯ ಆರೋಪ

ಬೆಂಗಳೂರು: ‘ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ಯತ್ನಿಸಿದ್ದಕ್ಕೆ ನಮ್ಮ ಬಳಿ ದಾಖಲೆಗಳು ಇವೆ’ ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಬಹುಮತ ಸಾಬೀತುಪಡಿಸಲು ಬಿ.ಎಸ್‌.ಯಡಿಯೂರಪ್ಪ ಪಾಪ ಒಂದು ವಾರ ಸಮಯ ಕೇಳಿದ್ದಾನೆ. ’ಏಳು ದಿನ ಏಕೆ ಕೇಳುತ್ತೀಯ; ಮೂರ್ಖ ನೀನು. 15 ದಿನ ಕೊಡುತ್ತೇವೆ ಕುದುರೆ ವ್ಯಾಪಾರ ಸರಿಯಾಗಿ ಮಾಡು. ಎಷ್ಟು ಶಾಸಕರನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತದೋ ಪ್ರಯತ್ನಿಸು’ ಎಂದು ಅವರ ಪಕ್ಷದ ಮುಖಂಡರು ಹೇಳಿದ್ದಾರೆ’ ಎಂದು ವ್ಯಂಗ್ಯವಾಗಿ ಹೇಳಿದರು.

‘ಅವರು ಯಾರು ಯಾರ ಜೊತೆ ಏನೇನು ಮಾತನಾಡಿದ್ದಾರೆ ಎಂಬ ಧ್ವನಿ ಮುದ್ರಿಕೆಗಳು ನಮ್ಮ ಬಳಿ ಇವೆ. ಜನಾರ್ದನ ರೆಡ್ಡಿ, ಯಡಿಯೂರಪ್ಪ ಹಾಗೂ ಶ್ರೀರಾಮುಲು ಯಾರ ಜೊತೆ ಏನು ಮಾತನಾಡಿದ್ದಾರೆ, ಏನು ಆಮಿಷ ಒಡ್ಡಿದ್ದಾರೆ ಎಂಬುದನ್ನು ಹೇಳುತ್ತೇವೆ. ಆದರೆ, ಅದನ್ನು ಈಗ ಬಹಿರಂಗಪಡಿಸುವುದಿಲ್ಲ’ ಎಂದರು.

‘ಸಂವಿಧಾನ ರಕ್ಷಿಸುವಲ್ಲಿ ರಾಜ್ಯಪಾಲರ ಪಾತ್ರ ಮಹತ್ತರವಾದುದು. ಅವರು ಯಾವುದೇ ಪಕ್ಷದ ಪರವಾಗಿ ತೀರ್ಮಾನ ಕೈಗೊಳ್ಳಬಾರದು. ಯಾವ ಪಕ್ಷಕ್ಕೂ ಬಹುಮತ ಬರದಿದ್ದಾಗ ಅವರು ಸಂವಿಧಾನದ ಪ್ರಕಾರ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪುಗಳ ಆಧಾರದಲ್ಲಿ ತೀರ್ಮಾನ ಕೈಗೊಳ್ಳಬೇಕಿತ್ತು. ಆದರೆ, ಅವರು ಸಂವಿಧಾನದ ವಿಧಿಗಳನ್ನು ಗಾಳಿಗೆ ತೂರಿ, ಸುಪ್ರೀಂ ಕೋರ್ಟ್‌ ತೀರ್ಪು ಕಡೆಗಣಿಸಿ ಕೇಂದ್ರ ಸರ್ಕಾರದ ಬಾಲಬಡುಕರಂತೆ ನಡೆದುಕೊಂಡಿದ್ದಾರೆ’ ಎಂದು ಟೀಕಿಸಿದರು.

‘ನಮಗೆ ಬಹುಮತ ಇದೆ. ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರ ಬಳಿ ಬಿಜೆಪಿಗಿಂತ ಮೊದಲೇ ನಾವು ಹಕ್ಕು ಮಂಡಿಸಿದ್ದೇವೆ. ಹರಿಯಾಣ ಮತ್ತು ಗೋವಾ ರಾಜ್ಯಗಳಲ್ಲಿ ಈ ರೀತಿ ಪರಿಸ್ಥಿತಿ ಎದುರಾಗಿದ್ದಾಗ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ದಾಖಲೆಗಳನ್ನೂ ನೀಡಿದ್ದೇವೆ. ನ್ಯಾಯಾಲಯದ ತೀರ್ಪಿಗೂ ಅವರು ಗೌರವ ಕೊಟ್ಟಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೇಳಿದಂತೆ ನಡೆದುಕೊಂಡಿದ್ದಾರೆ’ ಎಂದರು.

ಯಡಿಯೂರಪ್ಪ ಅವರು ತಮ್ಮ ಪತ್ರದಲ್ಲಿ ಒಂದು ವಾರ ಕಾಲಾವಕಾಶ ಕೇಳಿದ್ದರು. 104 ಶಾಸಕರ ಹೆಸರುಗಳ ಹೊರತಾಗಿ ಬೇರೆ ಹೆಸರುಗಳನ್ನು ಅವರು ಉಲ್ಲೇಖಿಸಿರಲಿಲ್ಲ. ಅವರ ಪತ್ರದ ಪ್ರಕಾರವೇ ಬಿಜೆಪಿಗೆ ಬಹುಮತ ಇಲ್ಲ ಎಂಬುದು ತಿಳಿಯುತ್ತದೆ. ಉದ್ದೇಶಪೂರ್ವಕವಾಗಿ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದು ಅಸಾಂವಿಧಾನಿಕ ಎಂದು ಟೀಕಿಸಿದರು.

ಸುಪ್ರೀಂ ಕೋರ್ಟ್‌ ಕಪಾಳ ಮೋಕ್ಷ: ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಣೆ ಮಾಡಿದೆ. ಇತಿಹಾಸದಲ್ಲಿ ಮೈಲಿಗಲ್ಲಾಗುವಂತ ತೀರ್ಪು. ಬಿಜೆಪಿಯವರು ಪ್ರಜಾಪ್ರಭುತ್ವ ಗಾಳಿಗೆ ತೂರಿ ಸರ್ಕಾರ ರಚಿಸಲು ಹೊರಟಿದ್ದರು. ಅವರಿಗೆ ಸುಪ್ರೀಂ ಕೋರ್ಟ್‌ ಕಪಾಳ ಮೋಕ್ಷ ಮಾಡಿದೆ ಎಂದರು.

‘ಮೋದಿ, ಶಾ ಹಿಟ್ಲರ್‌ ಪಳೆಯುಳಿಕೆ’

‘ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಹಿಟ್ಲರ್‌ ಪಳೆಯುಳಿಕೆಗಳು. ಅವರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಶಾಸಕರ ಖರೀದಿ ಕುರಿತು ಪ್ರಸ್ತಾಪಿಸಿದ ಅವರು, ‘ಎಲ್ಲ ರಾಜ್ಯಗಳಲ್ಲೂ ಶಾ ಇಂತಹದ್ದೇ ಕೃತ್ಯ ನಡೆಸಿದ್ದಾರೆ. ಅವರಿಗೆ ಸಂವಿಧಾನ, ಕಾನೂನೂ ಗೊತ್ತಿಲ್ಲ. ಅಪಪ್ರ‌ಚಾರ ಮಾಡುವುದು ಬಿಟ್ಟು ಬೇರೇನೂ ತಿಳಿದಿಲ್ಲ. ಗೊಬೆಲ್ಸ್‌ ಸಿದ್ಧಾಂತವನ್ನು ಚೆನ್ನಾಗಿ ಅಳವಡಿಸಿಕೊಂಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಅವನ ಆಟ ನಡೆದಿಲ್ಲ. ನಡೆಯುವುದೂ ಇಲ್ಲ. ನಡೆಯುವುದಕ್ಕೆ ಬಿಡುವುದೂ ಇಲ್ಲ’ ಎಂದರು.

ಕಾಂಗ್ರೆಸ್‌ ಜತೆಯಲ್ಲೇ ಇದ್ದೇನೆ: ರಾಜಶೇಖರ ಪಾಟೀಲ

ನಾನು ಈಗಲೂ ಕಾಂಗ್ರೆಸ್‌ ಜತೆಯಲ್ಲೇ ಇದ್ದೇನೆ ಎಂದು ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೀದರ್‌ ಜಿಲ್ಲೆಯಲ್ಲಿ ಆರು ಬಾರಿ ಚುನಾವಣೆಗೆ ನಿಲ್ಲಲು ಕಾಂಗ್ರೆಸ್‌ ನನಗೆ ಅವಕಾಶ ನೀಡಿದೆ. ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ’ ಎಂದರು.

‘ಕಾಂಗ್ರೆಸ್‌ ಪಕ್ಷವು ಬಿ–ಫಾರಂ ನೀಡಿದ ಬಳಿಕವೂ ನಾನು ಬಿಜೆಪಿಗೆ ಪಕ್ಷಾಂತರ ಮಾಡುತ್ತೇನೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಹಬ್ಬಿಸಿದ್ದವು’ ಎಂದು ಬೇಸರ ತೋಡಿಕೊಂಡರು

‘ಶೋಭಾ ಕರಂದ್ಲಾಜೆ ಅವರಾಗಲೀ ಅಥವಾ ಬಿಜೆಪಿಯ ಇತರ ನಾಯಕರಾಗಲೀ ನನಗೆ ಕರೆ ಮಾಡಿಲ್ಲ. ಬೇಕಿದ್ದರೆ ನೀವು ನನ್ನ ಮೊಬೈಲ್‌ ಪರಿಶೀಲಿಸಬಹುದು’ ಎಂದರು.

ಸಿಎಲ್‌ಪಿ ನಾಯಕನಾಗಿ ಸಿದ್ದರಾಮಯ್ಯ ಆಯ್ಕೆ

ಬೆಂಗಳೂರು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕನಾಗಿ ಸಿದ್ದರಾಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ನಲ್ಲಿ ಶುಕ್ರವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅಧ್ಯಕ್ಷೆಯಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ನಾಯಕನ ಆಯ್ಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ತೀರ್ಮಾನಕ್ಕೆ ಬಿಡಲಾಯಿತು.

ರಾಹುಲ್‌ ಗಾಂಧಿ ಜೊತೆ ಚರ್ಚಿಸಿದ ಬಳಿಕ, ಸಿದ್ದರಾಮಯ್ಯ ಹೆಸರನ್ನು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಪ್ರಕಟಿಸಿದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.