ಗುರುವಾರ , ಫೆಬ್ರವರಿ 25, 2021
27 °C
ನಿರ್ಮಾಣ ಆಗುವುದೇ ದಾವಣಗೆರೆ ಉತ್ತರ–ದಕ್ಷಿಣ ಧ್ರುವ ಬೆಸೆಯುವ ಸೇತು?

ಮೇಲ್ಸೇತುವೆ ನಿರ್ಮಾಣಕ್ಕೆ ಜನರ ಹಕ್ಕೊತ್ತಾಯ

ನಾಗರಾಜ ಎನ್‌ Updated:

ಅಕ್ಷರ ಗಾತ್ರ : | |

ಮೇಲ್ಸೇತುವೆ ನಿರ್ಮಾಣಕ್ಕೆ ಜನರ ಹಕ್ಕೊತ್ತಾಯ

ದಾವಣಗೆರೆ: ಉತ್ತರ–ದಕ್ಷಿಣ ಕ್ಷೇತ್ರವನ್ನು ಛೇದಿಸಿಸುವ ರೈಲ್ವೆ ಮಾರ್ಗ, ನಗರದ ಜನರ ಜೀವನಮಟ್ಟದಲ್ಲಿನ ಏರುಪೇರಿಗೂ ಸಾಕ್ಷಿಯಾಗಿದೆ. ರೈಲು ಮಾರ್ಗದ ಒಂದು ಬದಿ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿರುವ ಕ್ಷೇತ್ರ, ಮತ್ತೊಂದು ಬದಿ ದಶಕಗಳಷ್ಟು ಹಿಂದುಳಿದ ಪ್ರದೇಶ. ಅಭಿವೃದ್ಧಿಯಲ್ಲಿನ ಈ ತಾರತಮ್ಯ ಇನ್ನಾದರೂ ಅಳಿಯಬೇಕು. ಎರಡೂ ಮತ ಕ್ಷೇತ್ರಗಳನ್ನು ಬೆಸೆಯುವ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಶಾಸಕರು ಈಗಲಾದರೂ ಮುಂದಾಗಲಿ.

ಇದು ದಾವಣಗೆರೆ ದಕ್ಷಿಣ ಕ್ಷೇತ್ರದ ಬಹುತೇಕ ಜನರ ಹಕ್ಕೊತ್ತಾಯ. ನೂತನ ಚುನಾಯಿತ ಪ್ರತಿನಿಧಿ ಶಾಮನೂರು ಶಿವಶಂಕರಪ್ಪ ಕ್ಷೇತ್ರದ ಅಭಿವೃದ್ಧಿಗೆ ತಕ್ಷಣ ಮಾಡಬೇಕಾದ ಕೆಲಸ ಏನು ಎಂಬ ‘ಪ್ರಜಾವಾಣಿ’ಯ ಪ್ರಶ್ನೆಗೆ ನಾಗರಿಕರು ಹಲವು ಬೇಡಿಕೆಗಳನ್ನು ಮುಂದಿಟ್ಟರು.

ದಿನಕ್ಕೆ 40ಕ್ಕೂ ಹೆಚ್ಚು ಬಾರಿ ಈ ರಸ್ತೆಯಲ್ಲಿ ರೈಲ್ವೆ ಗೇಟ್‌ ಹಾಕಲಾಗುತ್ತದೆ. ಒಂದೊಂದು ಬಾರಿಯೂ 20 ನಿಮಿಷಕ್ಕೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗುತ್ತದೆ. ಆಂಬುಲೆನ್ಸ್‌ಗಳೂ ಟ್ರಾಫಿಕ್‌ನಲ್ಲಿ ಸಿಕ್ಕಿಕೊಳ್ಳುತ್ತವೆ. ಪ್ರತಿ ಬಾರಿ ರೈಲು ಬಂದಾಗಲೂ ನಾಗರಿಕರು ಪರದಾಡುವ ದೃಶ್ಯ ಇಲ್ಲಿ ಮಾಮೂಲಿ. ಹೀಗಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಈ ಬಾರಿಯಾದರೂ ಗಮನ ನೀಡಬೇಕು ಎಂದು ಒತ್ತಾಯಿಸುತ್ತಾರೆ ವ್ಯಾಪಾರಿ ಲಕ್ಷ್ಮಣ.

ಹಳೆಯ ದಾವಣಗೆರೆ ಮೊದಲಿನಿಂದಲೂ ಪ್ರಮುಖ ವಾಣಿಜ್ಯ ಕೇಂದ್ರ. ಸಂಚಾರ ದಟ್ಟಣೆ ಹೆಚ್ಚುತ್ತಿರುವುದರಿಂದ ಹಳೆಯ ಭಾಗಕ್ಕೆ ಜನರು ಬರಲೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹಳೆಯ ದಾವಣಗೆರೆ ಹಿಂದಿನ ಕಳೆ ಕಳೆದುಕೊಳ್ಳುತ್ತಿದೆ. ವ್ಯಾಪಾರಿಗಳು ನಷ್ಟದ ಸುಳಿಗೆ ನಿಧಾನವಾಗಿ ಸಿಲುಕುತ್ತಿದ್ದಾರೆ. ದಾವಣಗೆರೆಯ ಹಳೆಯ ಭಾಗ ಬೆಳೆಯಬೇಕಾದರೆ ಸಂಪರ್ಕ ಸೇತು ನಿರ್ಮಾಣವಾಗಲೇಬೇಕು ಎಂದು ಆಗ್ರಹಿಸುತ್ತಾರೆ ಅವರು.

‘ಬಡವರು, ಕೂಲಿಕಾರ್ಮಿಕರು, ಅಲ್ಪಸಂಖ್ಯಾತರೇ ಹೆಚ್ಚಾಗಿ ನೆಲೆ ಕಂಡುಕೊಂಡಿರುವ ದಕ್ಷಿಣ ಕ್ಷೇತ್ರದ ನಗರ ಪ್ರದೇಶದಲ್ಲಿ ಉತ್ತರ ಭಾಗಕ್ಕಿಂತಲೂ ಹೆಚ್ಚು ಜನಸಂಖ್ಯೆಯಿದೆ. ಆದರೆ, ಮೂಲಸೌಲಭ್ಯ ಒದಗಿಸುವುದರಲ್ಲಿ ಇದುವರೆಗೆ ಆಳ್ವಿಕೆ ನಡೆಸಿದ ಎಲ್ಲರೂ ತಾರತಮ್ಯ ಎಸಗಿದ್ದಾರೆ. ಅಶೋಕ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿದ್ದರೆ ದಕ್ಷಿಣ ಕ್ಷೇತ್ರದ ಪ್ರಗತಿಗೆ ನೆರವಾಗುತ್ತಿತ್ತು’ ಎನ್ನುತ್ತಾರೆ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಅಮಾನುಲ್ಲಾ ಖಾನ್.

ಸಾರ್ವಜನಿಕ ಆಸ್ಪತ್ರೆಯಿಲ್ಲದ ಕ್ಷೇತ್ರ:

‘ರಾಜ್ಯದಲ್ಲಿ ಸಾರ್ವಜನಿಕ ಆಸ್ಪತ್ರೆಯೂ ಇಲ್ಲದಿರುವ ಮತ ಕ್ಷೇತ್ರ ಯಾವುದಾದರೂ ಇದ್ದರೆ ಅದು ದಾವಣಗೆರೆ ದಕ್ಷಿಣ. ಅಶುದ್ಧ ಕುಡಿಯುವ ನೀರು, ದೂಳು ಕಾರುವ ರಸ್ತೆಗಳು, ಕೊಳಚೆ ತುಂಬಿಕೊಂಡ ಚರಂಡಿ, ಬೀಡಾಡಿ ಹಂದಿ, ನಾಯಿಗಳ ಉಪಟಳ ಈ ಭಾಗದ ಜನರಿಗೆ ಆರೋಗ್ಯ ಭಾಗ್ಯವೇ ಇಲ್ಲದಂತೆ ಮಾಡಿದೆ. ಪದೇ ಪದೇ ಹದಗೆಡುವ ಆರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಒಂದೂ ಉತ್ತಮ ಆಸ್ಪತ್ರೆ ಇಲ್ಲಿಲ್ಲ. ಐದಾರು ಕಿ.ಮೀ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಯನ್ನೇ ಈ ಭಾಗದ ನಿವಾಸಿಗಳು ಆಶ್ರಯಿಸುವಂತಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಜಿಲ್ಲಾ ಆಸ್ಪತ್ರೆಯಲ್ಲೂ ಗುಣಮಟ್ಟದ ಸೇವೆ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಹೊಸ ಸರ್ಕಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

ಕಾಲೇಜು ನಿರ್ಮಾಣವಾಗಲಿ:

ದಕ್ಷಿಣ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ಹೀಗಿದ್ದರೂ ಇಲ್ಲಿ ಒಂದೂ ಉತ್ತಮವಾದ ಶಿಕ್ಷಣ ಸಂಸ್ಥೆಗಳಿಲ್ಲ. ಪದವಿ ಓದಲು ಉತ್ತರ ಕ್ಷೇತ್ರದ ವಿದ್ಯಾನಗರದಲ್ಲಿರುವ ಸರ್ಕಾರಿ ಕಾಲೇಜಿಗೆ ಹೋಗಬೇಕಾಗಿದೆ. ದಕ್ಷಿಣ ಕ್ಷೇತ್ರದಲ್ಲೂ ಒಂದು ಪದವಿ ಕಾಲೇಜು ಆರಂಭಿಸಬೇಕು. ಲಭ್ಯವಿರುವ ಸಿ.ಎ ನಿವೇಶನಗಳನ್ನು ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಭೂಸ್ವಾಧೀನವನ್ನಾದರೂ ಮಾಡಿ, ಕಾಲೇಜು ಕಟ್ಟಬೇಕು. ಕೂಲಿ ಕಾರ್ಮಿಕರ, ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದು ಆಗ್ರಹಿಸುತ್ತಾರೆ ಅಮಾನುಲ್ಲಾ ಖಾನ್.

ಮಾರುಕಟ್ಟೆ ಅಭಿವೃದ್ಧಿಯ ನಿರೀಕ್ಷೆ:

ಕೆ.ಆರ್‌. ಮಾರುಕಟ್ಟೆ ಶಿಥಿಲಾವಸ್ಥೆ ತಲುಪಿದೆ. ಮಾರುಕಟ್ಟೆಯ ಮುಂದಿನ ರಸ್ತೆಯಲ್ಲೇ ವ್ಯಾಪಾರಿಗಳು ವ್ಯವಹಾರ ನಡೆಸಲು ಆರಂಭಿಸಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ. ಅಲ್ಲದೇ ಮಾರುಕಟ್ಟೆಯ ಒಳಭಾಗಕ್ಕೆ ಗ್ರಾಹಕರು ಬರುವುದೇ ಇಲ್ಲ. ಇದರಿಂದಾಗಿ ಮಾರುಕಟ್ಟೆಯ ಪ್ರಾಂಗಣದಲ್ಲಿ ವ್ಯವಹಾರ ನಡೆಸುವವರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ನೂತನ ಜನಪ್ರತಿನಿಧಿ ಮುಂದಾಗಬೇಕು ಎಂದು ಒತ್ತಾಯಿಸುತ್ತಾರೆ ದಿನಸಿ ವ್ಯಾಪಾರಿ ಮಹಮದ್‌ ಇಬ್ರಾಹಿಂ, ಮೆಣಸಿನಕಾಯಿ ವ್ಯಾಪಾರಿ ಹನುಮಂತಪ್ಪ.

ಬಹಳ ಹಿಂದಿನಿಂದಲೂ ಕೆ.ಆರ್‌. ಮಾರುಕಟ್ಟೆ ಅಭಿವೃದ್ಧಿಪಡಿಸುವ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಅದು ಈಡೇರಿಲ್ಲ. ಇನ್ನಾದರೂ ಹೈಟೆಕ್‌ ಮಾರುಕಟ್ಟೆ ನಿರ್ಮಾಣ ಮಾಡಿ, ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಾರೆ ಮಾರುಕಟ್ಟೆಯ ಅಂಗಡಿಗಳಲ್ಲಿ ಕೆಲಸ ಮಾಡುವ ರೇಖಾ.

ರಸ್ತೆ ವಿಸ್ತರಣೆಯಾಗಲಿ

ದಾವಣಗೆರೆಯ ಎಂ.ಜಿ. ರಸ್ತೆ, ವಿಜಯಲಕ್ಷ್ಮಿ ರಸ್ತೆ, ಅಹಮದ್‌ನಗರ ರಸ್ತೆ, ಅಶೋಕರಸ್ತೆ, ರಿಂಗ್‌ರೋಡ್‌, ಮಾಗನಹಳ್ಳಿ ರಸ್ತೆ, ಕೆ.ಆರ್‌. ರಸ್ತೆ ಒತ್ತುವರಿಯಾಗಿವೆ. ಈ ರಸ್ತೆಗಳ ಒತ್ತುವರಿ ತೆರವುಗೊಳಿಸಬೇಕು. ರಸ್ತೆ ವಿಸ್ತರಣೆ ಮಾಡಿ, ಚರಂಡಿ ಮತ್ತು ಕಾಂಕ್ರೀಟ್‌ ರಸ್ತೆ ನಿರ್ಮಿಸಿದರೆ ಜೀವನಮಟ್ಟ ಸುಧಾರಿಸಲಿದೆ ಎಂದು ಹೇಳುತ್ತಾರೆ ಅಮಾನುಲ್ಲಾಖಾನ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.