ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕದತ್ತ ಕೋಸ್ಟಲ್‌ವುಡ್‌ ದಾಪುಗಾಲು

ಪ್ರೇಕ್ಷಕರ ನಿರೀಕ್ಷೆ ಈಡೇರಿಸುತ್ತಿರುವ ತುಳು ಸಿನಿಮಾ
Last Updated 19 ಮೇ 2018, 6:27 IST
ಅಕ್ಷರ ಗಾತ್ರ

ಮಂಗಳೂರು: ಕಳೆದ ನಾಲ್ಕೈದು ವರ್ಷಗಳಿಂದ ತುಳು ಸಿನಿಮಾ ರಂಗ ಅತ್ಯಂತ ಕ್ರಿಯಾಶೀಲವಾಗಿದ್ದು, ಒಂದಾದ ನಂತರ ಒಂದು ಸಿನಿಮಾಗಳು ಕರಾವಳಿಯ ತೆರೆಗೆ ಅಪ್ಪಳಿಸುತ್ತಿವೆ. ಇದೇ ವೇಗ ಮುಂದುವರಿದರೆ ಈ ವರ್ಷದೊಳಗೆ ತುಳು ಸಿನಿಮಾಗಳ ಸಂಖ್ಯೆ ಶತಕ ದಾಟುವುದು ನಿಶ್ಚಿತವಾಗಿದೆ.

ಪಿಲಿಬೈಲ್ ಯಮುನಕ್ಕ, ಚಾಲಿ ಪೋಲಿಲು, ಅಪ್ಪೆಟೀಚರ್‌, ಎಕ್ಕಸಕ, ಅಂಬರ್‌ ಕ್ಯಾಟರರ್ಸ್‌, ಮದಿಪು, ಚಂಡಿಕೋರಿಯಂತಹ ಚಿತ್ರಗಳು ಕರಾವಳಿ ಹೊಸ ಅಲೆಯನ್ನೇ ಎಬ್ಬಿಸಿವೆ.

ತುಳು ಸಿನಿಮಾ ಎಂದರೆ ಕೇವಲ ಹಾಸ್ಯ ಎನ್ನುವ ಮನೋಭಾವವಿದ್ದ ಜನರೂ ಈಗ ತುಳು ಚಿತ್ರರಂಗದ ಸಾಹಸವನ್ನು ನೋಡಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ, ಕೌಟುಂಬಿಕ, ಹಾಸ್ಯ ಭರಿತ ಚಿತ್ರಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತಿವೆ. ಹೀಗಾಗಿ ಒಂದಾದ ನಂತರ ಒಂದರಂತೆ ತುಳು ಸಿನಿಮಾಗಳು ಹಿಟ್‌ ಆಗುತ್ತಲೇ ಸಾಗಿವೆ.

ಅಪ್ಪೆ ಟೀಚರ್‌' ಅಧ್ಯಾಯ ಕರಾವಳಿಯಲ್ಲಿ ತುಳು ಸಿನಿಮಾ ರಂಗದಲ್ಲಿ ಸಾಕಷ್ಟು ಖ್ಯಾತಿ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ತುಳು ಸಿನಿಮಾ ರಂಗಕ್ಕೆ ಇಲ್ಲಿ ಭವಿಷ್ಯ ಇದೆ ಎಂಬುದು ಪಕ್ಕಾ ಆದಂತಾಗಿದೆ. ಇದೇ ಮೂಡ್‌ನಲ್ಲಿ ಇನ್ನಷ್ಟು ತುಳು ಸಿನಿಮಾಗಳು ತೆರೆಗೆ ಬರುವ ಕಾತುರದಲ್ಲಿವೆ.

ಶುಕ್ರವಾರ ‘ಪೆಟ್‌ಕಮ್ಮಿ’ ತೆರೆಗೆ ಬಂದಿದ್ದು, ಕೋಸ್ಟಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಅದಾದ ಬಳಿಕ ಒಂದೊಂದೇ ಸಿನಿಮಾಗಳು ತೆರೆಗೆ ಬರುವ ಧಾವಂತದಲ್ಲಿವೆ. ಯಾವುದೂ ಕೂಡ ಈಗಾಗಲೇ ದಿನಾಂಕ ಘೋಷಣೆ ಮಾಡಿಲ್ಲ. ಸದ್ಯ ‘ಅಪ್ಪೆ ಟೀಚರ್‌’ ಕೋಸ್ಟಲ್‌ವುಡ್‌ನಲ್ಲಿ ಸಾಕಷ್ಟು ಮಾರುಕಟ್ಟೆ ಸೃಷ್ಟಿಸಿ, ಹೊರ ಜಿಲ್ಲೆಗಳಿಗೂ ತೆರಳಿದೆ. ಇದೇ ಮಾದರಿಯಲ್ಲಿ ಹೊಸ ಸಿನಿಮಾಗಳು ಕೂಡ ಮೋಡಿ ಮಾಡಬಹುದು ಎಂಬುದು ಈಗಿನ ಲೆಕ್ಕಾಚಾರ.

ಕರಾವಳಿ ಜನತೆಯ ಸಂಪರ್ಕ ಬೆಳೆಸಿಕೊಂಡ ಎಸ್‌.ಆರ್‌. ರಾಜನ್‌ ಮಂಗಳೂರಿನ ಪರಿಚಯಸ್ಥರೊಡಗೂಡಿ 1971ರಲ್ಲಿ ಪ್ರಥಮವಾಗಿ ತುಳುವಿನಲ್ಲಿ ಪ್ರಾರಂಭಿಸಿದ ಚಿತ್ರ ‘ಎನ್ನ ತಂಗಡಿ’. ಅಲ್ಲಿಂದ ಶುರುವಾದ ತುಳು ಚಿತ್ರಲೋಕ ಹಲವು ಸಿನಿಮಾಗಳನ್ನು ನೋಡಿದ್ದು, ಇನ್ನಷ್ಟು ಸಿನಿಮಾಗಳ ಹೊಸ್ತಿಲಲ್ಲಿವೆ. ಹೆಚ್ಚು ಕಡಿಮೆ ಎಲ್ಲ ಸಿನಿಮಾಗಳು ಇದೇ ವರ್ಷ ಬಿಡುಗಡೆ ಕಂಡರೆ, ಈ ವರ್ಷ ಕೋಸ್ಟಲ್‌ವುಡ್‌ಗೆ ಶತಕದ ಸಂಭ್ರಮ ಎದುರಾಗುವುದು ನಿಚ್ಚಳ ಎಂದು ಹೇಳಲಾಗುತ್ತಿದೆ.

ತುಳು ಸಿನಿಮಾ ರಂಗಕ್ಕೆ ಬರೋಬ್ಬರಿ 47 ವರ್ಷದ ಇತಿಹಾಸವಿದೆ. ಒಂದೊಂದೇ ಸಿನಿಮಾಗಳು ತೆರೆಕಾಣುವ ಮೂಲಕ ತುಳು ಚಿತ್ರ ನಡಿಗೆ ಮುಂದೆ ಸಾಗುತ್ತಿದೆ. ಬೆಳ್ಳಿಹಬ್ಬ, ಮಾಣಿಕ್ಯ, ಸುವರ್ಣ, ವಜ್ರ ಸಂಭ್ರಮ, ಅಮೃತ ಮಹೋತ್ಸವವನ್ನು ದಾಟಿ ತುಳು ಸಿನಿಮಾಗಳು ಮುಂದೆ ಸಾಗಿದ್ದು, ಕರಾವಳಿಯ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

1971ರಲ್ಲಿ ‘ಎನ್ನ ತಂಗಡಿ’ ಪ್ರಥಮ ತುಳು ಸಿನಿಮಾ ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತ್ತು. 2014ರಲ್ಲಿ ಅದೇ ಜ್ಯೋತಿ ಚಿತ್ರಮಂದಿರದಲ್ಲಿ ‘ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ’ ಬಿಡುಗಡೆಗೊಂಡು 50ನೇ ತುಳು ಸಿನಿಮಾ ಎಂಬ ದಾಖಲೆ ಮಾಡಿತ್ತು.

ಆರಂಭದ 10 ವರ್ಷದ ಅವಧಿಯಲ್ಲಿ 17 ತುಳು ಸಿನಿಮಾಗಳು ತೆರೆಗೆ ಬಂದಿದ್ದವು. ನಂತರ ಸ್ವಲ್ಪ ಆಮೆಗತಿಯಲ್ಲಿ ಸಾಗುತ್ತಾ 20 ವರ್ಷದ ಅವಧಿಯಲ್ಲಿ ಕೇವಲ 15 ಸಿನಿಮಾಗಳು ಮಾತ್ರ ಬಂದಿದ್ದವು. ಬಳಿಕ 5 ವರ್ಷ ಸ್ಥಗಿತಗೊಂಡ ತುಳು ಚಿತ್ರರಂಗ ಮತ್ತೆ ಚೇತರಿಸಿಕೊಂಡಿದ್ದು 2006ರಲ್ಲಿ. 2013ರವರೆಗೆ 14 ಸಿನಿಮಾಗಳು ತೆರೆಕಂಡವು. 75ರ ಸಿನಿಮಾ ಆಗಿ ‘ಪನೊಡಾ ಬೊಡ್ಚಾ’ ದಾಖಲಾಯಿತು. ವಿಶೇಷವೆಂದರೆ, 50 ಸಿನಿಮಾ ಆಗಬೇಕಾದರೆ 44 ವರ್ಷ ಬೇಕಾಯಿತು. ಆದರೆ, 2- 3 ವರ್ಷಗಳಲ್ಲಿಯೇ ಸುಮಾರು 30ರಷ್ಟು ಸಿನಿಮಾಗಳು ನಿರ್ಮಾಣವಾದವು.

ಸರದಿ ಸಿನಿಮಾಗಳು: ಇದೀಗ ಸೂರಜ್‌ ನಿರ್ದೇಶನದ ‘ಅಮ್ಮೆರ್‌ ಪೊಲೀಸಾ’ ಚಿತ್ರದ ಶೂಟಿಂಗ್‌/ ಡಬ್ಬಿಂಗ್‌
ಎಲ್ಲ ಮುಗಿಸಿ ಬಹಳ ದಿನಗಳು ಕಳೆದು ಹೋಗಿವೆ. ಒಂದು ಒಳ್ಳೆ ದಿನ ನೋಡಿ ಈ ಸಿನಿಮಾ ತೆರೆ ಕಾಣಲಿದೆ.

ಉಳಿದಂತೆ ಮೈ ನೇಮ್‌ ಈಸ್‌ ಅಣ್ಣಪ್ಪೆ, ಉಮಿಲ್‌, ದಗಲ್‌ಬಾಜಿ, ಕರ್ಣೆ, ಪಮ್ಮಣ್ಣೆ ದಿ ಗ್ರೇಟ್‌, ಜುಗಾರಿ, ಕಟಪಾಡಿ ಕಟ್ಟಪ್ಪೆ, ಗೋಲ್‌ ಮಾಲ್‌, ಏರಾ ಉಲ್ಲೆರ್‌, ಭಟ್ರೆನ ಮಗಲ್‌, ದೇಯಿ ಬೈದ್ಯೆತಿ, ಪಡ್ಡಾಯಿ, ಕಾರ್ನಿಕೆದ ಕಲ್ಲುರ್ಟಿ, ಎಕ್ಕೂರು, ಗಂಟ್‌ ಕಲ್ವೆರ್‌, ಕೋರಿ ರೊಟ್ಟಿ ಸಹಿತ ಹಲವು ಸಿನಿಮಾಗಳು ತೆರೆಕಾಣುವ ಹಂತದಲ್ಲಿವೆ.

ತುಳು ಸಿನಿಮಾದ ಹಾದಿ

1971 ರಲ್ಲಿ ತುಳು ಸಿನಿಮಾಲೋಕ ಉದ್ಘಾಟನೆಯಾಗಿ ಮೊದಲ ತುಳು ಸಿನಿಮಾ ಎನ್ನ ತಂಗಡಿ ಬಿಡುಗಡೆಯಾಯಿತು. ಅಲ್ಲಿಂದ ಇಲ್ಲಿಯವರೆಗೆ ತುಳುವಿನಲ್ಲಿ ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳು ತಯಾರಾಗಿವೆ.

ಎನ್ನ ತಂಗಡಿ, ದಾರೆದ ಬುಡೆದಿ, ಪಗೆತ್ತ ಪುಗೆ, ಬಿಸತ್ತಿ ಬಾಬು, ಉಡಲ್ದ ತುಡರ್, ಕೋಟಿ-ಚೆನ್ನಯ, ಕಾಸ್ದಾಯೆ ಕಂಡನಿ, ಯಾನ್ ಸನ್ಯಾಸಿ ಆಪೆ, ಏರ್ ಮಲ್ತಿನ ತಪ್ಪು, ಬಯ್ಯ ಮಲ್ಲಿಗೆ, ಸಾವಿರೋಡೋರ್ತಿ ಸಾವಿತ್ರಿ, ನ್ಯಾಯೋಗು ಜಿಂದಾಬಾದ್, ತುಳುನಾಡ ಸಿರಿ, ಬೊಳ್ಳಿದೋಟ, ಸಂಗಮ ಸಾಕ್ಷಿ, ಕರಿಯಣಿ ಕಟ್ಟಂದಿ ಕಂಡನಿ, ನ್ಯಾಯೋಗಾದ್ ಎನ್ನ ಬದುಕ್, ಭಾಗ್ಯವಂತೆದಿ, ಬದ್ಕರೆ ಬುಡ್ಲೆ, ದಾರೆದ ಸೀರೆ, ಪೆಟ್ಟಾಯಿ ಪಿಲಿ, ಬದುಕೊಂಜಿ ಕಬಿತೆ, ಸತ್ಯ ಓಲುಂಡು, ರಾತ್ರೆ ಪಗೆಲ್, ಬಂಗಾರ್ ಪಟ್ಲೆರ್, ಸೆಪ್ಟೆಂಬರ್-೮, ಬದ್ಕುದ ಬಿಲೆ, ಮಾರಿ ಬಲೆ, ಕಾಲ, ಒಂತೆ ಎಜ್ಜೆಸ್ಟ್ ಮಲ್ಪಿ, ತುಡರ್, ಕೋಟಿ-ಚೆನ್ನಯ -2, ಕಡಲ ಮಗೆ, ಬಿರ್ಸೆ, ದೇವೆರ್, ಕಂಚಿಲ್ದ ಬಾಲೆ, ಒರಿಯರ್ದೊರಿ ಅಸಲ್, ಬಂಗಾರ್ದ ಕುರಲ್, ಆಮೆಟ್ ಅಸಲ್ ಈಮೆಟ್ ಕುಸಲ್, ಸೋಂಪ, ರಿಕ್ಷಾ ಡ್ರೈವರ್, ಪಕ್ಕಿಲು ಮೂಜಿ, ಬರ್ಕೆ, ನಿರೆಲ್, ಚಾಲಿ ಪೋಲಿಲು, ರಂಗ್, ಮದಿಮೆ, ಎಕ್ಕ ಸಕ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ, ಚಂಡಿ ಕೋರಿ, ಧಾಂಡ್, ಸೂಮ್ಬೆ, ಸೂಪರ್ ಮರ್ಮಾಯೆ, ಒರಿಯನ್ ತೂಂಡ ಒರಿಯಗಾಪುಜ್ಜಿ, ರೈಟ್ ಬೊಕ್ಕ ಲೆಫ್ಟ್, ಕುಡ್ಲ ಕೆಫೆ, ಬರ್ಸ, ಶಟರ್ ದುಲಾಯಿ, ರಂಬಾರೂಟಿ, ಪಿಲಿಬೈಲ್ ಯಮುನಕ್ಕ, ದಬಕ್ ದಬಾ ಐಸಾ, ಮದಿಪು, ಅರೆ ಮರ್ಲೆರ್, ಪತ್ತನಾಜೆ, ಗುಡ್ಡೆದ ಭೂತ, ಅರ್ಜುನ್ ವೆಡ್ಸ್ ಅಮೃತಾ, ಏಸಾ, ನೇಮದ ಬೂಳ್ಯ, ಅಂಬರ್ ಕ್ಯಾಟರರ್ಸ್, ಪೆಟ್‌ಕಮ್ಮಿ ಚಿತ್ರಗಳು ಇದುವರೆಗೆ ಬಿಡುಗಡೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT