ಪೂರ್ವ ಮುಂಗಾರು: ವಾಡಿಕೆಗಿಂತ ಹೆಚ್ಚು ಮಳೆ

7
ಮಳೆ ಆಶ್ರಿತ ಪ್ರದೇಶಗಳಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

ಪೂರ್ವ ಮುಂಗಾರು: ವಾಡಿಕೆಗಿಂತ ಹೆಚ್ಚು ಮಳೆ

Published:
Updated:
ಪೂರ್ವ ಮುಂಗಾರು: ವಾಡಿಕೆಗಿಂತ ಹೆಚ್ಚು ಮಳೆ

ಮೈಸೂರು: ಜಿಲ್ಲೆಯಲ್ಲಿ ಈ ಬಾರಿಯೂ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಮೇ ತಿಂಗಳು ಕೊನೆಗೊಳ್ಳಲು ಇನ್ನೂ 12 ದಿನಗಳಿದ್ದು, ಈಗಾಗಲೇ ವಾಡಿಕೆಗಿಂತ ಶೇ 60ರಷ್ಟು ಅಧಿಕ ಮಳೆ ಬಿದ್ದಿದೆ.

ಜಿಲ್ಲೆಯ ಎಚ್‌.ಡಿ.ಕೋಟೆ ಮತ್ತು ನಂಜನಗೂಡು ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ. ಮೇ ಮಧ್ಯಭಾಗದವರೆಗೆ ಈ ತಾಲ್ಲೂಕುಗಳಲ್ಲಿ ಕ್ರಮವಾಗಿ 242 ಮತ್ತು 271 ಮಿ.ಮೀ. ಮಳೆಯಾಗಿದೆ. ಮೈಸೂರು ತಾಲ್ಲೂಕಿನಲ್ಲಿ 140.7 ಮಿ.ಮೀ. ಮಳೆ ಬಿದ್ದಿದೆ.

ಬಿತ್ತನೆ ಚುರುಕು: ಮಳೆಯಿಂದ ಬಹುತೇಕ ಕೆರೆಕಟ್ಟೆಗಳಿಗೆ ನೀರು ಹರಿದುಬಂದಿದ್ದು, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ಮತ್ತು ಮೈಸೂರು ತಾಲ್ಲೂಕುಗಳಲ್ಲಿ ಮಳೆ ಆಶ್ರಿತ ಪ್ರದೇಶಗಳು ಹೆಚ್ಚಿದ್ದು, ಬಿತ್ತನೆ ಕೆಲಸ ಚುರುಕಿನಿಂದ ಸಾಗಿದೆ.

ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ ಮತ್ತು ಮೈಸೂರು, ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ತಲಾ 12 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶಗಳಲ್ಲಿ ಬಿತ್ತನೆ ನಡೆದಿದೆ. ರೈತರು ತಂಬಾಕು, ಹತ್ತಿ ಅಲ್ಲದೆ ದ್ವಿದಳಧಾನ್ಯಗಳ ಬಿತ್ತನೆ ಮಾಡಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 78 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಡೆದಿದೆ.

ಆತಂಕ ಇದೆ: ಮುಂಗಾರುಪೂರ್ವ ಮಳೆ ವಾಡಿಕೆಗಿಂತ ಹೆಚ್ಚು ಬಿದ್ದರೂ ಜಿಲ್ಲೆಯ ರೈತರಲ್ಲಿ ಆತಂಕ ಇದ್ದೇ ಇದೆ. ಕಳೆದ ಕೆಲ ವರ್ಷಗಳಲ್ಲಿ ಮುಂಗಾರುಪೂರ್ವ ಮಳೆ ಉತ್ತಮವಾಗಿ ಆಗಿದ್ದರೂ, ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿತ್ತು.

ಜೂನ್‌ ತಿಂಗಳಲ್ಲಿ ಮಳೆ ಕೈಕೊಟ್ಟರೆ ನಿರೀಕ್ಷಿತ ಇಳುವರಿ ದೊರೆಯದೆ ರೈತರು ನಷ್ಟ ಅನುಭವಿಸುವರು. ಇದರಿಂದ ರೈತರು ಸಣ್ಣ ಅತಂಕದೊಂದಿಗೆಯೇ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ಮಾವು ಬೆಳೆಗಾರರಿಗೆ ಹಿನ್ನಡೆ: ಮುಂಗಾರುಪೂರ್ವ ಮಳೆ ವಾಡಿಕೆಗಿಂತ ಹೆಚ್ಚು ಬಿದ್ದರೆ ಮಾವು ಬೆಳೆಗಾರರಿಗೆ ಹಿನ್ನಡೆ ಉಂಟಾಗುತ್ತದೆ. ‘ಮೇ ತಿಂಗಳಲ್ಲಿ ಒಂದೆರಡು ಮಳೆ ಬಿದ್ದರೆ ಮಾವು ಬೆಳೆಗೆ ಒಳ್ಳೆಯದು. ಮಳೆ ಹೆಚ್ಚಿದಂತೆ ಬೆಲೆ ಕುಸಿತದ ಸಾಧ್ಯತೆಗಳಿವೆ’ ಎನ್ನುತ್ತಾರೆ ನಗರದ ಮಾವು ಮಾರಾಟಗಾರ ಶ್ರೀನಿವಾಸ್‌.

ಕಳೆದ ಎರಡು ವಾರ ಸಾಕಷ್ಟು ಮಳೆ ಬಿದ್ದಿದೆ. ಗಾಳಿ ಸಹಿತ ಮಳೆ ಬಂದರೆ ಮಾವು ಉದುರುತ್ತವೆ. ಹೀಗೆ ಉದುರಿದ ಹಣ್ಣುಗಳ ಗುಣಮಟ್ಟ ಚೆನ್ನಾಗಿರುವುದಿಲ್ಲ. ಮಳೆ ಅಧಿಕ ಬಿದ್ದರೆ ಮಾವು ಹಣ್ಣಾದಾಗ ಕಪ್ಪು ಚುಕ್ಕೆಗಳು ಬೀಳುತ್ತವೆ. ಅಂತಹ ಹಣ್ಣುಗಳನ್ನು ಕೊಳ್ಳಲು ಗ್ರಾಹಕರು ಹಿಂಜರಿಯುವರು. ಇದರಿಂದ ಬೆಲೆ ಕುಸಿತ ಉಂಟಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲೆಯ ಅನೇಕ ತೋಟಗಳಲ್ಲಿ ಮಾವು ಫಸಲು ಕೊಯ್ಲಿಗೆ ಸಿದ್ಧವಾಗಿದೆ. ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಇನ್ನೂ ಮಳೆ ಬಂದರೆ ವಿವಿಧ ತಳಿಯ ಮಾವಿನ ಹಣ್ಣುಗಳ ಬೆಲೆ ₹ 10ರಿಂದ ₹ 15ರಷ್ಟು ಕುಸಿಯಬಹುದು ಎಂಬುದು ಹಣ್ಣಿನ ವ್ಯಾಪಾರಿ ಆನಂದ್‌ ಅವರ ಆತಂಕ.

ಅಂಕಿ–ಅಂಶ

78 ಸಾವಿರ

ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ

271 ಮಿ.ಮೀ

ನಂಜನಗೂಡು ತಾಲ್ಲೂಕಿನಲ್ಲಿ ಬಿದ್ದ ಮಳೆಯ ಪ್ರಮಾಣ

ಕಳೆದ ವರ್ಷವೂ ಹೆಚ್ಚು ಮಳೆ

ಮೈಸೂರು ಜಿಲ್ಲೆಯಲ್ಲಿ ಕಳೆದ ವರ್ಷವೂ ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿತ್ತು. ಸುಮಾರು ಶೇ 52ರಷ್ಟು ಅಧಿಕ ಮಳೆಯಾಗಿತ್ತು. ಮೇ ಕೊನೆಯ ವೇಳೆಗೆ 1.14 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ವಿವಿಧ ಕೃಷಿ ಚಟುವಟಿಕೆ ನಡೆದಿತ್ತು.

ಕಳೆದ ಮೇ ತಿಂಗಳಲ್ಲಿ ಎಚ್‌.ಡಿ.ಕೋಟೆ (269.5 ಮಿ.ಮೀ.), ಹುಣಸೂರು (266.9), ಕೆ.ಆರ್‌.ನಗರ (286) ತಿ.ನರಸೀಪುರ (302.4), ಮೈಸೂರು (320.5), ನಂಜನಗೂಡು (248.9) ಮತ್ತು ಪಿರಿಯಾಪಟ್ಟಣ (352) ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry