ತಣಿದ ಧರೆ; ರೈತರ ಮೊಗದಲ್ಲಿ ಮೂಡಿದ ಹರ್ಷ

7
ಬ್ರಹ್ಮಾವರ ಸುತ್ತಮುತ್ತ ಸುರಿದ ವ್ಯಾಪಕ ಮಳೆ

ತಣಿದ ಧರೆ; ರೈತರ ಮೊಗದಲ್ಲಿ ಮೂಡಿದ ಹರ್ಷ

Published:
Updated:

ಬ್ರಹ್ಮಾವರ: ಮೂರ‍್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಒಂದೆಡೆ ರೈತರ ಕೃಷಿ ಚಟುವಟಿಕೆಗೆ ಲಾಭವಾದರೆ, ಇನ್ನೊಂದೆಡೆ ಬಿರು ಬೇಸಿಗೆಯಲ್ಲಿ ಕಾಡುವ ನೀರಿನ ತೊಂದರೆಗೆ ದೂರವಾಗಿದೆ.

ತೆಂಗು ಅಡಿಕೆ ಬಾಳೆ ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ಈ ಬಾರಿಯ ಬೇಸಿಗೆಯ ಮಳೆ ಸುರಿದಿರುವುದು ಲಾಭವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬ್ರಹ್ಮಾವರ ಕೋಟ ಪರಿಸರದಲ್ಲಿ 100 ಮಿಲಿ ಮೀಟರ್‌ಗಿಂತ ಅಧಿಕ ಮಳೆ ಬಿದ್ದಿದೆ.

ಬ್ರಹ್ಮಾವರ ಕೃಷಿ ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸುಧೀರ್ ಕಾಮತ್ ಅವರ ಪ್ರಕಾರ ಕಳೆದ ವರ್ಷ ಏಪ್ರಿಲ್ ಮತ್ತು ಮೇಯಲ್ಲಿ ಬ್ರಹ್ಮಾವರ ಪರಿಸರದಲ್ಲಿ ಕೇವಲ 158.4 ಮಿ.ಮೀ ಮಳೆ ಸುರಿದಿತ್ತು. ಆದರೆ, ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 261.8 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಈ ಬಾರಿ ಮಾರ್ಚ್‌ನಲ್ಲಿ 50.9 ಮಿ.ಮೀ, ಏಪ್ರಿಲ್‌ನಲ್ಲಿ 33.5 ಮಿ.ಮೀ ಮತ್ತು ಮೇ 18 ರ ಮುಂಜಾನೆವರರಿಗೆ 176.6ಮಿ.ಮೀ ಮಳೆ ಸುರಿದಿದೆ. ಗುರುವಾರ ರಾತ್ರಿ ಬ್ರಹ್ಮಾವರದಲ್ಲಿ 5ಸೆಂ.ಮೀ ಮಳೆಯಾಗಿತ್ತು. ಕೃಷಿ ಚಟುವಟಿಕೆಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಿದೆ ಎಂದು ಅವರು ತಿಳಿಸಿದ್ದಾರೆ.

ನೀರಿನ ಸಮಸ್ಯೆ ದೂರ: ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಚಾಂತಾರು ಮತ್ತು ಹೇರೂರು ಪರಿಸರದ ಹಲವೆಡೆ ಇದ್ದ ನೀರಿನ ಸಮಸ್ಯೆ ಸ್ವಲ್ಪ ಮಟ್ಟಗೆ ಕಡಿಮೆಯಾಗಿದೆ. ಅನೇಕ ಕಡೆ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದು ಗ್ರಾಮಸ್ಥರ ನೀರಿನ ಸಮಸ್ಯೆಯ ಆತಂಕ ಕಡಿಮೆ ಮಾಡಿದೆ.

ಹಾನಿಯಾಗಿಲ್ಲ: ಕಳೆದ ಬುಧವಾರ ಕೊಕ್ಕರ್ಣೆ, ನಾಲ್ಕೂರು,ಕರ್ಜೆ ಪರಿಸರದಲ್ಲಿ ಭಾರಿ ಗಾಳಿ ಮಳೆಯಿಂದ ಅನೇಕ ವಿದ್ಯುತ್ ಕಂಬಗಳು ಮತ್ತು ಮರಗಳು ಬಿದ್ದು ಹಾನಿಯಾಗಿದ್ದರೂ, ಗುರುವಾರ ರಾತ್ರಿ ಗುಡುಗು ಸಿಡಿಲಿನಿಂದ ಕೂಡಿ ಸುರಿದ ಮಳೆಗೆ ಎಲ್ಲಿಯೂ ಹಾನಿಯಾಗಿಲ್ಲ. ಕೊಕ್ಕರ್ಣೆ, ಕರ್ಜೆ, ನಾಲ್ಕೂರು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸಹಜ ಸ್ಥಿತಿಗೆ ತರಲಾಗಿದೆ ಎಂದು ಮೆಸ್ಕಾ ಸಿಬ್ಬಂದಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry