ಭಾನುವಾರ, ಮಾರ್ಚ್ 7, 2021
18 °C
ಪಡುಬಿದ್ರಿ: ಸ್ವಂತ ಕಟ್ಟಡ ಇದ್ದರೂ ಸೇವೆಯ ಭಾಗ್ಯವೇ ಇಲ್ಲ!

ಬಾಡಿಗೆ ಕಟ್ಟಡದಲ್ಲೇ ಮೆಸ್ಕಾಂ ಶಾಖಾ ಕಚೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಡಿಗೆ ಕಟ್ಟಡದಲ್ಲೇ ಮೆಸ್ಕಾಂ ಶಾಖಾ ಕಚೇರಿ

ಪಡುಬಿದ್ರಿ: ಇಲ್ಲಿನ ಮೆಸ್ಕಾಂ ಶಾಖಾ ಕಚೇರಿಗೆ ಸ್ವಂತ ಜಾಗದಲ್ಲಿ ಕಟ್ಟಡ ಇದೆ. ಆದರೂ ಕಳೆದ 12 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯಾಚರಣೆ ಮಾಡುತ್ತಿದೆ. ಸ್ವಂತ ಕಟ್ಟಡದಲ್ಲಿ ಕೆಲಸ ಮಾಡುವ ಭಾಗ್ಯ ಇನ್ನೂ ಸಿಕ್ಕಿಲ್ಲ.

ಹೋಟೆಲ್‌ ಕೊಳಚೆ ನೀರಿನಿಂದಾಗಿ ಸ್ವಂತ ಕಟ್ಟಡ ತ್ಯಜಿಸಿ ಬಾಡಿಗೆ ಕಟ್ಟಡವೇ ಒಳಿತು ಎಂಬ ನಿರ್ಧಾರಕ್ಕೆ ಅಧಿಕಾರಿಗಳು ಬಂದು ಬಿಟ್ಟಿದ್ದಾರೆ. ಕೊಳಚೆ ಸಮಸ್ಯೆಗೆ ಪಡುಬಿದ್ರಿ ಗ್ರಾಮ ಪಂಚಾಯಿತಿ ಸೂಕ್ತ ಪರಿಹಾರ ಕಂಡುಕೊಳ್ಳದೆ ಇರುವುದೇ ಇದಕ್ಕೆ ಕಾರಣ. 12 ವರ್ಷಗಳಿಂದ ಮಾಸಿಕ ₹8.500ದಂತೆ ₹12 ಲಕ್ಷ ಬಾಡಿಗೆ ಪಾವತಿ ಮಾಡಲಾಗಿದೆ.

ಕಾರ್ಕಳ ರಸ್ತೆಯ ಬಾಡಿಗೆ ಕಚೇರಿ ಯಲ್ಲಿ ನಡೆಯುತ್ತಿದ್ದ ಕೆಲಸಗಳನ್ನು  1990ರಲ್ಲಿ ಪಡುಬಿದ್ರಿ ಬಸ್ ನಿಲ್ದಾಣದ ಸಮೀಪದ ಬೆರಂದಿಕೆರೆಗೆ ಸ್ಥಳಾಂತರ ಮಾಡಲಾಯಿತು. 50 ಸೆಂಟ್ಸ್ ಜಮೀನಿ ನಲ್ಲಿ ಸ್ವಂತ ಕಚೇರಿ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹ ನಿರ್ಮಾಣ ಮಾಡ ಲಾಗಿದೆ. ಮೆಸ್ಕಾಂ ಕಚೇರಿಯ ಕೆಲಸಗಳು ಕೂಡ ಉತ್ತಮವಾಗಿ ನಡೆಯುತ್ತಿದ್ದವು.

ಪಡುಬಿದ್ರಿ ಪೇಟೆಯ ಹೋಟೆಲ್‌ನ ಕೊಳಚೆ ನೀರನ್ನು ಬೆರಂದಿಕೆರೆ ಪ್ರದೇಶಕ್ಕೆ ಹರಿಬಿಡಲಾಯಿತು. ಪರಿಣಾಮ ಪ್ರದೇಶ ದಲ್ಲಿ ದುರ್ವಾಸನೆ ಶುರು ಆಯಿತು. ಕಚೇರಿಗೆ ಬರುವ ಜನರು, ಸಿಬ್ಬಂದಿ ವಾಸನೆಯಿಂದ ಮೂಗು ಮುಚ್ಚಿಕೊ ಳ್ಳವಂತಾಯಿತು. ಪರಿಣಾಮ ಕಚೇರಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಆಯಿತು.

ಪಡುಬಿದ್ರಿ ಮೆಸ್ಕಾಂ ಕಚೇರಿ ವ್ಯಾಪ್ತಿಯ ಹೆಜಮಾಡಿ, ಎರ್ಮಾಳು ಪಲಿಮಾರು, ಪಡುಬಿದ್ರಿ ಸೇರಿ 12 ಸಾವಿರ ವಿದ್ಯುತ್ ಸಂಪರ್ಕ ಹಾಗೂ ಮುದರಂಗಡಿಯಲ್ಲಿ 6 ಸಾವಿರ ಸಂಪರ್ಕ ಇದೆ. ಕಚೇರಿ ಒಂದನೇ ಮಹಡಿಯಲ್ಲಿ ಇರುವುದರಿಂದ ಗ್ರಾಹಕರು ಬರಲು ಕಷ್ಟ ಅನುಭವಿಸುತ್ತಿದ್ದಾರೆ. ಈ ಕಟ್ಟಡದಲ್ಲಿ ಸ್ಥಳದ ಅಭಾವ ಇದೆ. ಸಮಸ್ಯೆ ಮನಗಂಡ ಮೆಸ್ಕಾಂ ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಚಿಂತನೆ ನಡೆಸುತ್ತಿದೆ.

ಮೆಸ್ಕಾಂಗೆ ಸ್ವಂತ ಜಾಗದಲ್ಲಿ ಕಟ್ಟಡ ಇದ್ದರೂ, ಕೊಳಚೆ ಸಮಸ್ಯೆ ಪರಿಹರಿಸಲು ಗ್ರಾಮ ಪಂಚಾಯಿತಿ ವಿಳಂಬ ಮಾಡು ವುದು ಸರಿಯಲ್ಲ. ಮೆಸ್ಕಾಂ ಗ್ರಾಹಕರ ಸಮಸ್ಯೆ ಅರ್ಥಮಾಡಿಕೊಳ್ಳಬೇಕು. ಮೆಸ್ಕಾಂ ಹೊಸ ಕಟ್ಟಡ ರಚನೆಗೆ ಬೇಕಾದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂಬು ವುದು ಗ್ರಾಹಕರ ಆಗ್ರಹ.

ಹಳೆ ಕಟ್ಟಡವನ್ನು ತೆರವುಗೊಳಿಸಿ ₹1.5 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧಪಡಿಸ ಲಾಗಿತ್ತು. ಈ ಬಗ್ಗೆ ಐದು ವರ್ಷಗಳ ಹಿಂದೆ ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಇಲ್ಲಿನ ಕೊಳಚೆ ಸಮಸ್ಯೆಯಿಂದ ಕಟ್ಟಡ ನಿರ್ಮಾಣಕ್ಕೆ ಮೆಸ್ಕಾಂ ಮುಂದಾಗಲಿಲ್ಲ. ಗ್ರಾಮ ಪಂಚಾಯಿತಿ ಕೂಡಲೇ ಕೊಳಚೆ ಸಮಸ್ಯೆಗೆ ಮುಕ್ತಿ ನೀಡಿ ಮೆಸ್ಕಾಂ ಕಟ್ಟಡ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಕೂಡಲೇ ಮಾಡಬೇಕು ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಭಾಸ್ಕರ್ ಪಡುಬಿದ್ರಿ ಹೇಳಿದರು.

ನೋಟಿಸ್‌ ಕೊಡಲಾಗಿತ್ತು: ಪಿಡಿಒ

ಕೊಳಚೆ ನೀರನ್ನು ಸಂಗ್ರಹಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹೋಟೆಲ್ ಮಾಲೀಕರು ಸರಿಯಾದ ನಿರ್ವಹಣೆ ಇಲ್ಲದೆ ಇರುವುದರಿಂದ ಮತ್ತೆ ಕೊಳಚೆ ಸಮಸ್ಯೆ ಉಂಟಾಗಿದೆ. ಈ ಹಿಂದೆ ಹೋಟೆಲ್‌ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಬಹುತೇಕ ಸದಸ್ಯರು ಆಡಳಿತ ಅಧಿಕಾರಿಗಳ ವಿರುದ್ಧವೇ ಹರಿಹಾಯ್ದಿದ್ದರು. ಗ್ರಾಮ ಪಂಚಾಯಿತಿ ಆಡಳಿತವೇ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಇಲ್ಲವೇ ಮೇಲಧಿಕಾರಿಗಳೇ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಪಡುಬಿದ್ರಿ ಗ್ರಾಮ ಪಂಚಾಯಿ ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ಹೇಳಿದರು.

12 ವರ್ಷಗಳಿಂದ ಬಾಡಿಗೆ ಜಾಗದಲ್ಲೇ ಕಾರ್ಯ

12 ವರ್ಷಗಳಿಂದ ಕೊಳಚೆ ಸಮಸ್ಯೆಯಿಂದಾಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯವನ್ನು ಮಾಡಬೇಕಾಗಿದೆ. ಕೊಳಚೆ ನೀರಿಗೆ ಮುಕ್ತಿ ನೀಡಿದಲ್ಲಿ ಇಲ್ಲಿನ ಜಾಗದಲ್ಲಿ ಉತ್ತಮ ಕಚೇರಿ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಈಗಿರುವ ಕಚೇರಿ ಹಳೆಯದಾಗಿದೆ. ಇಲ್ಲಿ ಕಚೇರಿ ನಿರ್ಮಾಣ ಆದರೆ ಜನರಿಗೂ ಅನುಕೂಲವಾಗಲಿದೆ. ವಾಹನ ನಿಲುಗಡೆ ಸೇರಿದಂತೆ ಎಲ್ಲದಕ್ಕೂ ಅನುಕೂಲ ಎಂದು  ಕಾಪು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜೆ.ಪಿ. ರಾಮ ಹೇಳಿದರು.

ಅಬ್ದುಲ್‌ ಹಮೀದ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.