ಮಾವು ಮೇಳದಿಂದ ರೈತರಿಗೆ ಅನುಕೂಲ

7
ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಉದ್ಘಾಟನೆ: ಮೇ 18 ರಿಂದ 27ರವರೆಗೆ ಆಯೋಜನೆ

ಮಾವು ಮೇಳದಿಂದ ರೈತರಿಗೆ ಅನುಕೂಲ

Published:
Updated:
ಮಾವು ಮೇಳದಿಂದ ರೈತರಿಗೆ ಅನುಕೂಲ

ಕೊಪ್ಪಳ: ನಗರದ ತೋಟಗಾರಿಕೆ ಕಚೇರಿ ಆವರಣದಲ್ಲಿ ಹಣ್ಣುಗಳ ರಾಜ ಎಂದೇ ಪ್ರಸಿದ್ಧ ಪಡೆದ ಮಾವಿನ ಘಮಲು ಆವರಿಸಿದೆ.ಇಡೀ ಆವರಣದಲ್ಲಿ ಮಾವಿನ ಹಣ್ಣಿನ ಮಳಿಗೆಗಳು ತಲೆ ಎತ್ತಿದ್ದು, ಎತ್ತ ನೋಡಿದರೂ ಮಾವಿನ ಸೊಬಗು ಕಾಣುತ್ತಿದೆ. ಮಾವು ಪ್ರಿಯರು ತೋಟಗಾರಿಕೆ ಕಚೇರಿ ಆವರಣದತ್ತ ದಾಂಗುಡಿ ಇಡುತ್ತಿದ್ದಾರೆ.

ತೋಟಗಾರಿಕೆ ಇಲಾಖೆಯ ಆಶ್ರಯದಲ್ಲಿ ಮಾವು ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೇ 18 ರಿಂದ 27ರವರೆಗೆ ಆಯೋಜಿಸಲಾಗಿದೆ.

ಮಾವು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತೋಟಗಾರಿಕೆ ಇಲಾಖೆ ಮಾವು ಮೇಳ ಆಯೋಜಿಸು ವುದರಿಂದ ರೈತರಿಗೆ ಬಹಳಷ್ಟು ಅನುಕೂಲ ಆಗಲಿದೆ ಎಂದು ಹೇಳಿದರು.

ಮೊದಲ ಬಾರಿಗೆ ಮಾವು ಮೇಳವನ್ನು ಕಳೆದ ಬಾರಿ ಜಿಲ್ಲೆಯಲ್ಲಿ ಆಯೋಜಿಸಲಾಗಿತ್ತು. ಇದಕ್ಕೆ ರೈತರಿಂದ ಹಾಗೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಸ್ತುತ ಎರಡನೇ ಬಾರಿ ಮಾವು ಮೇಳ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕಿನ ಬಹುತೇಕ ರೈತರು ಭಾಗವಹಿಸಿದ್ದಾರೆ.  ಮೇಳದಲ್ಲಿ 110ಕ್ಕೂ ಹೆಚ್ಚು ಮಾವಿನ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಗ್ರಾಹಕರು ಬಂದು ತಮಗೆ ಇಷ್ಟವಾದ ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ ಎಂದರು.

ತೋಟಗಾರಿಕೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ ಮಾತನಾಡಿ, ಇಂದು ಮಾವು ಮೇಳ ಆರಂಭವಾಗಿದೆ. ಮೇಳದಲ್ಲಿ ಸುಮಾರು 10 ತಳಿಯ ಮಾವಿನ ಹಣ್ಣು ಮಾರಾಟಕ್ಕೆ ಇಡಲಾಗಿದೆ. ಪ್ರತಿ ಕೆ.ಜಿಗೆ ₹ 35ರಿಂದ ₹ 80 ರವರೆಗೆ ಆಯಾ ತಳಿಗಳಿಗೆ ಅನುಗುಣವಾಗಿ ದರ ನಿಗದಿ ಪಡಿಸಲಾಗಿದೆ. ಮಾವು ಮೇಳಕ್ಕೆ ರೈತರು ಹಾಗೂ ಗ್ರಾಹಕರಿಂದ ಬಹಳಷ್ಟು ದಿನಗಳಿಂದ ಬೇಡಿಕೆ ಇತ್ತು. ಹಾಗಾಗಿ ಮೇಳವನ್ನು ಆಯೋಜಿಸಿದ್ದೇವೆ ಎಂದರು.

ಬಳಿಕ ‘ಮಾವು ಬೆಳೆಯ ಸುಧಾರಿತ ತಾಂತ್ರಿಕ ಬೇಸಾಯ ಕ್ರಮಗಳು–2018’ ಎಂಬ ಕೈಪಿಡಿಯನ್ನು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಬಿಡುಗಡೆಗೊಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ.ಶೆಟ್ಟಿ, ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ್‌, ನಗರಠಾಣೆಯ ಇನ್‌ಸ್ಪೆಕ್ಟರ್‌ ರವಿ ಉಕ್ಕುಂದ, ಗ್ರಾಮೀಣ ಠಾಣೆಯ ಭೀಮಣ್ಣ ಇದ್ದರು.

ಪ್ರದರ್ಶನಕ್ಕಿಡಲಾದ ಮಾವಿನ ತಳಿಗಳು

ನೀಲಂ, ಅಫೂಸ್‌, ಸುವರ್ಣರೇಖಾ, ನಿಲೇಶಾನ್‌, ರಸಪುರಿ, ರುಮಾನಿ, ಕ್ರಿಪ್ಲೀಂಗ್, ಎನ್‌.ಹಿಮಾಹಿದ್ದಿನ್‌, ದಶಹರಿ, ಆಮ್ರಶೆಲ್ಲಿ, ಖಾದರ್‌ ಹೈಬ್ರೀಡ್‌, ಆಮ್ಲೇಟ್‌, ಲಡ್ಡು, ಮರಿಗೌಡ, ಲಾಂಗ್ರಾ, ಸಾಸ್ವೆ, ಕೊಸ್ಕಾಯಿ, ಬೆನೆಶಾನ್, ಮಲ್ಲಿಕಾ, ಪಂಡೂರಿ ಮಾಮಿಡಿ, ಮಂಡಪ್ಪ, ಸಿಂಧೂ, ಇಮಾಮ್‌ ಪಸಂದ್‌, ಬಪ್ಪಕಾಯಿ, ಚೌಸಾ, ಸಿಂಧೋಲ್‌, ಕೇಸರ್‌, ಕಲಾಪಾಡ್‌, ಪೂನಾಸ್, ಕರಿ ಇಷಾಡ್‌, ಮಾಣಿಭಟ್ಟ, ನಿಲ್‌ಗೋವ್‌, ನೀಲುದ್ದೀನ್‌, ಬಾಳೆ ಮಾವು ಸೇರಿದಂತೆ 100ಕ್ಕೂ ಹೆಚ್ಚು ಮಾವಿನ ತಳಿಗಳನ್ನು ಪ್ರಸರ್ಶನಕ್ಕೆ ಇಡಲಾಗಿತ್ತು.

**

ಜಿಲ್ಲೆಯ ಎಲ್ಲ ಕಡೆಯಿಂದಲೂ ಬಹುತೇಕ ರೈತರು ಮಾವು ಮೇಳದಲ್ಲಿ ಭಾಗವಹಿಸಿದ್ದಾರೆ. 10 ದಿನಗಳ ಕಾಲ ಮೇಳ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು

ಎಂ.ಕನಗವಲ್ಲಿ, ಜಿಲ್ಲಾಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry