ರಂಜಾನ್‌ ಉಪವಾಸ: ಪಥ್ಯ ಇರಲಿ

7

ರಂಜಾನ್‌ ಉಪವಾಸ: ಪಥ್ಯ ಇರಲಿ

Published:
Updated:
ರಂಜಾನ್‌ ಉಪವಾಸ: ಪಥ್ಯ ಇರಲಿ

ಟಿಪ್ಪು

ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ಮಾಸ ರಂಜಾನ್ ಪ್ರಾರಂಭವಾಗಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಉಪವಾಸ ಆಚರಿಸುವುದು ಈ ಮಾಸದ ವಿಶೇಷ. ದಿನದ 12 ಗಂಟೆ ನೀರು ಮುಟ್ಟದೇ ಕಠಿಣ ಉಪವಾಸ ಮಾಡಬೇಕಾಗಿದ್ದರಿಂದ ಈ ಅವಧಿಯಲ್ಲಿ ಯಾವ ಆಹಾರ ಸೂಕ್ತ ಹಾಗೂ ಹೇಗೆ ತಿನ್ನಬೇಕು ಎಂದು ತಜ್ಞರು ಸೂಚಿಸಿದ್ದಾರೆ.

‘ರಂಜಾನ್ ಸಂದರ್ಭ ಒಂದು ತಿಂಗಳು ಪೂರ್ತಿ ಮಾಡುವ ಉಪವಾಸದಿಂದ ದೇಹದ ಮೇಲೆ ಯಾವ ಪರಿಣಾಮ ಬೀರಬಹುದು’ ಎಂಬ ಪ್ರಶ್ನೆಗೆ ಕ್ಲಿನಿಕಲ್‌ ನ್ಯೂಟ್ರಿಷಿಯನಿಸ್ಟ್‌ ರೂಪಾಲಿ ದತ್ತ ಅವರು ‘ಉಪವಾಸವೇನೂ 24 ಗಂಟೆ ಮಾಡುವುದಲ್ಲವಲ್ಲ? 12 ಗಂಟೆ ಕಾಲ ಕಠಿಣ ಉಪವಾಸ ದೇಹಕ್ಕೆ ಒಳ್ಳೆಯದೇ. ಆದರೆ ಈ ಸಮಯದಲ್ಲಿ ಏನು ತಿನ್ನಬೇಕು ಹಾಗೂ ಹೇಗೆ ತಿನ್ನಬೇಕು ಎಂಬ ಅರಿವಿದ್ದರೆ ಸಾಕು. ಈ ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ರಂಜಾನ್‌ ಉಪವಾಸ ಆಹಾರ ಪದ್ಧತಿ ಆರೋಗ್ಯಕರವಾದದ್ದು ಹಾಗೂ ಅರ್ಥಪೂರ್ಣವಾದದ್ದು’ ಎಂದು ಅವರು ತಿಳಿಸಿದ್ದಾರೆ.

ದಿನವಿಡೀ ಉಪವಾಸವಿಬೇಕಾಗಿದ್ದರಿಂದ ಜನರು ಜನರು ಹೊಟ್ಟೆ ತುಂಬ ಆಹಾರ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸುವುದು ಉತ್ತಮ ಎಂದು ನಂಬುತ್ತಾರೆ. ಆದರೆ ಇದು ಅಗತ್ಯವಿಲ್ಲ. ಬೆಳಗ್ಗೆ (ಸಹ್ರೀ) ಮತ್ತು ಸಂಜೆ (ಇಫ್ತಾರ್‌) ಸಮಯದಲ್ಲಿ ಸಾಮಾನ್ಯವಾಗಿ ಸೇವಿಸುವ ಆಹಾರಗಳಲ್ಲೇ ಹೆಚ್ಚು ಪೌಷ್ಟಿಕಾಂಶಗಳುಳ್ಳ ಆಹಾರ ಸೇವಿಸಿದರೆ ಸಾಕು. ಬೆಳಿಗ್ಗೆ ಗಂಜಿ ಅಥವಾ ಹಣ್ಣು, ಧಾನ್ಯಗಳಿಂದ ಮಾಡಿದ ತಿಂಡಿ ಹಾಗೂ ಮೊಟ್ಟೆಯ ಬಿಳಿಪದರ ಸೇವಿಸಬೇಕು. ಹೆಚ್ಚು ನೀರು ಕುಡಿದಷ್ಟು ಒಳ್ಳೆಯದು. ಉತ್ತಮ ಆಹಾರವು ದೇಹಕ್ಕೆ ಎಲೆಕ್ಟ್ರಾಲೈಟ್ಸ್‌ ರೂಪದಲ್ಲಿ ಪೋಷಕಾಂಶಗಳನ್ನು ಒದಗಿಸುತ್ತದೆ. ಕಡಿಮೆ ಕ್ಯಾಲೊರಿ ಆಹಾರ ಸೇವಿಸುವ ಬದಲು ದಿನವಿಡೀ ಉಪವಾಸವಿರಬೇಕಾಗಿದ್ದರಿಂದ ದೇಹದ ಶಕ್ತಿ, ಚೈತನ್ಯವನ್ನು ಸಂಜೆತನಕ ಕಾಪಾಡಿಕೊಳ್ಳುವಂತಹ ಆರೋಗ್ಯಯುತ ಆಹಾರ ಸೇವಿಸಬೇಕು.

ಇನ್ನು ಸಂಜೆ ಉಪವಾಸ ಬಿಡುವ (ಇಫ್ತಾರ್‌) ಸಮಯದಲ್ಲಿ ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವುದು ಸರಿಯಲ್ಲ. ಇದು ದೇಹದಲ್ಲಿ ಎಲೆಕ್ಟ್ರಾಲೈಟ್ಸ್‌ಗಳನ್ನು ದುರ್ಬಲಗೊಳಿಸುತ್ತದೆ.  ದಿನವಿಡೀ ಉಪವಾಸವಿದ್ದು, ಒಂದೇ ಬಾರಿಗೆ ಆಹಾರ ಸೇವಿಸಿದಾಗ ದೇಹದ ಪಚನಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ಅಂತಹ ಸಮಯದಲ್ಲಿ ಕೊಬ್ಬಿನ ಆಹಾರಗಳನ್ನು ತಿನ್ನುವುದೂ ಸರಿಯಲ್ಲ. ಆ ಸಮಯದಲ್ಲಿ ಒಣಹಣ್ಣುಗಳು ಹಾಗೂ ಧಾನ್ಯಗಳನ್ನು ಸೇವಿಸುವುದು ಉತ್ತಮ. ಹೆಚ್ಚು ಸಿಹಿಯಾಗಿಲ್ಲದ ಪಾನೀಯಗಳನ್ನು ಕುಡಿಯಬೇಕು.

ಇತ್ತೀಚೆಗೆ ಇಫ್ತಾರ್‌ ಕೂಟಗಳನ್ನು ಪಾರ್ಟಿ ಅಥವಾ ಸೋಷಿಯಲ್‌ ಗೆದರಿಂಗ್‌ ಎಂಬಂತೆ ನೋಡಲಾಗುತ್ತದೆ. ಇಲ್ಲಿ ಅತಿ ಹೆಚ್ಚು ಸೇವಿಸುವುದರಿಂದ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇಂತಹ ಇಫ್ತಾರ್‌ ಕೂಟಗಳಲ್ಲಿ ವಾರದಲ್ಲಿ ಒಂದು ಬಾರಿ ಪಾಲ್ಗೊಳ್ಳಿ. ದಿನಂಪ್ರತಿ ಇಂತಹ ಕೂಟಗಳಿಗೆ ಹೋಗುವ ಅಭ್ಯಾಸ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

* ಸಂಸ್ಕರಿಸಿದ ಆಹಾರವನ್ನು ಬೆಳಿಗ್ಗಿನ ಅವಧಿ ಸೇವಿಸುವುದನ್ನು ತಪ್ಪಿಸಿ. ಇದು ಅತಿ ಬೇಗ ಜೀರ್ಣವಾಗಿ ಹಸಿವಾಗುತ್ತದೆ

* ಆಹಾರದಲ್ಲಿ ಹೆಚ್ಚು ನಾರಿನಾಂಶ ಹಾಗೂ ಪ್ರೊಟೀನ್‌ ಇರಲಿ.

* ನಿರ್ಜಲೀಕರಣ ಈ ಸಮಯ ಕಾಡಬಹುದು. ಹಾಗಾಗಿ ಸೆಹ್ರೀ ಮತ್ತು ಇಫ್ತಾರ್‌ ಸಮಯದಲ್ಲಿ ಹೆಚ್ಚು ನೀರು ಸೇವಿಸಿ

* ದೇಹದಲ್ಲಿ ನಿರ್ಜಲೀಕರಣದ ಅನುಭವವಾದಾಗ ಉಪವಾಸವನ್ನು ಬಿಟ್ಟುಬಿಡಿ. ಆಗ ಸ್ವಲ್ಪ ಸಿಹಿ ಆಗಿರುವ ತಿಂಡಿ, ಬಾಳೆಹಣ್ಣು, ಖರ್ಜೂರ ಅಥವಾ ಮಾವು ಹಣ್ಣುಗಳನ್ನು ಸೇವಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry