ಬುಧವಾರ, ಜೂನ್ 23, 2021
23 °C

21ನೇ ಶತಮಾನದ ಚುನಾವಣಾ ಸುಧಾರಣೆ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಕರ್ನಾಟಕದ ವಿಧಾನಸಭಾ ಚುನಾವಣೆ ಘೋಷಣೆಯಾದ ಆಸುಪಾಸಿನಲ್ಲೇ ಬ್ರಿಟನ್‌ನ ಇಬ್ಬರು ವಿದ್ವಾಂಸರು ಒಟ್ಟಾಗಿ ರಚಿಸಿದ ‘ಹೌಟು ರಿಗ್‌ ದ ಎಲೆಕ್ಷನ್ಸ್’ ಎಂಬ ಪುಸ್ತಕವೂ ಹೊರಬಂತು. ಚುನಾವಣಾ ಫಲಿತಾಂಶಗಳನ್ನು ತಮಗೆ ಬೇಕಾದಂತೆ ತಿರುಗಿಸಿಕೊಳ್ಳಲು ರಾಜಕಾರಣಿಗಳು ನಡೆಸುವ ತಂತ್ರ-ಕುತಂತ್ರಗಳ ಕುರಿತ ಚರ್ಚೆ ಮತ್ತು ವಿಶ್ಲೇಷಣೆ ಈ ಪುಸ್ತಕದಲ್ಲಿದೆ. ಪ್ರಬುದ್ಧ ಪ್ರಜಾಪ್ರಭುತ್ವ ವ್ಯವಸ್ಥೆಗಳಿಂದ ತೊಡಗಿ ಸರ್ವಾಧಿಕಾರಿಗಳೇ ನಡೆಸುವ ಚುನಾವಣಾ ಪ್ರಕ್ರಿಯೆಯ ತನಕ ಚರ್ಚಿಸಿರುವ ನಿಕ್ ಚೀಸ್‌ಮನ್ ಮತ್ತು ಬ್ರಿಯಾನ್ ಕ್ಲಾಸ್ 21ನೇ ಶತಮಾನದ ಚುನಾವಣೆಗಳು ಎದುರಿಸುತ್ತಿರುವ ಸವಾಲಿನ ಕುರಿತಂತೆ ಬಹುಮುಖ್ಯವಾಗಿ ಪ್ರಸ್ತಾಪಿಸುತ್ತಾರೆ.

ಆಳುವವರ ಅಥವಾ ಆಳಲು ಹೊರಟಿರುವವರ ಬಗ್ಗೆ ಪೂರ್ಣ ಮಾಹಿತಿಯೇ ಇಲ್ಲದಿರುವ ಮತದಾರರ ಸಮಸ್ಯೆ ಬಹುಕಾಲ ಇತ್ತು. ಈಗಲೂ ಆ ಸಮಸ್ಯೆ ಇದೆ. ಆದರೆ ಸ್ವರೂಪ ಬದಲಾಗಿದೆ ಎಂದು ಈ ವಿದ್ವಾಂಸರ ಅಭಿಪ್ರಾಯ ಪಡುತ್ತಾರೆ. ಅವರು ಹೇಳುವಂತೆ ‘21ನೇ ಶತಮಾನದ ಚುನಾವಣೆಗಳ ಅತಿದೊಡ್ಡ ಸವಾಲು ಎಂದರೆ ತಪ್ಪು ಮಾಹಿತಿ/ಸುಳ್ಳು ಮಾಹಿತಿಯನ್ನು ಹೊಂದಿರುವ (misinformed) ಮತದಾರ’. ಈ ಸವಾಲನ್ನು ರಾಜಕೀಯ ಪಕ್ಷಗಳು ಒಂದು ಅವಕಾಶವನ್ನಾಗಿ ಪರಿಭಾವಿಸಿ ಸ್ವೀಕರಿಸಿರುವುದನ್ನು ಕೇಂಬ್ರಿಜ್ ಅನಲಿಟಿಕಾದಂಥ ಸಂಸ್ಥೆಗಳು ಅಮೆರಿಕದ ಚುನಾವಣೆ ಮತ್ತು ಬ್ರೆಕ್ಸಿಟ್ ಜನಮತಗಣನೆಯನ್ನು ಬಳಸಿಕೊಂಡ ಬಗೆಯಲ್ಲಿ ಕಾಣಬಹುದು. ಈ ತಂತ್ರ ಭಾರತದಲ್ಲಿಯೂ ವ್ಯಾಪಕವಾಗಿ ಬಳಕೆಯಲ್ಲಿದೆ ಎಂಬುದನ್ನು 2014ರ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲಿಯೂ ಕಂಡಿದ್ದೇವೆ. ಈಗಷ್ಟೇ ಮುಗಿದ ಕರ್ನಾಟಕ ವಿಧಾನಸಭಾ ಚುನಾವಣೆಯೂ ಇದನ್ನೇ ಬೇರೆ ಬೇರೆ ಬಗೆಯಲ್ಲಿ ಸೂಚಿಸುತ್ತಿದೆ.

ಚೀಸ್‌ಮನ್ ಮತ್ತು ಕ್ಲಾಸ್ ಅವರ ‘ತಪ್ಪು ಮಾಹಿತಿ ಹೊಂದಿರುವ ಮತದಾರ’ ಮತ್ತು ‘ಮಾಹಿತಿಯೇ ಇಲ್ಲದಿರುವ ಮತದಾರ’ ಪರಿಕಲ್ಪನೆಗಳನ್ನು ಬೇರೊಂದು ಬಗೆಯಲ್ಲಿ ವಿಶ್ಲೇಷಿಸುವ ತನಿಖಾ ವರದಿಗಾರ ಜಾಕ್ ಪೆರೆಟ್ಟಿ ‘ಒಂದಾನೊಂದು ಕಾಲದಲ್ಲಿ ಜನರು ವಾಸ್ತವವನ್ನು ಕೇಳಿ, ನೋಡಿ ವಿವೇಚನೆ ಬಳಸಿ ಮತದಾನ ಮಾಡುತ್ತಿದ್ದರು ಎಂಬುದೇ ಸುಳ್ಳು’ ಎನ್ನುತ್ತಾರೆ. ಇದನ್ನು ವಿಸ್ತರಿಸಿದರೆ ಚುನಾವಣೆಯಲ್ಲಿ ಜಯಗಳಿಸುವುದಕ್ಕಾಗಿ ಸದಾ ಸುಳ್ಳಿನ ಮೆರವಣಿಗೆ ನಡೆಯುತ್ತಿತ್ತು. ತಂತ್ರಜ್ಞಾನ ಈ ಕೆಲಸವನ್ನು ಹೆಚ್ಚು ಸುಲಭ ಮತ್ತು ಬೃಹತ್ ಪ್ರಮಾಣದಲ್ಲಿ ನಡೆಸುವುದಕ್ಕೆ ಅನುಕೂಲ ಕಲ್ಪಿಸಿದೆ ಎನ್ನಬಹುದು.

ಸರಳವಾಗಿ ಹೇಳುವುದಾದರೆ 20ನೇ ಶತಮಾನದ ಚುನಾವಣಾ ಸುಳ್ಳುಗಳು ಮತ್ತು 21ನೇ ಶತಮಾನದ ಸುಳ್ಳುಗಳ ಮಧ್ಯೆ ಹೆಚ್ಚು ವ್ಯತ್ಯಾಸವೇನೂ ಇಲ್ಲ. 20ನೇ ಶತಮಾನದಲ್ಲಿ ಹೆಚ್ಚೇನೂ ಮಾಹಿತಿಯಿಲ್ಲದ ಮತದಾರನನ್ನು  ಕೆಲವೇ ಸುಳ್ಳುಗಳಿಂದ ಪ್ರಭಾವಿಸಬಹುದಿತ್ತು. 21ನೇ ಶತಮಾನದಲ್ಲಿ ತಪ್ಪು ಮಾಹಿತಿಯ ಮಹಾಪೂರವನ್ನೇ ಹರಿಸುವ ಮೂಲಕ ಅವನನ್ನು ಪ್ರಭಾವಿಸಬಹುದು. ಅದಕ್ಕಾಗಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯ ಎಂಬುದನ್ನು ರಾಜಕಾರಣಿಗಳು ಕಂಡುಕೊಂಡಿದ್ದಾರಷ್ಟೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಚುನಾವಣೆ ಘೋಷಣೆಯಾಗುವುದಕ್ಕೆ ಕನಿಷ್ಠ ಮೂರು ತಿಂಗಳ ಮೊದಲೇ ಕಾಂಗ್ರೆಸ್ ತನ್ನ ಪ್ರಚಾರ ಕಾರ್ಯವನ್ನು ಆರಂಭಿಸಿತು. ಅದು ಹೇಳಿಕೊಂಡಂತೆ ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿತ್ತು. ಈ ವಿಷಯವನ್ನು ಪಕ್ಷ ತಾಂತ್ರಿಕವಾಗಿಯಾದರೂ ಸಾಬೀತು ಮಾಡಬಹುದಿತ್ತೇನೋ. ಇದಕ್ಕೆ ವಿರುದ್ಧವಾಗಿ ಪ್ರಚಾರ ಆರಂಭಿಸಿದ ಬಿಜೆಪಿ ಬೇರೆಯೇ ವಿಚಾರಗಳನ್ನು ಎತ್ತಿಕೊಂಡಿತು. ಬಹಳ ಮುಖ್ಯವಾದುದು ಕರ್ನಾಟಕದಲ್ಲಿ ನಡೆದ ‘ಹಿಂದೂಗಳ ಕಗ್ಗೊಲೆ’. ವೈಯಕ್ತಿಕ ದ್ವೇಷ, ಅಪಘಡ ಮತ್ತು ನಿಗೂಢವಾದ ಸಾವುಗಳೆಲ್ಲವನ್ನೂ ‘ಹಿಂದೂಗಳ ಕಗ್ಗೊಲೆ’ಯ ಪಟ್ಟಿಗೆ ಸೇರಿಸಲಾಯಿತು. ಈ ಪಟ್ಟಿಯಲ್ಲಿ ಒಬ್ಬರು ಜೀವಂತ ವ್ಯಕ್ತಿಯೂ ಇದ್ದರೂ ಎಂಬುದು ಮತ್ತೊಂದು ವಿಪರ್ಯಾಸ. ಆದರೆ ಈ ಪಟ್ಟಿಯನ್ನು ಪ್ರಧಾನ ಮಂತ್ರಿಯಾದಿಯಾಗಿ ಬಿಜೆಪಿಯ ಸ್ಥಳೀಯ ನಾಯಕರ ತನಕ ಎಲ್ಲರೂ ಬಳಸಿದರು. ಕರ್ನಾಟಕದ ಗೃಹ ಸಚಿವರೇ ಈ ಕೊಲೆಗಳ ಕುರಿತು ನೀಡಿದ ಸ್ಪಷ್ಟನೆಯಾಗಲೀ,  ‘ಸ್ಕ್ರೋಲ್’ ಎಂಬ ಜಾಲತಾಣ ಈ ‘ಕೊಲೆಗಳ’ ಕುರಿತು ನಡೆಸಿದ ತನಿಖಾ ವರದಿಯನ್ನಾಗಲೀ ಇಡೀ ಚುನಾವಣಾ ಪ್ರಚಾರ ಪ್ರಕ್ರಿಯೆಯಲ್ಲಿ ಯಾರೂ ಪ್ರಸ್ತಾಪಿಸಲಿಲ್ಲ. ಈ ಪ್ರಚಾರದ ನೇರ ಪರಿಣಾಮವನ್ನು ಎದುರಿಸುತ್ತಿದ್ದ ಕಾಂಗ್ರೆಸ್ ಪಕ್ಷ ಕೂಡಾ ಇದರ ಬಗ್ಗೆ ಮೌನವಾಗಿತ್ತು.

ಈ ‘ತಪ್ಪು ಮಾಹಿತಿ ನೀಡುವ ಪ್ರಕ್ರಿಯೆ’ ಫಲಿತಾಂಶಗಳು ಬಂದ ನಂತರವೂ ಮತ್ತೊಂದು ಬಗೆಯಲ್ಲಿ ಮುಂದುವರಿಯಿತು. ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದ ಬಿಜೆಪಿಗೆ ಸರ್ಕಾರ ರಚಿಸುವುದಕ್ಕೆ ಬೇಕಿರುವಷ್ಟು ಸ್ಥಾನಗಳಿರಲಿಲ್ಲ. ಅದನ್ನು ಸಾಧಿಸುವುದಕ್ಕೆ ಬಿಜೆಪಿ ಯಾವ ‘ಅಡ್ಡದಾರಿ’ ಹಿಡಿಯಿತು ಎಂಬುದನ್ನು ತೋರಿಸುವುದಕ್ಕೆಂಬಂತೆ ಕೆಲವು ದ್ವನಿ ಮುದ್ರಿತ ಸಂಭಾಷಣೆಗಳು ರಂಗ ಪ್ರವೇಶ ಮಾಡಿದವು. ಇವುಗಳಲ್ಲಿ ಒಂದು ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಅವರ ಪತ್ನಿಗೆ ಮಾಡಿದ ದೂರವಾಣಿ ಕರೆ. ಹೀಗೊಂದು ದೂರವಾಣಿ ಕರೆಯೇ ಬಂದಿರಲಿಲ್ಲ ಎಂಬು ಸ್ವತಃ ಶಿವರಾಮ್ ಹೆಬ್ಬಾರ್ ಅವರೇ ಹೇಳಿದ ನಂತರವೂ ಅದರ ‘ಮಹತ್ವ’ ಕಡಿಮೆಯಾಗಲಿಲ್ಲ.

ಎಲ್ಲಾ ರಾಜಕೀಯ ಪಕ್ಷಗಳು ತಮಗೆ ಬೇಕಾದಂಥ ಫಲಿತಾಂಶವನ್ನು ಪಡೆಯುವುದಕ್ಕೆ ಬೇಕಾಗಿ ‘ನಂಬಿಸುವಂಥ ಸುಳ್ಳು’ಗಳನ್ನು ಹೇಳುವುದನ್ನು ಒಪ್ಪಿಕೊಂಡಿರುವುದನ್ನು ಮೇಲಿನ ಎರಡೂ ಉದಾಹರಣೆಗಳು ಸಾಕ್ಷಿಯಾಗುತ್ತವೆ. ಅಂದರೆ ಸುಳ್ಳು ಹೇಳುವ ವಿಷಯದಲ್ಲಿ ಎಲ್ಲರಿಗೂ ಒಂದು ಬಗೆಯ ಒಮ್ಮತವಿದೆ ಎಂಬಂತೆ ಕಾಣಿಸುತ್ತದೆ. ಅರ್ಥಾತ್ ವಾಸ್ತವಕ್ಕೆ ಮತದಾರನನ್ನು ಮುಖಾಮುಖಿಯಾಗಿಸಬಾರದು ಎಂಬ ವಿಚಾರದಲ್ಲಿ ಸ್ಪರ್ಧಾಕಣದಲ್ಲಿ ಪ್ರಮುಖ ಹುರಿಯಾಳುಗಳಿಗೆಲ್ಲಾ ಸಹಮತವಿದೆ.

ಈ ಸಹಮತಕ್ಕೂ ಒಂದು ಕಾರಣವಿದೆ. ಚುನಾವಣೆ ಎಂಬುದು ಕೇವಲ ರಾಜಕಾರಣಿಗಳಿಗಷ್ಟೇ ಸೀಮಿತವಾಗಿರುವ ಸಂಗತಿಯಾಗಿ ಉಳಿದಿಲ್ಲ. ಇದೊಂದು ದೊಡ್ಡ ವ್ಯವಹಾರ. ಇದನ್ನು ನಡೆಸುವ ‘ತಜ್ಞತೆ’ ಇರುವ ಕಂಪೆನಿಗಳಿವೆ. ಈ ತಜ್ಞರಲ್ಲಿ ಒಬ್ಬನಾದ ಕೇಂಬ್ರಿಜ್ ಅನಲಿಟಿಕಾದ ಅಲೆಕ್ಸಾಂಡರ್ ನಿಕ್ಸ್‌ನ ಮಟ್ಟಿಗೆ ಪ್ರಚಾರ ಎಂದರೆ ‘ಕೇಳಿದಾಗ ಜನ ನಂಬುವಂಥ ವಿಚಾರಗಳಿದ್ದರೆ ಸಾಕು. ಅವು ನಿಜವೇ ಆಗಿರಬೇಕಿಲ್ಲ’. ‘ಹಿಂದೂಗಳ ಕಗ್ಗೊಲೆ’ ಮತ್ತು ‘ಶಾಸಕರ ಖರೀದಿ ದ್ವನಿ ಮುದ್ರಿಕೆ’ ಎರಡರಲ್ಲೂ ಬಳಕೆಯಾದದ್ದು ಇದುವೇ.

ತಜ್ಞರು ಪ್ರವೇಶ ಪಡೆದ ಮೇಲೆ ಪ್ರಚಾರ ಎಂಬುದು ಅಭ್ಯರ್ಥಿ ಮತ್ತು ಮತದಾರನ ನಡುವಣ ಸಂವಹನವಷ್ಟೇ ಅಲ್ಲ. ಮತದಾರರ ಪಟ್ಟಿ ಎಂಬುದು ಒಂದು ದೊಡ್ಡ ದತ್ತಸಂಚಯ. ಸ್ಥಳೀಯ ಕಾರ್ಯಕರ್ತರ ಬಳಿ ಇರುವ ಮನೆ ಮನೆಯ ಮಾಹಿತಿಯ ಜೊತೆಗೆ ಇದನ್ನು ಸೇರಿಸಿ ವಿಶ್ಲೇಷಿಸಿ ಎಲ್ಲಿ ಯಾವ ಮಾಹಿತಿ ಯಾವ ಸ್ವರೂಪದಲ್ಲಿ ಯಾರಿಗೆ ಯಾವ ಹೊತ್ತಿಗೆ ತಲುಪಿಸಬೇಕು ಎಂಬುದನ್ನು ಕೇಂದ್ರೀಕೃತವಾಗಿ ನಿರ್ಧರಿಸುವ ವ್ಯವಸ್ಥೆಯನ್ನು ಕೆಲವು ರಾಜಕೀಯ ಪಕ್ಷಗಳು ಕರಗತ ಮಾಡಿಕೊಂಡಿವೆ. ಇದನ್ನು ಕಾನೂನು ತಜ್ಞ ಸುಧೀರ್ ಕೃಷ್ಣಸ್ವಾಮಿ ‘ಬೃಹತ್ ಚುನಾವಣಾ ಯಂತ್ರ’ ಎಂದು ಕರೆಯುತ್ತಾರೆ. ಇಲ್ಲಿ ಯಂತ್ರವೆಂಬುದು ರೂಪಕವಾಗಿ ಎಷ್ಟು ನಿಜವೋ ಹಾಗೆಯೇ ಅದು ಕಾರ್ಯನಿರ್ವಹಿಸುವ ಮಾದರಿಯಲ್ಲೂ ಜನ. ತನಗೆ ಬೇಕಾದ ಆಯ್ಕೆಯನ್ನು ಉತ್ಪಾದಿಸುವುದಕ್ಕೆ ಕೆಲಸ ಮಾಡುವ ಯಂತ್ರ. ಈ ಯಂತ್ರ ಹುಟ್ಟುವ ತನಕವೂ ತಾತ್ವಿಕವಾಗಿಯಾದರೂ ಚುನಾವಣಾ ಪ್ರಚಾರದವೆಂದರೆ ರಾಜಕೀಯ ಪಕ್ಷಗಳು  ಮತದಾರನ ಎದುರು ತಮ್ಮ ಸಾಧನೆ ಮತ್ತು ಉದ್ದೇಶಿತ ಗುರಿಗಳನ್ನು ಮಂಡಿಸುವ ಪ್ರಕ್ರಿಯೆ ಎಂದು ಭಾವಿಸಲಾಗಿತ್ತು. ಮತದಾನದ ಹಿಂದಿನ ದಿನ ದುಡ್ಡು ಹಂಚುವುದಿದ್ದರೂ ಅದು ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಿತ್ತು. ಆದರೆ ಈಗಿನ ಚುನಾವಣಾ ಯಂತ್ರ ತಪ್ಪು ಮಾಹಿತಿಗಳ ಮೂಲಕ ಪ್ರತೀ ಮತದಾರನ ನಿರ್ಧಾರವನ್ನು ಪ್ರಭಾವಿಸುವಷ್ಟು ಶಕ್ತಿಶಾಲಿ.

ಇದನ್ನು ಹೇಗೆ ಎದುರಿಸಬೇಕು ಎಂಬ ಪ್ರಶ್ನೆ ಸಹಜ. ಇದಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಕೋಫಿ ಅನ್ನಾನ್ ಒಂದು ಉತ್ತರವನ್ನು ನೀಡಿದ್ದಾರೆ. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಜರ್ಮನಿ ಮ್ಯೂನಿಚ್‌ನಲ್ಲಿ ನಡೆದ ಸೆಕ್ಯುರಿಟಿ ಕಾನ್ಫರೆನ್ಸ್ ಅವರು ಹೇಳಿದ ಮಾತುಗಳು ಹೊಸ ಸವಾಲನ್ನು ಎದುರಿಸುವುದಕ್ಕೆ ಮಾರ್ಗದರ್ಶಿಯಾಗಿವೆ:  ‘ತಂತ್ರಜ್ಞಾನ ನಿಂತ ನೀರಲ್ಲ. ಹಾಗೆಯೇ ಜನತಂತ್ರವೂ ನಿಂತ ನೀರಾಗಬಾರದು’. ಚುನಾವಣೆಯಲ್ಲಿ ಹಣಬಲ, ತೋಳ್ಬಲಗಳ ಕುರಿತಷ್ಟೇ ತಲೆಕೆಡಿಸಿಕೊಂಡಿರುವ ನಮ್ಮ ಚುನಾವಣಾ ಸುಧಾರಣೆಯ ಪರಿಕಲ್ಪನೆಗಳು ಇನ್ನಷ್ಟು ವಿಸ್ತರಿಸಿಕೊಂಡು 21ನೇ ಶತಮಾನದ ‘ತಪ್ಪು ಮಾಹಿತಿ ಹೊಂದಿರುವ ಮತದಾರನ’ನ್ನೂ ಸುಧಾರಣೆಯ ವ್ಯಾಪ್ತಿಗೆ ತೆಗೆದುಕೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.