7

ಕಡಿಮೆ ನೀರಿನಲ್ಲಿ ಬೆಳೆಯುವ ಹೊಸ ತರಕಾರಿ ತಳಿಗಳು

Published:
Updated:
ಕಡಿಮೆ ನೀರಿನಲ್ಲಿ ಬೆಳೆಯುವ ಹೊಸ ತರಕಾರಿ ತಳಿಗಳು

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯು ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿಯನ್ನು ಕೊಡುವ 'ಅರ್ಕಾ ನಿಖಿತ' ಮತ್ತು 'ಅರ್ಕಾ ಮಂಗಳ' ಎಂಬ ತರಕಾರಿ ತಳಿಗಳನ್ನು ಅಭಿವೃದ್ಧಿಪಡಿಸಿದೆ.

‘ಅರ್ಕಾ ನಿಖಿತ ಎನ್ನುವುದು ಬೆಂಡೇಕಾಯಿ ಬೆಳೆ. ಸಾಮಾನ್ಯವಾಗಿ ಬೆಂಡೇಕಾಯಿ ಗಿಡ ಹರಡಿಕೊಂಡು ಬೆಳೆಯುತ್ತದೆ. ಹೆಚ್ಚಿನ ನೀರಿನ ಅವಶ್ಯಕತೆ ಇದಕ್ಕೆ ಇದೆ. ಆದರೆ, ನಾವು ಅಭಿವೃದ್ಧಿಪಡಿಸಿರುವ ಅರ್ಕಾ ನಿಖಿತ ತಳಿಗೆ 45 ಡಿಗ್ರಿಯಲ್ಲಿ ಮಾತ್ರ ಗಿಡವು ಹರಡಿಕೊಳ್ಳುತ್ತದೆ. ಈ ಕಾರಣಕ್ಕೆ ಗಿಡ ಬೆಳೆಯಲು ಹೆಚ್ಚಿನ ಜಾಗದ ಅವಶ್ಯಕತೆ ಇರುವುದಿಲ್ಲ. 45 ದಿನಗಳಲ್ಲೇ ಫಲ ನೀಡುತ್ತದೆ. ಒಂದು ಗಿಡದಲ್ಲಿ ಹತ್ತರಿಂದ ಹದಿನೈದು ಕೆ.ಜಿ.ಯಷ್ಟು ಫಲವನ್ನು ನಿರೀಕ್ಷೆ ಮಾಡಬಹುದು. ಕಡಿಮೆ ನೀರು ಸಾಕು’ ಎಂದು ಈ ತಳಿಯನ್ನು ಅಭಿವೃದ್ಧಿಪಡಿಸಿರುವ ಡಾ.ಎಂ. ಪಿಚೈಮುತ್ತು ಹೇಳಿದರು.

‘ಅರ್ಕಾ ಮಂಗಳ ಅಲಸಂದೆ ತಳಿಯಾಗಿದೆ. ಇದನ್ನು ಮೀಟರ್ ಅಲಸಂದೆ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಇದಕ್ಕೆ ಅತಿ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯ ಅಲಸಂದೆಯಲ್ಲಿ ನಮಗೆ ಎಂಟರಿಂದ ಹತ್ತು ಕಾಳುಗಳು ಸಿಗಬಹುದು. ಆದರೆ, ನಾವು ಅಭಿವೃದ್ಧಿಪಡಿಸಿರುವ ಈ ತಳಿಯಲ್ಲಿ ಒಬ್ಬ ರೈತನಿಗೆ ಸುಮಾರು ಇಪ್ಪತ್ತರಿಂದ ಮೂವತ್ತು ಕಾಳುಗಳು ಸಿಗುತ್ತದೆ’ ಎಂದು ಎಂದು ಈ ತಳಿಯನ್ನು ಅಭಿವೃದ್ಧಿ ಮಾಡಿರುವ ಡಾ.ಅಘೋರ ತಿಳಿಸಿದರು.

ತರಕಾರಿ ತಳಿಗಳ ಸಂಶೋಧನೆ ವಿಭಾಗದ ವಿಜ್ಞಾನಿ ಡಾ.ಸೆಂಥಿಲ್ ಕುಮಾರ್, ‘ಕಡಿಮೆ ನೀರಿನಲ್ಲಿ ಸಾಮಾನ್ಯವಾಗಿ ನುಗ್ಗೆಕಾಯಿ, ಅಲಸಂದೆ, ಗೋರಿಕಾಯಿ, ಹೀರೆಕಾಯಿ ಬೆಳೆಗಳನ್ನು ಬೆಳೆಯಬಹುದು. ಹರಿಯುವ ನದಿಗಳ ಪಕ್ಕದಲ್ಲಿ ಮಣ್ಣಿನ ತೇವಾಂಶ ಇರುತ್ತದೆ. ಆ ತೇವಾಂಶದಲ್ಲಿ ತರಕಾರಿಗಳನ್ನು ಬೆಳೆಯುವ ವಿಧಾನಗಳ ಸಂಶೋಧನೆ ನಡೆಯುತ್ತಿದ್ದು ಅದು ಫಲಕಾರಿಯಾದರೆ ಕಡಿಮೆ ನೀರಿನಲ್ಲಿ ಹೆಚ್ಚಿನ ಪ್ರಮಾಣದ ತರಕಾರಿಗಳು ನಮಗೆ ಲಭ್ಯವಾಗುತ್ತದೆ’ ಎಂದರು.

ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ ನಿರ್ದೇಶಕ ಎಂ.ಅರ್. ದಿನೇಶ್, ‘ಎಲ್ಲ ರೈತರು ಕೊಳವೆಬಾವಿಯ ಅನುಕೂಲತೆಯನ್ನು

ಹೊಂದಿರುವುದಿಲ್ಲ. ಬರಪೀಡಿತ ಪ್ರದೇಶಗಳ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ತಳಿಗಳನ್ನು ಅವಿಷ್ಕಾರ ಮಾಡಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry