4
ಎರಡು ಬೋಗಿಯಲ್ಲಿದ್ದ 37 ಜಿಲ್ಲಾಧಿಕಾರಿಗಳು ಪ್ರಾಣಾಪಾಯದಿಂದ ಪಾರು

ಆಂಧ್ರಪ್ರದೇಶ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ

Published:
Updated:
ಆಂಧ್ರಪ್ರದೇಶ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ

ಗ್ವಾಲಿಯರ್‌ (ಮಧ್ಯಪ್ರದೇಶ): ನವದೆಹಲಿಯಿಂದ ವಿಶಾಖಪಟ್ಟಣಕ್ಕೆ ಹೋಗುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹತ್ತಿಕೊಂಡಿದ್ದು, ಇದರಲ್ಲಿದ್ದ 37 ಜಿಲ್ಲಾಧಿಕಾರಿಗಳು ಮತ್ತು ಪ್ರಯಾಣಿಕರು ಅದೃಷ್ಟವಶಾತ್‌ ಪಾರಾಗಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನ ಬಿರ್ಲಾ ನಗರ ನಿಲ್ದಾಣ ಸಮೀ‍ಪ ರೈಲು ಬಂದಾಗ ಬೆಳಿಗ್ಗೆ 11.45ರ ಸುಮಾರಿಗೆ ಹವಾನಿಯಂತ್ರಿತ ಬೋಗಿ ಸಂಖ್ಯೆ 6ರಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ನಂತರ ಸಂಖ್ಯೆ 7ರ ಬೋಗಿಗೂ ಬೆಂಕಿ ಆವರಿಸಿದೆ.

ತುರ್ತು ಸಂದರ್ಭದಲ್ಲಿ ಬಳಸುವ ಚೈನ್‌ ತಕ್ಷಣ ಎಳೆದು ರೈಲು ನಿಲ್ಲಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ (ಸಿಪಿಆರ್‌ಒ) ಗೌರವ್‌ ಕೃಷ್ಣ ಬನ್ಸಾಲ್‌ ತಿಳಿಸಿದ್ದಾರೆ.

‘ಬೆಂಕಿಯಿಂದ ಹಾನಿಯಾಗಿರುವ ಎರಡು ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಿ ಪ್ರಯಾಣಿಕರನ್ನು ಮತ್ತೊಂದು ಬೋಗಿಗೆ ಸ್ಥಳಾಂತರಿಸಿ, ರೈಲು ಮುಂದೆ ಚಲಿಸಲು ಅನುವು ಮಾಡಿಕೊಡಲಾಯಿತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನವನೀತ್‌ ಭಾಸಿನ್‌ ತಿಳಿಸಿದರು.

‘ಜಿಲ್ಲಾಧಿಕಾರಿಗಳು ತರಬೇತಿ ಮುಗಿಸಿಕೊಂಡು ಈ ರೈಲಿನಲ್ಲಿ ವಾಪಸ್‌ ಬರುತ್ತಿದ್ದರು. ಬೆಂಕಿ ಹೇಗೆ ಹೊತ್ತಿತು ಎಂಬುದು ಇನ್ನೂ ತಿಳಿದುಬಂದಿಲ್ಲ. ಅಗ್ನಿ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಶಾರ್ಟ್‌ ಸರ್ಕಿಟ್‌ ಅಥವಾ ಬೇರೆ ಇನ್ಯಾವ ಕಾರಣದಿಂದ ಬೆಂಕಿ ಹತ್ತಿರಬಹುದು ಎನ್ನುವುದನ್ನು ಪತ್ತೆ ಹಚ್ಚಲು ತನಿಖೆಗೆ ಆದೇಶಿಸಲಾಗಿದೆ’ ಎಂದು ರೈಲ್ವೆ ಮಂಡಳಿಯ ಸಾರ್ವಜನಿಕ ಸಂಪರ್ಕ ನಿರ್ದೇಶಕ ವೇದ ಪ್ರಕಾಶ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry