‘ಸ್ವಾವಲಂಬಿ ಬದುಕಿಗೆ ಸಂಘಟನೆ ಪೂರಕ’

7

‘ಸ್ವಾವಲಂಬಿ ಬದುಕಿಗೆ ಸಂಘಟನೆ ಪೂರಕ’

Published:
Updated:
‘ಸ್ವಾವಲಂಬಿ ಬದುಕಿಗೆ ಸಂಘಟನೆ ಪೂರಕ’

ಚಿಕ್ಕೋಡಿ: ‘ಗ್ರಾಮೀಣ ಮಹಿಳೆಯರು ಕೇವಲ ಮನೆಗೆಲಸಕ್ಕೆ ಸೀಮಿತವಾಗದೇ ಸಂಘಟನೆ, ಶಿಕ್ಷಣದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು’ ಎಂದು ರಾಯಚೂರು ಜಿಲ್ಲೆ ಲಿಂಗಸುಗೂರಿನ ಸ್ವಾಭಿಮಾನಿ ಜನಪರ ವಿವಿಧೋದ್ದೇಶಗಳ ಸಹಕಾರ ಸಂಘದ ಕಾರ್ಯನಿರ್ವಾಹಕಿ ಮೋಕ್ಷಮ್ಮ ಹೇಳಿದರು.

ಪಟ್ಟಣದ ರಾಜೀವನಗರದಲ್ಲಿ ಸೋಮವಾರ ವಿಮುಕ್ತಿ ಚಾರಿಟಬಲ್ ಟ್ರಸ್ಟ್‌ ಮತ್ತು ವಿಮುಕ್ತಿ ಮೈತ್ರಿ ಕೋ–ಆಪ್ ಸೊಸೈಟಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಮೈತ್ರಿ ಹಬ್ಬ–2018’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿ ಕ್ಷೇತ್ರದಲ್ಲೂ ಮಹಿಳೆ ಸಬಲಳಾಗಿದ್ದಾಳೆ. ಸಂಘ–ಸಂಸ್ಥೆಗಳ ಮೂಲಕ ಬದುಕು ಕಟ್ಟಿಕೊಳ್ಳಲು ಮಹಿಳೆಯರು ಆದಾಯ ಮೂಲಗಳನ್ನು ಕಂಡು ಕೊಳ್ಳಬೇಕು. ಸಂಘಟನೆಗೆ ಸರ್ಕಾರದಿಂದ ದೊರೆಯುವ ಮೂಲ ಸೌಕರ್ಯ ಪಡೆದುಕೊಳ್ಳಬೇಕು. ಲಿಂಗಸುಗೂರಿನ ಸ್ವಾಭಿಮಾನಿ ಜನಪರ ವಿವಿಧೋದ್ದೇಶಗಳ ಸಹಕಾರ ಸಂಘವು ದೇವದಾಸಿ ಪದ್ಧತಿ ನಿರ್ಮೂಲನೆ ಜೊತೆಗೆ ಬಡ, ಅನಾಥ ಮಕ್ಕಳಿಗೆ ಶಿಕ್ಷಣ ದೊರಕಿಸುವ ಕಾರ್ಯ ಮಾಡುತ್ತಿದೆ’ ಎಂದರು.

’ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಕ್ಕೂ ನಿರಂತರ ಹೋರಾಟ ನಡೆಸುತ್ತಿದ್ದು, ಎಲ್ಲ ಮಹಿಳಾ ಸಂಘಟನೆಗಳೂ ಈ ಕಾರ್ಯದಲ್ಲಿ ಕೈ ಜೋಡಿಸಬೇಕು’ ಎಂದು ಮನವಿ ಮಾಡಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ವಿಮುಕ್ತಿ ಮೈತ್ರಿ ಕೋ–ಆಪ್ ಸೊಸೈಟಿ ಅಧ್ಯಕ್ಷೆ ಹೇಮಾ ದೊಡಮನಿ ಮಾತನಾಡಿ, ‘ಚಿಕ್ಕೋಡಿ ತಾಲ್ಲೂಕಿನಲ್ಲಿ 175 ಸ್ವ–ಸಹಾಯ ಸಂಘಗಳಿದ್ದು, ಎರಡು ಸಾವಿರ ಮಹಿಳೆಯರು ವಿವಿಧ ಯೋಜನೆಗಳ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ’ ಎಂದರು.

ಉಜಿರೆಯ ವಿಮುಕ್ತಿ ಮಹಿಳಾ ಒಕ್ಕೂಟದ ಶೀಲಾ ಎಂ.ಕೆ., ಬಣಕಲ್‌ನ ವಿಮುಕ್ತಿ ಮಹಿಳಾ ಒಕ್ಕೂಟದ ಯಶೋಧಾ ಮತ್ತು ಚಿಕ್ಕೋಡಿ ಮಹಿಳಾ ಒಕ್ಕೂಟದ ಅರುಣಾ ಲಿಂಬಾಳೆ ಮಾತನಾಡಿದರು.

ಸಂಸ್ಥೆಯ ಸಾಧಕಿಯರಾದ ಬೆಳಕೂಡದ ಸೋನವ್ವ ಅರಭಾಂವಿ, ಮಲಿಕವಾಡದ ಅನುಸಯಾ ಕೋಳಿ ಮತ್ತು ಮಾಂಜರಿವಾಡಿಯ ರಾಜಶ್ರೀ ಜಾಧವ, ಚಿಕ್ಕೋಡಿಯ ವಿಮುಕ್ತಿ ಸೇವಾ ಸಂಸ್ಥೆ ನಿರ್ದೇಶಕ ಫಾದರ್ ಅರುಣ್ ಲೋಬೋ, ಬಸವರಾಜ ಜೈನಾಪುರೆ ಹಾಗೂ ಗೀತಾ ಮುಗಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry