ಕಾಯಕಲ್ಪಕ್ಕೆ ಕಾಯುತ್ತಿದೆ ಮಿರಿಯಾಣ ಕೆರೆ

7
ಸಂಪೂರ್ಣ ಹೂಳು ತುಂಬಿಕೊಂಡಿರುವ ಕೆರೆ

ಕಾಯಕಲ್ಪಕ್ಕೆ ಕಾಯುತ್ತಿದೆ ಮಿರಿಯಾಣ ಕೆರೆ

Published:
Updated:
ಕಾಯಕಲ್ಪಕ್ಕೆ ಕಾಯುತ್ತಿದೆ ಮಿರಿಯಾಣ ಕೆರೆ

ಚಿಂಚೋಳಿ: ತಾಲ್ಲೂಕಿನ ಮಿರಿಯಾಣದ ಪಾಪನಾಶ ಮಂದಿರದ ಎದುರುಗಡೆ ಇರುವ ಕೆರೆ ಸಂಪೂರ್ಣ ಹೂಳು ತುಂಬಿಕೊಂಡಿದೆ. ಇದರಿಂದ ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ. ಮಳೆಗಾಲದಲ್ಲಿ ಮಾತ್ರ ಒಂದಿಷ್ಟು ನೀರು ಸಂಗ್ರಹವಾಗುತ್ತದೆ. ಆದರೆ ಹೂಳು ತುಂಬಿ (ಕೃಷಿ ಭೂಮಿ) ಹೊಲದಂತೆ ಕಾಣುವ ಕೆರೆ ಕಾಯಕಲ್ಪಕ್ಕೆ ಕಾಯುತ್ತಿದೆ.

ಚಿಂಚೋಳಿ ತಾಂಡೂರು ಅಂತರ ರಾಜ್ಯ ರಸ್ತೆ ಬದಿಯಲ್ಲಿರುವ ವಿಶಾಲವಾದ ಕೆರೆಯನ್ನು ನೋಡಿದರೆ ಅದು ತನ್ನ ಕೊನೆಯ ದಿನ ಎಣಿಸುತ್ತಿರುವಂತೆ ಗೋಚರವಾಗುತ್ತದೆ. ಸಣ್ಣ ನೀರಾವರಿ ಇಲಾಖೆಯ ಈ ಕೆರೆಯನ್ನು ಪಂಚಾಯತ ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗದ ಅಧೀನಕ್ಕೆ ವಹಿಸಲಾಗಿದೆ. ಸಂಪೂರ್ಣ ಹೂಳು ತುಂಬಿದ್ದರಿಂದ ಪ್ರಸ್ತುತ ನೀರಾವರಿಗೆ ಈ ಕೆರೆ ಬಳಕೆಯಾಗುತ್ತಿಲ್ಲ.

ಕೆರೆಯಲ್ಲಿ ಹೂಳು ತುಂಬಿದ್ದು ಕರಿ ಮಣ್ಣು ಕಾಣಿಸುತ್ತಿದೆ. ಜತೆಗೆ ಕೆರೆಯ ಸುತ್ತಲೂ ಮತ್ತು ಒಳಗಡೆ ಜಾಲಿ  ಗಿಡಗಂಟಿ ಬೆಳೆದು ನಿಂತಿವೆ. ಕೆರೆಯಲ್ಲಿ ತುಂಬಿರುವ ಹೂಳು ತೆಗೆಸಿ ಕೆರೆ ನವೀಕರಿಸಿದರೆ ಕೆರೆ ವರವಾಗಿ ಪರಿಣಮಿಸಲಿದೆ.

ಸುತ್ತಲೂ ಬಂಡ್‌ ಹಾಳಾಗಿದ್ದು, ಬಂಡ್ ಮತ್ತು ಕೆರೆ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ಸರ್ಕಾರ ಪ್ರತಿ ಗ್ರಾಮಕ್ಕೊಂದು ಕೆರೆ ನಿರ್ಮಿಸಬೇಕೆಂಬ ಆಲೋಚನೆಯಲ್ಲಿದೆ. ಆದರೆ ಇದ್ದ ಕೆರೆಗಳನ್ನು ಮತ್ತು ನದಿಗಳನ್ನು ಸಂರಕ್ಷಿಸಿ ವ್ಯರ್ಥ ಪೋಲಾಗುವ ಮಳೆ ನೀರು ಬಳಸಿಕೊಳ್ಳಲು ಹಾಗೂ ಅಂತರ್ಜಲ ವೃದ್ಧಿಗೆ ಮುಂದಾಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಮಿರಿಯಾಣದಲ್ಲಿಯೂ ಕುಡಿವ ನೀರಿಗೆ ತತ್ವಾರ ತಪ್ಪಿಲ್ಲ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಲು ಕೆರೆಗೆ ಕಾಯಕಲ್ಪ ನೀಡುವುದು ಅನಿವಾರ್ಯ. 2016– 17ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆರೆಯ ಒಂದಿಷ್ಟು ಹೂಳು ತೆಗೆಯಲಾಗಿದೆ. ಈಗ ಅದು ಮತ್ತೆ ಭರ್ತಿಯಾಗಿದೆ. ಸಮಗ್ರವಾಗಿ ಯೋಜನೆ ರೂಪಿಸಿ ಪ್ರತಿವರ್ಷ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಎರಡು ಕೆರೆಗಳಂತೆ ಸರ್ಕಾರ ಕಾಯಕಲ್ಪ ನೀಡಬೇಕು ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಸದಸ್ಯ ಜಗನ್ನಾಥ ಈದಲಾಯಿ.

ಕೆರೆಗಳ ಹೂಳು ತೆಗೆದು ಕಾಯಕಲ್ಪ ನೀಡಲು ಯೋಜನೆ ರೂಪಿಸಿ ಅಗತ್ಯ ಅನುದಾನ ನೀಡಲು ಸರ್ಕಾರ ಮುಂದಾಗಬೇಕು. ಈ ಮೂಲಕ ಕೆರೆಗಳ ಪುನರುಜ್ಜೀವನಕ್ಕೆ ಇಚ್ಛಾ ಶಕ್ತಿಯಿಂದ ಶ್ರಮಿಸಬೇಕೆಂದು ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದ್ದಾರೆ.

–ಜಗನ್ನಾಥ ಶೇರಿಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry