ಹಾಸನದ ಹುಡುಗ ಈಗ ರಾಮನಗರದ ಮಣ್ಣಿನ ಮಗ

7
‘ಬಂಗಾರದ ಮನುಷ್ಯ’ ಸಿನಿಮಾದಿಂದ ಪ್ರೇರಣೆ; ಕೇತಿಗಾನಹಳ್ಳಿ ಹೊಲದಲ್ಲಿ ಕೃಷಿಯ ಒಡನಾಟ

ಹಾಸನದ ಹುಡುಗ ಈಗ ರಾಮನಗರದ ಮಣ್ಣಿನ ಮಗ

Published:
Updated:
ಹಾಸನದ ಹುಡುಗ ಈಗ ರಾಮನಗರದ ಮಣ್ಣಿನ ಮಗ

ರಾಮನಗರ: ‘ಹಾಸನದ ಹುಡುಗ’ ರಾಮನಗರದ ಮಣ್ಣಿನಲ್ಲಿ ಬೆವರು ಹರಿಸುತ್ತಾ, ಇಲ್ಲಿನ ಜನರ ಪಾಲಿಗೆ ನಿಜವಾದ ‘ಮಣ್ಣಿನ ಮಗ’ನಾದ ಕಥೆ ಇದು.

ಈ ಕಥೆಯ ನಾಯಕ ರಾಜ್ಯದ ಈಗಿನ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ. ‘ರಾಮನಗರ ನನ್ನ ಕರ್ಮಭೂಮಿ’ ಎಂದು ಹೋದಲ್ಲೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವ ಅವರ ಮಾತಿನ ಹಿಂದೆ ನಿಜವಾದ ಅರ್ಥವಿದೆ. ಇಲ್ಲಿ ಕೃಷಿ ಹಾಗೂ ರಾಜಕೀಯ ಕೃಷಿ ಎರಡನ್ನೂ ಅವರು ಛಲ ಬಿಡದೇ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಅವು 1980ರ ದಶಕದ ಆರಂಭದ ದಿನಗಳು. ಆಗಿನ್ನೂ ಕುಮಾರಸ್ವಾಮಿ ಎಂದರೆ ಯಾರು ಎಂಬುದು ರಾಮನಗರದ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಚಲನಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಅವರು, ಡಾ. ರಾಜ್‌ಕುಮಾರ್‌ ಅಭಿನಯದ ‘ಬಂಗಾರದ ಮನುಷ್ಯ’ ಸಿನಿಮಾವನ್ನು 30ಕ್ಕೂ ಹೆಚ್ಚು ಬಾರಿ ನೋಡಿ ಪ್ರೇರಣೆಗೊಂಡು, ಮನಸ್ಸಿನಲ್ಲಿ ಒಕ್ಕಲುತನದ ಕನಸಿನ ಬೀಜ ಬಿತ್ತಿಕೊಂಡರು.

ಕೃಷಿಯ ಬಗ್ಗೆ ಆಸಕ್ತಿ ಹೊಂದಿ ಜಮೀನಿನ ಹುಡುಕಾಟದಲ್ಲಿದ್ದರು. ರಾಮನಗರ ತಾಲ್ಲೂಕಿನ ಕೇತಿಗಾನಹಳ್ಳಿಯ ಹೊಲ ಕಣ್ಮನ ಸೆಳೆಯಿತು. ಸ್ವಂತ ದುಡಿಮೆಯಿಂದ ಸಂಪಾದಿಸಿದ ಹಣ ತಂದು ಜಮೀನು ಕೊಂಡರು. ತಮ್ಮದೇ ಪಡೆ ಕಟ್ಟಿಕೊಂಡು ಹೊಲ ಉತ್ತರು. ಸಸಿ ನೆಟ್ಟರು. ಇಂದು ಅವು ಮುಗಿಲೆತ್ತರಕ್ಕೆ ಬೆಳೆದು ಫಲ ನೀಡುತ್ತಿವೆ.

ಆರಂಭದಲ್ಲಿ ಮಹೀಂದ್ರ ಜೀಪ್‌ ಇಟ್ಟುಕೊಂಡಿದ್ದ ಕುಮಾರಸ್ವಾಮಿ, ಹೊಲದಲ್ಲಿ ಬೆಳೆದ ಬಾಳೆ ಗೊನೆಯನ್ನು ಅದಕ್ಕೆ ತುಂಬುತ್ತಿದ್ದುದನ್ನು, ಸ್ವತಃ ತಾವೇ ಟ್ರ್ಯಾಕ್ಟರ್ ಏರಿ ಹೊಲ ಉತ್ತಿದ್ದನ್ನು ಇಲ್ಲಿನ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ‘ಬೆಳಿಗ್ಗೆ 8–9 ಗಂಟೆಗೆಲ್ಲ ಬೆಂಗಳೂರಿನಿಂದ ಜೀಪ್ ಇಲ್ಲವೇ ಮಾರುತಿ–800 ಕಾರಿನಲ್ಲಿ ಬರುತ್ತಿದ್ದ ಅವರು ರಾತ್ರಿ 8–9ರವರೆಗೂ ಇಲ್ಲಿಯೇ ಕಾಲ ಕಳೆಯುತ್ತಿದ್ದರು. ತೋಟದೊಳಗಿನ ಆಲದ ಮರದ ಅಡಿ ಕುರ್ಚಿ ಹಾಕಿ ಕುಳಿತು ತಣ್ಣನೆ ಮಾತುಕತೆಯಲ್ಲಿ ತೊಡಗಿಕೊಳ್ಳುತ್ತಿದ್ದರು’ ಎಂದು ಅವರೊಂದಿಗಿನ ಒಡನಾಡಿ ಬಿಡದಿಯ ಹನುಮಂತೇಗೌಡ ನೆನಪು ಮಾಡಿಕೊಳ್ಳುತ್ತಾರೆ.

ಸುಮಾರು 48 ಎಕರೆ ವಿಸ್ತೀರ್ಣದಲ್ಲಿನ ತೋಟದಲ್ಲಿ ಎಚ್‌ಡಿಕೆ 1992–93ರ ವೇಳೆಗೆ ಹೊಸ ಮನೆ ಕಟ್ಟಿಸಿದರು. ಮುಂದೆ ಅಲ್ಲಿಯೇ ಸಾಕಷ್ಟು ದಿನ ಕಳೆದರು. ಈಗಲೂ ರಾಮನಗರಕ್ಕೆ ಬಂದಾಗಲೆಲ್ಲ ಈ ತೋಟದಲ್ಲಿ ಸಮಯ ಕಳೆದು ಹೋಗುತ್ತಾರೆ. ಹಳೆಯ ದಿನಗಳನ್ನು, ಹಿರಿಯ ಒಡನಾಡಿಗಳ ಜೊತೆ ಮೆಲುಕು ಹಾಕುತ್ತಾರೆ. ಕುಮಾರಸ್ವಾಮಿ ರಾಜಕೀಯದಲ್ಲಿ ಹೆಚ್ಚು ಮಗ್ನರಾದಂತೆಲ್ಲ ತೋಟ ಸೊರಗುತ್ತಾ ಬಂದಿದೆ.

ರಾಜಕೀಯದ ಏಳು–ಬೀಳು: ‘ಅಪ್ಪನಂತೆ ನನಗೆ ರಾಜಕೀಯ ಬೇಡ. ಸಿನಿಮಾ, ಕೃಷಿಯ ಒಡನಾಟವೇ ಸಾಕು’ ಎನ್ನುತ್ತಿದ್ದ ಕುಮಾರಸ್ವಾಮಿ, ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು 1996ರ ಲೋಕಸಭೆ ಚುನಾವಣೆ ಮೂಲಕ. ಆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಅವರು ತಂದೆ ಎಚ್‌.ಡಿ. ದೇವೇಗೌಡರ ಜೊತೆ ಸಂಸತ್ತಿನಲ್ಲಿ ಹೆಜ್ಜೆ ಇಟ್ಟರು.

ಆದರೆ 1999ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿನ ಹೀನಾಯ ಸೋಲು ಹಾಗೂ ಅದೇ ವರ್ಷ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಅವರ ಎದುರಿನ ಸೋಲು ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಿತು. ಆಗ ಕುಮಾರಸ್ವಾಮಿ ಬಂದು ಸೇರಿದ್ದು ಇದೇ ಕೇತಿಗಾನಹಳ್ಳಿಯ ತೋಟದ ಮನೆಗೆ.

‘ಸೋಲಿನ ಬೇಸರದಿಂದ ಎಷ್ಟೋ ದಿನ ಮನೆಯ ಹೊರಗಡೆ ಬರುತ್ತಿರಲಿಲ್ಲ. ಮಧ್ಯಾಹ್ನ 2ರ ನಂತರ ಈಚೆಗೆ ಇಣುಕುತ್ತಿದ್ದೆ. ಆಗಲೂ ಜನ ಇದೇ ಮನೆಯ ಜಗುಲಿಯ ಮೇಲೆ ಬಂದು ಕುಳಿತಿರುತ್ತಿದ್ದರು. ಯಾಕೆ ಬರುತ್ತೀರಿ ಎಂದು ಗದರಿದರೆ, ನಿಮ್ಮನ್ನು ನೋಡಿದರಷ್ಟೇ ನಮಗೆ ಸಮಾಧಾನ ಎನ್ನುತ್ತಿದ್ದರು. ಅಂತಹವರ ಕಾಳಜಿಯೇ ಮತ್ತೆ ರಾಜಕೀಯಕ್ಕೆ ಧುಮುಕಲು ಪ್ರೇರಣೆಯಾಯಿತು’ ಎಂದು ಕುಮಾರಸ್ವಾಮಿ ನೆನಪು ಮಾಡಿಕೊಳ್ಳುತ್ತಾರೆ.

ಛಲ ಬಿಡದ ಅವರು ಮುಂದೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ 2004ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ರಾಜಕೀಯ ಪುನರ್ಜನ್ಮ ಪಡೆದರು. ಅದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವೂ ಸಿಕ್ಕಿತು. ಅಲ್ಲಿಂದ ಶಾಸಕರಾಗಿ ಮುಂದುವರಿಯುತ್ತಾ ಬಂದಿದ್ದಾರೆ.

ಅಪ್ಪನಿಗೇ ರಾಜಕೀಯ ಪಾಠ!

ಜನತಾದಳದ ಮುಖಂಡರಾಗಿದ್ದ ಎಚ್‌.ಡಿ. ದೇವೇಗೌಡರು 1989ರ ವಿಧಾನಸಭೆ ಚುನಾವಣೆಯಲ್ಲಿ ತವರಿನಲ್ಲಿಯೇ ಮುಖಭಂಗ ಅನುಭವಿಸಿದ್ದರು. 1994ರ ಚುನಾವಣೆಗೆ ಅವರು ಕ್ಷೇತ್ರದ ಹುಡುಕಾಟದಲ್ಲಿ ಇದ್ದಾಗ, ರಾಮನಗರದಲ್ಲಿ ನಿಲ್ಲುವಂತೆ ಸೂಚಿಸಿದ್ದು ಕುಮಾರಸ್ವಾಮಿ.

ಫಲಿತಾಂಶದ ಹಿಂದಿನ ದಿನ ಗೌಡರು ಅಳುಕಿದಾಗ ‘ನೋಡುತ್ತಿರಿ, ರಾಮನಗರದ ಜನ ಕನಿಷ್ಠ 10 ಸಾವಿರ ಮತಗಳ ಅಂತರದಿಂದ ನಿಮ್ಮನ್ನು ಗೆಲ್ಲಿಸುತ್ತಾರೆ’ ಎಂದು ಎಚ್‌ಡಿಕೆ, ಅಪ್ಪನಿಗೆ ಧೈರ್ಯ ತುಂಬಿದರು. ಅವರ ಲೆಕ್ಕಾಚಾರ ನಿಜವಾಗಿತ್ತು. ಹೆಚ್ಚೂ ಕಡಿಮೆ ಅದೇ ಅಂತರದಿಂದ ಗೆದ್ದ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಭಾವನಾತ್ಮಕ ನಂಟು

‘ನಾನು ಸತ್ತ ನಂತರ ಮಣ್ಣಾಗುವುದು ರಾಮನಗರದಲ್ಲಿಯೇ’ ಎಂದು ಕುಮಾರಸ್ವಾಮಿ ಸಾಕಷ್ಟು ಬಾರಿ ಭಾವುಕರಾಗಿ ಹೇಳಿದ್ದಾರೆ. ಜಿಲ್ಲೆಯ ಜನರೊಂದಿಗೆ ಅವರು ರಾಜಕೀಯದ ಜೊತೆ ಭಾವನಾತ್ಮಕವಾಗಿಯೂ ನಂಟು ಬೆಳೆಸಿಕೊಂಡಿದ್ದಾರೆ. ಸಭೆ, ಸರ್ಕಾರಿ ಜಯಂತಿಗಳನ್ನು ಮರೆತರೂ ಚಾಮುಂಡಿ ಹಬ್ಬಕ್ಕೆ ಬರುವುದನ್ನು ತಪ್ಪಿಸುವುದಿಲ್ಲ. ಕ್ಷೇತ್ರದಲ್ಲಿ ಸಂಚರಿಸುವಾಗ ರಸ್ತೆ ಬದಿ ಯಾರೇ ನಿಂತು ಕೈ ಮುಗಿದರೂ ಕಾರು ನಿಲ್ಲಿಸಿ, ಅವರ ಕಷ್ಟಸುಖ ವಿಚಾರಿಸಿಕೊಳ್ಳುತ್ತಾರೆ. ಈ ಸರಳ ನಡೆ, ಸಜ್ಜನಿಕೆಯೇ ಅವರನ್ನು ಗೆಲ್ಲಿಸುತ್ತಾ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry