ಸಿಕ್ಕಾಗೆ ₹ 13 ಕೋಟಿ ಸಂಭಾವನೆ

7
ವೇತನ ಪಡೆಯದ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ

ಸಿಕ್ಕಾಗೆ ₹ 13 ಕೋಟಿ ಸಂಭಾವನೆ

Published:
Updated:
ಸಿಕ್ಕಾಗೆ ₹ 13 ಕೋಟಿ ಸಂಭಾವನೆ

ನವದೆಹಲಿ: ಸಂಸ್ಥೆಯ ಸ್ಥಾಪಕರ ಜತೆಗಿನ ಜಟಾಪಟಿಯ ಕಾರಣಕ್ಕೆ ಇನ್ಫೊಸಿಸ್‌ನ ಸಿಇಒ ಹುದ್ದೆಗೆ ರಾಜೀನಾಮೆ ನೀಡಿರುವ ವಿಶಾಲ್‌ ಸಿಕ್ಕಾ ಅವರು 2017–18ರ ಸಾಲಿನಲ್ಲಿ ₹ 12.92 ಕೋಟಿಗಳಷ್ಟು ವೇತನ ಪಡೆದುಕೊಂಡಿದ್ದಾರೆ.

2016–17ರಲ್ಲಿ ಸಿಕ್ಕಾ ಅವರು ₹ 16 ಕೋಟಿ ಸಂಭಾವನೆ ಪಡೆದುಕೊಂಡಿದ್ದರು ಎಂದು ಸಂಸ್ಥೆಯು ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡಿರುವ ಹಿಂದಿನ ವರ್ಷದ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಸಿಕ್ಕಾ ಅವರು 2017ರ ಆಗಸ್ಟ್‌ ತಿಂಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಂಸ್ಥೆಯ ಹಾಲಿ ಉದ್ಯೋಗಿಗಳ ಪೈಕಿ, ಅಧ್ಯಕ್ಷ ಮೋಹಿತ್ ಜೋಷಿ ಅವರು ಗರಿಷ್ಠ ಸಂಭಾವನೆ ಪಡೆದಿದ್ದಾರೆ. ಬ್ಯಾಂಕಿಂಗ್‌, ಹಣಕಾಸು ಸೇವೆ ಮತ್ತು ವಿಮೆ ವಹಿವಾಟಿನ ಮುಖ್ಯಸ್ಥರಾಗಿರುವ ಇವರು ₹ 10.31 ಕೋಟಿ ವೇತನ ಪಡೆದಿದ್ದಾರೆ. ಇದು ಹಿಂದಿನ ವರ್ಷದ ₹ 6.79 ಕೋಟಿಗೆ ಹೋಲಿಸಿದರೆ ಶೇ 51.8ರಷ್ಟು ಹೆಚ್ಚಳವಾಗಿದೆ.

ಜನವರಿ ತಿಂಗಳಲ್ಲಿ ಸಂಸ್ಥೆಯ ಸಿಇಒ ಆಗಿ ಅಧಿಕಾರವಹಿಸಿಕೊಂಡಿರುವ ಸಲೀಲ್‌ ಪಾರೇಖ್‌ ಅವರು 89 ದಿನಗಳಿಗೆ ₹ 3.98 ಕೋಟಿಗಳಷ್ಟು ವೇತನ ಪಡೆದಿದ್ದಾರೆ. ಸಂಸ್ಥೆಯ ಸಿಒಒ ಯು. ಬಿ. ಪ್ರವೀಣ್‌ ರಾವ್‌ ಅವರ ವೇತನವು ₹ 7.80 ಕೋಟಿಗಳಿಂದ ₹ 8.22 ಕೋಟಿಗೆ (ಶೇ 5ರಷ್ಟು) ಏರಿಕೆ ಕಂಡಿದೆ. ಇವರು ಸಿಕ್ಕಾ ರಾಜೀನಾಮೆ ನೀಡಿದ ನಂತರ ತಾತ್ಕಾಲಿಕವಾಗಿ ಸಿಇಒ ಹುದ್ದೆಯನ್ನೂ ನಿಭಾಯಿಸಿದ್ದರು.

ಸಿಎಫ್‌ಒ ಎಂ. ಡಿ. ರಂಗನಾಥ ಅವರ ವೇತನವು ₹ 4.75 ಕೋಟಿಗಳಿಂದ ₹ 7.98 ಕೋಟಿಗೆ (ಶೇ 68) ಏರಿಕೆಯಾಗಿದೆ.

ಇತ್ತೀಚೆಗೆ ಸಂಸ್ಥೆಯ ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡಿರುವ ರವಿ ವೆಂಕಟೇಶನ್‌ ಅವರ ವೇತನವು ಶೇ 38ರಷ್ಟು ಏರಿಕೆಯಾಗಿ ₹ 1.43 ಕೋಟಿಗೆ ತಲುಪಿತ್ತು. ನಿರ್ದೇಶಕ ಮಂಡಳಿ ಸದಸ್ಯೆ ಕಿರಣ್‌ ಮಜುಂದಾರ್‌ ಶಾ ಅವರು ₹ 1 ಕೋಟಿಯಷ್ಟು ಸಂಭಾವನೆ ಪಡೆದಿದ್ದಾರೆ.

ವೇತನ ನಿರಾಕರಿಸಿರುವ ನಂದನ್‌: ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷರಾಗಿರುವ ಸಹ ಸ್ಥಾಪಕ ನಂದನ್‌ ನಿಲೇಕಣಿ ಅವರು ತಮ್ಮ ಸೇವೆಗೆ ಪ್ರತಿಫಲವಾಗಿ ಯಾವುದೇ ಸಂಭಾವನೆ ಪಡೆಯುತ್ತಿಲ್ಲ.

‘ಹಿಂದಿನ ವರ್ಷ ಸಂಸ್ಥೆಯು ಸಾಕಷ್ಟು ಏರಿಳಿತಗಳನ್ನು ಕಂಡಿತು. ಆ ಪ್ರತಿಕೂಲತೆಗಳನ್ನೆಲ್ಲ ಸಮರ್ಥವಾಗಿ ಎದುರಿಸಲಾಗಿತ್ತು. ವಹಿವಾಟು ಈಗ ಸ್ಥಿರಗೊಂಡಿದೆ. ಸಮರ್ಥ ನಾಯಕತ್ವವು ಸಂಸ್ಥೆಯನ್ನು ಗುರಿ ಎಡೆಗೆ ಮುನ್ನಡೆಸಿಕೊಂಡು ಹೋಗುತ್ತಿದೆ’ ಎಂದು ನಿಲೇಕಣಿ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry