ಮಹಾಮೈತ್ರಿಗೆ ನಾಂದಿ

7
ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಡಿಸಿಎಂ ಆಗಿ ಪರಮೇಶ್ವರ ಪ್ರಮಾಣ

ಮಹಾಮೈತ್ರಿಗೆ ನಾಂದಿ

Published:
Updated:
ಮಹಾಮೈತ್ರಿಗೆ ನಾಂದಿ

ಬೆಂಗಳೂರು: ‌ರಾಜ್ಯದಲ್ಲಿ ಶುರುವಾಗಿರುವ ‘ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ’ದ ಪರ್ವ, ರಾಷ್ಟ್ರ ರಾಜಕಾರಣದಲ್ಲಿ ‘ಮೋದಿ ಅಲೆ’ ವಿರುದ್ಧ ಈಜುವ ‘ರಾಜಕೀಯ ಮನ್ವಂತರ’ಕ್ಕೆ ವೇದಿಕೆಯಾಯಿತು. ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ ನಾಯಕರು, 2019ರ ಲೋಕಸಭಾ ಚುನಾವಣೆಗೆ ಕಹಳೆ ಮೊಳಗಿಸುವ ತಾಲೀಮು ನಡೆಸಿದರು.

ವರುಣ 45 ನಿಮಿಷ ಅಬ್ಬರಿಸಿ ಬೊಬ್ಬಿರಿದು ನಿರ್ಗಮಿಸಿದ ನಂತರ ವಿಧಾನಸೌಧದ ಎದುರು ಬುಧವಾರ ಸೇರಿದ್ದ ಭಾರಿ ಜನಸ್ತೋಮದ ಎದುರು ರಾಜ್ಯದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ ಪ್ರಮಾಣವಚನ ಸ್ವೀಕರಿಸಿದರು. 

ತೃತೀಯ ರಂಗದ ಹಳೆಯ ಒಡನಾಡಿಗಳನ್ನು ಒಂದೇ ವೇದಿಕೆಗೆ ಕರೆಸಿಕೊಳ್ಳುವಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಯಶಸ್ವಿಯಾದರು. ಕಾಂಗ್ರೆಸ್ ಮತ್ತು ವಿವಿಧ ಪ್ರಾದೇಶಿಕ ಪಕ್ಷಗಳ ಮುಖಂಡರು ಸಮಾರಂಭದಲ್ಲಿ ಭಾಗವಹಿಸುವ ಮೂಲಕ ‘ಮಹಾ ಮೈತ್ರಿ ಕೂಟ’ ರಚಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಎದುರಿಸುವ ಸಂಕಲ್ಪವನ್ನೂ ಮಾಡಿದರು.

ಪಟ್ಟಾಭಿಷಿಕ್ತರಾದ ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಇಡೀ ದೇಶವನ್ನು ಗೆಲ್ಲುವ ಉಮೇದಿನಲ್ಲಿರುವ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಅಮಿತ್‌ ಶಾ ಅವರ ಅಶ್ವಮೇಧ ಕುದುರೆಯನ್ನು ಕರ್ನಾಟಕದಲ್ಲಿ ಕಟ್ಟಿ ಹಾಕಿದ್ದೇವೆ’ ಎಂದು ಹೇಳುವ ಮೂಲಕ ‘ಯುದ್ಧ’ದ ಪಾಂಚಜನ್ಯ ಊದಿದರು.

ಮಗನಿಗೆ ಪಕ್ಷದ ಅಧ್ಯಕ್ಷತೆ ಬಿಟ್ಟು ಕೊಟ್ಟ ನಂತರ ರಾಜಕೀಯ ಚಟುವಟಿಕೆಯಿಂದ ದೂರವೇ ಉಳಿದಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಕಾರ್ಯಕ್ರಮದಲ್ಲಿ ಹುರುಪಿನಿಂದ ಭಾಗವಹಿಸಿದರು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ಹಣೆಗೆ ಹಣೆ ಅಂಟಿಸಿ ಪ್ರೀತಿ ತೋರಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ಆತ್ಮೀಯವಾಗಿ ಮಾತನಾಡಿಸಿದರು. ಒಂದು ಬಾರಿ ಬಲ ಪ್ರದರ್ಶನ ಮಾಡಿ ನಿರ್ಗಮಿಸಿದ ಅವರು, ಮಮತಾ, ಮಾಯಾವತಿ ಸಲುವಾಗಿ ಮತ್ತೆ ವೇದಿಕೆ ಮುಂದೆ ಬಂದು ಕೈಜೋಡಿಸಿ, ‘ಸ್ತ್ರೀಶಕ್ತಿ’ ಪ್ರದರ್ಶಿಸಿದರು.

ದಶಕಗಳಿಂದ ಪರಸ್ಪರ ವಿರೋಧಿಗಳಂತೆ ಬಡಿದಾಡಿಕೊಂಡಿದ್ದ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್ ಸಮಾರಂಭದ ಕೊನೆಯಲ್ಲಿ ಪರಸ್ಪರ ಕೈ ಹಿಡಿದು, ವಿಜಯದ ಸಂಕೇತ ತೋರಿಸಿ ಒಗ್ಗಟ್ಟು ಪ್ರದರ್ಶಿಸಿದರು.

ದೇವೇಗೌಡರ ಲವಲವಿಕೆ: ಸಂಜೆ 4.15ಕ್ಕೆ ಪತ್ನಿ ಚೆನ್ನಮ್ಮ ಜತೆಗೆ ವೇದಿಕೆಗೆ ಬಂದ ದೇವೇಗೌಡರು ಎಳೆಯ ವಯಸ್ಸಿನವರಂತೆ ಲವಲವಿಕೆಯಿಂದ ಓಡಾಡಿ ಅತಿಥಿಗಳ ಕುಶಲೋಪರಿ ವಿಚಾರಿಸಿದರು.  ಅಖಿಲೇಶ್‌ ಯಾದವ್‌ ಹಾಗೂ ತೇಜಸ್ವಿ ಯಾದವ್ ಅವರನ್ನು ಅಪ್ಪಿಕೊಂಡು ಬೆನ್ನು ತಟ್ಟಿದರು. ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಮುಖಂಡರಿಗೆ ಪರಿಚಯ ಮಾಡಿಕೊಟ್ಟರು.

ಏಳೇ ನಿಮಿಷಕ್ಕೆ ಮುಕ್ತಾಯ: ಬಿಳಿ ಬಣ್ಣದ ರೇಷ್ಮೆ ಪಂಚೆ ಹಾಗೂ ರೇಷ್ಮೆ ಅಂಗಿಯಲ್ಲಿ ಕಂಗೊಳಿಸುತ್ತಿದ್ದ ಕುಮಾರ ಸ್ವಾಮಿ ಪತ್ನಿ ಅನಿತಾ ಜತೆಗೆ ಸಂಜೆ 4.17ಕ್ಕೆ ವೇದಿಕೆಗೆ ಬಂದರು. ಆಗ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. 4.30ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಮಾಣವಚನ ಬೋಧಿಸುತ್ತಿದ್ದಂತೆ ಕಾರ್ಯಕರ್ತರು ‘ಕುಮಾರ ಪರ್ವ ಮತ್ತೆ ಶುರು’ ಎಂದು ಜಯಘೋಷ ಮೊಳಗಿಸಿದರು. ಕೇವಲ ಏಳು ನಿಮಿಷಗಳಲ್ಲಿ ಕಾರ್ಯಕ್ರಮ ಪೂರ್ಣಗೊಂಡಿತು. ಬಳಿಕ ಕುಮಾರಸ್ವಾಮಿ ಅವರು ತಾಯಿ ಚೆನ್ನಮ್ಮ ಕಾಲನ್ನು ಮುಟ್ಟಿ ನಮಸ್ಕರಿಸಿದರು.

ಪ್ರಮಾಣವಚನ ಸ್ವೀಕರಿಸಿದ ಅವರಿಗೆ ವೇದಿಕೆಯಲ್ಲೇ ಅಭಿನಂದನೆಯ ಸುರಿ ಮಳೆಯಾಯಿತು. ವಿವಿಧ ರಾಜ್ಯಗಳಿಂದ ಬಂದಿದ್ದ ಗಣ್ಯರೆಲ್ಲರೂ ನೂತನ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಅಭಿಮಾನಿಗಳು, ಕಾರ್ಯಕರ್ತರ ಉತ್ಸಾಹವನ್ನು ಕಂಡ ಅವರು ಮತ್ತೊಮ್ಮೆ ವೇದಿಕೆಯ ಮುಂದೆ ಬಂದು ಎಲ್ಲರತ್ತ ಕೈ ಬೀಸಿದರು.

ವಿರೋಧ ಪಕ್ಷ ಗೈರು: ವಿರೋಧ ಪಕ್ಷ ಬಿಜೆಪಿ ಮುಖಂಡರ ಗೈರುಹಾಜರಿ ಎದ್ದು ಕಾಣುತ್ತಿತ್ತು. ಹಂಗಾಮಿ ಸ್ಪೀಕರ್‌ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಕೂಡಾ ಹಾಜರಿರಲಿಲ್ಲ.

ದೇವರು–ಜನತೆ ಹೆಸರಲ್ಲಿ ಪ್ರಮಾಣ

ಕುಮಾರಸ್ವಾಮಿ ಅವರು ದೇವರು ಹಾಗೂ ಕನ್ನಡ ನಾಡಿನ ಜನತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಡಾ.ಜಿ.ಪರಮೇಶ್ವರ ಅವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.

ಘಟಾನುಘಟಿಗಳ ಸಂಗಮ

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐನ ಡಿ.ರಾಜಾ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌, ಆರ್‌ಎಲ್‌ಡಿ ಅಧ್ಯಕ್ಷ ಅಜಿತ್‌ ಸಿಂಗ್‌, ಲೋಕ ತಾಂತ್ರಿಕ ಜನತಾ ದಳದ ಶರದ್‌ ಯಾದವ್‌ ಪಾಲ್ಗೊಂಡ ‍ಪ್ರಮುಖರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಎಂ.ವೀರಪ್ಪ ಮೊಯಿಲಿ, ಪ್ರಕಾಶ್‌ ಹುಕ್ಕೇರಿ ವಿವಿಧ ರಾಜ್ಯಗಳಿಂದ ಬಂದಿದ್ದ ಗಣ್ಯರನ್ನು ಬರಮಾಡಿಕೊಂಡರು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸಂಭ್ರಮದಿಂದ ವೇದಿಕೆಯಲ್ಲಿ ಅಡ್ಡಾಡುತ್ತಿದ್ದರು.

ಉಪ ಮಂತ್ರಿ ಎಂದ ರತ್ನಪ್ರಭಾ

ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಜಿ.ಪರಮೇಶ್ವರ ಅವರನ್ನು ‘ಉಪ ಮಂತ್ರಿ’ ಎಂದು ಸಂಬೋಧಿಸಿದರು.

ಮುನ್ನೆಲೆಗೆ ಬರದ ಸಿದ್ದರಾಮಯ್ಯ

ಸಮಾರಂಭದಲ್ಲಿ ಗಣ್ಯರ ಸಾಲಿನಲ್ಲಿ ಆಸೀನರಾಗಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವೇದಿಕೆಯ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳಲಿಲ್ಲ.

ಪಕ್ಷದ ನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ಸಮಾರಂಭಕ್ಕೆ ಕರೆತಂದ ಅವರು, ಉಪ ಮುಖ್ಯಮಂತ್ರಿ ಪರಮೇಶ್ವರ ಪಕ್ಕಕುಳಿತಿದ್ದರು. ಪ್ರಮಾಣ ವಚನ ಸಮಾರಂಭ ಮುಗಿದ ಬಳಿಕ ತಮ್ಮ ಪಕ್ಷದ ನಾಯಕರು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್‌, ನಾಯಕರಾದ ಮಲ್ಲಿಕಾರ್ಜುನ ಖರ್ಗೆ,  ಡಿ.ಕೆ. ಶಿವಕುಮಾರ್, ರೋಷನ್ ಬೇಗ್‌ ಅವರೆಲ್ಲ ವೇದಿಕೆ ಮುಂಭಾಗದ ಬಂದು ಕೈ ಮೇಲೆತ್ತಿ ವಿಜಯದ ಸಂಕೇತ ಪ್ರದರ್ಶಿಸುವಾಗ ಸಿದ್ದರಾಮಯ್ಯ ಮಾತ್ರ ಕಾಣಿಸಿಕೊಳ್ಳಲಿಲ್ಲ.

ಬಹುಮತ ಸಾಬೀತಿಗೆ ನಾಳೆ ಅಧಿವೇಶನ

ಬೆಂಗಳೂರು: ಇದೇ 25 ರಂದು (ಶುಕ್ರವಾರ) ವಿಧಾನಸಭಾ ಅಧಿವೇಶನ ಕರೆಯಲಾಗಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದೆ.

ಅಂದು ಬೆಳಿಗ್ಗೆ 12.15 ಕ್ಕೆ ಅಧಿವೇಶನ ಆರಂಭಗೊಳ್ಳಲಿದೆ. ಇದಕ್ಕೂ ಮೊದಲು ಸ್ಪೀಕರ್‌ ಆಯ್ಕೆ ಆಗುತ್ತದೆ. ಈಗಾಗಲೇ ಕಾಂಗ್ರೆಸ್‌, ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರನ್ನು ಸ್ಪೀಕರ್‌ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಡೆಪ್ಯೂಟಿ ಸ್ಪೀಕರ್‌ ಸ್ಥಾನವನ್ನು ಜೆಡಿಎಸ್‌ಗೆ ನೀಡಿದ್ದು, ಅಭ್ಯರ್ಥಿ ಆಯ್ಕೆ ಆಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry