ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ನೀಡುವಂತೆ ‘ಸುಪ್ರೀಂ’ ಸೂಚನೆ

ಪ್ರವೀಣ್‌ ಖಾಂಡ್ಯ ವಿರುದ್ಧದ ಪ್ರಕರಣ
Last Updated 24 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳದ ಕಾರ್ಯಕರ್ತ ಪ್ರವೀಣ್ ಖಾಂಡ್ಯ ಎದುರಿಸುತ್ತಿರುವ ಅಪರಾಧ ಪ್ರಕರಣಗಳ ವಿವರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಅಪಹರಣ ಮತ್ತು ಅಧಿಕಾರಿಯ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಖಾಂಡ್ಯನಿಗೆ ರಾಜ್ಯ ಹೈಕೋರ್ಟ್‌ 2016ರ ಡಿಸೆಂಬರ್‌ನಲ್ಲಿ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಮನೋಹರ ಸಪ್ರೆ ಹಾಗೂ ಸಂಜಯ್ ಕಿಷನ್‌ ಕೌಲ್‌ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಈ ಸೂಚನೆ ನೀಡಿದೆ.

2016ರಲ್ಲಿ ನಡೆದಿದ್ದ ತೇಜಸ್‌ ಗೌಡ ಅಪಹರಣ ಹಾಗೂ ಈ ಪ್ರಕರಣದಲ್ಲಿ ₹ 10 ಲಕ್ಷ ಲಂಚ ಸ್ವೀಕರಿಸಿದ ಆರೋಪ ಎದುರಿಸಿ, ಚಿಕ್ಕಮಗಳೂರಿನ ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಗಳಲ್ಲಿ ಪ್ರವೀಣ್‌ ಖಾಂಡ್ಯ ಆರೋಪಿಯಾಗಿದ್ದ. ಪ್ರಕರಣ ಬೆಳಕಿಗೆ ಬಂದ ಕೂಡಲೇ ತಲೆ ಮರೆಸಿಕೊಂಡಿದ್ದ ಈತನಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿತ್ತು.

ನಾಲ್ಕು ವಾರಗಳಲ್ಲಿ ಖಾಂಡ್ಯನ ವಿರುದ್ಧದ ಅಪರಾಧ ಪ್ರಕರಣಗಳ ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರದ ಪರ ವಕೀಲ ವಿ.ಎನ್‌. ರಘುಪತಿ ಅವರಿಗೆ ತಿಳಿಸಿದ ನ್ಯಾಯಪೀಠವು, ನಂತರ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತು.

ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌ ಪ್ರವೀಣ್‌ ಖಾಂಡ್ಯನಿಗೆ ಕಳೆದ ಜುಲೈನಲ್ಲಿ ನೋಟಿಸ್‌ ಜಾರಿ ಮಾಡಿತ್ತು.

ನಿರೀಕ್ಷಣಾ ಜಾಮೀನು ಪಡೆದಿರುವ ಖಾಂಡ್ಯ, ಇತ್ತೀಚೆಗೆ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ.

33ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಗೂಂಡಾ ಕಾಯ್ದೆ ಅಡಿ ಕಳೆದ ಜನವರಿಯಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಖಾಂಡ್ಯನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT