ಆಲದ ಮರದಲ್ಲಿ ಚಿಗುರೆಲೆ ಮೂಡಿ...

7
ಹುಬ್ಬಳ್ಳಿ–ಗದಗ ರಸ್ತೆ ವಿಸ್ತರಣೆಗಾಗಿ ತೆರವುಗೊಳಿಸಿ ನೆಡಲಾಗಿದ್ದ ಮರಗಳಲ್ಲಿ ಜೀವ ಕಳೆ

ಆಲದ ಮರದಲ್ಲಿ ಚಿಗುರೆಲೆ ಮೂಡಿ...

Published:
Updated:
ಆಲದ ಮರದಲ್ಲಿ ಚಿಗುರೆಲೆ ಮೂಡಿ...

ಗದಗ: ಹುಬ್ಬಳ್ಳಿ–ಗದಗ ರಸ್ತೆ ವಿಸ್ತರಣೆಗಾಗಿ ತೆರವುಗೊಳಿಸಿ, ಇಲ್ಲಿನ ಭೀಷ್ಮಕೆರೆ ಆವರಣದಲ್ಲಿ ನೆಡಲಾಗಿದ್ದ 5 ಆಲದ ಮರ

ಗಳು ಬದುಕುಳಿದಿವೆ. ಈ ಮರಗಳನ್ನು ಸ್ಥಳಾಂತರಿಸಿ, ಇದೀಗ ಒಂದು ವರ್ಷ ಸಮೀಪಿಸುತ್ತಾ ಬಂದಿದ್ದು, ಸದ್ಯ ಹಸಿರೆಲೆ ತುಂಬಿಕೊಂಡು ನಳನಳಿಸುತ್ತಿವೆ.

ಒಂದು ಮರ ಮಾತ್ರ ನಾಲ್ಕು ದಿನಗಳ ಹಿಂದೆ ಆರ್ಭಟಿಸಿದ ಬಿರುಗಾಳಿ ಮಳೆಗೆ ಧರೆಗುರುಳಿತ್ತು. ಇದನ್ನು ಮತ್ತೆ ಅರಣ್ಯ ಇಲಾಖೆ ಸಿಬ್ಬಂದಿ ಸರಿಪಡಿಸಿ, ನೆಟ್ಟಿದ್ದಾರೆ.  2017ರ ಜೂನ್‌ ಮೊದಲ ವಾರದಲ್ಲಿ ಈ 5 ವಟವೃಕ್ಷಗಳನ್ನು ಇಲ್ಲಿಂದ 12 ಕಿ.ಮೀ ದೂರದಲ್ಲಿದ್ದ ಹುಲಕೋಟಿ– ಹೊಸಹಳ್ಳಿ ಕ್ರಾಸ್‌ ಸಮೀಪದ ರಾಷ್ಟ್ರೀಯ ಹೆದ್ದಾರಿಯಿಂದ ಬುಡಸಮೇತ ಕಿತ್ತು ತಂದು, ದೊಡ್ಡ ಗುಂಡಿ ತೋಡಿ ಇಲ್ಲಿ ನೆಡಲಾಗಿತ್ತು.

ಹೆದ್ದಾರಿ ವಿಸ್ತರಣೆ ವೇಳೆ, ಮರಗಳ ಮಾರಣಹೋಮ ತಪ್ಪಿಸಲು, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಮುತುವರ್ಜಿ

ವಹಿಸಿ, ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಿತ್ತು. ‘ಒಟ್ಟು 25 ಜಾತಿಯ 1301 ಮರಗಳನ್ನು ಸ್ಥಳಾಂತರಕ್ಕೆ ಗುರುತಿಸಲಾಗಿತ್ತು. ಇದರಲ್ಲಿ 500ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಿಸಿ, ಭೀಷ್ಮ ಕೆರೆ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಆವರಣ ಸೇರಿದಂತೆ ವಿವಿಧೆಡೆ ನೆಡಲಾಗಿತ್ತು. ಇವುಗಳಲ್ಲಿ ಶೇ 90ರಷ್ಟು ಮರಗಳು ಬದುಕಿ ಉಳಿದಿವೆ’ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಶ್ನಿ ತಿಳಿಸಿದರು.

ಸ್ಥಳಾಂತರಿಸಲು ಗುರುತಿಸಲಾದ ಮರಗಳಲ್ಲಿ ಆಲ, ಅರಳಿ, ಬೇವು, ಬನ್ನಿ, ಹುಣಸೆ, ತಪಸಿ, ಗೋಣಿ, ಬಸರಿ, ಬಕುಳ

ಸೇರಿದಂತೆ ವಿವಿಧ ಜಾತಿಯ ವೃಕ್ಷಗಳು ಇದ್ದವು. ಇದರಲ್ಲಿ 15ರಿಂದ 25 ವರ್ಷದೊಳಗಿನ ಮರಗಳನ್ನು ಗುರುತಿಸಿ, ಅವುಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗಿತ್ತು. ಇದು ಫಲ ನೀಡಿದೆ. ಒಂದೆರಡು ಬೇವಿನ ಮರಗಳನ್ನು ಹೊರತುಪಡಿಸಿ, ಉಳಿದೆಲ್ಲ ವೃಕ್ಷಗಳು ಬದುಕಿ ಉಳಿದಿವೆ’ ಎಂದು ಅವರು ಹೇಳಿದರು.

‘ದೊಡ್ಡ ಮರಗಳನ್ನು ಸ್ಥಳಾಂತರಿಸಿ ನೆಡುವುದರಿಂದ ಬಿಡಾಡಿ ದನ, ಕುರಿ ತಿಂದು ಹಾಳು ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಗಿಡದ ಸುತ್ತ ಜಾಲಿಮುಳ್ಳು, ತಂತಿ ಕಟ್ಟುವ ಅಗತ್ಯವಿಲ್ಲ. ಒಟ್ಟಿನಲ್ಲಿ ನಿರ್ವಹಣೆ ವೆಚ್ಚ ಕಡಿಮೆ ಇರುತ್ತದೆ. ಅತ್ಯಮೂಲ್ಯ ವೃಕ್ಷಗಳ ಸಂರಕ್ಷಣೆಯೂ ಆಗುತ್ತದೆ’ ಎಂದು ಇಲಾಖೆಯ ಸಿಬ್ಬಂದಿ ಅಭಿಪ್ರಾಯಪಟ್ಟರು.

ಬದುಕಿ ಉಳಿಯುವ ಸಾಧ್ಯತೆ ಹೆಚ್ಚು: ‘ಸ್ಥಳಾಂತರಿಸಿದರೂ ದೊಡ್ಡ ಮರಗಳು ಬದುಕಿ ಉಳಿಯುವ ಸಾಧ್ಯತೆ ಹೆಚ್ಚಿರು

ತ್ತದೆ. ವಿಶೇಷವಾಗಿ ನಾರು ನಾರಾದ ಬೇರಿನ ವ್ಯವಸ್ಥೆ (Fibrous root system) ಹೊಂದಿರುವ ಆಲ, ಅರಳಿ,

ಬಸರಿ ಜಾತಿಯ ಮರಗಳನ್ನು ಸುಲಭವಾಗಿ ಸ್ಥಳಾಂತರಿಸಿ ನೆಡಬಹುದು. ಇವು ಎಂತಹ ಪರಿಸ್ಥಿತಿಯಲ್ಲೂ ಬಾಳುತ್ತವೆ’ ಎಂದು ಅರಣ್ಯಾಧಿಕಾರಿ ತಿಳಿಸಿದರು.

ಮೂರು ವರ್ಷಗಳ ಹಿಂದೆ ಗದಗ–ಮುಂಡರಗಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ 800ಕ್ಕೂ ಹೆಚ್ಚು ಮರಗಳು ಪ್ರಗತಿಯ ಕೊಡಲಿಗೆ ಬಲಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಬಾರಿ, ಗದಗ–ಹುಬ್ಬಳ್ಳಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ವೃಕ್ಷ ರಕ್ಷಣೆಗೆ ಮುಂದಾಗಿತ್ತು.

ರಸ್ತೆ ಬದಿ, ಉದ್ಯಾನಗಳಲ್ಲಿ, ಕೆರೆ ಆವರಣದಲ್ಲಿ ಚಿಕ್ಕ ಸಸಿಗಳನ್ನು ನೆಟ್ಟು ಅವುಗಳನ್ನು ಬದುಕಿಸಲು ಹರಸಾಹಸ ಪಡುವ ಬದಲು, ರಸ್ತೆ ವಿಸ್ತರಣೆ ಸಮಯದಲ್ಲಿ ತೆರವುಗೊಳಿಸಬೇಕಾದ ದೊಡ್ಡ ಮರಗಳನ್ನೇ ಸ್ಥಳಾಂತರಿಸಬಹುದು ಎಂಬ ಪ್ರಸ್ತಾಪವನ್ನು ಅರಣ್ಯ ಇಲಾಖೆ, ಜಿಲ್ಲಾಡಳಿತದ ಮುಂದಿಟ್ಟಿತ್ತು. ಒಂದು ಮರದ ಸ್ಥಳಾಂತರಕ್ಕೆ ₹ 15 ಸಾವಿರದವರೆಗೆ ವೆಚ್ಚ ಅಂದಾಜು ಮಾಡಲಾಗಿತ್ತು. ಈ ವೆಚ್ಚವನ್ನು ನಗರ ಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಗ್ರಾಮೀಣಾಭಿವೃದ್ಧಿ ವಿಶೇಷ ಯೋಜನೆ, ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಭರಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿ ಮರಗಳನ್ನು ಸ್ಥಳಾಂತರ ಮಾಡಿತ್ತು.

**

ರಸ್ತೆ ವಿಸ್ತರಣೆ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಿಸಿ ನೆಡಲಾಗಿತ್ತು. ಇವುಗಳಲ್ಲಿ ಶೇ 90ರಷ್ಟು ಬದುಕುಳಿದಿವೆ. ಇದು ಇತರ ಜಿಲ್ಲೆಗಳಿಗೂ ಮಾದರಿ ಆಗಿದೆ

ಸೋನಲ್‌ ವೃಶ್ನಿ, ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry