7
ಸುಂಟಿಕೊಪ್ಪದ ಮದುರಮ್ಮ ಬಡಾವಣೆಯ ಓಮರ್ ಆಲಿ

ಕರಾಟೆಯಲ್ಲಿ ಮಿನುಗುತ್ತಿರುವ ಪ್ರತಿಭೆ

Published:
Updated:
ಕರಾಟೆಯಲ್ಲಿ ಮಿನುಗುತ್ತಿರುವ ಪ್ರತಿಭೆ

ಸುಂಟಿಕೊಪ್ಪ: ಸುಂಟಿಕೊಪ್ಪ ಕ್ರೀಡಾಲೋಕಕ್ಕೆ ತನ್ನದೇ ಆದ ಛಾಪನ್ನು ಮೂಡಿಸಿದ ಪುಟ್ಟ ಪಟ್ಟಣ. ಇಲ್ಲಿ ಎಲ್ಲ ಕ್ರೀಡೆಗೂ ಅದರದೇ ರೀತಿ ಪ್ರೋತ್ಸಾಹ ದೊರೆಯುವುದೇ ವಿಶೇಷ. ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ

ಕ್ರೀಡಾಪಟುಗಳನ್ನು ಕೊಂಡೊಯ್ದ ಕ್ರೀಡಾಭೂಮಿ.

ಕಾಲ್ಚೆಂಡು, ವಾಲಿಬಾಲ್ ಕ್ರೀಡೆಗೆ ಎಷ್ಟು ಪ್ರೋತ್ಸಾಹ ದೊರೆಯುತ್ತಿದೆಯೋ ಹಾಗೆಯೇ ಆತ್ಮ ರಕ್ಷಣೆಯ ಜೊತೆಯಲ್ಲಿ ಕ್ರೀಡೆಯಾಗಿ ಮಾರ್ಪಟ್ಟಿರುವ ಕರಾಟೆಗೂ ಅದರದೇ ಆದ ಸ್ಥಾನಮಾನ ದೊರೆತು ಇದರಲ್ಲಿ ಯುವ ಪ್ರತಿಭೆಗಳು ಮಿಂಚುತ್ತಿದ್ದಾರೆ.

ಅಂತಹವರ ಸಾಲಿಗೆ ಸುಂಟಿಕೊಪ್ಪದ ಮದುರಮ್ಮ ಬಡಾವಣೆಯ ನಿವಾಸಿ ಮಹಮ್ಮದ್ ರಫಿ ಮತ್ತು ಬಲ್ಕೀಸ್ ದಂಪತಿ ಪುತ್ರ ಓಮರ್ ಆಲಿ ಕೂಡ ಸೇರುತ್ತಾರೆ.

ಕರಾಟೆಯಲ್ಲಿ ಮಿಂಚುತ್ತಿರುವ ಈ ಯುವ ಪ್ರತಿಭೆ, ಶಿಕ್ಷಣದ ಜೊತೆಯಲ್ಲಿ ಯಾವುದಾದರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆ ಚಿಗುರಿದಾಗ ಆರಿಸಿಕೊಂಡಿದ್ದೇ ಕರಾಟೆಯನ್ನು. ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಸಂದರ್ಭ ಕರಾಟೆ ಶಿಕ್ಷಕ ಬಿ.ಎಂ.ಮುಖೇಶ್, ಬೇರೆ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುತ್ತಿರುವುದನ್ನು ಕಂಡು ತಾವೂ ಕರಾಟೆ ಕಲಿಯಬೇಕು ಎಂದು ಆಸೆಪಟ್ಟರು.

ನಂತರ ತಂದೆ ಮಹಮ್ಮದ್ ರಫಿ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಕೂಡಲೇ ಸಮ್ಮತಿಯೂ ದೊರಕಿತು. ಆಗಲೇ ಮುಖೇಶ್ ಅವರ ಬಳಿ ಶಿಷ್ಯನಾಗಿ ಸೇರಿಕೊಂಡರು. ಅಲ್ಲಿಂದ ಓಮರ್ ಆಲಿ ಅವರ ದಾರಿಯೇ ಬದಲಾಯಿತು.

ಶಾಲೆಯ ಕ್ರೀಡಾಕೂಟಗಳಲ್ಲಿ ಕರಾಟೆಗೆ ಓಮರ್ ಆಲಿಯೇ ಆಯ್ಕೆಗೊಳ್ಳುತ್ತಿದ್ದವರು. 2014ರಲ್ಲಿ ಕುಶಾಲನಗರದಲ್ಲಿ ನಡೆದ ದಕ್ಷಿಣ ಭಾರತದ ಕರಾಟೆ ಪಂದ್ಯದಲ್ಲಿ ಭಾಗವಹಿಸಿ ಮೂರನೇ ಸ್ಥಾನವನ್ನು ಪಡೆದಿದ್ದು ಇನ್ನಷ್ಟು ಹುರುಪು ತಂದಿತ್ತು.

2015ರಲ್ಲಿ ಗೋಣಿಕೊಪ್ಪದಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಕ್ರೀಡಾಕೂಟದಲ್ಲೂ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಅದೇ ವರ್ಷ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಕ್ಕೆ ಆಯ್ಕೆಯಾಗಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.

ಮತ್ತೇ ಅದೇ ವರ್ಷ ಕುಶಾಲನಗರದಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರೀಯ ಕರಾಟೆ ಟೂರ್ನಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಅಲ್ಲಿಂದ ತಿರುಗಿ ನೋಡಿದ್ದೇ ಇಲ್ಲ. 2016ರಲ್ಲಿ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದು ಅದೇ ವರ್ಷದ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೂರ್ನಿಗೆ ಆಯ್ಕೆಗೊಂಡು ಅಲ್ಲಿಯೂ ಉತ್ತಮ ಪ್ರದರ್ಶನದಿಂದ ಐದನೇ ಸ್ಥಾನ ಪಡೆದು ಬ್ಲಾಕ್ ಬೆಲ್ಟ್ ಕೀರ್ತಿಗೆ ಪಾತ್ರರಾದರು.

ಕೊಡಗು, ಮೈಸೂರು, ಬೆಂಗಳೂರು, ಭೂಪಾಲ್, ತಮಿಳುನಾಡು, ಇನ್ನಿತರ ಕಡೆಗಳಲ್ಲಿ ತಮ್ಮ ಚಾಕಚಾಕ್ಯತೆಯ ಪ್ರದರ್ಶನದ ಮೂಲಕ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಸ್ತುತ ಮಡಿಕೇರಿಯ ಸಂತ ಮೈಕಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಈ ಪ್ರತಿಭೆಯ ಕ್ರೀಡಾ ಭವಿಷ್ಯ ಉತ್ತುಂಗಕ್ಕೇರುವ ಭರವಸೆ ಇದೆ.

–ಸುನಿಲ್.ಎಂ.ಎಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry