ನಿಫಾ ವೈರಾಣು ಜ್ವರ: ಮುಂಜಾಗ್ರತೆ ಕೈಗೊಳ್ಳಿ

7
ಸಮನ್ವಯ ಸಮಿತಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ ಸೂಚನೆ

ನಿಫಾ ವೈರಾಣು ಜ್ವರ: ಮುಂಜಾಗ್ರತೆ ಕೈಗೊಳ್ಳಿ

Published:
Updated:

ಕೊಪ್ಪಳ: ನಿಫಾ ವೈರಾಣು ಜ್ವರ ಇದೊಂದು ಹೊಸದಾಗಿ ಕಂಡುಬಂದ ವೈರಾಣು ಸೋಂಕು ಆಗಿದ್ದು, ಜಿಲ್ಲೆಯಲ್ಲಿ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ ಘಾಳಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಿಫಾ ವೈರಾಣು ಜ್ವರ ಹರಡುವಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ವತಿಯಿಂದ ನಡೆದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಿಫಾ ವೈರಾಣು ಇತ್ತೀಚೆಗೆ ಕೇರಳ ರಾಜ್ಯದಲ್ಲಿ ಕಂಡುಬಂದಿದ್ದು, ಹಲವು ಸಂಶಯಾಸ್ಪದ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 6 ಮರಣ ಸಂಭವಿಸಿವೆ. ನಿಫಾ ವೈರಸ್ ಮಾರಣಾಂತಿಕವಾಗಿದೆ. ಈ ರೋಗದ ಲಕ್ಷಣಗಳು ನಮ್ಮ ಭಾಗದಲ್ಲಿ ಕಂಡುಬಂದಿಲ್ಲ. ಆದರೂ ಸಹ ಮುಂಜಾಗ್ರತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕ. ನಿಫಾ ಜ್ವರಕ್ಕೆ ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರು ಸಹ ಒಳಪಡುತ್ತಾರೆ. ಜಿಲ್ಲೆಯಲ್ಲಿ ಬಾವಲಿ ಪ್ರಾಣಿಗಳು ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ಹಂದಿಗಳ ಸಂಖ್ಯೆ ಹೆಚ್ಚಾಗಿದೆ. ಜಾನು ವಾರುಗಳ ಮಾಲೀಕರಿಗೆ ಸೂಚನೆ ನೀಡಿ, ಕೂಡಲೇ ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ನಿಫಾ ವೈರಾಣು ಜ್ವರಕ್ಕೆ ಸಂಬಂಧಿತ ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 2ರಿಂದ 3 ಬೆಡ್‍ಗಳನ್ನು ಕಾಯ್ದಿರಸಬೇಕು. ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮನೆ-ಮನೆಗೆ ಭೇಟಿ ನೀಡಿ, ನಿಫಾ ವೈರಾಣು ಹರಡುವಿಕೆಯನ್ನು ತಡೆಗಟ್ಟುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಕೈಗೊಳ್ಳಬೇಕು. ಆಹಾರ ಸೇವನೆ ಇತ್ಯಾದಿ ಸಲಹೆಗಳ ಕುರಿತು ಜನ ಜಾಗೃತಿ ಮೂಡಿಸಿ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಎಂ.ಕಟ್ಟಿಮನಿ ಅವರು ಮಾತನಾಡಿ, ‘ನಿಫಾ ವೈರಾಣು ಜ್ವರ ಈ ಪ್ರಕರಣಕ್ಕೆ ನಿಫಾ ವೈರಸ್ ಕಾರಣವೆಂದು ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್ಐವಿ) ದೃಢಪಡಿಸಿದೆ. ಈ ಜ್ವರಕ್ಕೆ ನಿರ್ದಿಷ್ಟವಾದ ಔಷಧಿ ಕಂಡುಹಿಡಿದಿರುವುದಿಲ್ಲ. ನಿಫಾ ವೈರಸ್ ಶೇ 40ರಿಂದ ಶೇ 74ರಷ್ಟು ಮಾರಣಾಂತಿಕವಾಗಿರುತ್ತದೆ ಎಂದು ವರದಿಯಾಗಿದೆ. ಯಾವುದೇ ಪ್ರಾಣಿ ಪಕ್ಷಿಗಳು ಕಚ್ಚಿದ ಹಾಗೂ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು. ಬೀದಿ ಬದಿಗಳಲ್ಲಿ ಕತ್ತರಿಸಿ ಮಾರುವ ಹಣ್ಣು ಹಂಪಲಗಳನ್ನು ಸೇವಿಸಬಾರದು. ಈ ಕುರಿತು ಆರೋಗ್ಯ ಇಲಾಖೆ, ನಗರಸಭೆ, ಇನ್ನಿತರ ಇಲಾಖೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ನಿಫಾ ಜ್ವರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಜಿಲ್ಲಾ ಸರ್ವೇಕ್ಷಣಾಲಯ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಎಂದರು.

ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಕೆ.ದೇಸಾಯಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಲಕನಂದ ಮಳಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ಜಂಬಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಇದ್ದರು.

**

ಯಾವುದೇ ರೀತಿಯ ಜ್ವರ ಹಾಗೂ ನಿಫಾ ವೈರಸ್ ಲಕ್ಷಣಗಳಿರುವ ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು ಸೂಕ್ತ

–  ಎಂ.ಎಂ.ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry