ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದ ಕುಮಾರ; ಸವಾಲು ಸಾವಿರ

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು:‌ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬೆನ್ನಲ್ಲೇ, ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರಕ್ಕೆ ಸಂಪುಟ ವಿಸ್ತರಣೆ ಕಸರತ್ತು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮಿತ್ರ ಪಕ್ಷಗಳು ಸಚಿವ ಸಂಪುಟದಲ್ಲಿ 12:22 ಸ್ಥಾನಗಳನ್ನು ಹಂಚಿಕೊಳ್ಳಲು ತೀರ್ಮಾನಿಸಿದ್ದರೂ, ಯಾರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಗೊಂದಲಕ್ಕೆ ಸಿಲುಕಿವೆ. ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸಂಪುಟ ವಿಸ್ತರಣೆ ಕಸರತ್ತು ನಡೆಯುತ್ತಿದ್ದರೂ ಇನ್ನೂ ಅಂತಿಮ ಸ್ವರೂಪ ನೀಡಲು ಸಾಧ್ಯವಾಗಿಲ್ಲ.

ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ 12 ಸ್ಥಾನಗಳು ಜೆಡಿಎಸ್‌ಗೆ, ಉಪ ಮುಖ್ಯಮಂತ್ರಿ ಸೇರಿ 22 ಸ್ಥಾನಗಳು ಕಾಂಗ್ರೆಸ್ಸಿಗೆ ಹಂಚಿಕೆಯಾಗಿವೆ. ಆದರೆ, ಉಭಯ ಪಕ್ಷಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ದೊಡ್ಡ ಪಟ್ಟಿ ಇದೆ. ಹೀಗಾಗಿ, ಸಂಪುಟ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ನಿಚ್ಚಳವಾಗಿದೆ.

ಶುಕ್ರವಾರ ಸಂಜೆ ಕಾವೇರಿಯಲ್ಲಿ ಸಭೆ ಸೇರಿದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ. ಕೆ.ಸಿ ವೇಣುಗೋಪಾಲ್‌, ಎಚ್.ಡಿ. ರೇವಣ್ಣ ಸಭೆಯಲ್ಲಿದ್ದರು.

ಇದೇ 28ರಂದು ಸಂಪುಟ ವಿಸ್ತರಣೆಗೆ ದಿನ ನಿಗದಿಪಡಿಸಲಾಗಿತ್ತು. ಆದರೆ, ಅದೇ ದಿನ ರಾಜರಾಜೇಶ್ವರಿ ನಗರದ ಕ್ಷೇತ್ರದ ಚುನಾವಣೆ ನಡೆಯಲಿದೆ. ಇದರಿಂದಾಗಿ ಸಂಪುಟ ವಿಸ್ತರಣೆಯನ್ನು ಒಂದೆರಡು ದಿನಗಳ ಮಟ್ಟಿಗೆ ಮುಂದೂಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಜೆಡಿಎಸ್‌ ಒಂದು, ಕಾಂಗ್ರೆಸ್‌ ಎರಡು ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳುವ ಚಿಂತನೆಯಲ್ಲಿವೆ.

ಸಂಪುಟದಲ್ಲಿ ಪ್ರಮುಖ ಖಾತೆಗಳಿಗೆ ಜೆಡಿಎಸ್‌ ಬೇಡಿಕೆ ಇಟ್ಟಿದೆ. ಈ ಮಧ್ಯೆ, ಕಾಂಗ್ರೆಸ್‌ ನಾಯಕರು, ಜಾತಿ ಮತ್ತು ಪ್ರಾದೇಶಿಕತೆ ಪರಿಗಣಿಸಿ ಹಳಬರು ಮತ್ತು ಹೊಸ ಮುಖಗಳಿಗೆ ಸಮಾನ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ವರಿಷ್ಠರ ಒಪ್ಪಿಗೆ ಬಳಿಕ ಕಾಂಗ್ರೆಸ್‌ ಪಟ್ಟಿ ಅಂತಿಮಗೊಳ್ಳಲಿದೆ.

ವಿಧಾನಸಭೆಯಲ್ಲಿ ಶುಕ್ರವಾರ ಮೊದಲು ಸಭಾಧ್ಯಕ್ಷರ ಆಯ್ಕೆ ನಡೆಯಿತು. ಬಿಜೆಪಿಯಿಂದ ರಾಜಾಜಿನಗರದ ಎಸ್‌. ಸುರೇಶ್‌ ಕುಮಾರ್‌ ನಾಮಪತ್ರ ಸಲ್ಲಿಸಿದ್ದರೂ ಸ್ಪರ್ಧೆಯಿಂದ ಹಿಂದೆಸರಿದ ಪರಿಣಾಮ, ಶ್ರೀನಿವಾಸಪುರದ ಶಾಸಕ ಕಾಂಗ್ರೆಸ್‌ನ ಕೆ.ಆರ್‌. ರಮೇಶ್‌ ಕುಮಾರ್‌ ಅವಿರೋಧವಾಗಿ ಆಯ್ಕೆಯಾದರು. ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾವ ಮಂಡಿಸಿದರು.

ವಿಶ್ವಾಸಮತ ಪ್ರಸ್ತಾವ ಮಂಡಿಸಿ ಮಾತನಾಡಿದ ಕುಮಾರಸ್ವಾಮಿ ಮತ್ತು ಅದೇ ಧಾಟಿಯಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ್ದರಿಂದ ಸದನ ಕುತೂಹಲ ಕೆರಳಿಸಿತು. ತಮ್ಮೊಳಗಿನ ಸಿಡುಕು– ಆಕ್ರೋಶ, ಹತಾಶೆ– ಹಗೆ ಎಲ್ಲವನ್ನೂ ಆರೋಪ– ಪ್ರತ್ಯಾರೋಪಗಳ ಮೂಲಕ ಇಬ್ಬರು ನಾಯಕರೂ ’ಕಕ್ಕಿದರು’.‌

ಸಮರ್ಥನೆ– ದೂಷಣೆಯ ಮಧ್ಯೆ ಖಳನಾಯಕ, ನಯವಂಚಕ, ದಗಲ್ಬಾಜಿ ಹೀಗೆ ಸಂಸದೀಯ ಘನತೆಗೆ ಪೂರಕವಲ್ಲದ ಕೆಲವು ಪದಗಳು ಮಾತಿನ ಮಧ್ಯೆ ಬಂದುಹೋದವು. ಆದರೆ, ಇಂಥ ಸನ್ನಿವೇಶಗಳನ್ನು ಸರಿತೂಗಿಸುವ ಚಾತುರ್ಯ ಹೊಂದಿದ್ದ, ಸಭಾಧ್ಯಕ್ಷ ರಮೇಶ್‌ ಕುಮಾರ್‌, ಆಗಾಗ ಬಾಯಿ ತೂರಿಸಿ ಹಾಸ್ಯ ಉಕ್ಕಲು ಕಾರಣರಾದರು.

‘ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ₹ 53,000 ಕೋಟಿ ಸಾಲ ಮನ್ನಾ ಮಾಡುವ ಭರವಸೆ ನೀಡಿರುವ ಕುಮಾರಸ್ವಾಮಿ, ಈ ಘೋಷಣೆ ಮಾಡದಿದ್ದರೆ ‌ಸೋಮವಾರ ಬೆಂಗಳೂರು ಬಂದ್‌ ಮಾಡುತ್ತೇವೆ’ ಎಂಬ ಎಚ್ಚರಿಕೆ ನೀಡಿ ಯಡಿಯೂರಪ್ಪ ಸಭಾತ್ಯಾಗ‌ ಮಾಡಿದರು. ಬಿಜೆಪಿ ಸದಸ್ಯರು ಅವರನ್ನು ಹಿಂಬಾಲಿಸಿದರು.

ವಿರೋಧ ಪಕ್ಷ ಸದಸ್ಯರ ಗೈರು ಹಾಜರಾತಿ ಮಧ್ಯೆ ಧ್ವನಿಮತದಲ್ಲಿ ಬಹುಮತ ಸಾಬೀತುಪಡಿಸಿದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ, ಆರು ತಿಂಗಳವರೆಗೆ ನಿಶ್ಚಿಂತೆಯಿಂದ ಅಧಿಕಾರ ಚಲಾಯಿಸಬಹುದು. ಯಾಕೆಂದರೆ, ಅದುವರೆಗೆ ಅವಿಶ್ವಾಸ ಮಂಡಿಸಿ ಸರ್ಕಾರ ಕೆಡವಿ ಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲ.

ಮೈತ್ರಿಕೂಟದ ಮುಂದಿರುವ ಸವಾಲುಗಳೇನು?

ಆರು ತಿಂಗಳವರೆಗೆ ಸರ್ಕಾರದ ಸ್ಥಿರತೆಗೆ ಸಮಸ್ಯೆ ಇಲ್ಲದಿದ್ದರೂ, ‘ಅಧಿಕಾರ ಅವಧಿ’ ಹಂಚಿಕೆ ಬಗ್ಗೆ ಸ್ಪಷ್ಟತೆ ಇಲ್ಲ

ಖಾತೆ, ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಹಂಚಿಕೆ ಅಷ್ಟು ಸುಲಭವಲ್ಲ

ರೈತರ ₹ 53,000 ಕೋಟಿ ಸಾಲ ಮನ್ನಾ ಸವಾಲು

ಮೈತ್ರಿ ಸರ್ಕಾರಕ್ಕೆ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಯಿಂದ ಹೆಜ್ಜೆ ಹೆಜ್ಜೆಗೂ ತೊಡಕು

ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಜಾತಿ ಲೆಕ್ಕಾಚಾರ

ಲಿಂಗಾಯತ; 4

ಒಕ್ಕಲಿಗ; 4

ಕುರುಬ; 2

ಮುಸ್ಲಿಂ; 2

ಎಸ್‌.ಸಿ; 3

ಎಸ್‌.ಟಿ; 3

ಇತರ ಹಿಂದುಳಿದ ವರ್ಗ; 3

ಮಹಿಳೆ; 1

ಕ್ರಿಶ್ಚಿಯನ್‌; 1

ಸಂಭಾವ್ಯ ಸಚಿವರ ಪಟ್ಟಿ

ಕಾಂಗ್ರೆಸ್‌

ಡಿ.ಕೆ. ಶಿವಕುಮಾರ್‌

ಆರ್‌.ವಿ.ದೇಶಪಾಂಡೆ

ಶಾಮನೂರ ಶಿವಶಂಕರಪ್ಪ

ಎಸ್‌.ಆರ್‌. ಪಾಟೀಲ

ಎಂ. ಕೃಷ್ಣಪ್ಪ

ಕೆ.ಜೆ. ಜಾರ್ಜ್‌

ರೋಷನ್‌ ಬೇಗ್‌

ದಿನೇಶ್‌ ಗುಂಡೂರಾವ್‌

ರಾಮಲಿಂಗಾರೆಡ್ಡಿ

ನರೇಂದ್ರ

ಸತೀಶ ಜಾರಕಿಹೊಳಿ

ರೂಪಾ ಶಶಿಧರ

ಲಕ್ಷ್ಮೀ ಹೆಬ್ಬಾಳ್ಕರ

ಶಿವಾನಂದ ಪಾಟೀಲ

ರಾಜಶೇಖರ ಪಾಟೀಲ

ರಹೀಂ ಖಾನ್‌

ಪ್ರಿಯಾಂಕ್‌ ಖರ್ಗೆ

ಎಂ.ಟಿ.ಬಿ. ನಾಗರಾಜ

ಸಿ.ಎಸ್‌. ಶಿವಳ್ಳಿ

ರಘು ಮೂರ್ತಿ

ನಾಗೇಂದ್ರ

ಆನಂದ್‌ ಸಿಂಗ್‌

ಜೆಡಿಎಸ್‌

ಎಚ್‌.ಡಿ. ರೇವಣ್ಣ

ಬಸವರಾಜ ಹೊರಟ್ಟಿ

ಎಚ್‌. ವಿಶ್ವನಾಥ್‌

ಜಿ.ಟಿ. ದೇವೇಗೌಡ

ಡಿ.ಸಿ. ತಮ್ಮಣ್ಣ

ಸಿ.ಎಸ್‌. ಪುಟ್ಟರಾಜು

ಬಂಡೆಪ್ಪ ಕಾಶೆಂಪೂರ

ಎನ್‌. ಮಹೇಶ

ಶಿವಲಿಂಗೇಗೌಡ

ಬಿ.ಎಂ. ಫಾರೂಕ್‌

ಬಿ. ಸತ್ಯನಾರಾಯಣ

ಶ್ರೀನಿವಾಸಗೌಡ

ರಾಜಾ ವೆಂಕಟಪ್ಪನಾಯಕ

ಪ್ರಮುಖ ಐದು ಖಾತೆಗಳಿಗೆ ಜೆಡಿಎಸ್‌ ಬೇಡಿಕೆ

ಲೋಕೋಪಯೋಗಿ, ಕಂದಾಯ, ಹಣಕಾಸು, ಜಲ ಸಂಪನ್ಮೂಲ, ಇಂಧನ, ಕೈಗಾರಿಕೆ, ಬೆಂಗಳೂರು ಅಭಿವೃದ್ಧಿ ಈ ಏಳು ಖಾತೆಗಳ ಪೈಕಿ ಐದನ್ನು (ಕಂದಾಯ, ಹಣಕಾಸು, ಜಲ ಸಂಪನ್ಮೂಲ, ಲೋಕೋಪಯೋಗಿ, ಇಂಧನ) ತಮಗೆ ಬಿಟ್ಟು ಕೊಡುವಂತೆ ಜೆಡಿಎಸ್‌ ಬೇಡಿಕೆ ಇಟ್ಟಿದೆ. ಈ ಪಟ್ಟಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಕಾಂಗ್ರೆಸ್‌ ನಾಯಕರಿಗೆ ರವಾನಿಸಿದ್ದಾರೆ ಎಂಬ ಮಾಹಿತಿಯೂ ಇದೆ.

ಉಪ ಸಭಾಧ್ಯಕ್ಷ ಯಾರು?

ಉಪ ಸಭಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಹಂಚಿಕೆಯಾಗಿದೆ. ಆದರೆ, ಈ ಸ್ಥಾನದ ಮೇಲೆ ಯಾರಿಗೂ ಆಸಕ್ತಿ ಇಲ್ಲ ಎನ್ನಲಾಗಿದೆ. ಅರಕಲಗೂಡು ಕ್ಷೇತ್ರದಿಂದ ಆಯ್ಕೆಯಾಗಿರುವ ಎ.ಟಿ. ರಾಮಸ್ವಾಮಿ ಹೆಸರು ಮುಂಚೂಣಿಯಲ್ಲಿದ್ದರೂ ಅವರು ಸಚಿವ ಸ್ಥಾನ ನೀಡುವಂತೆ ಪಕ್ಷದ ನಾಯಕರಲ್ಲಿ ಕೋರಿದ್ದಾರೆ. ಹೀಗಾಗಿ, ಸಕಲೇಶಪುರ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಉಪ ಸಭಾಧ್ಯಕ್ಷರಾಗುವ ಸಾಧ್ಯತೆ ಇದೆ.

**

2019ರ ಲೋಕಸಭಾ ಚುನಾವಣೆಗೆ ರಾಜಕೀಯ ಧ್ರುವೀಕರಣದ ಕರ್ನಾಟಕದ ಮಣ್ಣಿನಿಂದಲೇ ಆರಂಭವಾಗಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್‌ ಜತೆಗೆ ಕೈಜೋಡಿಸಿದ್ದೇವೆ
-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ನಾವೇನೂ ಜೆಡಿಎಸ್ ಅನ್ನು ಬಾಚಿ ತಬ್ಬಿಕೊಳ್ಳಲು ಹೋಗಿರಲಿಲ್ಲ.ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್ ನಾಯಕರು ಜೆಡಿಎಸ್ ಜತೆ ಸೇರುವುದಾಗಿ ಹೇಳಿದ್ದೇಕೆ?

–ಬಿ.ಎಸ್‌ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT