ಧಾರಾಕಾರ ಮಳೆಗೆ ಗೋಡೆ ಕುಸಿತ; ಸಿಡಿಲಿಗೆ ಮಹಿಳೆ ಬಲಿ

7
ಜಿಲ್ಲೆಯ ವಿವಿಧೆಡೆ ಮನೆಗಳು, ಹೋಟೆಲ್‌ಗಳಿಗೆ ನುಗ್ಗಿದ ನೀರು, ಜನರ ಪರದಾಟ

ಧಾರಾಕಾರ ಮಳೆಗೆ ಗೋಡೆ ಕುಸಿತ; ಸಿಡಿಲಿಗೆ ಮಹಿಳೆ ಬಲಿ

Published:
Updated:
ಧಾರಾಕಾರ ಮಳೆಗೆ ಗೋಡೆ ಕುಸಿತ; ಸಿಡಿಲಿಗೆ ಮಹಿಳೆ ಬಲಿ

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಮಹಿಳೆ ಯೊಬ್ಬರು ಸಿಡಿಲಿಗೆ ಬಲಿಯಾಗಿದ್ದರೆ, 7 ಮನೆಗಳ ಗೋಡೆಗಳು ಕುಸಿದಿವೆ. ಮನೆಯೊಂದರ ಚಾವಣಿ ಹಾರಿ ಹೋಗಿದೆ. ಸಂತೇಮರಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಪುರಾತನ ದೊಡ್ಡಅರಸನ ಕೊಳಕ್ಕೆ ನೀರು ಹರಿದು ಬಂದಿದ್ದು, ತುಂಬುವ ಹಂತದಲ್ಲಿದೆ. ಮಳೆಯಿಂದ ಒಟ್ಟು ₹ 1.63 ಲಕ್ಷ ನಷ್ಟ ಸಂಭವಿಸಿದೆ.

ತಮಿಳುನಾಡಿನ ಸೇಲಂ ಜಿಲ್ಲೆಗೆ ಸೇರಿದ ಸೀತಮ್ಮ (25) ಕೂಲಿ ಕೆಲಸ ಅರಸಿ ಬಿಸಿಲವಾಡಿಗೆ ಬರುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇವರು ತಮ್ಮ ಪತಿ ರಂಜನ್ ಹಾಗೂ ಮಗುವಿನೊಂದಿಗೆ ಬಿಸಿಲವಾಡಿಯ ಸಮೀಪದ ಕಲ್ಲು ಗಣ ಕ್ವಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ತಮ್ಮ ಊರಿಗೆ ಹೋಗಿ ವಾಪಸ್ ಬರುತ್ತಿದ್ದಾಗ ಮಳೆಗೆ ಸಿಲುಕಿದ್ದಾರೆ. ತಾಳವಾಡಿಯಿಂದ ಬಿಸಿಲವಾಡಿಯ ಮಧ್ಯೆ ಮರವೊಂದರ ಕೆಳಗೆ ಇವರು ನಿಂತಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸೀತಮ್ಮ ಸಾವನ್ನಪ್ಪಿದರು.

ನಗರದ ಸೇಂಟ್ ಜೋಸೆಫ್ ಆಸ್ಪತ್ರೆಯ ಆವರಣದಲ್ಲಿನ ಕೊಠಡಿ ಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ.

ಗೋಡೆಗಳ ಕುಸಿತ: ಹರದನಹಳ್ಳಿ ಹೋಬಳಿಯ ಬಂಡಿಗೆರೆಯ ನಂಜಮ್ಮಣಿ ಅವರ ಮನೆಯ ಗೋಡೆ ಕುಸಿದು ಅಂದಾಜು ₹ 8 ಸಾವಿರ ನಷ್ಟ ಸಂಭವಿಸಿದೆ. ಹರವೆ ಹೋಬಳಿಯ ಉಡಿಗಾಲ ಗ್ರಾಮದ ಲಕ್ಷ್ಮೀ ಹಾಗೂ ಮಹದೇವಶೆಟ್ಟಿ ಅವರ ಆಶ್ರಯ ಯೋಜನೆ ಮನೆಗಳ ಗೋಡೆಗಳು ಕುಸಿದು ಬಿದ್ದು, ₹ 15 ಸಾವಿರ ನಷ್ಟ ಸಂಭವಿಸಿದೆ.

ಸಂತೇಮರಹಳ್ಳಿ ಹೋಬಳಿಯ ಆಲ್ದೂರಿನ ಶಂಭಯ್ಯ, ರಂಗಯ್ಯ, ಪುಟ್ಟಸ್ವಾಮಿ ಅವರ ವಾಸದ ಮನೆಗಳ ಗೋಡೆಗಳು ಕುಸಿದು ಒಟ್ಟು ₹ 65 ಸಾವಿರ ನಷ್ಟ ಸಂಭವಿಸಿದ್ದರೆ, ನವಿಲೂರಿನ ರಂಗಮ್ಮ ಅವರ ನಿವಾಸದ ಗೋಡೆ ಕುಸಿದು ₹ 20 ಸಾವಿರ ನಷ್ಟ ಸಂಭವಿಸಿದೆ.

ಕಸಬಾ ಹೋಬಳಿ ಬೋಗಾ ‍ಪುರದ ರಂಗಯ್ಯ ಹಾಗೂ ಶಿವಯ್ಯ ಎಂಬುವವರ ಮನೆಗಳ ಚಾವಣಿಗಳು ಬಿರುಗಾಳಿಗೆ ಹಾರಿ ಹೋಗಿದ್ದು, ₹ 35 ಸಾವಿರ ನಷ್ಟ ಸಂಭವಿಸಿದೆ. ಸಂತೇಮರಹಳ್ಳಿ ಹೋಬಳಿಯ ಆಲ್ದೂರಿನ ಎಂ.ಶಿವನಪ್ಪ ಅವರ 1.5 ಎಕರೆ ಪ್ರದೇಶದಲ್ಲಿ ಹಾಕಿದ್ದ ಬಾಳೆತೋಟ ಸಂಪೂರ್ಣ ನಾಶವಾಗಿದ್ದು, ₹ 20 ಸಾವಿರ ನಷ್ಟವಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಹೋಟೆಲ್‌ಗಳಿಗೆ ನುಗ್ಗಿದ ನೀರು

ಸಂತೇಮರಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಮಳೆಯಿಂದ ಮನೆಗಳು ಹಾಗೂ ಹೋಟೆಲ್‌ಗಳಿಗೆ ನೀರು ನುಗ್ಗಿದೆ.

ಸಂತೇಮರಹಳ್ಳಿಯಲ್ಲಿ 1 ಗಂಟೆಗೂ ಹೆಚ್ಚುಕಾಲ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಬಸ್ ನಿಲ್ದಾಣ ಹಾಗೂ ರಸ್ತೆಗಳ ಹೊಂಡಗಳಲ್ಲಿ ನೀರು ನಿಂತಿತ್ತು.

ಕುದೇರು ರಸ್ತೆಯಲ್ಲಿರುವ ಹೋಟೆಲ್‍ಗಳಿಗೆ ನೀರು ನುಗ್ಗಿದೆ. ಹೋಟೆಲ್‍ಗಳ ಮುಂಭಾಗ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ಹೋಟಲ್‍ಗಳಿಗೆ ನೀರು ನುಗ್ಗಿದೆ. ಇದರಿಂದ ವ್ಯಾಪಾರಕ್ಕೂ ಅಡಚಣೆ ಉಂಟಾಯಿತು.

ಹೆಗ್ಗವಾಡಿಪುರ ಗ್ರಾಮದ ಹೊಸ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮನೆಗಳ ಮುಂಭಾಗ ನಿರ್ಮಿಸಿರುವ ಚರಂಡಿಯಲ್ಲಿ ಸಂಬಂಧಪಟ್ಟವರು ಹೂಳು ತೆಗೆಸಿಲ್ಲ. ಚರಂಡಿಯಲ್ಲಿ ಹರಿದ ನೀರು ಬಡಾವಣೆಯಿಂದ ಹೊರ ಹೋಗುವ ವ್ಯವಸ್ಥೆ ಇಲ್ಲ. ಹಿಂದೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ. ರಸ್ತೆಗಳಲ್ಲಿ ನೀರು ನಿಂತು ಜನ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಉತ್ತಮ ಮಳೆ; ಕೆರೆ,ಕಟ್ಟೆ ಭರ್ತಿ

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಶುಕ್ರವಾರ ಭಾರಿ ಮಳೆಯಾಗಿದ್ದು, ಕಾಡಂಚಿನ ಗ್ರಾಮಗಳಲ್ಲಿ ಇರುವ ಅನೇಕ ಸಣ್ಣಪುಟ್ಟ ಕೆರೆ, ಕಟ್ಟೆಗಳು ಭರ್ತಿಯಾಗಿವೆ.

ತಾಲ್ಲೂಕಿನ ಬೇಗೂರು ವ್ಯಾಪ್ತಿಯ ರಾಘವಾಪುರ, ಕಮರಹಳ್ಳಿ, ತೊಂಡವಾಡಿ ಭಾಗಗಳಲ್ಲಿ, ಕಾಡಂಚಿನ ಗ್ರಾಮಗಳಾದ ಮಂಗಲ, ಜಕ್ಕಳಿ ಮತ್ತು ಬಂಡೀಪುರ ಮೇಲುಕಾಮನಹಳ್ಳಿ, ಮಗುವಿನಹಳ್ಳಿ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಮಳೆ ಸುರಿಯಿತು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಹಾಗೂ ಮಡಹಳ್ಳಿ ವೃತ್ತದಲ್ಲಿ ನೀರು ತುಂಬಿಕೊಂಡಿದ್ದರಿಂದ ಪಾದಚಾರಿಗಳ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

‘ಮಡಹಳ್ಳಿ ರಸ್ತೆಯ ಎರಡು ಬದಿಯಲ್ಲಿ ಚರಂಡಿ ಇಲ್ಲದ ಪರಿಣಾಮ ಒಂದು ಕಿ.ಮೀ ದೂರದಿಂದ ನೀರು ಹರಿದು ಬಂದು ಮಡಹಳ್ಳಿ ವೃತ್ತದಲ್ಲಿ ನೀರು ನಿಲ್ಲುತ್ತದೆ. ಜೊತೆಗೆ, ಅಂಗಡಿಗಳಿಗೂ ನೀರುನುಗ್ಗುತ್ತದೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ’ ಎಂದು ಇಲ್ಲಿನ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಚ್ಚಿ ಹೋದ ಚೆಕ್‌ಡ್ಯಾಂ

ಹನೂರು: ತಾಲ್ಲೂಕಿನ ಮಣಗಳ್ಳಿ ಗ್ರಾಮದ ಸಾರ್ವಜನಿಕ ಹಾಸ್ಟೆಲ್ ಬಳಿ ಹಳ್ಳಕ್ಕೆ ಅಡ್ಡಲಾಗಿ 20 ದಿನಗಳ ಹಿಂದೆ ನಿರ್ಮಿಸಲಾಗಿದ್ದ ಚೆಕ್‌ಡ್ಯಾಂ ಈಚೆಗೆ ಬೀಳುತ್ತಿರುವ ನಿರಂತರ ಮಳೆಗೆ ಕೊಚ್ಚಿ ಹೋಗಿದೆ.

ಕೃಷಿ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಆದರೆ, ಕಾಮಗಾರಿ ಮುಗಿದ ಅಲ್ಪ ದಿನದಲ್ಲೇ ಕೊಚ್ಚಿ ಹೋಗಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದರಿಂದ ಅಲ್ಪ ಮಳೆಗೆ ಚೆಕ್‍ಡ್ಯಾಂ ಕೊಚ್ಚಿ ಹೋಗಿದೆ ಎಂದು ರೈತರು ಆರೋಪಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಹನೂರಿನ ಕೃಷಿ ಅಧಿಕಾರಿ ಮನೋಹರ್, ‘ಇಲಾಖೆ ವತಿಯಿಂದ ನಿರ್ಮಾಣವಾಗಿರುವ ಚೆಕ್‍ಡ್ಯಾಂಗೆ ಇನ್ನು ಬಿಲ್ ಮಾಡಿರುವುದಿಲ್ಲ. ಸ್ಥಳಕ್ಕೆ ತೆರಳಿ ವಾಸ್ತವ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry