ಹಸ್ತಪ್ರತಿ ಸಂರಕ್ಷಿಸುವವರ ಸಂಖ್ಯೆ ಕ್ಷೀಣ

7
ಅರಿವು ಕಾರ್ಯಕ್ರಮ: ಚಿಂತಕ ಪ್ರೊ.ಎನ್.ಎಸ್.ತಾರಾನಾಥ್ ಅಭಿಮತ

ಹಸ್ತಪ್ರತಿ ಸಂರಕ್ಷಿಸುವವರ ಸಂಖ್ಯೆ ಕ್ಷೀಣ

Published:
Updated:

ಮಂಡ್ಯ: ‘ರಾಮಾಯಣ, ಮಹಾ ಭಾರತ, ಪ್ರಾಕೃತ ಗ್ರಂಥಗಳನ್ನು, ಜೈನ ಹಾಗೂ ಬೌದ್ಧ ಸಂಸ್ಕೃತಿಯನ್ನು, ವಚನ ಸಾಹಿತ್ಯವನ್ನು, ದಾಸರ ಕೃತಿಗಳನ್ನು ನಮಗೆ ಉಳಿಸಿಕೊಟ್ಟಂತಹ ಹಸ್ತಪ್ರತಿಗಳು ದೇಶದ ಅಮೂಲ್ಯ ಸಂಪತ್ತು’ ಎಂದು ಚಿಂತಕ ಪ್ರೊ.ಎನ್.ಎಸ್.ತಾರಾನಾಥ್ ಹೇಳಿದರು.

ಪ್ರಾಚ್ಯ ವಿದ್ಯಾ ಸಂಶೋಧನಾಲಯ ಹಾಗೂ ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ‘ಹಸ್ತಪ್ರತಿಗಳ ಮಹತ್ವ ಹಾಗೂ ಅರಿವು ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಾಸನಗಳು, ಹಸ್ತ ಪ್ರತಿಗಳು, ಕಡತಗಳು, ಕಾಗದ ಪ್ರತಿಗಳು, ಬಿದ್ದು ಹೋಗಿರುವ ದೇವಾಲಯಗಳು, ಸವೆದು ಹೋಗುತ್ತಿರುವ ನಾಣ್ಯಗಳನ್ನು ಸಂಸ್ಕೃತಿಯ ಪ್ರತೀಕ ಎಂದು ಗುರುತಿಸುವ ಹಾಗೂ ಸಂರಕ್ಷಿಸುವ ವರ್ಗ ಇಂದು ಕ್ಷೀಣಿಸುತ್ತಿದೆ. ದಾಖಲು ಸಾಹಿತ್ಯದ ಸಂರಕ್ಷಣೆ ಹಾಗೂ ಅವುಗಳ ಬಗ್ಗೆ ಜಾಗೃತಿ ಮೂಡಿಸುವುದು ದೊಡ್ಡ ಕೆಲಸ. ಒಂದು ಹಸ್ತ ಪ್ರತಿಯನ್ನು, ಪರಿಷ್ಕರಿಸಿ, ಸಂಸ್ಕರಿಸಿ, ಅದನ್ನು ಓದಿ ಒಂದು ಪುಸ್ತಕವನ್ನು ಪ್ರಕಟಣೆ ಮಾಡಿದರೆ ದೇಶ–ವಿದೇಶಗಳಲ್ಲಿ ನಮ್ಮ ಹೆಸರು ಹಾಗೂ ಕೆಲಸ ಜಗತ್ತಿಗೆ ತಿಳಿಯುತ್ತದೆ. ಹೀಗೆ ಮೈಸೂರಿನ ಆರ್.ಶ್ಯಾಮಶಾಸ್ತ್ರಿಗಳು ಕೌಟಿಲ್ಯನ ಅರ್ಥಶಾಸ್ತ್ರ ಗ್ರಂಥವನ್ನು ಪ್ರಪಂಚದ ಹಲವು ಭಾಷೆಗಳಿಗೆ ಭಾಷಾಂತರಿಸಿ ಪ್ರಸಿದ್ಧರಾದರು’ ಎಂದರು.

‘ಹಸ್ತಪ್ರತಿಗಳು ವಿವಿಧ ಬಗೆಯ ಲ್ಲಿದ್ದು, ತಾಳೆ ಓಲೆ, ಕಡತ, ಚರ್ಮ, ಮರ, ಕಲ್ಲುಗಳನ್ನೇ ಹಸ್ತಪ್ರತಿ ಯಾಗಿ ಬಳಸಿಕೊಂಡು ತಮಗೆ ತಿಳಿದಿರುವ ಸಾಹಿತ್ಯ ಹಾಗೂ ವಿದ್ಯೆಯನ್ನು ಸಂರಕ್ಷಿ ಸುವ ಕಾರ್ಯವನ್ನು ಹಿರಿಯರು ಮಾಡಿದ್ದಾರೆ. ವಚನಕಾರರು ಆಡಿದ ಮಾತುಗಳನ್ನು ಸುಮಾರು ಒಂದು ಲಕ್ಷದಷ್ಟು ವಚನಗಳಾಗಿ ಬರೆದಿಡುವ ಕೆಲಸವನ್ನು ವಚನ ಭಂಡಾರಿ ಶಾಂತರಸ ಮಾಡಿದ್ದಾರೆ. ಅವರು ವಚನಗಳನ್ನು ಅಂದು ಬರೆದಿಡದೇ ಹೋಗಿದ್ದರೆ ಬಸವಣ್ಣ, ಅಕ್ಕಮಹಾದೇವಿ, ಮಾಚಿದೇವ, ಸಿದ್ಧಲಿಂಗ, ಶಾಂತರಸ ಇವರೆಲ್ಲರೂ ಜಗದ್ವಿಖ್ಯಾತ ಆಗುತ್ತಿರಲಿಲ್ಲ’ ಎಂದರು.

‘ಕರ್ನಾಟಕವನ್ನು ನಾವು ಹಸ್ತ ಪ್ರತಿಗಳ ಕಣಜ ಎಂದು ಕರೆಯುತ್ತೇವೆ. ಎಲ್ಲಿ ಕೈ ಹಾಕಿದರೂ ಅಲ್ಲಿ ಹಸ್ತ ಪ್ರತಿಗಳು ಸಿಗುತ್ತವೆ. ಧರ್ಮಸ್ಥಳ, ಮೂಡುಬಿದಿರೆ, ಚಿತ್ರದುರ್ಗ, ಶ್ರವಣಬೆಳಗೊಳದ ಭಂಡಾರಗಳು, ಮೈಸೂರಿನ ವಿಶ್ವ ವಿದ್ಯಾ ಲಯದ ಓರಿಯಂಟಲ್ ಸಂಶೋಧನಾ ಸಂಸ್ಥೆ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಗ್ರಂಥಾಲಯಗಳಲ್ಲಿ ಸಂಸ್ಕೃತ, ಕನ್ನಡ, ತೆಲುಗು, ತಮಿಳು ಸೇರಿ ವಿವಿಧ ಭಾಷೆಗಳ ಹಸ್ತಪ್ರತಿಗಳನ್ನು ಕಾಣಬಹುದು. ಸುಮಾರು 70 ಸಾವಿರಕ್ಕೂ ಹೆಚ್ಚು ಹಸ್ತ ಪ್ರತಿಗಳನ್ನು ನಾವು ಇಲ್ಲಿ ಕಾಣುತ್ತೇವೆ. ಇವು ಸಣ್ಣ ಗಾತ್ರದ, ಎಂಟು ಅಡಿ ಉದ್ದದ, ನೂರಾರು ಪುಟಗಳ ಹಾಗೂ ಕೆಲವೇ ಪುಟಗಳದ್ದಾಗಿವೆ’ ಎಂದು ತಿಳಿಸಿದರು.

‘ಅಂದಿನ ಕಾಲದಲ್ಲಿ ಹಸ್ತ ಪ್ರತಿಗಳು ಬಹಳ ದುಬಾರಿಯಾಗಿದ್ದವು. ಒಮ್ಮೆ ಬರೆದ ಪ್ರತಿಯನ್ನು ಪುನಃ ಬರೆಯದೇ, ಅವನ್ನೇ ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಅವರು ಬರೆದದ್ದನ್ನು ನಾವು ಓದುವುದಕ್ಕೆ ಪರದಾಡುತ್ತಿದ್ದೇವೆ. ಹಸ್ತಪ್ರತಿಗಳನ್ನು ಬರೆವ ಲಿಪಿಕಾರರು ವೀರಶೈವ ಮಠಗಳು, ಬಸದಿಗಳು, ಶೆಟ್ಟರಮನೆ, ರಾಮಮಂದಿರ, ಶಾಲೆಗಳು, ದೇವಸ್ಥಾನಗಳು, ಅರ ಮನೆಗಳಲ್ಲಿ ನೆಲೆಗೊಳ್ಳುತ್ತಿದ್ದರು. ಅವರು ಹಸ್ತಪ್ರತಿಗಳಲ್ಲಿ ಸಮಯ–ದಿನಾಂಕವನ್ನು ನಮೂದಿಸಿ ಬರೆಯುತ್ತಿದ್ದರು. ಹೀಗಾಗಿ ಯಾರಾದರೂ ಎಲ್ಲಿಯೇ ಇಂತಹ ಹಸ್ತಪ್ರತಿಗಳು ಸಿಕ್ಕಿದರೆ ಅವುಗಳನ್ನು ಮೈಸೂರು ಓರಿಯಂಟಲ್ ಸಂಸ್ಥೆ ಅಥವಾ ನಗರದ ಗಾಂಧಿಭವನಕ್ಕೆ ತಲುಪಿಸಿ’ ಎಂದು ಮನವಿ ಮಾಡಿದರು.

ಮೈಸೂರು ವಿವಿ ಪ್ರಭಾರಿ ಕುಲಪತಿ ಡಾ.ಸಿ.ನಿಂಗಮ್ಮ ಬೆಟಸೂರು, ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿರ್ದೇಶಕ ಡಾ.ಎಸ್.ಶಿವರಾಜಪ್ಪ, ರಾಜೇಂದ್ರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry