7
ಮುಂಗಾರು ಪೂರ್ವ ಮಳೆ ಚುರುಕು: 2.60 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ

ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಆರಂಭ

Published:
Updated:
ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಆರಂಭ

ಹಾಸನ: ಪೂರ್ವ ಮುಂಗಾರು ಮಳೆ ಚುರುಕಾಗಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಉಂಟಾಗದಂತೆ ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಾದ್ಯಂತ ಪೂರ್ವ ಮುಂಗಾರಿನಲ್ಲಿ ಒಟ್ಟು 2,60,105 ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ ಈ ವರೆಗೂ (ಮೇ 22 ರವರೆಗೆ) 23,219 ಹೆಕ್ಟೇರ್‌ ಬಿತ್ತನೆ (ಶೇ 9ರಷ್ಟು) ಆಗಿದೆ.

ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ರೈತರಲ್ಲಿ ಮಂದ ಹಾಸ ಮೂಡಿಸಿದೆ. ಬಿತ್ತನೆ ಬೆಳೆಗಳಾದ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ತಂಬಾಕು ಬಿತ್ತನೆ ಮಾಡಲು ರೈತರು ಭೂಮಿ ಉಳುಮೆ ಮಾಡಿದ್ದಾರೆ.

ಜನವರಿಯಿಂದ ಮೇ ವರೆಗೆ ವಾಡಿಕೆ ಮಳೆ 146 ಮಿಲಿ ಮೀಟರ್‌ ಪೈಕಿ 229 ಮಿಲಿ ಮೀಟರ್‌ ಆಗಿದೆ. ಅಂದರೆ ಶೇಕಡಾ 57 ಹೆಚ್ಚಾಗಿದೆ. ಅರಕಲಗೂಡು ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 77 ಮಿಲಿ ಮೀಟರ್‌ಗಳಷ್ಟು ಮಳೆಯಾಗಿದೆ. ಆಲೂರು, ಅರಕಲಗೂಡು ಮತ್ತು ಹಾಸನ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಅರಸೀಕೆರೆ, ಚನ್ನರಾಯಪಟ್ಟಣ ಮತ್ತು ಸಕಲೇಶಪುರದಲ್ಲಿ ಸಾಧಾರಣಕ್ಕಿಂತ ಹೆಚ್ಚು ಮಳೆಯಾಗಿದೆ. ಉತ್ತಮ ಮಳೆಯಿಂದಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ರೈತರು ಭೂಮಿ ಉಳುಮೆಯಲ್ಲಿ ತೊಡಗಿದ್ದು, ಬಿತ್ತನೆ ಕಾರ್ಯ ಪ್ರಾರಂಭ ಮಾಡಿದ್ದಾರೆ.

ಭತ್ತ, ಬಿಳಿ ಜೋಳ, ಮುಸುಕಿನ ಜೋಳ, ಉದ್ದು, ಹಲಸಂದೆ, ತೊಗರಿ, ಹುರುಳಿ, ಹೆಸರು, ಸೂರ್ಯಕಾಂತಿ, ಎಳ್ಳು, ರಾಗಿ, ನೆಲಗಡಲೆ ಬೆಳೆಗಳ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ ಜಿಲ್ಲೆಯಲ್ಲಿ ಹೆಚ್ಚಾಗಿ ಮುಸುಕಿನ ಜೋಳ (80 ಸಾವಿರ ಹೆಕ್ಟೇರ್‌), ರಾಗಿ (70 ಸಾವಿರ ಹೆಕ್ಟೇರ್‌), ಭತ್ತ (50 ಸಾವಿರ ಹೆಕ್ಟೇರ್‌) ಬೆಳೆಯಲಾಗುತ್ತದೆ.

ಹೇಮಾವತಿ ಜಲಾಶಯದಿಂದ ನೀರು ಹರಿಸಿದರೆ ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಹಾಸನ ತಾಲ್ಲೂಕಿನಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ಆಲೂರು, ಸಕಲೇಶಪುರ, ಬೇಲೂರಿನಲ್ಲಿ ಮಳೆಯಾಶ್ರಿತ ಭತ್ತ ಬೆಳೆಯಲಾಗುತ್ತದೆ.

ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲ್ಲೂಕಿನ ಕೆಲ ಭಾಗಗಳಲ್ಲಿ ಕಬ್ಬು, ಹಳ್ಳಿ ಮೈಸೂರು ಮತ್ತು ಅರಕಲಗೂಡು ತಾಲ್ಲೂಕಿನಲ್ಲಿ ತಂಬಾಕು ಬೆಳೆ ಬೆಳೆಯಲಾಗುತ್ತದೆ.

ಹಾಸನ ತಾಲ್ಲೂಕಿನಲ್ಲಿ ಆಲೂಗಡ್ಡೆ, ಅರಕಲಗೂಡು, ಹೊಳೆನರಸೀಪುರದಲ್ಲಿ ಹೊಗೆಸೊಪ್ಪು ನಾಟಿ ಬಿರುಸಿನಿಂದ ಸಾಗಿದೆ. ಅರಸೀಕೆರೆ ಸುತ್ತಲೂ ದ್ವಿದಳ ಧಾನ್ಯ ಬೆಳೆಗೆ ರೈತರು ಮುಂದಾಗಿದ್ದಾರೆ. ಸಕಲೇಶಪುರ, ಆಲೂರು ಭಾಗದಲ್ಲಿ ಭತ್ತ ನಾಟಿಗೆ ತಯಾರಿ ನಡೆದಿದೆ. ಭೂಮಿ ತೇವಾಂಶ ಇರುವುದರಿಂದ ಮುಸುಕಿನ ಜೋಳ ಬಿತ್ತನೆಗೆ ತೊಂದರೆ ಆಗಿದೆ.

ಬಿತ್ತನೆಗೆ ಅನಕೂಲ ಕಲ್ಪಿಸುವ ಸಲುವಾಗಿ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬವರನ್ನು ದಾಸ್ತಾನು ಮಾಡಿಕೊಂಡಿದ್ದು, ಬೇಡಿಕೆ ಆಧಾರದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಜನವರಿಯಿಂದ ಸೆಪ್ಟೆಂಬರ್‌ ವರೆಗೆ 1,14,347 ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಡಿಕೆ ಇದೆ. ಈವರೆಗೆ 8,158 ಮೆಟ್ರಿಕ್‌ ಟನ್‌ ರಸಗೊಬ್ಬರ ಪೂರೈಕೆ ಆಗಿದೆ. ಕಳೆದ ಸಾಲಿನಲ್ಲಿ 14,400 ಮೆಟ್ರಿಕ್‌ ಟನ್‌ ರಸಗೊಬ್ಬರ ಉಳಿದಿತ್ತು. ಹಾಗಾಗಿ ಕೊರತೆ ಉಂಟಾಗಿಲ್ಲ.

ಕೃಷಿ ಇಲಾಖೆ ದಾಸ್ತಾನು ಮಳಿಗೆಯಲ್ಲಿ 3,943 ಮೆಟ್ರಿಕ್ ಟನ್‌ ಯೂರಿಯಾ, 1,275 ಮೆಟ್ರಿಕ್‌ ಟನ್‌ ಎಂಒಪಿ, 1,697 ಮೆಟ್ರಿಕ್‌ ಟನ್‌ ಡಿಎಪಿ, 7,460 ಮೆಟ್ರಿಕ್‌ ಟನ್‌ ಎನ್‌ಸಿಕೆ ಮತ್ತು ಕಾಂಪೋಸ್ಟ್‌ ಗೊಬ್ಬರ ದಾಸ್ತಾನು ಮಾಡಲಾಗಿದೆ.

‘ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಬಿತ್ತನೆ ಜೋರಾಗಿ ನಡೆಯುತ್ತಿದೆ. ಶುಂಠಿ, ಆಲೂಗೆಡ್ಡೆ, ಕಡಲೆಕಾಯಿ ಬೆಳೆಗೆ ಶಿಲೀಂದ್ರ ರೋಗ ತಪ್ಪಿಸಲು ಜೈವಿಕ ಶಿಲೀಂದ್ರ ನಾಶಕ ಬಳಸಬಹುದು. ಕೃಷಿ ಭಾಗ್ಯ ಯೋಜನೆ ಚಾಲ್ತಿಯಲ್ಲಿದ್ದು, ಮಳೆ ನೀರು ಸಂಗ್ರಹಿಸಿದರೆ ಅಂತರ್ಜಲ ಹೆಚ್ಚಾಗುತ್ತದೆ. ಉದ್ಯೋಗ ಖಾತ್ರಿಯಲ್ಲಿ ಕೃಷಿ ಹೊಂಡ, ಬದು ನಿರ್ಮಿಸಲು ಅವಕಾಶವಿದೆ. ಬದುಗಳ ಮೇಲೆ ತರಕಾರಿಗಳಾದ ಸಿಹಿ ಕುಂಬಳಕಾಯಿ, ಹಿರೇಕಾಯಿ, ಆಗಲಕಾಯಿ ಬೆಳೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿ ಭಾಗ್ಯದಲ್ಲಿ 3500 ಕೃಷಿ ಹೊಂಡ ನಿರ್ಮಾಣವಾಗಿದೆ. ಅದರ ಬದುಗಳ ಮೇಲೆ ನುಗ್ಗೇಕಾಯಿ, ನಿಂಬೆ ಬೆಳೆಸುವುದರಿಂದ ಹೊಂಡಕ್ಕೆ ಬೇಲಿ ಹಾಕುವುದರ ಜತೆಗೆ ಆದಾಯವೂ ಗಳಿಸಬಹುದು. ಇದರ ಜತೆಗೆ ಸಾಕಷ್ಟು ತಳಿಗಳ ಹುಲ್ಲುಗಳನ್ನು ಬೆಳೆಸಿದರೆ ಪಶುಗಳಿಗೆ ಮೇವು ಲಭ್ಯವಾಗುತ್ತದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಗಳನ್ನು ಭೇಟಿ ನೀಡಿ ರೈತರು ಮಾಹಿತಿ ಪಡೆಯಬಹುದು’ ಎಂದರು.

ಹಸಿರೆಲೆ ಗೊಬ್ಬರ

ಭತ್ತ ಬೆಳೆಗೆ ಪೂರಕ ವಾತಾವರಣ ಇರುವುದರಿಂದ ನಾಟಿಗೂ ಮುನ್ನ ಹಸಿರೆಲೆ ಗೊಬ್ಬ ಹಾಕಿದರೆ ಎಕರೆಗೆ 2 ಕ್ವಿಂಟಲ್‌ ಅಧಿಕ ಇಳುವರಿ ಪಡೆಯಬಹುದು. ಇಲಾಖೆ ವತಿಯಿಂದಲೇ ಗೊಬ್ಬರ ವಿತರಿಸಲಾಗುತ್ತದೆ ಎಂದು ಜಂಟಿ ನಿರ್ದೇಶಕ ಮಧುಸೂದನ್‌ ತಿಳಿಸಿದರು.

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ

ಬಿತ್ತನೆ ಬೀಜ, ರಸಗೊಬ್ಬರ ಅಗತ್ಯಕ್ಕಿಂತ ಅಧಿಕವಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜವನ್ನು ಆಯಾ ತಾಲ್ಲೂಕಿನ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ. ಮುಸುಕಿನ ಜೋಳದ ಮಧ್ಯೆ ತೊಗರಿ ಬೆಳೆ ಬೆಳೆಯಬಹುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry