ಬಾವಲಿ ಕಂಡರೆ ಭಯ ಬೀಳುತ್ತಿರುವ ಜನರು

7
ನಿಫಾ: ಹಳೇ ತಾಲ್ಲೂಕು ಕಚೇರಿ, ಪೊಲೀಸ್‌ ಠಾಣೆ ಸಮೀಪದ ಮರದಲ್ಲಿ ಹೇರಳವಾಗಿರುವ ಪಕ್ಷಿಗಳು

ಬಾವಲಿ ಕಂಡರೆ ಭಯ ಬೀಳುತ್ತಿರುವ ಜನರು

Published:
Updated:
ಬಾವಲಿ ಕಂಡರೆ ಭಯ ಬೀಳುತ್ತಿರುವ ಜನರು

ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಸಮೀಪದ ‌ಮರಗಳಲ್ಲಿ ಶತಮಾನಗಳಿಂದ ದೊಡ್ಡ ಸಂಖ್ಯೆಯಲ್ಲಿ ನೆಲೆಸಿರುವ ಬಾವಲಿಗಳು ಈಗ ನಾಗರಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥಲ್ಲಿ ಆತಂಕ ಸೃಷ್ಟಿಸಿವೆ.

ಕೇರಳದಲ್ಲಿ ನಿಫಾ ವೈರಾಣು ಮರಣ ಮೃದಂಗ ಬಾರಿಸುತ್ತಿದೆ. ಈ ಮಾರಣಾಂತಿಕ ರೋಗಕ್ಕೆ ಬಾವಲಿಗಳಲ್ಲಿ ಕಂಡುಬರುವ ನಿಫಾ ವೈರಾಣು ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಇದು ಇಲ್ಲಿನ ಜನರ ಭಯಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಈಗ ಅತ್ತಿ, ಆಲ, ಅರಳಿಯಂಥ ಮರಗಳು ಹಣ್ಣುಬಿಟ್ಟಿವೆ. ಪಟ್ಟಣದ ಈ ಮರಗಳಲ್ಲಿ ಇರುವ ಸಾವಿರಾರು ಬಾವಲಿಗಳು ಸಂಜೆ ಕತ್ತಲು ಕವಿಯುತ್ತಿದ್ದಂತೆ ಒಟ್ಟಾಗಿ ಎದ್ದು ಆಹಾರಕ್ಕಾಗಿ ಹೊರಡುತ್ತವೆ. ಬಾವಲಿಗಳು ನೈಸರ್ಗಿಕವಾಗಿ ಸಿಗುವ ಹಣ್ಣುಗಳನ್ನು ಚೆನ್ನಾಗಿ ಅಗೆದು ರಸ ನುಂಗಿ ತೊವ್ವೆಯನ್ನು ಹೊರಗೆ ಉಗಿಯುತ್ತವೆ.

ಬಾವಲಿಗಳ ಮಲ, ಮೂತ್ರ, ತೊವ್ವೆಯ ಮೂಲಕ ರೋಗಾಣು ಹರಡುವ ಸಾಧ್ಯತೆ ಇದೆ.  ದನಗಳು, ದನಗಾಹಿಗಳು ಹಾಗೂ ನಾಗರಿಕರು ಇಂಥ ಮರಗಳ ಕೆಳಗೆ ಓಡಾಡುವುದು ಸಾಮಾನ್ಯ. ಮಕ್ಕಳು ಮರದಿಂದ ಉದುರಿದ ಅತ್ತಿ ಹಣ್ಣನ್ನು ಆರಿಸಿ ತಿನ್ನುವರು. ಈಗ ಮಾವಿನ ಕಾಯಿ ಕಾಲವಾಗಿರುವುದರಿಂದ ಬಾವಲಿಗಳು ಮಾವಿನ ಹಣ್ಣನ್ನು ಕಚ್ಚುತ್ತವೆ. ಅಂಥ ಹಣ್ಣು ತಿಂದಲ್ಲಿ ರೋಗಾಣು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಮಾಹಿತಿ ನೀಡುವರು. ಈ ಕಾರಣದಿಂದಲೇ ಇಲ್ಲಿನ ಜನರಲ್ಲಿ ಭಯ ಆವರಿಸತೊಡಗಿದೆ.

ಪಟ್ಟಣದ ಹಳೇ ತಾಲ್ಲೂಕು ಕಚೇರಿ, ಪೊಲೀಸ್‌ ಠಾಣೆ ಸಮೀಪದ ಮರಗಳು ಹಾಗೂ ಎತ್ತರವಾದ ನೀಲಗಿರಿ ಮರಗಳ ರೆಂಬೆ ಕೊಂಬೆಗಳಿಗೆ ಇವು ತಲೆಕೆಳಗಾಗಿ ಜೋತುಬಿದ್ದಿರುತ್ತವೆ. ಹಗಲು ಹೊತ್ತಿನಲ್ಲಿ ಶಬ್ದಮಾಡುತ್ತ ಮಲ, ಮೂತ್ರ ವಿಸರ್ಜಿಸುತ್ತದೆ. ಮರಗಳ ಕೆಳಗೆ ಓಡಾಡುವ ಜನರ ಮೇಲೆ ಅದು ಬೀಳುವುದು ಸಾಮಾನ್ಯ. ಇನ್ನು ಸಂಜೆ ಮೇವಿಗೆ ಹೊರಡುವ ಅಸಂಖ್ಯಾತ ಬಾವಲಿಗಳು ಪಟ್ಟಣದ ಬಸ್‌ ನಿಲ್ದಾಣ, ಎಂಜಿ ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹಾರಾಡುತ್ತವೆ.

ಆಗ ಅವುಗಳಿಂದ ವಿಸರ್ಜನೆಗೊಳ್ಳುವ ವಸ್ತುಗಳು ಕೆಳಗೆ ಬೀಳುವುದು ಸಾಮಾನ್ಯ. ಕೆಲವರು ಈ ಬಾವಲಿಗಳನ್ನು ಗುಂಡಿಟ್ಟು ಕೊಂದು ಅಥವಾ ಬಲೆ ಬೀಸಿ ಹಿಡಿದು ತಿನ್ನುವರು. ಇನ್ನು ಕೆಲವರು ನಾಟಿ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಇಂತ ಸಂದರ್ಭದಲ್ಲೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಮಾವಿನ ಕಾಯಿ ಕಾಲ ಬಂದರೆ ಕೆಲವು ಹಂದಿ ಸಾಕಾಣಿಕೆದಾರರು ಹಂದಿಗಳನ್ನು ತಂದು ಪಟ್ಟಣದಲ್ಲಿ ಬಿಡುವರು. ಮೇವು ಹಾಕುವುದಿಲ್ಲ. ಅವು ಪಟ್ಟಣದಲ್ಲಿ ಅಡ್ಡಾಡಿ ಜನರು ತಿಂದೆಸೆದ ಹಾಗೂ ಕೊಳೆತ ಹಣ್ಣಿನಿಂದ ಮಾವಿನ ಓಟೆ (ಬೀಜ) ತಿನ್ನುತ್ತವೆ. ಮಾವಿನ ಸುಗ್ಗಿ ಮುಗಿದ ಮೇಲೆ ಹಂದಿಗಳನ್ನು ಹಿಡಿದು ಕೊಯ್ದು ಮಾಂಸ ಮಾರಾಟ ಮಾಡಲಾಗುತ್ತದೆ. ನಿಫಾ ವೈರಾಣು ಹಂದಿಗಳಿಂದಲೂ ಹರಡುವುದರಿಂದ ಇದೂ ಸಹ ನಾಗರಿಕರಿಗೆ ಹೊಸ ತಲೆ ನೋವಾಗಿದೆ.

**

ಮಾರಕ ನಿಫಾ ವೈರಾಣು ಹಂದಿಗಳ ಮೂಲಕ ಹರಡುವ ಸಾಧ್ಯತೆ ಇದೆ. ಹಂದಿಗಳು ಜನವಸತಿ ಪ್ರದೇಶ ಪ್ರವೇಶಿಸದಂತೆ ತಡೆಯಬೇಕು

– ಇ.ಶಿವಣ್ಣ, ನಾಗರಿಕ

**

ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ತನಕ ಬಾವಲಿಗಳು ವಾಸಿಸುವ ಮರಗಳ ಕೆಳಗೆ ಜನರು ಓಡಾಡುವುದನ್ನು ನಿಯಂತ್ರಿಸಬೇಕು

ಎಸ್‌.ಎನ್‌.ಸತ್ಯನಾರಾಯಣ, ನಾಗರಿಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry