ಗೊಟ್ಟಿಗೆರೆ ಕಲ್ಯಾಣಿಗೆ ಮಣ್ಣು ಸುರಿದ ಬಿಬಿಎಂಪಿ

4

ಗೊಟ್ಟಿಗೆರೆ ಕಲ್ಯಾಣಿಗೆ ಮಣ್ಣು ಸುರಿದ ಬಿಬಿಎಂಪಿ

Published:
Updated:
ಗೊಟ್ಟಿಗೆರೆ ಕಲ್ಯಾಣಿಗೆ ಮಣ್ಣು ಸುರಿದ ಬಿಬಿಎಂಪಿ

ಬೆಂಗಳೂರು: ರಸ್ತೆ ಅಗಲಗೊಳಿಸುವ ನೆಪದಲ್ಲಿ ನಗರದ ಗೊಟ್ಟಿಗೆರೆ ಕಲ್ಯಾಣಿಗೆ ಬಿಬಿಎಂಪಿ ಶನಿವಾರ ಮಣ್ಣು ತುಂಬಿದೆ. ಇದರಿಂದ ಇಲ್ಲಿನ ಅಮೂಲ್ಯ ಜಲಮೂಲವೊಂದನ್ನು ನಗರಾಡಳಿತ ತಾನೇ ಸಮಾಧಿಗೊಳಿಸಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬೆಳಿಗ್ಗೆಯಿಂದಲೇ ಕಲ್ಯಾಣಿಗೆ ಮಣ್ಣು ತುಂಬಲಾಗಿದೆ. ಟಿಪ್ಪರ್‌ಗಳು ಲೋಡುಗಟ್ಟಲೆ ಮಣ್ಣು ಸುರಿದಿವೆ. ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗ ಈ ಕಾಮಗಾರಿ ಕೈಗೊಂಡಿದೆ. ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಸಲುವಾಗಿ ಈ ಕಾಮಗಾರಿ ಮಾಡಲಾಗಿದೆ’ ಎಂದು ಸ್ಥಳದಲ್ಲಿದ್ದ ಕಾರ್ಮಿಕರು ಹೇಳಿದರು.

‘ಐತಿಹಾಸಿಕ ಕಲ್ಯಾಣಿಯೊಂದನ್ನು ಸದ್ದಿಲ್ಲದೇ ನೆಲಸಮಗೊಳಿಸಲಾಗಿದೆ. ಬನ್ನೇರುಘಟ್ಟ ರಸ್ತೆಯ ಈ ಪ್ರದೇಶದಲ್ಲಿ ಸಾಕಷ್ಟು ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಇವೆ. ಈ ಕಲ್ಯಾಣಿಯ ಹೂಳು ತೆಗೆದಿದ್ದರೆ ಆ ಭಾಗದಲ್ಲಿ ಅಂತರ್ಜಲ ಹೆಚ್ಚಾಗುತ್ತಿತ್ತು. ಪ್ರತಿವರ್ಷ ನೀರು ಉಳಿಸುವ ಕುರಿತು ಮಾತನಾಡುವ ಬಿಬಿಎಂಪಿ ಈ ಕಲ್ಯಾಣಿಯನ್ನು ಮುಚ್ಚಿರುವುದು ಎಷ್ಟು ಸರಿ’ ಎಂದು ಸ್ಥಳೀಯ ನಿವಾಸಿ ಆನಂದ್‌ ಪ್ರಶ್ನಿಸಿದರು.

ಕಲ್ಯಾಣಿಯ ಸಮೀಪವೇ ಆಂಜನೇಯ ದೇವಸ್ಥಾನವೂ ಇದೆ. ಕಲ್ಯಾಣಿ ಅಭಿವೃದ್ಧಿಗೊಳಿಸಿದ್ದರೆ ಅದರ ಅಂದ ಮತ್ತು ಪಾವಿತ್ರ್ಯವೂ ಹೆಚ್ಚುತ್ತಿತ್ತು. ರಸ್ತೆ ಅಗಲಗೊಳಿಸಲು ಇಡೀ ಕಲ್ಯಾಣಿಯನ್ನೇ ಮುಚ್ಚಬೇಕಾಗಿರಲಿಲ್ಲ. ಒಂದು ಪ್ರದೇಶದ ಮೆಟ್ಟಿಲುಗಳನ್ನು ಭಾಗಶಃ ಮುಚ್ಚಿದ್ದರೂ ಸಾಕಿತ್ತು ಎಂದರು.

ಸ್ಥಳೀಯರ ಮನವಿಗೆ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸಲಿಲ್ಲ. ಆದೇಶದ ಪ್ರಕಾರ ಕಾಮಗಾರಿ ನಡೆಸುತ್ತಿದ್ದೇವೆ ಎಂದು ಹೇಳಿ ಜಾರಿಕೊಂಡರು ಎಂದು ಸ್ಥಳೀಯರು ದೂರಿದರು.

ಪಾಲಿಕೆಯ ಸದಸ್ಯೆ ಲಲಿತಾ ನಾರಾಯಣ ಪ್ರತಿಕ್ರಿಯಿಸಿ, ‘ಇಲ್ಲಿ ಬನ್ನೇರುಘಟ್ಟ ರಸ್ತೆಯವರೆಗೆ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಕಲ್ಯಾಣಿ ಮುಚ್ಚುವುದು ಅನಿವಾರ್ಯವಾಗಿದೆ. ಅದಷ್ಟೇ ಅಲ್ಲ ಇಲ್ಲಿನ ಬಿಬಿಎಂಪಿ ಕಚೇರಿ ಆಸುಪಾಸಿನ ಕಟ್ಟಡಗಳನ್ನೂ ತೆಗೆಯಲಾಗುತ್ತದೆ. 150 ಮೀಟರ್‌ ಉದ್ದದ ಮುಖ್ಯರಸ್ತೆಯಿದು. ₹150 ಕೋಟಿ ವೆಚ್ಚದಲ್ಲಿ ಟೆಂಡರು ನಡೆದಿದೆ. ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ಕೆಲಕಾಲ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಈಗ ಮುಂದುವರಿಸಲಾಗುತ್ತಿದೆ. ಕಲ್ಯಾಣಿ ನಿರ್ವಹಣೆ ಇಲ್ಲದೇ ಕೆಟ್ಟು ಹೋಗಿತ್ತು. ಕಾಮಗಾರಿ ಮುಂದುವರಿಸುವ ದೃಷ್ಟಿಯಿಂದ ಮುಚ್ಚಬೇಕಾಯಿತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry