ಶಾಲೆ ಆರಂಭ; ಸಮವಸ್ತ್ರ ಪೂರೈಕೆ ವಿಳಂಬ

7
ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4.5 ಲಕ್ಷ ಮಕ್ಕಳಿಗೆ ಸೌಲಭ್ಯ

ಶಾಲೆ ಆರಂಭ; ಸಮವಸ್ತ್ರ ಪೂರೈಕೆ ವಿಳಂಬ

Published:
Updated:
ಶಾಲೆ ಆರಂಭ; ಸಮವಸ್ತ್ರ ಪೂರೈಕೆ ವಿಳಂಬ

ಬೆಳಗಾವಿ: ಬೇಸಿಗೆ ರಜೆ ಮುಗಿದಿದ್ದು, ಸೋಮವಾರದಿಂದ (ಮೇ 28) ಸರ್ಕಾರಿ ಶಾಲೆಗಳು ಪುನರಾರಂಭವಾಗಲಿವೆ. ಆದರೆ, ಮಕ್ಕಳಿಗೆ ವಿತರಿಸಲು ಇನ್ನೂ ಸಮವಸ್ತ್ರ, ಶೂ ಹಾಗೂ ಸಾಕ್ಸ್‌ಗಳ ಪೂರೈಕೆ ಆಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಇನ್ನೊಂದಷ್ಟು ದಿನಗಳವರೆಗೆ ಬಣ್ಣ–ಬಣ್ಣದ ಬಟ್ಟೆ ಅಥವಾ ಹಳೆಯ ಸಮವಸ್ತ್ರಗಳಲ್ಲೇ ತರಗತಿಗಳಿಗೆ ಹಾಜರಾಗಬೇಕಿದೆ.

ಶಾಲೆ ಆರಂಭದ ದಿನದಂದೇ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು, ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುವುದು ಎನ್ನುವ ಸರ್ಕಾರದ ಭರವಸೆ ಈ ಶೈಕ್ಷಣಿಕ ವರ್ಷದಲ್ಲೂ ಈಡೇ ರಿಲ್ಲ. ಪಠ್ಯಪುಸ್ತಕಗಳನ್ನು ಮಾತ್ರ ಪೂರೈಸಲಾಗಿದ್ದು, ಉಳಿದ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಮಕ್ಕಳು ಇನ್ನಷ್ಟು ದಿನಗಳು ಕಾಯುವುದು ಅನಿವಾರ್ಯವಾಗಿದೆ.

ಬೆಳಗಾವಿ (3.74 ಲಕ್ಷ) ಹಾಗೂ ಚಿಕ್ಕೋಡಿ (4.89 ಲಕ್ಷ) ಶೈಕ್ಷಣಿಕ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ 8.63 ಲಕ್ಷ ಮಕ್ಕಳು ಪ್ರವೇಶ ಪಡೆದಿದ್ದಾರೆ. ಎರಡೂ ವಿಭಾಗದ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮಾತ್ರವೇ ಸಮವಸ್ತ್ರಗಳನ್ನು ವಿತರಿಸಲಾಗುವುದು. ಬೆಳಗಾವಿ ಜಿಲ್ಲೆಯ 1,95,691 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 2,55,404 ಸೇರಿ ಒಟ್ಟು 4,51,095 ಮಕ್ಕಳಿಗೆ ಸಮವಸ್ತ್ರ ದೊರೆಯಲಿದೆ. ಇದಕ್ಕಾಗಿ ಪೂರ್ವಸಿದ್ಧತೆ ಇನ್ನೂ ಪೂರ್ಣಗೊಂಡಿಲ್ಲ.

2 ಜೊತೆ ವಿತರಣೆ: ಸರ್ಕಾರಿ ಶಾಲೆಯ ಪ್ರತಿ ವಿದ್ಯಾರ್ಥಿಗೆ 2 ಜೊತೆ ಸಮವಸ್ತ್ರ ನೀಡಲಾಗುತ್ತದೆ. ಜೊತೆ ಸಮವಸ್ತ್ರಕ್ಕೆ ಸರ್ಕಾರ ₹ 200 ವೆಚ್ಚ ಮಾಡುತ್ತದೆ. ಒಂದು ಜೊತೆಯನ್ನು ಸರ್ಕಾರವೇ ಎಸ್‌ಡಿಎಂಸಿಗಳ ಮೂಲಕ ವಿತರಿಸಿದರೆ, ಇನ್ನೊಂದು ಜೊತೆಯನ್ನು ಸರ್ವ ಶಿಕ್ಷಣ ಅಭಿಯಾನದ ಮೂಲಕ ಕೆಲವು ತಿಂಗಳುಗಳ ನಂತರ ಕೊಡಲಾಗುತ್ತದೆ. ‘ಮೊದಲ ಜೊತೆ ಸಮವಸ್ತ್ರ ಯಾವಾಗ ದೊರೆಯುತ್ತದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಸಿದ್ಧತೆ ನಡೆಯುತ್ತಿದೆ’ ಎನ್ನುವ ಉತ್ತರ ಅಧಿಕಾರಿಗಳಿಂದ ಬರುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಡಿಡಿಪಿಐ ಎಚ್‌. ಚಂದ್ರಪ್ಪ, ‘ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭೋತ್ಸವಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಿಗೆ ಸಮವಸ್ತ್ರಗಳು ಇನ್ನೂ ಬರಬೇಕಾಗಿದೆ. ಹಂತ ಹಂತವಾಗಿ ಪೂರೈಸಲಾಗುತ್ತದೆ. ಕೆಲವೇ ದಿನಗಳಲ್ಲಿ, ನೇರವಾಗಿ ಆಯಾ ಬಿಇಒ ಕಚೇರಿಗಳಿಗೆ ಸರಬರಾಜಾಗುತ್ತವೆ. ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಸಮವಸ್ತ್ರ ಸಿದ್ಧಪಡಿಸಿ ಹಂಚಿಕೆ ಮಾಡುವುದಕ್ಕಾಗಿ ರಾಜ್ಯಮಟ್ಟದಲ್ಲಿ ಟೆಂಡರ್‌ ಆಗಿದೆ ಎನ್ನುವ ಮಾಹಿತಿ ಇದೆ. ನಮಗೆ ಇನ್ನೂ ಪೂರೈಕೆಯಾಗಿಲ್ಲ. ಬಂದ ಕೂಡಲೇ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. 2ನೇ ಜೊತೆ ಸಮವಸ್ತ್ರ ಖರೀದಿಗಾಗಿ ಎಸ್‌ಡಿಎಂಸಿಗಳಿಗೆ ಅನುದಾನ ಬಿಡುಗಡೆ ಆಗಬೇಕಾಗಿದೆ’ ಎಂದು ಖಾನಾಪುರ ಬಿಇಒ ಉಮಾ ಪ್ರತಿಕ್ರಿಯಿಸಿದರು.

ಅನುದಾನ ಬಂದ ನಂತರ: ‘ಮಕ್ಕಳಿಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್‌ ವಿತರಣೆಯಲ್ಲಿ ಈ ವರ್ಷವೂ ವಿಳಂಬವಾಗುವ ಸಾಧ್ಯತೆ ಇದೆ. 1ನೇ ತರಗತಿಯಿಂದ 5ನೇ ತರಗತಿ ಮಕ್ಕಳಿಗೆ ವಿತರಿಸಲು ತಲಾ ಜೊತೆಗೆ ₹ 265, 6ರಿಂದ 8ನೇ ತರಗತಿಯವರಿಗೆ ₹ 295 ಹಾಗೂ 9, 10ನೇ ತರಗತಿಯ ಮಕ್ಕಳ ಶೂ–ಸಾಕ್ಸ್‌ ಸೆಟ್‌ಗೆ ₹ 325 ಅನುದಾನ ಹಂಚಿಕೆ ಮಾಡಲಾಗಿದೆ. ಎಸ್‌ಡಿಎಂಸಿಯವರು, ಮುಖ್ಯಶಿಕ್ಷಕರು ಸ್ಥಳೀಯವಾಗಿ ಖರೀದಿಸಿ ಮಕ್ಕಳಿಗೆ ವಿತರಿಸಬೇಕು. ಇದಕ್ಕಾಗಿ ಎಸ್‌ಡಿಎಂಸಿಗಳ ಖಾತೆಗೆ ಅನುದಾನ ಇನ್ನೂ ಜಮೆಯಾಗಿಲ್ಲ. ಹಣ ಬಂದ ನಂತರ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಹೀಗಾಗಿ, ವಿತರಣೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆ ಕಾರಣದಿಂದಾಗಿ, ಪೂರ್ವ ಸಿದ್ಧತೆ ಮಾಡಿಕೊಳ್ಳುವಲ್ಲಿ ನಿಧಾನವಾಗಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

**

ಶಾಲಾ ಮಕ್ಕಳಿಗೆ ವಿತರಿಸುವುದಕ್ಕಾಗಿ ಪಠ್ಯಪುಸ್ತಕಗಳನ್ನು ಈಗಾಗಲೇ ಪೂರೈಸಲಾಗಿದೆ. ಹಂತ ಹಂತವಾಗಿ ಸಮವಸ್ತ್ರಗಳೂ ದೊರೆಯುತ್ತವೆ

– ಎಚ್‌. ಚಂದ್ರಪ್ಪ, ಡಿಡಿಪಿಐ, ಬೆಳಗಾವಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry