ಬಿರುಕು ಬಿಟ್ಟ ಸರ್ಕಾರಿ ಪಿಯು ಕಾಲೇಜು ಕಟ್ಟಡ

7
ಬಹುತೇಕ ವಿಷಯಗಳ ಉಪನ್ಯಾಸಕರ ಹುದ್ದೆಯೂ ಖಾಲಿ; ಮನವಿಗೆ ಸ್ಪಂದಿಸದ ಹಟ್ಟಿ ಚಿನ್ನದಗಣಿ ಆಡಳಿತ ಮಂಡಳಿ

ಬಿರುಕು ಬಿಟ್ಟ ಸರ್ಕಾರಿ ಪಿಯು ಕಾಲೇಜು ಕಟ್ಟಡ

Published:
Updated:
ಬಿರುಕು ಬಿಟ್ಟ ಸರ್ಕಾರಿ ಪಿಯು ಕಾಲೇಜು ಕಟ್ಟಡ

ಹಟ್ಟಿ ಚಿನ್ನದ ಗಣಿ: ಕೇವಲ ಎರಡು ದಶಕಗಳ ಹಿಂದೆ ನಿರ್ಮಿಸಿದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಕೊಠಡಿಗಳ ಗೋಡೆಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡು ಶಿಥಿಲಗೊಂಡಿದೆ.

ನಿರ್ವಹಣೆಯ ಕೊರತೆಯಿಂದಾಗಿ ಮೇಲ್ಛಾವಣಿಯ ಗಾರೆ ಉದುರುತ್ತಿದೆ. ಭಯದ ನೆರಳಿನಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾಲ ಕಳೆಯುವಂತಾಗಿದೆ.

ಹಟ್ಟಿ ಚಿನ್ನದ ಗಣಿ ಕಾರ್ಮಿಕರು ವಾಸವಿರುವ ಕಾಲೊನಿಗಳ ಮಧ್ಯೆ 2000ರಲ್ಲಿ ಹಟ್ಟಿ ಚಿನ್ನದ ಗಣಿ ಕಂಪೆನಿಯ ಆರ್ಥಿಕ ನೆರವಿನೊಂದಿಗೆ ನಿರ್ಮಿಸಲಾದ ಬೃಹತ್‌ ಕಟ್ಟಡ ಈಗ ಸಂಪೂರ್ಣ ಶಿಥಿಲಗೊಂಡಿದೆ.ಪ್ರಾಚಾರ್ಯರ ಕೊಠಡಿ ಹಾಗೂ ಉಪನ್ಯಾಸಕರ ಕೊಠಡಿಗಳಲ್ಲಿ ಕಾಣಿಸಿಕೊಂಡ ದೊಡ್ಡ ದೊಡ್ಡ ಬಿರುಕುಗಳು ದಿನದಿಂದ ದಿನಕ್ಕೆ ಅಗಲವಾಗುತ್ತಿವೆ. ಗೋಡೆಗಳು ಬೀಳುವ ಹಂತಕ್ಕೆ ತಲುಪಿವೆ. ಆರ್‌ಐಡಿಎಫ್‌ ಯೋಜನೆ ಅಡಿ ನಿರ್ಮಿಸಲಾದ ಎರಡು ಕೊಠಡಿಗಳು   ವರ್ಷವೇ ಕಳೆದರೂ ಇನ್ನೂ ಉದ್ಘಾಟನೆಯಾಗಿಲ್ಲ.

ಶಾಲಾ ಸುಧಾರಣ ಸಮಿತಿ ಹಾಗೂ ಸಿಬ್ಬಂದಿ ಈ ಕುರಿತು ಹಲವು ಸಲ ಹಟ್ಟಿ ಚಿನ್ನದ ಗಣಿ ಕಂಪೆನಿಯ ಆಡಳಿತದ ಗಮನ ಸೆಳೆದರೂ ದುರಸ್ತಿ ಕಾರ್ಯ ನಡೆದಿಲ್ಲ. ವಿಜ್ಞಾನ, ಕಲಾ ಮತ್ತು ವಾಣಿಜ್ಯ ಮೂರು ವಿಭಾಗಳಲ್ಲಿ 125 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ. ಆದರೆ ಇಂಗ್ಲಿಷ್‌, ಇತಿಹಾಸ, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಗಣಿತ, ರಾಜ್ಯಶಾಸ್ತ್ರ ಉಪನ್ಯಾಸಕರ ಕೊರತೆ ಇದೆ. ಕನ್ನಡ ಮತ್ತು ರಾಸಾಯನ ಶಾಸ್ತ್ರದ ಉಪನ್ಯಾಸಕರು ಬಿ.ಎಡ್‌. ಓದಲು ರಜೆಯ ಮೇಲೆ ಹೋಗಿದ್ದಾರೆ. ಪ್ರಾಚಾರ್ಯರ ಹುದ್ದೆ ಖಾಲಿ ಇದೆ. ಒಟ್ಟಾರೆ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲ. ದ್ವಿತೀಯ ದರ್ಜೆ ಸಹಾಯಕಿ 2015ರಿಂದ ಗೈರು ಹಾಜರಾಗಿದ್ದಾರೆ. ಗ್ರಂಥಪಾಲಕರು, ಸಹಾಯಕರೂ ಇಲ್ಲ.

ಅತಿಥಿ ಉಪನ್ಯಾಸಕರ ನೇಮಕ ಆಗಸ್ಟ್‌ನಲ್ಲಿ ನಡೆಯಲಿದ್ದು, ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ.ಹೀಗಾಗಿ ಸರ್ಕಾರಿ ಕಾಲೇಜಿನಲ್ಲಿ ಪಾಲಕರು ಮಕ್ಕಳ ಪ್ರವೇಶ ಪಡೆಯಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ.

ಶಿಥಲಗೊಂಡ ಕಟ್ಟಡದ ಶಾಶ್ವತ ದುರಸ್ತಿಗೆ ಇಲಾಖೆ ಮುಂದಾಗಬೇಕು. ಕಾಲೇಜಿನ ಆವರಣವನ್ನು ಶುಚಿಗೊಳಿಸಬೇಕು. ಶೀಘ್ರವೇ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

**

ಉಪನ್ಯಾಸಕರ ಕೊರತೆ, ಶಿಥಿಲಗೊಂಡ ಕಟ್ಟಡದ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಹಟ್ಟಿ ಚಿನ್ನದ ಗಣಿ ಆಡಳಿತದ ಗಮನ ಸೆಳೆದರೂ ಸ್ಪಂದಿಸಿಲ್ಲ

ಸದಾಶಿವ ಸೂಳಿಬಾವಿ, ಪ್ರಭಾರ ಪ್ರಾಚಾರ್ಯ

ಎಂ.ಖಾಸಿಂ ಅಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry