ರಾಜ್ಯದ ವಿವಿಧೆಡೆ ಮಳೆ ಅಬ್ಬರ

7

ರಾಜ್ಯದ ವಿವಿಧೆಡೆ ಮಳೆ ಅಬ್ಬರ

Published:
Updated:
ರಾಜ್ಯದ ವಿವಿಧೆಡೆ ಮಳೆ ಅಬ್ಬರ

ಬೆಂಗಳೂರು: ರಾಜ್ಯದ ಹಲವೆಡೆ ಭಾರಿ ಮಳೆ ಆಗಿದೆ. ಕೆಲವು ಭಾಗಗಳಲ್ಲಿ ಬಿತ್ತನೆ ಮಾಡಿರುವ ಸೂರ್ಯಕಾಂತಿ, ನೆಲಗಡಲೆ, ಜೋಳ ಮೊದಲಾದ ಬೆಳೆಗಳಿಗೆ ಅನುಕೂಲವಾಗಿದೆ.

ವಿವಿಧೆಡೆ ಸಿಡಿಲು ಬಡಿದು ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ. ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಯುವಕ ಸಾವು: ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಚ್ಚಣಕಿ- ಡೊಂಬರಕೊಪ್ಪ ಮಾರ್ಗ ಮಧ್ಯೆ ಖಾನಭಾಯಿ ವಡ್ಡಿನ ಬಳಿ ಸೋಮವಾರ ಮಧ್ಯಾಹ್ನ ಸಿಡಿಲು ಬಡಿದು ಪ್ರಶಾಂತ ತಿಪ್ಪಣ್ಣ ಚುಳಕಿ (18) ಎಂಬುವರು ಮೃತಪಟ್ಟಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಹುಣಸೆ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಜೋಗಿಕೊಪ್ಪದಲ್ಲಿ ಭಾನುವಾರ ತಡರಾತ್ರಿ ಸಿಡಿಲು ಬಡಿದು ಸೋನಿ ಜಾನು ಪಟಕಾರೆ (27) ಗಾಯಗೊಂಡಿದ್ದಾರೆ. ಹಳಿಯಾಳ ತಾಲ್ಲೂಕಿನ ಹಲಸಿ ಗ್ರಾಮದ ನಾರಾಯಣ ಹೂವಪ್ಪ ಮೆಲಗಿ ಅವರ ಕೊಟ್ಟಿಗೆಯಲ್ಲಿದ್ದ ಎರಡು ಎತ್ತುಗಳು ಸಿಡಿಲು ಬಡಿದು ಸತ್ತಿವೆ. ‌ಸಿಡಿಲಿನ ರಭಸಕ್ಕೆ ಕೊಟ್ಟಿಗೆ ಕುಸಿದಿದೆ.

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹರೇಗೊಂಡನಹಳ್ಳಿ ಹೊರ ವಲಯದಲ್ಲಿ ಸಿಡಿಲು ಬಡಿದು ಮಿಶ್ರ ತಳಿ ಹಸುವೊಂದು ಮೃತಪಟ್ಟಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವಡೆ ಸೋಮವಾರ ಸಂಜೆ ಅರ್ಧಗಂಟೆ ಜೋರಾಗಿ ಮಳೆ ಸುರಿಯಿತು. ಧಾರವಾಡದಲ್ಲೂ ಭಾರಿ ಮಳೆ ಸುರಿಯಿತು.

ಕಾರ್ಮಿಕ ಸಾವು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಭಾರಿ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ ಹಲವು ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ನೆಲ್ಯಾಡಿಯಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಕಟ್ಟಡ ಕಾರ್ಮಿಕ ಪೀಟರ್ ಡಿಸೋಜ (38) ಮೃತಪಟ್ಟಿದ್ದಾರೆ.

ನೆಲ್ಯಾಡಿ ಗ್ರಾಮ ಪಂಚಾಯಿತಿ ಸದಸ್ಯ ಫ್ಲೋರಿನ್ ಡಿಸೋಜ ಅವರ ಮನೆಗೆ ಸಿಡಿಲು ಬಡಿದಿದೆ. ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಕುಸಿದು ಬಿದ್ದಿದೆ. ಕಡಬ ತಾಲ್ಲೂಕಿನ ಹೊಸ್ಮಠದ ಬಳಿ  ಸೇತುವೆಯೊಂದು ಸೋಮವಾರ ಬೆಳಿಗ್ಗೆ ಭಾಗಶಃ ಕುಸಿದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸೋಮೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲಾ ನಾಯಕ್‌ ಅವರ ಮನೆಗೆ ಸಿಡಿಲು ಬಡಿದಿದೆ.

ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಭಾನುವಾರ ರಾತ್ರಿ ಹಾಗೂ ಸೋಮವಾರ ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಹಳೆಯ ಮರಗಳು ಮನೆಯ ಮೇಲೆ ಉರುಳಿ ಬಿದ್ದಿವೆ. ನಗರದ ದೊಡ್ಡಣಗುಡ್ಡೆ, ಅಂಬಾಗಿಲು, ಪೆರಂಪಳ್ಳಿ, ಬ್ರಹ್ಮಗಿರಿ, ಅಜ್ಜರಕಾಡು, ಗುಂಡಿಬೈಲು ಪ್ರದೇಶದಲ್ಲಿ ವಿದ್ಯುತ್‌ ಕಂಬಗಳು ಬಿದ್ದಿವೆ. ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.

ಉಡುಪಿ ತಾಲ್ಲೂಕಿನಲ್ಲಿ 42.7 ಮಿ.ಮೀ., ಕಾರ್ಕಳದಲ್ಲಿ 33.5 ಮಿ.ಮೀ. ಹಾಗೂ ಕುಂದಾಪುರದಲ್ಲಿ 26.8 ಮಿ.ಮೀ. ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ 59.1, ಪುತ್ತೂರಿನಲ್ಲಿ 53.1, ಬಂಟ್ವಾಳದಲ್ಲಿ 40.7, ಮಂಗಳೂರು ತಾಲ್ಲೂಕಿನಲ್ಲಿ 39.9 ಮಿ.ಮೀ. ಮಳೆಯಾಗಿದೆ.

ವ್ಯಕ್ತಿ ಸಾವು: ತುರುವೇಕೆರೆ ತಾಲ್ಲೂಕಿನ ದುಂಡ ಗ್ರಾಮದ ಬಳಿ ಭಾನುವಾರ ರಾತ್ರಿ ಮಳೆಯ ನಡುವೆಯೇ ಬೈಕ್‌ನಲ್ಲಿ ಸಾಗುತ್ತಿದ್ದ ಹೇಮಂತ್ ಕುಮಾರ್ ಅವರ ಮೇಲೆ ಮರದ ಕೊಂಬೆ ಬಿದ್ದಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಹಿಳೆ ಸಾವು: ಮಳವಳ್ಳಿ ತಾಲ್ಲೂಕಿನ ಬಸವನಬೆಟ್ಟದಲ್ಲಿ ಸೋಮವಾರ ಸಿಡಿಲು ಬಡಿದು ಹಸುಗಳನ್ನು ಮೇಯಿಸುತ್ತಿದ್ದ ಗಿರಿಜಾ (32) ಎಂಬುವರು ಮೃತಪಟ್ಟಿದ್ದಾರೆ.

ಚಾಮರಾಜನಗರ ಪಟ್ಟಣದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಗುಂಡ್ಲುಪೇಟೆಯ ಸಾಗಡೆ, ಹರವೆ, ಮೂಡ್ನಾಕೂಡು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ.

ತುಂತುರು ಮಳೆ: ಶಿವಮೊಗ್ಗ ನಗರ, ಸಾಗರ, ಸೊರಬ ತಾಲ್ಲೂಕಿನಲ್ಲಿ ಸೋಮವಾರ ತುಂತುರು ಮಳೆಯಾಗಿದೆ. ಭದ್ರಾವತಿ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣ ಇತ್ತು.

ಸುಳ್ಯದಲ್ಲಿ 8 ಸೆಂ.ಮೀ ಮಳೆ

ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ಸುಳ್ಯದಲ್ಲಿ 8 ಸೆಂ.ಮೀ, ಕೋಟ, ಸೋಮವಾರಪೇಟೆಯಲ್ಲಿ 7, ಧರ್ಮಸ್ಥಳ, ಉಡುಪಿ 6, ಬೇಲೂರಿನಲ್ಲಿ 5, ಮಂಗಳೂರು, ಪಣಂಬೂರು, ಬಾಳೆಹೊನ್ನೂರಿನಲ್ಲಿ 4, ಕಾರ್ಕಳ, ಕೊಲ್ಲೂರು, ಸಿದ್ದಾಪುರ, ಕಾರವಾರ, ಹುಬ್ಬಳ್ಳಿ, ಕಳಸ, ಮೂಡಿಗೆರೆ, ಆಲೂರಿನಲ್ಲಿ 3, ಮೂಲ್ಕಿ, ಕುಂದಾಪುರ, ಕೊಪ್ಪ, ಲಕ್ಕವಳ್ಳಿ, ತರೀಕೆರೆ, ಕಡೂರು, ಮಡಿಕೇರಿಯಲ್ಲಿ 2, ಅಂಕೋಲಾ, ಭದ್ರಾವತಿ, ಲಿಂಗದಹಳ್ಳಿ, ಹಾಸನ, ಬೇಲೂರಿನಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ. ಬಳ್ಳಾರಿಯಲ್ಲಿ 39.0 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದ ಕೆಲವು ಪ್ರದೇಶಗಳಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry