ಬುಧವಾರ, ಏಪ್ರಿಲ್ 8, 2020
19 °C

ಮತಾಂಧರ ಕೈಯಲ್ಲಿ ರಣರಂಗವಾಗುತ್ತಿವೆ ವಿ.ವಿಗಳು

ರೇಣುಕಾ ನಿಡಗುಂದಿ Updated:

ಅಕ್ಷರ ಗಾತ್ರ : | |

ಮತಾಂಧರ ಕೈಯಲ್ಲಿ ರಣರಂಗವಾಗುತ್ತಿವೆ ವಿ.ವಿಗಳು

ಒಂದು ಶತಮಾನಕ್ಕೂ ಮಿಗಿಲಾದ ಇತಿಹಾಸವಿರುವ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಒಂದಿಲ್ಲ ಒಂದು ಕಾರಣಕ್ಕೆ ಸದಾ ಚರ್ಚೆಯಲ್ಲಿರುತ್ತದೆ. ಎಎಂಯು ವಿದ್ಯಾರ್ಥಿ ಸಂಘದ ಕೊಠಡಿಯಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್‌ ಅಲಿ ಜಿನ್ನಾ ಭಾವಚಿತ್ರ ಇರುವ ವಿಷಯ ಬಹಳಷ್ಟು ಸುದ್ದಿ ಮಾಡಿತು. ರಾಷ್ಟ್ರಭಕ್ತ ಸಂಘಟನೆಗಳು (ಹಿಂದೂ ಯುವವಾಹಿನಿ, ಎಬಿವಿಪಿ ) ಪ್ರತಿಭಟನೆ ನಡೆಸಿದವು. ಗಲಭೆ, ಮಾರಾಮಾರಿ, ಪೋಲಿಸರ ಲಾಠಿ ಚಾರ್ಜ್! ಸಾವರ್ಕರ್‌ ಅವರ ರಾಷ್ಟ್ರೀಯವಾದವನ್ನು ತಲೆಯಲ್ಲಿ ತುಂಬಿಕೊಂಡವರು ಜಾತಿಮೂಲದ ಸಂಗತಿಗಳನ್ನು ಗೋರಿಯಿಂದ ಅಗೆದಗೆದು ದೇಶದಲ್ಲಿ ಹಿಂಸಾಚಾರದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಇತಿಹಾಸದ ವಾಸ್ತವಗಳನ್ನು ಒಪ್ಪಿಕೊಳ್ಳುವವರು ದೇಶದ್ರೋಹಿಗಳು, ತಿರುಚಿ ಹೊಸ ಚರಿತ್ರೆಯನ್ನು ಬರೆಯಹೊರಟವರೇ ದೇಶಪ್ರೇಮಿಗಳೆಂದುಕೊಂಡಿದ್ದಾರೆ ಇವರು!

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ  1938ರಿಂದಲೂ ಇರುವ ಭಾವಚಿತ್ರ ಈಗ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಉತ್ತರಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ‘ಅಲಿಗಡ ವಿಶ್ವವಿದ್ಯಾಲಯದ ಆವರಣದಲ್ಲಿ ಜಿನ್ನಾ ಅವರ ಭಾವಚಿತ್ರವಿರುವುದು ಸರಿಯಲ್ಲ. ಇಂದು ನಾವೆಲ್ಲ ಭ್ರಷ್ಟಾಚಾರ, ಬೆಲೆ ಏರಿಕೆಯ ವಿರುದ್ಧ ಹೋರಾಡಬೇಕಾಗಿದೆ. ರಾಷ್ಟ್ರಭಕ್ತಿ, ದೇಶಭಕ್ತಿಯ ಅವಶ್ಯಕತೆಯಿದೆ. ನನ್ನ ಅಭಿಪ್ರಾಯವೆಂದರೆ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್‌ಗಾಗಿ ನಾವೆಲ್ಲ ಕೈಜೋಡಿಸಿ ನಡೆಯಬೇಕಿದೆ’ ಎಂಬಂತಹ ಹವಾಮಹಲನ್ನೇ ಕಟ್ಟುತ್ತಾರೆ. ಅಷ್ಟೇ ಅಲ್ಲ, ಭಾರತವನ್ನು ಪಾಕಿಸ್ತಾನದ ಹೆಸರಲ್ಲಿ ಒಡೆದು, ಲಕ್ಷಾಂತರ ಹಿಂದೂಗಳ ಮಾರಣಹೋಮಕ್ಕೆ ಕಾರಣನಾದ  ಜಿನ್ನಾ ಮತ್ತು ಅವರಂಥ ವ್ಯಕ್ತಿತ್ವವನ್ನು ಹೊಂದಿದವರ ಭಾವಚಿತ್ರಗಳನ್ನು ಸುಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಉತ್ತರಪ್ರದೇಶದ ಅಖಿಲ ಭಾರತೀಯ ಮುಸ್ಲಿಂ ಮಹಾಸಂಘದ ಅಧ್ಯಕ್ಷ ಫರಾತ್ ಅಲಿ ಖಾನ್ ಘೋಷಿಸುವುದರ ಮೂಲಕ ಅಖಂಡ ಭಾರತದ ಕಲ್ಪನೆಯ ನೆವದಲ್ಲಿ ದ್ವೇಷದ ಬೀಜವನ್ನು ಬಿತ್ತಿದ್ದಾರೆ.

ಇವೆಲ್ಲವನ್ನೂ ಗಮನಿಸಿದರೆ ಇಂದು ರಾಷ್ಟ್ರವಾದವೆಂದರೆ ಸರ್ವಧರ್ಮ ಸರ್ವಜನಾಂಗದವರ ಸಹಬಾಳ್ವೆಯಾಗಿರದೆ ಕೇವಲ ಮುಸ್ಲಿಂ ವಿರೋಧಿಯಾಗಿರಬೇಕು ಎಂಬಂತಹ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದೆ. ಜಾತ್ಯತೀತ ರಾಷ್ಟ್ರವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿಸುವ ಕೈವಾಡಗಳು ದೇಶದ ಉದ್ದಗಲಕ್ಕೂ ಪಾಪಾಸುಕಳ್ಳಿಯಂತೆ ಹಬ್ಬುತ್ತಿವೆ. ಶಿಲಾಯುಗವನ್ನು ಇಂದು ಮರಳಿ ಚಲಾವಣೆಗೆ ತರಲು ತುದಿಗಾಲಲ್ಲಿರುವ ಆರ್‌ಎಸ್‌ಎಸ್‌, ಯುನಿವರ್ಸಿಟಿ ಕ್ಯಾಂಪಸ್‍ಗಳನ್ನು ಒಂದಿಲ್ಲಾ ಒಂದು ನೆವದಿಂದ ಎಬಿವಿಪಿ ಮೂಲಕ ರಣರಂಗವಾಗಿಸುತ್ತಿದೆ.  ಎಫ್‍ಟಿಐಐ, ಮದ್ರಾಸ್ ಯುನಿವರ್ಸಿಟಿಯ ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್, ಹೈದರಾಬಾದ್ ಕೇಂದ್ರೀಯ ಯುನಿವರ್ಸಿಟಿ, ಜೆಎನ್‍ಯು, ಅಲಹಾಬಾದ್ ಯುನಿವರ್ಸಿಟಿ, ಕೋಲ್ಕತ್ತದ ಜಾಧವ್ ಯುನಿವರ್ಸಿಟಿ, ಪುಣೆಯ ಫರ್ಗ್ಯೂಸನ್ ಕಾಲೇಜ್ ಮತ್ತು ದೆಹಲಿಯ ರಾಮ್‍ಜಾಸ್ ಕಾಲೇಜ್‍... ಹೀಗೆ ಉನ್ನತ ಶಿಕ್ಷಣ ಕೇಂದ್ರಗಳ ವಾತಾವರಣವನ್ನು  ಮತೀಯವಾದಿ ಗುಂಪುಗಳು ಹಾಳುಮಾಡಿದ ನಿದರ್ಶನಗಳಿವೆ.

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು ಸರ್ ಸೈಯದ್ ಅಹ್ಮದ್ ಖಾನ್ ಎಂಬ ಮಹಾನ್ ಮುಸ್ಲಿಂ ಸಮಾಜ ಸುಧಾರಕ ಮತ್ತು ರಾಜನೀತಿಜ್ಞ. ಬ್ರಿಟಿಷ್ ಆಡಳಿತದಲ್ಲಿ ತಮ್ಮ ಜನರು ಘನತೆಯಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳಲು ಮತ್ತು ಸರ್ಕಾರಿ ಸೇವಾ ಕ್ಷೇತ್ರಗಳಲ್ಲಿ ಮುಂದೆಬರಲು ಶಿಕ್ಷಣ ಅತ್ಯಂತ ಮುಖ್ಯವಾದುದೆಂದು ಅರಿತುಕೊಂಡಿದ್ದ ಅವರ ದೂರದೃಷ್ಟಿ, ಪ್ರಯತ್ನ ಮತ್ತು ಪರಿಶ್ರಮದ ಫಲವೇ ಇಂದಿನ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ.

1842ರಲ್ಲಿ ಬ್ರಿಟಿಷ್‌ ಸರ್ಕಾರವು ಆಡಳಿತ ಭಾಷೆಯಾಗಿದ್ದ ಪರ್ಷಿಯನ್ ಭಾಷೆಯನ್ನು ಬದಲಿಸಲು ನಿರ್ಧರಿಸಿದ್ದು ಮುಸ್ಲಿಮರಲ್ಲಿ ಆತಂಕವನ್ನು ಉಂಟುಮಾಡಿತ್ತು. ಇತರ ಸಮುದಾಯಗಳಂತೆ ಮುಸ್ಲಿಮರೂ ಇಂಗ್ಲಿಷ್ ಭಾಷೆ ಮತ್ತು ಪಾಶ್ಚಾತ್ಯ ವಿಜ್ಞಾನಗಳಲ್ಲಿ ಪ್ರಾವೀಣ್ಯ ಪಡೆದುಕೊಳ್ಳುವುದು ಅತ್ಯಗತ್ಯ

ವೆಂದು ಮನಗಂಡ  ಸೈಯದ್ ಅಹ್ಮದ್ ಖಾನ್ ಅವರು ಮೊರಾದಾಬಾದ್ (1858) ಮತ್ತು ಗಾಜಿಪುರ್‌ದಲ್ಲಿ (1863) ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಮುಸ್ಲಿಂ ವಿಶ್ವವಿದ್ಯಾಲಯದ ರಚನೆಗೆ ಅಡಿಪಾಯ ಹಾಕಿದರು. ಮಾದರಿ ವಿಶ್ವವಿದ್ಯಾಲಯ ಸ್ಥಾಪನೆಯ ಕನಸು ಹೊತ್ತ ಅವರು ಆಕ್ಸ್‌ಫರ್ಡ್ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾಲಯಗಳಿಗೂ ಭೇಟಿಯಿತ್ತಿದ್ದರಂತೆ. 1877ರಲ್ಲಿ ಮುಹಮ್ಮದಿಯನ್ ಆಂಗ್ಲೊ ಓರಿಯಂಟಲ್ ಕಾಲೇಜ್ ಎಂಬ ಹೆಸರಿನಲ್ಲಿ ಆರಂಭಗೊಂಡ ಈ ಕಾಲೇಜು 1920ರಲ್ಲಿ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯವೆಂದು ಮರುಹುಟ್ಟು ಪಡೆಯುತ್ತದೆ.

ಇಡೀ ಉತ್ತರಪ್ರದೇಶದಲ್ಲಿಯೇ ದೊಡ್ದ ನಗರವಾದ ಅಲಿಗಡ ಹಲವು ಕೈಗಾರಿಕೆಗಳ ತವರು. ಪುರಾತನ ಅಲಿಗಡ ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಚಾರಿತ್ರಿಕ ಮಹತ್ವವಿದೆ. ಅಲಿ ಸರ್ದಾರ್ ಜಾಫ್ರಿ, ಝಾಕಿರ್ ಹುಸೇನ್, ಮೊಹಮ್ಮದ್‌ ಹಮೀದ್ ಅನ್ಸಾರಿ, ಹಬೀಬ್ ತನ್ವರ್, ನಾಸಿರುದ್ದೀನ್‌ ಷಾ, ಜಾವೇದ್ ಅಖ್ತರ್, ಶಕೀಲ್ ಬದಾಯೂನ್‌, ಖ್ವಾಜಾ ಅಹಮದ್ ಅಬ್ಬಾಸ್ ... ಹೀಗೆ ಅನೇಕ ಪ್ರತಿಭಾವಂತ ಉರ್ದು ಕವಿ, ರಂಗಕರ್ಮಿಗಳಿಂದ ಹಿಡಿದು ರಾಜಕಾರಣಿಗಳವರೆಗೂ ಇಲ್ಲಿ ಕಲಿತಿದ್ದಾರೆ. ಪುರುಷರಿಗಷ್ಟೇ ಅಲ್ಲ ಮುಸ್ಲಿಂ ಮಹಿಳೆಯರಿಗೂ ಶಿಕ್ಷಣ ಅಗತ್ಯವಿದೆಯೆಂದು 1896ರಲ್ಲಿ ಮುಸ್ಲಿಂ ಬಾಲಕಿಯರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಆಲ್ ಇಂಡಿಯಾ ಮುಹಮ್ಮದಿಯನ್ ಎಜುಕೇಷನ್ ಕಾನ್ಫರೆನ್ಸ್ ಆಂದೋಲನವನ್ನೇ ಸಾರಿತ್ತು. 1906ರಲ್ಲಿ ಹೆಣ್ಣುಮಕ್ಕಳ ಶಾಲೆ ಆರಂಭವಾಯ್ತು. ಹೀಗೆ ಮುಸ್ಲಿಂ ಸ್ತ್ರೀಯರಿಗೆ ಬುರ್ಖಾದಿಂದಾಚೆಗಿನ ಬೌದ್ಧಿಕ ಲೋಕವೊಂದು ಅನಾವರಣಗೊಂಡಿತು. ಅಲಿಗಡ ವಿಶ್ವವಿದ್ಯಾಲಯದ ಮೌಲಾನಾ ಆಜಾದ್ ಗ್ರಂಥಾಲಯವೂ ಜಗತ್ಪ್ರಸಿದ್ಧವಾಗಿದೆ. ಅಲ್ಲಿ ಜಗತ್ತಿನ ಅಪರೂಪದ ಹಸ್ತಪ್ರತಿಗಳ ಖಜಾನೆಯೇ ಇದೆ. ವಿಶ್ವದ ವಿವಿಧ ಭಾಷೆಗಳ ಅಪರೂಪದ ಪುಸ್ತಕಗಳು ಲಭ್ಯ ಇವೆ.

ಮುಸ್ಲಿಂ ಲೀಗ್‌ ಜೊತೆ ಅಧಿಕಾರ ಹಂಚಿಕೊಳ್ಳಲು ಕಾಂಗ್ರೆಸ್‌ ಒಪ್ಪದಿದ್ದುದೇ ದೇಶ ವಿಭಜನೆಗೆ ಕಾರಣವಾಯಿತು ಎಂದು ಅಂಕಣಕಾರ ಆಕಾರ್‌ ಪಟೇಲ್‌ ವಾದಿಸುತ್ತಾರೆ. ಹಲವಾರು ಪತ್ರಗಳಲ್ಲಿ ಜಿನ್ನಾ ಅವರನ್ನು ‘ಪ್ರಿಯ ಕೈದ್ ಏ ಅಜಂ’ (ಮಹಾನ್ ನಾಯಕ) ಎಂದು ಸಂಬೋಧಿಸುತ್ತಿದ್ದ ಮಹಾತ್ಮ ಗಾಂಧಿಯನ್ನು ದೇಶದ್ರೋಹಿಯೆನ್ನಲಾದೀತೇ? ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದಾಗಿಯೂ ಅಂದಿನ ಜನನಾಯಕರು ನಾಗರಿಕತೆಯ ಶಿಸ್ತನ್ನು ಮರೆತಿರಲಿಲ್ಲ. ಸ್ವಾತಂತ್ರ್ಯ ಚಳವಳಿಯ ಮುಂದಾಳುವಾಗಿದ್ದ ಜಿನ್ನಾ ವೃತ್ತಿಯಲ್ಲಿ ವಕೀಲರೂ ಆಗಿದ್ದರು. ಬಾಲಗಂಗಾಧರ ತಿಲಕರ ಪರವಾಗಿ ನ್ಯಾಯಾಲಯದಲ್ಲಿ ವಾದವನ್ನೂ ಮಂಡಿಸಿದ್ದರು.

ವಿಎಚ್‍ಪಿ ಮತ್ತು ಬಜರಂಗದಳದ ಸದಸ್ಯನೆಂದು ಗುರುತಿಸಿಕೊಳ್ಳುವ ಅಭಿಷೇಕ್ ಮಿಶ್ರಾ ಎಂಬ ಲಖನೌ ನಿವಾಸಿ, ಚಾಲಕ ಮುಸ್ಲಿಂ ಎನ್ನುವ ಕಾರಣಕ್ಕೆ ಓಲಾ ಕ್ಯಾಬ್ ರದ್ದುಪಡಿಸಿದ್ದು ಸಾಮಾಜಿಕ ತಾಣಗಳಲ್ಲಿ, ಟ್ವಿಟರ್‌ನಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಯಾಗಿದ್ದು ನೆನಪಿರಬಹುದು. ದಕ್ಷಿಣ ದೆಹಲಿಯ ಸಫ್ದರ್ ಜಂಗ್‌ನ ಹುಮಾಯೂನ್ ಪುರದಲ್ಲಿ 15ನೆಯ ಶತಮಾನದಲ್ಲಿ ಕಟ್ಟಿದ್ದೆನ್ನಲಾದ ಸಮಾಧಿಯೊಂದು ಹಠಾತ್ತಾಗಿ ಹಿಂದೂ ದೇವಸ್ಥಾನವಾಗಿ ಸುಣ್ಣ ಮತ್ತು ಕೇಸರಿಬಣ್ಣ ಬಳಿದುಕೊಂಡು ನಿಂತಿತು. ಉತ್ತರಪ್ರದೇಶದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಭಗವಾ ಬಣ್ಣದ ಸೂಟು ತೊಡಿಸಿದ್ದಾಯ್ತು. ಹಜ್ ಕಚೇರಿಯ ಬಾಗಿಲು ಬಿಟ್ಟು ಗೋಡೆಗಳಿಗೆಲ್ಲ ಭಗವಾ ಬಣ್ಣ ಬಳಿಯಲಾಯಿತು. ಘರ್ ವಾಪ್ಸಿಯಿಂದ, ದಾದ್ರಿಯ ಅಖ್ಲಾಕ್ ಹತ್ಯೆ, ಕಠುವಾದ ಪಾಶವೀಕೃತ್ಯ, ಉನ್ನಾವ್‌ದ ಅತ್ಯಾಚಾರದವರೆಗೂ ಕಿಂಚಿತ್ತಾದರೂ ಕಾನೂನಿನ ಭಯ ಹಾಗೂ ಗೌರವವಿರದ ವಿಕೃತ ಮೂಲಭೂತವಾದಿಗಳ ಕುಟಿಲ ತಂತ್ರಗಳು ಎಲ್ಲೆ ಮೀರುತ್ತಿವೆ. 

ಇತಿಹಾಸವೆಂದರೆ ಬರೀ ರಾಜಕೀಯ ಘಟನಾವಳಿಗಳ ಪಟ್ಟಿ ಮಾತ್ರವಲ್ಲ. ಸಾಮಾಜಿಕ, ಸಾಂಸ್ಕೃತಿಕ ಸೇರಿದಂತೆ ಒಟ್ಟು ನಾಗರಿಕತೆಯ ಇತಿಹಾಸವೂ ಹೌದು. ಭಾರತವನ್ನು ಇತಿಹಾಸದ ಚೌಕಟ್ಟಿನೊಳಗೆ ನೋಡುವಾಗ ನಾವು ಸ್ವಾತಂತ್ರ್ಯಪೂರ್ವದ ಚರಿತ್ರೆ ಮತ್ತು ಸ್ವಾತಂತ್ರ್ಯೋತ್ತರದ ಚರಿತ್ರೆಯೆಂದು ಬೇರೆ ಬೇರೆಯಾಗಿಯೇ ನೋಡಬೇಕಾಗುತ್ತದೆ. ಜಿನ್ನಾ ಅವರು ಅಲಿಗಡ ಮುಸ್ಲಿಂ ವಿ.ವಿ.ಯ ಆಜೀವ ಸದಸ್ಯರಾಗಿದ್ದು ಸ್ವಾತಂತ್ರ್ಯಪೂರ್ವದಲ್ಲಿ. ಸ್ವಾತಂತ್ರ್ಯೋತ್ತರ ವಿಭಜಿತ ಭಾರತದಲ್ಲಿ ಅಂದಿನ ಯಾವ ನೇತಾರರೂ ಅದನ್ನು ಆಕ್ಷೇಪಿಸಲಿಲ್ಲ. ಘರ್ಷಣೆ ಏನಿದ್ದರೂ ಮುಸ್ಲಿಮರೊಡನೆ ಮಾತ್ರ ಎನ್ನುವ ಮತಾಂಧರಿಗಿದು ಗಂಟಲಲ್ಲಿ ಇಳಿಯದ ಕಡುಬು. ತಮ್ಮ ರಾಜಕೀಯ ಲಾಭಗಳಿಗಾಗಿ ಸ್ವಾತಂತ್ರ್ಯಪೂರ್ವದ ಇತಿಹಾಸವನ್ನು ವರ್ತಮಾನದ ರಾಜಕೀಯ ಮತ್ತು ಮತೀಯ ಚೌಕಟ್ಟಿನೊಳಗಿಟ್ಟು ನೋಡುವುದು ನಾವು ಚರಿತ್ರೆಗೆ ಮಾಡುವ ಅನ್ಯಾಯ. ಈ ದೃಷ್ಟಿಕೋನ ಬದಲಾಗಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)