ಸಂಡೇ ಯೂತ್‌ ಬಜಾರ್‌ ಆರಂಭಿಸಲು ಚಿಂತನೆ

7
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಯೋಜನೆ

ಸಂಡೇ ಯೂತ್‌ ಬಜಾರ್‌ ಆರಂಭಿಸಲು ಚಿಂತನೆ

Published:
Updated:
ಸಂಡೇ ಯೂತ್‌ ಬಜಾರ್‌ ಆರಂಭಿಸಲು ಚಿಂತನೆ

ಬೆಳಗಾವಿ: ‘ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಪುನಃ ಚಾಲನೆ ನೀಡುತ್ತೇನೆ. 2008ರಿಂದ 2013ರ ಅವಧಿಯಲ್ಲಿ ನಾನು ಆರಂಭಿಸಿದ್ದ ಕಾಮಗಾರಿಗಳು ಕಳೆದ ಅವಧಿಯಲ್ಲಿ ನಿಂತುಹೋಗಿದ್ದವು. ಅವುಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಮೂಲಸೌಕರ್ಯ ಕಲ್ಪಿಸುವುದು, ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ’ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ, ಬಿಜೆಪಿಯ ಅಭಯ ಪಾಟೀಲ ಹೇಳಿದರು.

2004ರಲ್ಲಿ ಬಾಗೇವಾಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು, 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾದರು. 2013ರಲ್ಲಿ ಪರಾಭವಗೊಂಡರು. 2018ರಲ್ಲಿ ಪುನಃ ಆಯ್ಕೆಯಾಗಿದ್ದು, ಹಿಂದೆ ಎರಡು ಬಾರಿ ಶಾಸಕರಾದ ಅನುಭವ ಅವರ ಜೊತೆಗಿದೆ. ಪ್ರಸಕ್ತ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ತಮ್ಮ ಮುಂದಿನ ಯೋಜನೆಗಳು, ಅಭಿವೃದ್ಧಿಯ ಕಲ್ಪನೆಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೀರಿ. ಈ ಸಲ ಯಾವ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೀರಿ?

ಮಹಿಳೆಯರು ಮನೆಗಳಲ್ಲಿ ತಯಾರಿಸಿರುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶ ಹೊಂದಿದ್ದೇನೆ. ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಐದು ಸ್ಥಳಗಳಲ್ಲಿ ಸಂಜೆ ವೇಳೆ ಮಹಿಳಾ ಬಜಾರ್‌ ಆರಂಭಿಸುವ ಚಿಂತನೆ ಇದೆ. ಇಲ್ಲಿ ಗ್ರಾಹಕರು ನೇರವಾಗಿ ಉತ್ಪಾದಕರಿಂದ ಖರೀದಿಸುವುದರಿಂದ ಕಡಿಮೆ ಬೆಲೆಗೆ ಸಿಕ್ಕಂತಾಗುತ್ತದೆ. ಮಾರಾಟಗಾರರು ಹಾಗೂ ಖರೀದಿದಾರರಿಗೆ ಸಹಾಯವಾಗಲಿದೆ.

ಟಿಳಕವಾಡಿ, ಶಹಾಪುರ, ಹಿಂದವಾಡಿ ಸೇರಿದಂತೆ ಐದು ಸ್ಥಳಗಳಲ್ಲಿ ಬಜಾರ್‌ ಆರಂಭಿಸಬೇಕು ಎನ್ನುವ ಉದ್ದೇಶವಿದೆ. ಈ ಸ್ಥಳಗಳಲ್ಲಿ ಜಾಗವಿದ್ದರೆ ನೀಡಬೇಕೆಂದು ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಿದ್ದೇನೆ. ಬಜಾರ್‌ ಆರಂಭವಾದರೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸಹಕಾರಿಯಾಗಲಿದೆ.

ಯುವಕರಿಗಾಗಿ ಯಾವ ಯೋಜನೆ ಹಾಕಿಕೊಂಡಿದ್ದೀರಿ?

ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿರುವ ಯುವಕರಿಗೆ ‘ಸಂಡೇ ಯೂತ್‌ ಬಜಾರ್‌’ ಆರಂಭಿಸಲಿದ್ದೇನೆ. ಸೋಮವಾರದಿಂದ ಶನಿವಾರದವರೆಗೆ ಬೇರೆ ಬೇರೆ ಕಡೆ ಕೆಲಸ ಮಾಡುವ ಯುವಕರಿಗೆ ಭಾನುವಾರ ತಮ್ಮದೇ ಸ್ವಂತ ವ್ಯಾಪಾರ ಮಾಡಲು ಹಚ್ಚುವ ಯೋಜನೆ ಇದಾಗಿದೆ. ಇಂತಹ ಯುವಕರು ಸಾಮಾನ್ಯವಾಗಿ ಬಡಕುಟುಂಬದ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಇವರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ಸಹಾಯ ಮಾಡುತ್ತೇವೆ. ತಮ್ಮದೇ ಸ್ವಂತ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುತ್ತೇವೆ. ಈ ಮೂಲಕ ಅವರು ಮಾರಾಟದ ತಂತ್ರಗಳನ್ನು ಕಲಿಯಬಹುದು. ತಮ್ಮ ಕೆಲಸದ ಜೊತೆ ವ್ಯಾಪಾರದಲ್ಲೂ ತೊಡಗಿಕೊಳ್ಳಬಹುದು.

ಚುನಾವಣೆಗೆ ಮುಂಚೆ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದ್ದೀರಿ, ಅದನ್ನು ಹೇಗೆ ಈಡೇರಿಸುತ್ತೀರಿ?

ಕಾರ್ಖಾನೆಗಳು ಪ್ರಾರಂಭಗೊಳ್ಳಲು ಬೇಕಾದ ಎಲ್ಲ ಮೂಲಸೌಕರ್ಯಗಳು ಬೆಳಗಾವಿಯಲ್ಲಿ ಇವೆ. ರಸ್ತೆ, ವಿಮಾನ ಹಾಗೂ ರೈಲು ಸಂಪರ್ಕ ಇದೆ. ನೀರು, ವಿದ್ಯುತ್‌ ಪೂರೈಕೆ ಸಮರ್ಪಕವಾಗಿದೆ. ವಿದ್ಯಾವಂತ ಯುವಕರಿದ್ದಾರೆ. ಇವುಗಳನ್ನೆಲ್ಲ ಬಳಸಿಕೊಂಡು ಕಾರ್ಖಾನೆಗಳನ್ನು ಆರಂಭಿಸಿ ಎಂದು ಉದ್ಯಮಿಗಳಿಗೆ ಆಹ್ವಾನ ನೀಡುತ್ತೇನೆ.

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಈಗಾಗಲೇ ಹಲವು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇನ್ನುಮುಂದೆ ಯಾರಾದರೂ ಉದ್ಯಮ ಸ್ಥಾಪಿಸಲು ಮುಂದೆ ಬಂದರೆ ಅಂತಹವರನ್ನು ಬೆಳಗಾವಿಗೆ ಕಳುಹಿಸಿಕೊಡಿ ಎಂದು ರಾಜ್ಯ ಸರ್ಕಾರಕ್ಕೂ ಪ್ರಸ್ತಾವನೆ ಕಳುಹಿಸಿಕೊಡುತ್ತೇನೆ. ಸುಮಾರು 60ರಿಂದ 70 ಜನ ಶಾಸಕರ ಒಪ್ಪಿಗೆಯನ್ನು ಕೂಡ ಪಡೆದು

ಕೊಳ್ಳುತ್ತೇನೆ. ಕಾರ್ಖಾನೆ ಸ್ಥಾಪನೆಯಾದರೆ ಸ್ಥಳೀಯ ಯುವಕರಿಗೆ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗು

ತ್ತವೆ. ಹಿಂದಿನ ಅವಧಿಯಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದೆ, ಈ ಸಲ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇನೆ.

ಸ್ಥಳೀಯವಾಗಿ ಕುಡಿಯುವ ನೀರಿನ ಸಮಸ್ಯೆ ಇದೆ, ಗೋವಾ, ಮಹಾರಾಷ್ಟ್ರಕ್ಕೆ ಹೋಗಬೇಕಾದ ಸರಕು ವಾಹನಗಳು ರಿಂಗ್‌ ರೋಡ್‌ ಇಲ್ಲದ ಕಾರಣ ನಗರದೊಳಗಿನಿಂದಲೇ ಹಾದು ಹೋಗುತ್ತವೆ. ಇದು ಸಾಕಷ್ಟು ಟ್ರಾಫಿಕ್‌ ಸಮಸ್ಯೆ ಸೃಷ್ಟಿಸಿದೆಯಲ್ಲ?

ಹೌದು, ರಿಂಗ್‌ ರೋಡ್‌ ಅವಶ್ಯಕತೆ ಸಾಕಷ್ಟಿದೆ. ಇದನ್ನು ನಿರ್ಮಿಸಲು ಕ್ರಮಕೈಗೊಳ್ಳುತ್ತೇನೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು 2008–13ರ ಅವಧಿಯಲ್ಲಿ ಶಾಸಕನಾಗಿದ್ದಾಗ ನಿರಂತರ ನೀರು ಪೂರೈಸುವ (24x7) ಯೋಜನೆ ಅನುಷ್ಠಾನಗೊಳಿಸಲು ಪ್ರಯತ್ನಿಸಿದ್ದೆ. ನಂತರ ಬಂದ ಶಾಸಕರು ಅತ್ತ ಕಡೆ ಗಮನ ಹರಿಸಲಿಲ್ಲ. ಆ ಯೋಜನೆ ಹಾಗೆಯೇ ಬಿದ್ದಿದೆ. ಅದನ್ನು ಈಗ ಕೈಗೆತ್ತಿಕೊಳ್ಳುತ್ತೇನೆ. ಇನ್ನುಳಿದಂತೆ ಬೆಳಗಾವಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಆದ್ಯತೆ ನೀಡುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry