ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ ಮಹಾಪಾಪ

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಸಾಮಾನ್ಯ ಜನರು ಅದರಲ್ಲೂ ಬುದ್ಧಿಸ್ವಾಸ್ಥ್ಯವುಳ್ಳವರು ಸಾಲ-ಶೂಲ, ಪ್ರೇಮವೈಫಲ್ಯ, ಪರೀಕ್ಷೆಯಲ್ಲಿ ಅಸಫಲತೆ ಮುಂತಾದ ಕಾರಣಗಳಿಂದಾಗಿ ಮಾಡಿಕೊಳ್ಳುವ ಆತ್ಮಹತ್ಯೆಯು ಅಪಮೃತ್ಯು ಎನಿಸುವುದು. ಸ್ವಪ್ರೇರಣೆಯಿಂದ ಪ್ರಾಣವನ್ನು ಕಳೆದುಕೊಳ್ಳುವ ಈ ಕ್ರಿಯೆಯನ್ನು ಜಗತ್ತಿನ ಬಹುತೇಕ ಧರ್ಮಗಳು ನಿಷೇಧಿಸಿವೆ. ಭಾರತೀಯ ದಂಡ ಸಂಹಿತೆಯಲ್ಲಿ ನೈತಿಕ, ಧಾರ್ಮಿಕ ಮತ್ತು ಸಾಮಾಜಿಕ ಅಪರಾಧವೆಂದು ಹೇಳಲಾಗಿದೆ. ಆತ್ಮಹತ್ಯೆ ಮಾಡಿಕೊಂಡವರಿಗೆ ಯಾವ ಶಿಕ್ಷೆಯನ್ನು ವಿಧಿಸಲೂ ಸಾಧ್ಯವಾಗುವುದಿಲ್ಲ. ಆದರೆ ಆತ್ಮಹತ್ಯೆಯಲ್ಲಿ ವಿಫಲನಾದ ವ್ಯಕ್ತಿ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸಹಕರಿಸುವ ವ್ಯಕ್ತಿಯು ಖಂಡಿತವಾಗಿ ಕಾನೂನಿನನ್ವಯ ಅಪರಾಧಿ ಎನಿಸುವನು.

ಬಸವಾದಿ ಶರಣರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಖಂಡಿಸಿದ್ದಾರೆ. ಅವರ ದೃಷ್ಟಿಯಲ್ಲಿ ಅದಕ್ಕಿಂತ ಹೇಯಕೃತ್ಯ ಮತ್ತೊಂದಿಲ್ಲ. ಆತ್ಮಹತ್ಯೆಯ ಕೀಳು ಅಭಿರುಚಿಯಿಂದ ಮನಸ್ಸನ್ನು ಬಿಡುಗಡೆಗೊಳಿಸಲು ಶರಣರು ಸಲಹೆ ನೀಡುತ್ತಾರೆ. ಹೆದರದಿರು ಮನವೆ, ಹೆದರಿ ಹಿಮ್ಮೆಟ್ಟದಿರು ಮನವೆ, ಹಿಡಿದ ಛಲವ ಬಿಡದಿರು ಮನವೆ, ಜರಿದರೆಂದು ಝಂಕಿಸಿದರೆಂದು ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧದಲ್ಲಿ ಘಟವ ಬಿಡದಿರಬೇಕು ಎನ್ನುತ್ತದೆ ಶರಣವಾಣಿ. ಅಂದರೆ ಶಸ್ತ್ರಗಳಿಂದ ಇರಿದುಕೊಂಡು, ನೀರಿನಲ್ಲಿ ಮುಳುಗಿ, ನೇಣುಹಾಕಿಕೊಂಡು ಅಥವಾ ವಿಷಪ್ರಾಶನ ಮಾಡಿ ಪ್ರಾಣತ್ಯಾಗ ಮಾಡಬಾರದು. ಒತ್ತಿ ನುಡಿದರೆಂದು ಘಟವ ಬಿಡುವ ಘಟಕರ್ಮಿಗಳು ಏಳೇಳು ಜನ್ಮದಲ್ಲಿ ಕುಲ ಹದಿನೆಂಟು ಜಾತಿಯ ಅಮೇಧ್ಯವ ತಿಂದು ಹೊಲೆಯರ ಮನೆಯ ಹೊಸ್ತಿಲ ಕಾಯ್ದುಕೊಂಡಿಪ್ಪರಯ್ಯಾ ಅಮುಗೇಶ್ವರ ಲಿಂಗವೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಎಂದು ಹೇಳುವ ಶರಣರು ಆತ್ಮಹತ್ಯೆಗಳೆಸುವವರನ್ನು ಘಟಕರ್ಮಿಗಳೆಂದು ಕರೆದು ಕಠೋರವಾಗಿ ಖಂಡಿಸಿದ್ದಾರೆ. ದೇಹದ ಮೇಲಿನ ಇಷ್ಟಲಿಂಗ ಅಗಲಿದೆ ಎಂದು ದೇಹತ್ಯಾಗಮಾಡುವ, ಕನಸಿನಲ್ಲಿ ಕಾಮವಿಕಾರಕ್ಕೆ ಒಳಗಾದೆವೆಂದು ಆತ್ಮಹತ್ಯೆ ಮಾಡಿಕೊಳ್ಳುವ ಕಠಿಣ ವ್ರತಸ್ಥರನ್ನು ಕಂಡು ಶರಣರು- ಚಿತ್ರದ ಹುಲಿ, ಕನಸಿನ ಹಾವು ಜಲಮಂಡುಕ ಕಚ್ಚಿ ಸತ್ತವರುಂಟೆ? ಎಂದು ಪ್ರಶ್ನಿಸಿದ್ದಾರೆ. ಅವರ ದೃಷ್ಟಿಯಲ್ಲಿ ಇಂತಹ ಆತ್ಮಹತ್ಯೆಯು ಮನೋದೌರ್ಬಲ್ಯ ಮತ್ತು ಮೌಢ್ಯದಿಂದ ಕೂಡಿದ ಅನಾಗರಿಕ ಧಾರ್ಮಿಕ ಪದ್ಧತಿಯಾಗಿದೆ. ಜೀವ ಕಾರುಣ್ಯವಿಲ್ಲದ ಇಂಥಕ್ರಿಯೆ ಜೀವವಿರೋಧಿಯಾದುದು. ದೇಹವನ್ನೇ ದೇವಾಲಯವಾಗಿಸಬೇಕೆನ್ನುವ ಶಿವಶರಣರು ಜೀವ ಬಲಿಯನ್ನೆಂದೂ ಒಪ್ಪರು. ಆದ್ದರಿಂದ ಆತ್ಮಹತ್ಯೆ ಎಂಬುದು ಪಾಪಕರ್ಮ. ಅದಕ್ಕೆಂದೂ ಮನವನಿಂಬುಗೊಡಬಾರದೆಂಬುದೇ ಶರಣ ಸಂದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT