ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ಮರೀಚಿಕೆ

ಧೂಮಪಾನಿಗಳ ಅಸಹಕಾರ; ಕಾನೂನು ಪಾಲನೆ ಸಂದರ್ಭ ಕಠಿಣ ಕ್ರಮದ ಕೊರತೆ
Last Updated 30 ಮೇ 2018, 10:54 IST
ಅಕ್ಷರ ಗಾತ್ರ

ರಾಮನಗರ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ನಿಯಂತ್ರಣಕ್ಕೆ ಪ್ರಯತ್ನ ನಡೆಯುತ್ತಲೇ ಇದೆ. ಆದಾಗ್ಯೂ ಸಾರ್ವಜನಿಕರಲ್ಲಿ ಈ ಬಗ್ಗೆ ಇನ್ನೂ ಜಾಗೃತಿ ಮೂಡಿಲ್ಲ.

ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಪ್ರಕಾರ ಸಾರ್ವಜನಿಕ ಪ್ರದೇಶ ಹಾಗೂ ಕಚೇರಿಗಳಲ್ಲಿ ಧೂಮಪಾನ ಮಾಡುವುದು, ತಂಬಾಕು ಉತ್ಪನ್ನಗಳ ಜಾಹೀರಾತು ನೀಡುವುದು, ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರುವುದು, ಶಾಲಾ ಕಾಲೇಜುಗಳ 100 ಮೀ, ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು, ಇತರೆ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಚಿತ್ರಗಳಿಂದ ಕೂಡಿದ ಎಚ್ಚರಿಕೆಯನ್ನು ಹಾಕದೆ ಮಾರಾಟ ಮಾಡುವುದು ಅಪರಾಧವಾಗಿದೆ.

ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಪೊಲೀಸ್, ಸಾರ್ವಜನಿಕ ಶಿಕ್ಷಣ, ಪೌರಾಡಳಿತ, ಆರೋಗ್ಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಪ್ರತಿ ದಿನ ಸುತ್ತು ಹಾಕಿ, ಕಾಯಿದೆ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ.

ಉಲ್ಲಂಘಿಸಿದರೆ ದಂಡ: ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕ್ಯಾಂಟೀನ್, ಅಂಗಡಿ ಮಳಿಗೆಗಳು, ಶಿಕ್ಷಣ ಸಂಸ್ಥೆಗಳು, ನ್ಯಾಯಾಲಯ ಮತ್ತಿತರ ಸ್ಥಳಗಳನ್ನು ಸಾರ್ವಜನಿಕ ಸ್ಥಳಗಳೆಂದು ಗುರುತಿಸಲಾಗಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧವಿದ್ದು, ಇದನ್ನು ಉಲ್ಲಂಘಿಸುವವರಿಗೆ ₹200ವರೆಗೆ ದಂಡ, ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಜಾಹೀರಾತು ನಿಷೇಧ ಉಲ್ಲಂಘನೆ ಮಾಡಿದಲ್ಲಿ ಎರಡು ವರ್ಷ ಜೈಲು, ₹1,000 ದಂಡ, ಮತ್ತೆ ಉಲ್ಲಂಘನೆ ಮಾಡಿದಲ್ಲಿ 5 ವರ್ಷ ಜೈಲು ಶಿಕ್ಷೆ, ₹5 ಸಾವಿರ ದಂಡ ಮತ್ತಿತರ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಪರ್ಯಾಯ ವ್ಯವಸ್ಥೆ ಏನು? ಕೆಲಸದ ಒತ್ತಡದಿಂದಲೋ ಅಥವಾ ಅಭ್ಯಾಸ ಬಲದಿಂದಲೋ ಹಲವರಿಗೆ ಧೂಮಪಾನಚಟವಾಗಿ ಅಂಟಿಕೊಂಡಿರುತ್ತದೆ. ಸಂಪೂರ್ಣವಾಗಿ ಬಿಡಲು ಅವರಿಗೆ ಸಾಧ್ಯವಾಗದೆ ಇರಬಹುದು ಇನ್ನೊಂದೆಡೆ ಸಿಗರೇಟ್ ತಯಾರಿಕೆ ಹಾಗೂ ಮಾರಾಟವು (ಸರ್ಕಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಬಕಾರಿ ತೆರಿಗೆ ತಂದುಕೊಡುತ್ತದೆ) ಎಂದಿನಂತೆಮುಂದುವರಿದಿದೆ. ಇಂತಹ ಸಂದರ್ಭದಲ್ಲಿ ಧೂಮಪಾನಕ್ಕೆ ನಿಷೇಧ ಹೇರುವ ಮೊದಲು ಅವರಿಗಾಗಿ ಪ್ರತ್ಯೇಕವಾದ ವ್ಯವಸ್ಥೆಯನ್ನು ಕೂಡ ಕಲ್ಪಿಸಬೇಕಲ್ಲವೇ? ಎಂದು ಧೂಮಪಾನಿಗಳು ಪ್ರಶ್ನಿಸುತ್ತಿದ್ದಾರೆ.

ವಿದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿರುತ್ತದೆ. ಇದರೊಟ್ಟಿಗೆ ‘ಸ್ಮೋಕಿಂಗ್ ಜೋನ್’ಗಳನ್ನು (ಧೂಮಪಾನ ಮಾಡಲು ಪ್ರತ್ಯೇಕವಾದ ಸ್ಥಳ) ಕೂಡ ತೆರೆಯಲಾಗಿರುತ್ತದೆ ಎನ್ನುವುದು ಗಮನಾರ್ಹ. ಇಲ್ಲಿ ಧೂಮಪಾನವನ್ನೇನೊ ಸರ್ಕಾರ ನಿಷೇಧಿಸಿದೆ. ಆದರೆ, ಪರ್ಯಾಯ ಸ್ಥಳವನ್ನು ಎಲ್ಲಿ ರೂಪಿಸಿದೆ ಎಂದು ಪ್ರಶ್ನಿಸುತ್ತಿದ್ದಾರೆ.

30ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಸನಗಳಿರುವ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ಸೇವನೆಗಾಗಿ ಪ್ರತ್ಯೇಕವಾದ ಕೊಠಡಿ ತೆರೆಯಬೇಕೆನ್ನುವ ನಿಯಮಾವಳಿಯನ್ನು ಕಾಯಿದೆಯಲ್ಲಿ ರೂಪಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ? ಇದನ್ನು ಯಾರು ಪರಿಶೀಲಿಸುತ್ತಾರೆ? ಎನ್ನುವ ಪ್ರಶ್ನೆ ಮೂಡಿದೆ.

ಗುಲಾಬಿ ಕೊಟ್ಟು ಜಾಗೃತಿ : ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಗುಲಾಬಿ ಕೊಟ್ಟು ಜಾಗೃತಿ ಮೂಡಿಸಿದ್ದಾರೆ. ಈ ಜಾಗೃತಿ ಕಾರ್ಯಕ್ರಮದಲ್ಲಿ ಸಾವಿರಾರು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ. ಶಿವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಸಾವಿರಾರು ಮಂದಿಗೆ ದಂಡ
‘ಜಿಲ್ಲೆಯಲ್ಲಿ ಈವರೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧವಿದ್ದು, ಇದನ್ನು ಉಲ್ಲಂಘಿಸಿರುವ 5637 ಮಂದಿಗೆ ದಂಡ ಹಾಕಲಾಗಿದೆ. 18 ವರ್ಷದ ಒಳಗಿನ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು, ನಾಮ ಫಲಕ ಪ್ರದರ್ಶನ ಮಾಡದೆ ಇರುವುದಕ್ಕೆ ಸಂಬಂಧಿಸಿದಂತೆ 4570 ಜನರಿಗೆ ದಂಡ ಹಾಕಲಾಗಿದೆ’ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧಿಕಾರಿ ಡಾ.ಟಿ. ಅರುಣ್‌ಕುಮಾರ್‌ ತಿಳಿಸಿದರು.

–ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT