ಸಿದ್ದು ನ್ಯಾಮಗೌಡಗೆ ಕಂಬನಿಯ ವಿದಾಯ

7
ಜಮಖಂಡಿಗೆ ಹರಿದು ಬಂದ ಜನಸಾಗರ, ನಾಯಕರ ದಂಡು

ಸಿದ್ದು ನ್ಯಾಮಗೌಡಗೆ ಕಂಬನಿಯ ವಿದಾಯ

Published:
Updated:
ಸಿದ್ದು ನ್ಯಾಮಗೌಡಗೆ ಕಂಬನಿಯ ವಿದಾಯ

ಬಾಗಲಕೋಟೆ: ಗೋವಾದ ಪಣಜಿಯಿಂದ ಮರಳುವಾಗ ಸೋಮವಾರ ಮುಂಜಾನೆ ಅಪಘಾತಕ್ಕೆ ಬಲಿಯಾದ ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ಜಮಖಂಡಿಯ ಜನತೆ ಮಂಗಳವಾರ ಸಂಜೆ ಕಂಬನಿಯ ವಿದಾಯ ಹೇಳಿದರು.

ಜಮಖಂಡಿ ನಗರ ಸೇರಿದಂತೆ ಸುತ್ತಲಿನ ಹಳ್ಳಿಗಳು ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆ

ಯಲ್ಲಿ ಬಂದಿದ್ದ ಅಭಿಮಾನಿಗಳು, ಬೆಂಬಲಿಗರ ಕಾರಣ ಇಡೀ ದಿನ ಜನಪ್ರವಾಹವೇ ನಗರದಲ್ಲಿ ಹರಿಯಿತು. ಎಲ್ಲರ ಮುಖ ಭಾವದಲ್ಲೂ ದುಗುಡ ತುಂಬಿ, ದುಖಃ ಮಡುಗಟ್ಟಿತ್ತು. ಬೆಳಿಗ್ಗೆಯಿಂದಲೇ ಪೊಲೊ ಮೈದಾನದಲ್ಲಿ ಸಾಲುಗಟ್ಟಿ ನಿಂತ ಜನತೆ ನ್ಯಾಮಗೌಡರ ಅಂತಿಮ ದರ್ಶನ ಪಡೆದರು. ಬಿಸಿಲನ್ನೂ ಲೆಕ್ಕಿಸದೇ ಸಾಗಿ ಬಂದವರು, ಸಿದ್ದು ನ್ಯಾಮಗೌಡ ಅಮರ್‌ ರಹೇ ಎಂದು ಕೂಗಿದರು. ಕಣ್ಣೀರುಗರೆದರು. ಕೆಲವರು ಭಾವೋದ್ವೇಗಕ್ಕೆ ಒಳಗಾಗಿ ಕುಸಿದುಬಿದ್ದರು.

ಪಾರ್ಥಿವ ಶರೀರದ ದರ್ಶನಕ್ಕೆ ಅಡ್ಡಪಟ್ಟಿಗಳನ್ನು ನಿರ್ಮಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮೈದಾನ

ದಲ್ಲಿ ಕುಡಿಯುವ ನೀರಿನ ಜೊತೆಗೆ ತಾತ್ಕಾಲಿಕ ಶೌಚಾಲಯದ ಕೂಡ ವ್ಯವಸ್ಥೆ ಮಾಡಿದ್ದರು.

ನಾಯಕರ ದಂಡು: ಪಕ್ಷ ಬೇಧವಿಲ್ಲದೇ ವಿವಿಧ ಪಕ್ಷಗಳ ನಾಯಕರು, ಹಾಲಿ–ಮಾಜಿ ಶಾಸಕರು ಪೊಲೊ ಮೈದಾನಕ್ಕೆ ಬಂದು ಅಗಲಿದ ನಾಯಕನಿಗೆ ಹೂ ಮಾಲೆ ಅರ್ಪಿಸಿ ಅಶ್ರು ನಮನ ಸಲ್ಲಿಸಿದರು. ಈ ವೇಳೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಬೆಳಿಗ್ಗೆ 11.30ರ ವೇಳೆಗೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್‌ನಲ್ಲಿ ಬಂದ ಉಪ

ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆ

ದರು. ಈ ವೇಳೆ ಸಿದ್ದು ನ್ಯಾಮಗೌಡ ಪತ್ನಿ ಸುಮಿತ್ರಾ, ಪುತ್ರರಾದ ಆನಂದ, ಬಸವರಾಜ ಸೇರಿದಂತೆ ಕುಟುಂಬದ ಸದಸ್ಯರನ್ನು ಸಂತೈಸಿದರು. ಅವರಿಗೆ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಹಾಗೂ ಮಾಜಿ ಸಚಿವೆ ಉಮಾಶ್ರೀ ಸಾಥ್ ನೀಡಿದರು. ಶಾಸಕರಾದ ಸಿ.ಸಿ.ಪಾಟೀಲ, ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ, ಮಾಜಿ ಶಾಸಕರಾದ ಎಚ್.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಎಸ್.ಕೆ.ಬೆಳ್ಳುಬ್ಬಿ, ಜಿ.ಎಸ್.ಪಾಟೀಲ, ಶ್ರೀಕಾಂತ ಕುಲಕರ್ಣಿ, ಜೆ.ಟಿ.ಪಾಟೀಲ, ಲಕ್ಷ್ಮಣ ಸವದಿ, ವೀರಣ್ಣ ಮತ್ತಿಕಟ್ಟಿ, ಬಿ.ಬಿ.ಚಿಮ್ಮನಕಟ್ಟಿ, ಡಿ.ಆರ್.ಪಾಟೀಲ, ಉದ್ಯಮಿ ಸಂಗಮೇಶ ನಿರಾಣಿ ಅಂತಿಮ ನಮನ ಸಲ್ಲಿಸಿದವರಲ್ಲಿ ಪ್ರಮುಖರು. ಜಮಖಂಡಿ ಶುಗರ್ಸ್ ಆವರಣದಲ್ಲಿ ವೀರಶೈವ ಸಮಾಜದ ಸಂಪ್ರದಾಯದಂತೆ ಅಂತಿಮ–ವಿಧಾನಗಳನ್ನು ನೆರವೇರಿಸಲಾಯಿತು. ಹಿರಿಯ ಪುತ್ರ ಆನಂದ ನ್ಯಾಮಗೌಡ ಮುಂದೆ ನಿಂತು ಎಲ್ಲಾ ಕಾರ್ಯಗಳನ್ನು ನೆರವೇರಿಸಿದರು. ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆ ನುಡಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಎಸ್‌ಪಿ ವಂಶಿಕೃಷ್ಣ, ಸಿಇಒ ವಿಕಾಸ್ ಸುರಳಕರ್ ಹಾಜರಿದ್ದರು.

ಒಬ್ಬ ಪುತ್ರಿಯರಿಗೆ ಸಾಧ್ಯವಾಗಲಿಲ್ಲ: ಸಿದ್ದು ನ್ಯಾಮಗೌಡ ಅವರ ಮೂವರು ಪುತ್ರಿಯರ ಪೈಕಿ ಇಬ್ಬರು ಅಮೆರಿಕ ಹಾಗೂ ಸಿಂಗಪುರದಲ್ಲಿ ಇದ್ದು, ಮತ್ತೊಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರು ಹಾಗೂ ಸಿಂಗಪುರದಲ್ಲಿ ಇರುವ ಪುತ್ರಿಯರಿಗೆ ಮಾತ್ರ ಸಾಧ್ಯವಾಯಿತು. ಅಮೆರಿಕದಲ್ಲಿರುವ ಮಗಳು ಹೊರಟಿದ್ದರೂ ರಾತ್ರಿ ಇಲ್ಲವೇ ಬುಧವಾರ ಬೆಳಿಗ್ಗೆ ಜಮಖಂಡಿಗೆ ತಲುಪುವ ಸಾಧ್ಯತೆ ಇರುವುದರಿಂದ ಅವರಿಗೆ ಅಪ್ಪನ ಅಂತಿಮದರ್ಶನ ಪಡೆಯಲು ಸಾಧ್ಯವಾಗಲಿಲ್ಲ.

ಮೆರವಣಿಗೆ, ಭಾವಪೂರ್ಣ ವಿದಾಯ..

ಗಣ್ಯರ ಅಂತಿಮ ದರ್ಶನದ ನಂತರ ಮಧ್ಯಾಹ್ನ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಹೊರಟ ಮೆರವಣಿಗೆ ದೇಸಾಯಿ ಸರ್ಕಲ್, ಬಸವೇಶ್ವರ ವೃತ್ತ, ಸರಾಫ ಬಜಾರ, ಹನುಮಾನ ಚೌಕ, ಅಂಬೇಡ್ಕರ್ ವೃತ್ತ, ಕುಂಬಾರ ಹಳ್ಳ, ಆಲಗೂರು, ಚಿಕ್ಕಪಡಸಲಗಿ ಮಾರ್ಗವಾಗಿ 18 ಕಿ.ಮೀ ದೂರದ ನಾಗನೂರಿನ ಜಮಖಂಡಿ ಶುಗರ್ಸ್ ಆವರಣಕ್ಕೆ ಮೆರವಣಿಗೆ ಬಂದು ತಲುಪಿತು. ಕಾರು, ಬಸ್, ಬೈಕ್‌ಗಳು ಸೇರಿದಂತೆ ನೂರಾರು ವಾಹನಗಳು ಹಿಂದೆ ಸಾಗಿದರೆ, ಹಾಗೂ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ನಗರ ಹಾಗೂ ಹಳ್ಳಿಯ ರಸ್ತೆಯ ಇಕ್ಕೆಲಗಳಲ್ಲಿ ನಿಂತ ನಿವಾಸಿಗಳು ಹೂ ಎರಚಿ ಕಣ್ಣೀರಿನ ವಿದಾಯ ಹೇಳಿದರು. ಕೆಲವರು ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ಈ ವೇಳೆ ಸಿದ್ದು ನ್ಯಾಮಗೌಡ ಪರ ಘೋಷಣೆಗಳು ಮಾರ್ದನಿಸಿದವು. ಕಟ್ಟಡಗಳ ಮೇಲೂ ನಿಂತು ಹೂ ಮಳೆಗೆರೆದರು. ಮನೆಯ ಸದಸ್ಯನ ಕಳೆದುಕೊಂಡಂತೆ ರೋಧಿಸಿದ ಗ್ರಾಮೀಣರು ಆಗಾಗ ಧೋತ್ರದಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಿದ್ದ ನೋಟ ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಸಿದ್ದು ನ್ಯಾಮಗೌಡ ಸೀದಾ–ಸಾದಾ ರಾಜಕಾರಣಿ. ಕೃಷಿಕರ ಹಿತರಕ್ಷಣೆಗೆ ಒತ್ತು ನೀಡಿ, ರೈತರ ಮಕ್ಕಳ ಶ್ರೇಯಕ್ಕೆ ದುಡಿದಿದ್ದರು. ಇದು ಅಸಹನೀಯ ದುಖಃದ ಪ್ರಸಂಗ. ಚಿಕ್ಕಪಡಸಲಗಿ ಬ್ಯಾರೇಜ್ ರೈತರೊಂದಿಗೆ ಸೇರಿ ಮಾಡಿದ ಶ್ರಮದ ಫಲ. ಸಜ್ಜನಿಕೆ, ಸರಳತೆ, ಸಚ್ಚಾರಿತ್ರ್ಯ ಅವರಲ್ಲಿ ನೋಡಲು ಸಿಗುತ್ತಿತ್ತು. ಅವರೊಬ್ಬ ಸಾರ್ಥಕ ರಾಜಕಾರಣಿ

– ಡಾ.ಸಿದ್ಧಲಿಂಗ ಸ್ವಾಮೀಜಿ, ತೋಂಟದಾರ್ಯ ಮಠ, ಗದಗ

ಪ್ರತಿಭಾನ್ವಿತ ರಾಜಕೀಯ ನಾಯಕನ ಆಕಸ್ಮಿಕ ನಿಧನ. ಪಕ್ಷ ಬೇಧ ಮರೆತು, ಪಕ್ಷ ರಾಜಕೀಯ ಬಿಟ್ಟು ಇಲ್ಲಿ ಎಲ್ಲರೂ ಭಾಗವಹಿಸಿರುವುದು ಕಂಡರೆ ಅವರ ವ್ಯಕ್ತಿತ್ವ ಅರ್ಥವಾಗುತ್ತದೆ

ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯ

ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದು ನ್ಯಾಮಗೌಡ ಮಂತ್ರಿಯಾಗುತ್ತಾರೆ. ಅಭಿನಂದನೆ ಸಲ್ಲಿಸಲು ಜಮಖಂಡಿಗೆ ಬರೋಣ ಎಂದು ಯೋಚಿಸಿದ್ದೆ. ಆದರೆ ದುರ್ದೈವ ಹೀಗೆ ಕರೆತಂದಿದೆ. 48 ಗಂಟೆಗಳ ಹಿಂದಷ್ಟೇ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದೆ. ಅವರು ಯಾರ ವಿರುದ್ಧವೂ ಕೋಪ ಮಾಡಿಕೊಂಡಿದ್ದು ನೋಡಿಯೇ ಇಲ್ಲ. ಈ ರೀತಿ ಜನರ ಪ್ರೀತಿ ಗಳಿಸುವುದು ವಿರಳದ ಸಂಗತಿ

ಡಾ.ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ವೈಯಕ್ತಿಕವಾಗಿ ನನಗೆ ದೊಡ್ಡ ಅಘಾತವುಂಟಾಗಿದೆ. ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ ವ್ಯಕ್ತಿ. ಇಡೀ ಸಮಾಜ ಸ್ಮರಿಸಿಕೊಳ್ಳುವ ಜನಪರ ಕೆಲಸ ಮಾಡಿ ಈಗ ಎಲ್ಲರನ್ನೂ ದುಖಃದ ಕಡಲಲ್ಲಿ ಬಿಟ್ಟು ಹೋಗಿದ್ದಾರೆ. ಚಿಕ್ಕಪಡಸಲಗಿ ಬ್ಯಾರೇಜ್ ನಿರ್ಮಾಣದ ಮೂಲಕ ಜನರ ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಕೆಲಸ ಮಾಡಿದ್ದಾರೆ. ಬ್ಯಾರೇಜ್ ಸಿದ್ದು ಎಂಬುದ ಅವರಿಗೆ ಅನ್ವರ್ಥಕವಾಗಿದೆ

ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಇದು ತುಂಬಲಾರದ ಹಾನಿ. ಈಗ ಸಹನೆ ಅನಿವಾರ್ಯ. ಯಾವುದೇ ವ್ಯಕ್ತಿ ಹೇಗೆ ಬದುಕಿದ್ದರು ಎಂಬುದು ಬಹಳ ಮುಖ್ಯ. ಸಿದ್ದು ನ್ಯಾಮಗೌಡ ಬಸವಣ್ಣನವರು ಹೇಳಿದಂತೆ ಲೇಸೆನಿಸಿಕೊಂಡು ಬದುಕಿದರು. ಸಾರ್ಥಕ ಬದುಕು ಕಂಡರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ

ಇಬ್ರಾಹಿಂ ಸುತಾರ, ತತ್ವಪದಕಾರ

ಇದು ಅವಿಭಜಿತ ವಿಜಯಪುರ ಜಿಲ್ಲೆಯ ರಾಜಕೀಯ ರಂಗಕ್ಕೆ ಕಹಿ ದಿನ. ಒಬ್ಬ ಧೀಮಂತ ನಾಯಕನ ಜಿಲ್ಲೆ ಕಳೆದುಕೊಂಡಿದೆ. ದೆಹಲಿಯಲ್ಲಿ ಇಬ್ಬರೂ ಎರಡು ದಿನ ಒಟ್ಟಿಗೆ ಕಳೆದಿದ್ದೆವು. ಈಗ ಅದೆಲ್ಲಾ ನೆನಪು ಮಾತ್ರ

ಶಿವಾನಂದ ಪಾಟೀಲ, ಶಾಸಕ

ಇಡೀ ರಾಜ್ಯಕ್ಕೆ ಇದು ದುಖಃದ ಸಂಗತಿ. ನಾವು ಕೌಟುಂಬಿಕವಾಗಿ ಅನ್ಯೋನ್ಯ ಗೆಳೆತನ ಹೊಂದಿದ್ದೆವು. ನೀರಾವರಿ, ಉದ್ದಿಮೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನ್ಯಾಮಗೌಡರ ಕಾರ್ಯ ಸದಾ ಸ್ಮರಣೀಯ. ಅವರೊಬ್ಬ ದೂರದೃಷ್ಟಿಯ ನಾಯಕ

ಮುರುಗೇಶ ನಿರಾಣಿ, ಶಾಸಕ

ರೈತರು ಹಾಗೂ ಕೃಷಿಯ ಬಗ್ಗೆ ಬಹಳಷ್ಟು ಕಾಳಜಿ ಹೊಂದಿದ್ದರು. ಇಂತಹ ಕೆಟ್ಟ ಗಳಿಗೆ ನಿರೀಕ್ಷೆ ಮಾಡಿರಲಿಲ್ಲ. ಇನ್ನೂ ಬಾಳಿ ಬದುಕಬೇಕಾದವರು. ಸರ್ಕಾರದ ಮೇಲೆ ಅವಲಂಬನೆಯಾಗದೇ ಜನರು, ಸಮಾಜದ ಸಂಘಟನೆಯಿಂದ ಏನೆಲ್ಲಾ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ನಾಯಕ

ಎಂ.ಬಿ.ಪಾಟೀಲ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry