ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನ ಆಯ್ದುಕೊಳ್ಳಿ; ತಂಬಾಕನ್ನಲ್ಲ’

ವಿಶ್ವ ತಂಬಾಕುಮುಕ್ತ ದಿನಾಚರಣೆ: ಅರಿವು ಮೂಡಿಸಲು ಜಾಗೃತಿ ಜಾಥಾ
Last Updated 1 ಜೂನ್ 2018, 9:35 IST
ಅಕ್ಷರ ಗಾತ್ರ

ದಾವಣಗೆರೆ: ‘ಜೀವನ ಆಯ್ದುಕೊಳ್ಳಿ, ತಂಬಾಕನ್ನಲ್ಲ... ತಂಬಾಕು ತ್ಯಜಿಸಿ ಸದೃಢ ಆರೋಗ್ಯ ಗಳಿಸಿ... ತಂಬಾಕು ಮೃತ್ಯುವಿನ ಚುಂಬನ...’ ಇವು ಗುರುವಾರ ನಗರದ ಹಲವೆಡೆ ಕೇಳಿಬಂದ ಘೋಷವಾಕ್ಯಗಳು. ಜಿಲ್ಲಾಡಳಿತ ಸೇರಿ ವಿವಿಧ ಸಂಘ ಸಂಸ್ಥೆಗಳು ವಿಶ್ವ ತಂಬಾಕುಮುಕ್ತ ದಿನವನ್ನು ವಿಭಿನ್ನವಾಗಿ ಆಚರಿಸಿದವು.

ಆರೋಗ್ಯ ಇಲಾಖೆ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತ್ರಿಪುಲಾಂಬಾ ಚಾಲನೆ ನೀಡಿದರು.

‘ಅತಿಯಾದ ತಂಬಾಕು ಸೇವನೆ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ. ಹೀಗಾಗಿ, ತಂಬಾಕಿನ ಚಟಕ್ಕೆ ಯಾರೂ ಸಿಲುಕಿಕೊಳ್ಳಬಾರದು. ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕಿನ ಚಟಕ್ಕೆ ಬಲಿಯಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಸೇವನೆಯಿಂದ ಅಮಾಯಕರ ಆರೋಗ್ಯವೂ ಹಾಳಾಗುತ್ತದೆ. ಹೀಗಾಗಿ, ತಂಬಾಕುಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಪ್ರಯತ್ನ ನಡೆಸಬೇಕು’ ಎಂದು ತ್ರಿಪುಲಾಂಬಾ ಹೇಳಿದರು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ಹಳೇ ಆಸ್ಪತ್ರೆ) ಯಿಂದ ಆರಂಭಗೊಂಡ ಜಾಥಾ, ಚಾಮರಾಜಪೇಟೆ ವೃತ್ತದ ಮಾರ್ಗವಾಗಿ ಬಾಷಾನಗರಕ್ಕೆ ಸಾಗಿತು. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಅರಿವು ಮೂಡಿಸಿದರು.

ನಂತರ ಬಾಷಾ ನಗರದ ಆರೋಗ್ಯ ಕೇಂದ್ರದಲ್ಲಿ ಬಾಯಿಯ ಆರೋಗ್ಯ, ಕ್ಯಾನ್ಸರ್ ತಪಾಸಣೆ ಮತ್ತು ಹೃದಯ ಸಂಬಂಧಿ ರೋಗಗಳ ತಪಾಸಣಾ ಶಿಬಿರ ನಡೆಸಲಾಯಿತು. ನೂರಾರು ನಾಗರಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಜಿಲ್ಲಾ ಸವೇರ್ಕ್ಷಣಾಧಿಕಾರಿ ಡಾ. ಕೆ.ಎಚ್. ಗಂಗಾಧರ್, ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ. ಮೀನಾಕ್ಷಿ, ಡಿಎಲ್‌ಒ ಡಾ. ಸರೋಜಾ ಬಾಯಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ ಪಾಟೀಲ್ ಅವರೂ ಇದ್ದರು.

ದಂತ ವೈದ್ಯಕೀಯ ವಿದ್ಯಾರ್ಥಿಗಳ ಬೈಕ್‌ ರ‍್ಯಾಲಿ:

ಬಾಪೂಜಿ ದಂತ ವೈದ್ಯಕೀಯ ವಿದ್ಯಾರ್ಥಿಗಳು, ಭಾರತೀಯ ವೈದ್ಯಕೀಯ ಸಂಘ(ಐಡಿಎ)ದ ಸಹಯೋಗದಲ್ಲಿ ವಿಶ್ವ ತಂಬಾಕು ದಿನಾಚರಣೆಯನ್ನು ಬೈಕ್‌ ರ‍್ಯಾಲಿ ನಡೆಸುವ ಮೂಲಕ ಆಚರಿಸಿದರು.

ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ಸಾರುವ ಫಲಕಗಳನ್ನು ಹಿಡಿದು, ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಬೈಕ್‌ ಚಲಾಯಿಸಿದರು.

ಐಡಿಎ ಪ್ರಧಾನ ಕಾರ್ಯದರ್ಶಿ ಡಾ. ಪ್ರವೀಣ್‌, ಕಾಲೇಜಿನ ನಿರ್ದೇಶಕ ಡಾ.ವಿ.ವಿ. ಸುಬ್ಬಾರೆಡ್ಡಿ, ಉಪ ಪ್ರಾಂಶುಪಾಲರಾದ ಡಾ. ಶೋಭಾ ಪ್ರಕಾಶ್, ಡಾ.ಜಿ.ಎಂ. ಪ್ರಶಾಂತ್, ಡಾ. ವಿಕ್ರಂ ಎಸ್‌. ಅಂಬರ್ಕರ್, ಡಾ. ಬಿ. ಪ್ರವೀಣ್, ಡಾ. ಬಿ.ಜಿ. ಪ್ರಸನ್ನ ಅವರೂ ಭಾಗವಹಿಸಿದ್ದರು.

ಆ್ಯಪ್‌ ಮೂಲಕ ನೇರ ದೂರು: ಜೈನ್ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾ‌ರ್ಥಿಗಳು ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ತಂಬಾಕು ಕಾಯ್ದೆ ಉಲ್ಲಂಘನೆಯ ದೂರು ಸಲ್ಲಿಸುವ ಮೊಬೈಲ್‌ ಆ್ಯಪ್‌ ಬಳಕೆಯ ಬಗ್ಗೆಯೂ ನಾಗರಿಕರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಎಸ್‌ಆರ್‌ಟಿಸಿ ದಾವಣಗೆರೆ ಡಿಪೊ ವ್ಯವಸ್ಥಾಪಕ ಎಂ. ರಾಮಚಂದ್ರಪ್ಪ, ಪ್ರಾಂಶುಪಾಲ ಡಾ.ಟಿ.ಎಸ್. ಮಂಜುನಾಥ್‌ ಮಾತನಾಡಿ, ‘ತಂಬಾಕುಮುಕ್ತ ಕರ್ನಾಟಕ ಒಕ್ಕೂಟವು ಈಚೆಗೆ ಬಿಡುಗಡೆ ಮಾಡಿರುವ ಸಿಎಫ್‌ಟಿಎಫ್‌ಕೆ ಆ್ಯಪ್‌ ಬಳಸಿ, ತಂಬಾಕು ನಿಷೇಧ ಕಾಯ್ದೆ ಉಲ್ಲಂಘನೆಯ ದೂರು ನೀಡಬಹುದು. ತಂಬಾಕು ನಿಯಂತ್ರಣ ಘಟಕ ಹಾಗೂ ಪೊಲೀಸರಿಗೆ ಈ ದೂರು ನೇರವಾಗಿ ಸಲ್ಲಿಕೆ ಆಗುತ್ತದೆ’ ಎಂದು ತಿಳಿಸಿದರು.

ಕಾಲೇಜಿನ ಎನ್‌ಎಸ್‌ಎಸ್‌ ಅಧಿಕಾರಿ ಕೆ.ಎಸ್‌. ವೀರೇಶ್, ‘ಸಿಎಫ್‌ಟಿಎಫ್‌ಕೆ ಆ್ಯಪ್‌ನಲ್ಲಿ ಫೋಟೊ ತೆಗೆದೂ ದೂರು ಸಲ್ಲಿಸಬಹುದು. ಜಿಪಿಎಸ್‌ ಮೂಲಕ ಸ್ಥಳ ಗುರುತಿಸುವ ಆ್ಯಪ್‌, ಕಾನೂನು ಉಲ್ಲಂಘನೆಯಾದ ಸ್ಥಳ, ಸಮಯ ಈ ಎಲ್ಲ ಮಾಹಿತಿಯನ್ನೂ ಅಧಿಕಾರಿಗಳಿಗೆ ರವಾನಿಸುತ್ತದೆ. ಈ ಆ್ಯಪ್‌ ಬಳಸಿ ನಾಗರಿಕರು ತಮ್ಮ ಅರಿವಿಗೆ ಬರುವ ದೂರುಗಳನ್ನು ಸಲ್ಲಿಸಬೇಕು. ಇದರಿಂದಾಗಿ ಜನರ ಹಾಗೂ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯವಿದೆ’ ಎಂದರು.

ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಈ ಆ್ಯಪ್‌ ನಿರಂತರವಾಗಿ ಜಾಗೃತಿ ಮೂಡಿಸುತ್ತದೆ ಎಂದು ತಿಳಿಸಿದರು.

ಉಪನ್ಯಾಸಕರಾದ ಕೆ.ಜಿ. ಅಭಿಷೇಕ್, ಎಂ. ಬಸವರಾಜ, ವಿದ್ಯಾರ್ಥಿಗಳಾದ ಟಿ. ವೀರೇಶ್, ವಸಂತ್ ಕುಮಾರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT