ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರಿಗೇ ಗೆಲುವು: ಡಾ.ಅರುಣ್

7

ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರಿಗೇ ಗೆಲುವು: ಡಾ.ಅರುಣ್

Published:
Updated:

ಶಿವಮೊಗ್ಗ: ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಈ ಬಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಅಭ್ಯರ್ಥಿಗೇ ಅವಕಾಶ ನೀಡಲು ಮತದಾರ ಶಿಕ್ಷಕ ವೃಂದ ನಿರ್ಧರಿಸಿದೆ. ಹಾಗಾಗಿ, ತಮ್ಮ ಗೆಲುವು ಖಚಿತ ಎಂದು ಪಕ್ಷೇತರ ಅಭ್ಯರ್ಥಿ ಡಾ.ಎಚ್‌. ಅರುಣ್‌ ಹೊಸಕೊಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್ ಅವರು 12 ವರ್ಷ ಅಧಿಕಾರ ಅನುಭವಿಸಿದ್ದರೂ, ಶಿಕ್ಷಕರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಒಂದು ಶಾಲೆ, ಕಾಲೇಜುಗಳಿಗೂ ಭೇಟಿ ನೀಡಿ ಚರ್ಚಿಸಿಲ್ಲ. ಇದರಿಂದ ಬಹುತೇಕ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ. 2012ರ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋಲು ಕಂಡಿದ್ದರೂ ಶಿಕ್ಷಕರ ಜತೆ ನಿರಂತರ ಸಂಪರ್ಕದಲ್ಲಿರುವ ಇಟ್ಟುಕೊಂಡಿರುವ ತಮಗೆ ಈ ಬಾರಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌.ಡಿ ಪಡೆದು ಹಲವು ವರ್ಷ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ಪದವಿಪೂರ್ವ ಕಾಲೇಜು ಶಿಕ್ಷಕರು ಹಮ್ಮಿಕೊಂಡಿದ್ದ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಅನುದಾನಿತ ಶಿಕ್ಷಕರ ಹೋರಾಟದಲ್ಲೂ ತೊಡಗಿಸಿಕೊಂಡಿದ್ದೆ. ಸ್ವತಃ ಶಿಕ್ಷಕ ವೃತ್ತಿಯ ಅನುಭವ ಇರುವ ನನಗೆ ಶಿಕ್ಷಕರ ಸಮಸ್ಯೆಯ ಸಂಪೂರ್ಣ ಅರಿವಿದೆ. ತಮ್ಮ ಪರಿಮಿತಿಯಲ್ಲಿ ಈ ಕ್ಷೇತ್ರದ ವಿಚಾರಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದೇನೆ. ನೈರುತ್ಯ ಪತ್ರಿಕೆಯ ಮೂಲಕ ಶಿಕ್ಷಕರ ಬರಹಗಳಿಗೆ ವೇದಿಕೆ ಕಲ್ಪಿಸಿದ್ದೇನೆ ಎಂದರು.

ಶಿಕ್ಷಕರು, ಉಪನ್ಯಾಸಕರ ಹತ್ತು ಹಲವು ಸಮಸ್ಯೆಗಳು ದಶಕಗಳಿಂದ ಬಗೆಹರಿದಿಲ್ಲ. ಈ ಕುರಿತು ಶಿಕ್ಷಕರೊಂದಿಗೆ ಚರ್ಚಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲೂ ಒಂದು ಸಮಿತಿ ರಚಿಸಿ, ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು. ಎಲ್ಲರ ಸಹಕಾರ ಪಡೆದು ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿರುವವರು ತಮ್ಮ ಅವಧಿಯಲ್ಲಿ ಶಿಕ್ಷಕರ ಸಮಸ್ಯೆ ಹೋಗಲಾಡಿಸಲು ಪ್ರಯತ್ನ ನಡೆಸಿಲ್ಲ. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ಉದಾಹರಣೆ ಇಲ್ಲ. ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅರಿವು ಇಲ್ಲ. ಹೀಗಾಗಿ ಶಿಕ್ಷಕರಿಗೆ ನ್ಯಾಯ ದೊರಕುತ್ತಿಲ್ಲ. ಶಿಕ್ಷಕರ ಸಮಸ್ಯೆಗಳನ್ನು ಅರಿತು ಪ್ರಾಮಾಣಿಕವಾಗಿ ಹಾಗೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಶಿಕ್ಷಕರ ಕ್ಷೇತ್ರದಲ್ಲಿರುವ ಶಿಕ್ಷಕರನ್ನೇ ಆಯ್ಕೆ ಮಾಡಿದರೆ ಒಳ್ಳೆಯದು ಎಂದು ಪ್ರತಿಪಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry